ಮಾನವ ಹೃದಯದ ಮೇಲೆ ಕೋವಿಡ್ ಪರಿಣಾಮ ನಿಮಗೆ ತಿಳಿದಿರಲಿ
ಹೃದಯವು ನಮ್ಮ ಶರೀರದಲ್ಲಿನ ಅತ್ಯಂತ ಸುಲಭಭೇದ್ಯ ಅಥವಾ ದುರ್ಬಲ ಅಂಗಗಳಲ್ಲಿ ಒಂದಾಗಿದೆ,ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕೊಂಚ ಹೆಚ್ಚೇ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ. ಈ ಕೋವಿಡ್ ಯುಗದಲ್ಲಿ ಸೋಂಕು ಮಾನವ ಹೃದಯದ ಮೇಲೆ ಏನು ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಮತ್ತು ಸೋಂಕಿನಿಂದ ಅದರ ಕಾರ್ಯ ನಿರ್ವಹಣೆಗೆ ವ್ಯತ್ಯಯಗಳುಂಟಾಗಬಲ್ಲ ಸಂಭವನೀಯತೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇಂದು ಈ ಕೊರೋನ ವೈರಸ್ ಸಂಕಷ್ಟದ ಸಮಯದಲ್ಲಿ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೃದ್ರೋಗಿಗಳು ಮತ್ತು ಹೃದ್ರೋಗಗಳ ಅಪಾಯವನ್ನು ಎದುರಿಸುತ್ತಿರುವವರಿಗಾಗಿ ಮಾರ್ಗಸೂಚಿಗಳ ರೂಪದಲ್ಲಿ ಬಹಳಷ್ಟನ್ನು ತಜ್ಞರು ಹೇಳಿದ್ದಾರೆ,ಆದರೆ ಕೊರೋನ ವೈರಸ್ ಯಾವ ಸಂಭಾವ್ಯ ರೀತಿಯಲ್ಲಿ ಹೃದಯ ಮತ್ತು ಅದರ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಹೀಗಾಗಿ ಈ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.
* ಮಧುಮೇಹಿಗಳು ಮತ್ತು ಹೃದ್ರೋಗಿಗಳು ಸೋಂಕಿಗೆ ಸುಲಭಭೇದ್ಯರು
ಹಿರಿಯ ವಯಸ್ಸಿನ ಮಧುಮೇಹಿಗಳು ಮತ್ತು ಹೃದ್ರೋಗಿಗಳು ಕೊರೋನ ವೈರಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ದುರ್ಬಲ ನಿರೋಧಕ ಶಕ್ತಿ ಹೊಂದಿರುವವರು ಸಹ ಕೋವಿಡ್-19ರಿಂದ ರಕ್ಷಣೆಗಾಗಿ ಸೂಕ್ತ ಮುಂಜಾಗ್ರತೆಗಳನ್ನು ವಹಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಧುಮೇಹಿಗಳು ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಗಾಯಿರಿಸುವುದು ಮತ್ತು ಹೃದ್ರೋಗಿಗಳು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ನಿಯಮಿತವಾಗಿ ಚರ್ಚಿಸಲು ವೈದ್ಯರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯವಾಗುತ್ತದೆ.
* ಹೃದಯಾಘಾತಗಳು
ತೀವ್ರ ಕೊರೋನ ವೈರಸ್ ಸೋಂಕು ರೋಗಿಗಳ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇದು ಹೃದಯಾಘಾತಗಳುಂಟಾಗುವ ಅಥವಾ ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಹೀಗಾಗಿ ಕೋವಿಡ್ ಸೋಂಕು ಹೊಂದಿರುವ ಹೃದ್ರೋಗಿಗಳನ್ನು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ ಮತ್ತು ಸಕಾಲಿಕ ಹಾಗೂ ಸೂಕ್ತ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಗಳಲ್ಲಿ ಇರಿಸಬೇಕಾಗುತ್ತದೆ.
* ಕೋವಿಡ್‌ನಿಂದಾಗಿ ಹೃದಯದ ಸ್ನಾಯು ನೋವು
ಕೊರೋನ ವೈರಸ್ ಮಾನವ ಶರೀರವನ್ನು ಪ್ರವೇಶಿಸಿದ ಬಳಿಕ ಅದರ ಸಂಖ್ಯೆ ಹೆಚ್ಚುತ್ತದೆ ಎನ್ನಲಾಗಿದೆ. ಹೆಚ್ಚಿನವರಲ್ಲಿ ಉಸಿರಾಟ ತೊಂದರೆಯ ಲಕ್ಷಣಗಳು ಕಂಡು ಬರುತ್ತವೆಯಾದರೂ ಹಲವಾರು ಕೋವಿಡ್-19 ಸಾವುಗಳಲ್ಲಿ ಹೃದಯಾಘಾತದ ಲಕ್ಷಣಗಳೂ ಕಂಡುಬಂದಿವೆ. ವೈರಸ್ ಹೃದಯದ ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಇದರಿಂದ ಹೃದಯದ ಪಂಪಿಂಗ್ ಸಾಮರ್ಥ್ಯ ಕುಗ್ಗುವುದರಿಂದ ಈ ಹೃದಯಾಘಾತಗಳು ಸಂಭವಿಸುತ್ತವೆ. ಇದಕ್ಕೆ ಮೈಯೊಕಾರ್ಡಿಟಿಸ್ ಎಂದು ಕರೆಯಲಾಗುತ್ತಿದ್ದು ಕೋವಿಡ್-19 ಮತ್ತು ಹೃದಯ ರೋಗಿಗಳಲ್ಲಿ ಹೆಚ್ಚಿನ ಸಾವುಗಳು ಇದರಿಂದಲೇ ಸಂಭವಿಸಿವೆ.
* ಮಧುಮೇಹ ಮತ್ತು ಅಧಿಕ ರಕ್ತದೊತ್ತಡ
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರನ್ನು,ವಿಶೇಷವಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದವರನ್ನು ಕೋವಿಡ್ ಹೆಚ್ಚು ಕಾಡುತ್ತದೆ. ಇಂತಹ ರೋಗಿಗಳು ತಾವೇನು ತಿನ್ನುತ್ತೇವೆ ಮತ್ತು ಮಾಡುತ್ತೇವೆ ಎನ್ನುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಇದು ಅವರ ಒಟ್ಟಾರೆ ಆರೋಗ್ಯ,ರಕ್ತದಲ್ಲಿಯ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡ ಮಟ್ಟಗಳ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಈ ರೋಗಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳು ತಮ್ಮ ಔಷಧಿ ಸೇವನೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ,ಏಕೆಂದರೆ ಒಂದೇ ಒಂದು ಔಷಧಿಯ ಸೇವನೆಯನ್ನು ತಪ್ಪಿಸಿದರೂ ಶರೀರದ ಮೇಲೆ ಅದು ಹೆಚ್ಚಿನ ದುಷ್ಪರಿಣಾಮವನ್ನು ಬೀರಬಹುದು. ಸಕಾಲಿಕ ಔಷಧಿ ಸೇವನೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಜೀವನಶೈಲಿ ಕಾಯಿಲೆಗಳ ಸೂಕ್ತ ನಿರ್ವಹಣೆಗೆ ನೆರವಾಗುತ್ತದೆ.
ಹೃದಯಾಘಾತ ಅಥವಾ ಇತರ ತುರ್ತು ಸ್ಥಿತಿಗಳ ಲಕ್ಷಣಗಳು ಕಂಡುಬಂದಾಗ ಹೆದರಿಕೊಳ್ಳದೆ ಮತ್ತು ಅಂತಹ ಲಕ್ಷಣಗಳನ್ನು ಕಡಗಣಿಸದೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.