ನಾಲಿಗೆಯಲ್ಲಿ ಗುಳ್ಳೆಗಳಾಗಿವೆಯೇ?: ಅವು ಸೋಂಕನ್ನುಂಟು ಮಾಡುವ ಮುನ್ನ ಗುಣಪಡಿಸಿಕೊಳ್ಳಿ
ಪ್ರತಿಯೊಬ್ಬರೂ ತಮ್ಮ ಜೀವಿತದ ಒಂದಲ್ಲೊಂದು ಸಂದರ್ಭದಲ್ಲಿ ನಾಲಿಗೆಯಲ್ಲಿ ಗುಳ್ಳೆಗಳ ಕಿರುಕುಳವನ್ನು ಅನುಭವಿಸಿರುತ್ತಾರೆ. ಒಂದು ಗುಳ್ಳೆಯಾಗಿರಬಹುದು ಅಥವಾ ಗುಳ್ಳೆಗಳ ಸಮೂಹವೇ ಇರಬಹುದು,ತೀವ್ರ ಕಿರಿಕಿರಿಯನ್ನುಂಟು ಮಾಡುತ್ತವೆ. ಏನನ್ನಾದರೂ ಸೇವಿಸಿದಾಗ ಅಥವಾ ತಿಂದಾಗ ನೋವು ತೀವ್ರಗೊಳ್ಳುತ್ತದೆ. ಈ ಗುಳ್ಳೆಗಳು ಸಾಮಾನ್ಯವಾಗಿ ಹಾನಿಕಾರಕವಲ್ಲ,ಆದರೆ ಕೆಲವೊಮ್ಮೆ ಶರೀರದಲ್ಲಿಯ ಸೋಂಕು ಈ ಗುಳ್ಳೆಗಳಿಗೆ ಕಾರಣವಾಗಿರುತ್ತದೆ. ಅವು ಇನ್ನಷ್ಟು ತೊಂದರೆಯನ್ನುಂಟು ಮಾಡುವ ಮೊದಲೇ ಚಿಕಿತ್ಸೆ ಪಡೆಯುವುದು ಉತ್ತಮ.
ಸಾಮಾನ್ಯವಾಗಿ ಕೆಲವೇ ದಿನಗಳಲ್ಲಿ ಗುಳ್ಳೆಗಳು ಮಾಯವಾಗುತ್ತವೆ. ಆದರೆ ಗುಳ್ಳೆಗಳ ಕಿರಿಕಿರಿ ಮುಂದುವರಿದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಹಾಗೆ ಮಾಡುವುದಕ್ಕಿಂತ ಮುನ್ನ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಕಾರಣಗಳು:ನಾಲಿಗೆಯಲ್ಲಿ ಗುಳ್ಳೆಗಳುಂಟಾಗಲು ಹಲವಾರು ಕಾರಣಗಳಿವೆ.
ಆಕಸ್ಮಿಕವಾಗಿ ಬಿಸಿ ಆಹಾರ ಅಥವಾ ಪಾನೀಯ ಸೇವನೆಯಿಂದ ಬಾಯಿ ಸುಡುವುದು ಅಥವಾ ನಾಲಿಗೆ ಕಚ್ಚಿಕೊಳ್ಳುವುದು, ಬಾಯಿ ಹುಣ್ಣು ಅಥವಾ ಯೀಸ್ಟ್ ಸೋಂಕು,ಬಾಯಿಯ ಅಲ್ಸರ್,ನರೂಲಿ ಮತ್ತು ಅಲರ್ಜಿಗಳು,ಚರ್ಮದ ಕೆರಳುವಿಕೆಯಿಂದಾಗುವ ಉರಿಯೂತ, ಅತಿಯಾದ ಧೂಮ್ರಪಾನ, ಕ್ಯಾನ್ಸರ್, ಲುಕೋಪ್ಲಾಕಿಯಾ ಮತ್ತು ಸ್ಟೊಮಾಟೈಟಿಸ್‌ನಂತಹ ಕಾಯಿಲೆಗಳು ಇಂತಹ ಕೆಲವು ಸಾಮಾನ್ಯ ಕಾರಣಗಳಾಗಿವೆ.
ಕೆಲವು ಮನೆಮದ್ದುಗಳನ್ನು ಬಳಸಿ ನಾಲಿಗೆಯಲ್ಲಿನ ಗುಳ್ಳೆಗಳಿಂದ ಮುಕ್ತಿ ಪಡೆಯಬಹುದು
ತೆಂಗಿನೆಣ್ಣೆ: ಆಯಿಲ್ ಪುಲ್ಲಿಂಗ್ ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳಲು ಬಳಕೆಯಾಗುತ್ತಿರುವ ಪ್ರಾಚೀನ ವಿಧಾನವಾಗಿದೆ. ಬೆಳಿಗ್ಗೆ ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿಕೊಂಡು ಕೆಲವು ನಿಮಿಷಗಳ ಕಾಲ ಮುಕ್ಕಳಿಸುವುದರಿಂದ ಗುಳ್ಳೆಗಳ ನಿವಾರಣೆ ಸೇರಿದಂತೆ ಬಾಯಿಗೆ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ. ಆಯಿಲ್ ಪುಲ್ಲಿಂಗ್ ಬದಲು ಹತ್ತಿಯ ತುಂಡಿನಿಂದ ತೆಂಗಿನೆಣ್ಣೆಯನ್ನು ಗುಳ್ಳೆಗಳಿಗೆ ಲೇಪಿಸಿದರೂ ತೊಂದರೆ ನಿವಾರಣೆಯಾಗುತ್ತದೆ.
ಲವಂಗದ ಎಣ್ಣೆ: ಹಲವಾರು ಬಾಯಿ ಸಮಸ್ಯೆಗಳಿಗೆ ಲವಂಗದ ಎಣ್ಣೆ ರಾಮಬಾಣವಾಗಿದೆ. ಹಲ್ಲುನೋವಿರಲಿ ಅಥವಾ ದಂತಕುಳಿಗಳ ಸಮಸ್ಯೆಯಿರಲಿ,ಈ ಮನೆಮದ್ದು ಎಂದಿಗೂ ವಿಫಲಗೊಳ್ಳುವುದಿಲ್ಲ. ಕೆಲವು ಹನಿ ಲವಂಗದೆಣ್ಣೆಯನ್ನು ನೀರಿಗೆ ಬೆರೆಸಿಕೊಂಡು ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸಿದರೆ ನಾಲಿಗೆಯಲ್ಲಿನ ಗುಳ್ಳೆಗಳು ಮಾಯವಾಗುತ್ತವೆ.
ಟೀ ಟ್ರೀ ಆಯಿಲ್: ಟೀ ಟ್ರೀ ಆಯಿಲ್ ಬಾಯಿಯ ಶಿಲೀಂಧ್ರ ಸೋಂಕನ್ನು ತಡೆಯುವ ‘ಟರ್ಪಿನಿನ್-4-ಒಎಲ್’ ಎಂಬ ಉರಿಯೂತ ನಿರೋಧಕವನ್ನು ಒಳಗೊಂಡಿದೆ ಮತ್ತು ಇದು ನಾಲಿಗೆಯಲ್ಲಿನ ಗುಳ್ಳೆಗಳನ್ನು ನಿವಾರಿಸಲೂ ನೆರವಾಗುತ್ತದೆ. 3-4 ಹನಿ ಟೀ ಟ್ರೀ ಆಯಿಲ್‌ನ್ನು ನೀರಿನಲ್ಲಿ ಬೆರೆಸಿಕೊಂಡು ದಿನಕ್ಕೆರಡು ಬಾರಿಯಂತೆ ಒಂದು ವಾರ ಬಾಯಿ ಮುಕ್ಕಳಿಸಿದರೆ ಗುಳ್ಳೆಗಳು ನಿವಾರಣೆಯಾಗುತ್ತವೆ.
ಉಪ್ಪುನೀರು: ಉಪ್ಪುಮಿಶ್ರಿತ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು ನಾಲಿಗೆಯಲ್ಲಿನ ಗುಳ್ಳೆಗಳು ಮಾತ್ರವಲ್ಲ,ಬಾಯಿ ಹುಣ್ಣುಗಳು, ಗಂಟಲಿನ ಕಿರಿಕಿರಿ ಮತ್ತು ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರಿನ್ ಗುಳ್ಳೆಗಳನ್ನು ಕಡಿಮೆ ಮಾಡುತ್ತವೆ ಮತ್ತು ನೋವನ್ನು ಕನಿಷ್ಠಗೊಳಿಸುತ್ತವೆ.
ವಿಟಾಮಿನ್ ಬಿ ಪೂರಕ: ಶರೀರದಲ್ಲಿ ವಿಟಾಮಿನ್ ಬಿ ಕೊರತೆಯಿಂದಲೂ ಗುಳ್ಳೆಗಳು ಉಂಟಾಗುತ್ತವೆ ಎನ್ನುವದು ಹೆಚ್ಚಿನವರಿಗೆ ಗೊತ್ತಿಲ್ಲ. ನಾಲಿಗೆಯಲ್ಲಿಹಲವಾರು ಗುಳ್ಳೆಗಳಾಗಿದ್ದರೆ ಮೊಟ್ಟೆ,ಇಡಿಯ ಧಾನ್ಯ,ಓಟ್ಸ್,ಚೀಸ್‌ನಂತಹ ವಿಟಾಮಿನ್ ಬಿ ಸಮೃದ್ಧ ಆಹಾರಗಳ ಸೇವನೆ ಉತ್ತಮ ಪರಿಣಾಮವನ್ನು ನೀಡುತ್ತದೆ.