ಪಡೆದುಕೊಂಡ ಸ್ವಾತಂತ್ರ್ಯ ಈಗ ಉಳಿದದ್ದೆಷ್ಟು ?
ಮರುಕಳಿಸುವುದೇ ಮತ್ತೊಂದು ಸ್ವಾತಂತ್ರ್ಯ ಹೋರಾಟ?
ಒಬ್ಬ ಸಾಮಾನ್ಯ ನಾಗರಿಕ ಮನಸ್ಸು ಬಿಚ್ಚಿ ಮಾತನಾಡುವ ಹಕ್ಕನ್ನು ಚಲಾಯಿಸುವುದು, ಮುಕ್ತವಾದ ಅಭಿವ್ಯಕ್ತಿ ಸ್ವಾತಂತ್ರವನ್ನು ಅನುಭವಿಸುವುದು, ತನ್ನ ಆಯ್ಕೆಯ ಆಹಾರವನ್ನು ಉಣ್ಣುವುದು, ಇಷ್ಟದ ಉಡುಪನ್ನು ಧರಿಸುವುದು ಕೂಡ ಕಷ್ಟವಾದ ಈ ಸಂದರ್ಭದಲ್ಲಿ ನಮ್ಮ ಸಂವಿಧಾನ ಧರ್ಮ, ಜನಾಂಗ, ಜಾತಿ, ಲಿಂಗ, ಭಾಷೆ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಈ ಎಲ್ಲಾ ಹಕ್ಕುಗಳನ್ನು ನಮಗೆ ನೀಡಿದೆ ಎಂದು ಗಟ್ಟಿಯಾಗಿ ಹೇಳುವುದೇ ಅಪರಾಧವಾಗಿದೆ. ಏಕ ಸಂಸ್ಕೃತಿಯ ಹೆಸರಿನಲ್ಲಿ ಪ್ರತಿಯೊಬ್ಬರ ಮೇಲೆ ಬಲವಂತದ ಆಯ್ಕೆಯನ್ನು ಹೇರಲಾಗುತ್ತಿದೆ. ಬಹುಸಂಖ್ಯಾತರ ದೃಷ್ಟಿಕೋನಗಳಿಗೆ ಇಡೀ ದೇಶದ ಜನರನ್ನು ಒಗ್ಗಿಸುವ ಒತ್ತಾಯ, ಹಿಂಸೆ ಎಗ್ಗಿಲ್ಲದೆ ನಡೆದಿದೆ. ಆಳುವ ಪ್ರಭುತ್ವದ ಮೌನವೂ ಇದನ್ನು ಪರೋಕ್ಷವಾಗಿ ಬೆಂಬಲಿಸುವಂತೆ ಕಾಣುತ್ತಿದೆ. ಹೀಗಾಗಿ ನಾವಿಂದು ವ್ಯಾಪಕವಾಗಿ ಕಳೆದುಕೊಳ್ಳುತ್ತಿರುವ ಸ್ವಾತಂತ್ರದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕು, ಅಂತೆಯೇ ಪಡೆದ ಸ್ವಾತಂತ್ರವನ್ನು ಮತ್ತೆ ಉಳಿಸಿಕೊಳ್ಳಲು ಕಟಿಬದ್ಧರಾಗಿ ಹೋರಾಡುವ ಕನಿಷ್ಠ ಬದ್ಧತೆಯನ್ನು ನಾವು ತೋರಬೇಕಾಗಿದೆ.
-ಅರುಣ್ ಜೋಳದಕೂಡ್ಲಿಗಿ
ಎಂದಿನಂತೆ ದೇಶ 73ನೇ ಸ್ವಾತಂತ್ರೋತ್ಸವ ಆಚರಿಸಲ್ಪಟ್ಟರೂ, ಕೊರೋನ ಕಾರಣಕ್ಕೆ ಈ ಬಾರಿ ಅಷ್ಟೇನು ವಿಜೃಂಭಣೆ ಇರುವುದಿಲ್ಲ. ಆಚರಿಸುವಾಗ ತೊಟ್ಟ ಮಾಸ್ಕ್ ಭಾರತ ಕಳೆದುಕೊಳ್ಳುತ್ತಿರುವ ಸ್ವಾತಂತ್ರದ ಸಂಕೇತದಂತೆ ಕಂಡರೆ ಅಚ್ಚರಿಪಡಬೇಕಿಲ್ಲ. ಸಾಮಾನ್ಯವಾಗಿ ಸ್ವಾತಂತ್ರ ದಿನಾಚರಣೆಯನ್ನು ಪಡೆದುಕೊಂಡ ಸ್ವಾತಂತ್ರದ ಬಗ್ಗೆ ಹೆಮ್ಮೆ ಪಡುತ್ತೇವೆ. ಅಂತೆಯೇ ಬಹುಮುಖ್ಯವಾಗಿ ಪಡೆದುಕೊಂಡ ಸ್ವಾತಂತ್ರ ಉಳಿದದ್ದೆಷ್ಟು? ಎಂದು ಪ್ರಶ್ನಿಸಿಕೊಳ್ಳುವುದಿಲ್ಲ. ಬಹುಶಃ ಪ್ರತಿವರ್ಷದ ಸ್ವಾತಂತ್ರ ದಿನಾಚರಣೆಯಂದು ಪಡೆದುಕೊಂಡ ಸ್ವಾತಂತ್ರ ಎಷ್ಟೆಷ್ಟು ಕಳೆದುಕೊಳ್ಳುತ್ತಿದ್ದೇವೆಂದು ಗಂಭೀರವಾಗಿ ಚರ್ಚಿಸಿ, ಈ ಬಗ್ಗೆ ಸಂಶೋಧನೆ ಮಾಡಿ, ಆಯಾ ಸ್ವಾತಂತ್ರ ದಿನಾಚರಣೆಯಲ್ಲಿ ಪ್ರತಿಯೊಬ್ಬರು ಸ್ವಾತಂತ್ರಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಪ್ರತಿಜ್ಞಾವಿಧಿ ಬೋಧಿಸಿ, ಆ ನಿಟ್ಟಿನಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕರೂ ಕಾರ್ಯಪ್ರವೃತ್ತರಾಗಿದ್ದರೆ, ಪಡೆದ ಸ್ವಾತಂತ್ರ ಉಳಿದದ್ದೆಷ್ಟು? ಎಂದು ಯೋಚಿಸುವ ಸಂದರ್ಭ ಒದಗುತ್ತಿರಲಿಲ್ಲ. ಹಾಗಾಗಿ ಇನ್ನಾದರೂ, ಭಾರತದ ಸಾಮಾನ್ಯ ಜನತೆಗೆ ನಾವು ಕಳೆದುಕೊಳ್ಳುತ್ತಿರುವ ಸ್ವಾತಂತ್ರದ ಬಗ್ಗೆ ಅರಿವು ಮೂಡಿಸಬೇಕಿದೆ. ಕುಸಿಯುತ್ತಿರುವ ಸ್ವಾತಂತ್ರದ ಸೌಧವನ್ನು ಉಳಿಸಿಕೊಳ್ಳಲು ಜನತೆಯನ್ನು ಹೋರಾಟಕ್ಕೆ ಅಣಿಗೊಳಿಸುವ ದಿನವನ್ನಾಗಿ ಆಚರಿಸಬೇಕಾಗಿದೆ. ಇದು ಈ ದೇಶದ ಸ್ವಾತಂತ್ರ ದಿನಾಚರಣೆಯ ವಾಸ್ತವದ ಸ್ಥಿತಿ.
ಆಧುನಿಕ ಪ್ರಜಾಪ್ರಭುತ್ವವಾದಿ ಸಿದ್ಧಾಂತಿಗಳು ಹೇಳುವ ಪ್ರಕಾರ ‘‘ಯಾವ ದೇಶದ ಪ್ರಜೆಗಳ ತಲಾ ಆದಾಯ ಹೆಚ್ಚಿರುತ್ತದೆಯೋ, ಆ ದೇಶದ ಪ್ರಜಾಪ್ರಭುತ್ವವು ಹೆಚ್ಚು ಕಾಲ ಬದುಕುತ್ತದೆ, ಯಾವ ದೇಶದ ನಾಗರಿಕರ ತಲಾ ಆದಾಯವು ಕಡಿಮೆಯಾಗಿರುತ್ತದೆಯೋ ಅಷ್ಟರಮಟ್ಟಿಗೆ ಆ ದೇಶದ ಪ್ರಜಾಪ್ರಭುತ್ವ ನಾಶದ ಅಂಚಿಗೆ ಸರಿಯಿತ್ತಿರುತ್ತದೆ’’ ಎನ್ನುತ್ತಾರೆ. ತಲಾ ಆದಾಯ ಹೆಚ್ಚಿರುವ ನಾಗರಿಕರಿಗೆ ತನ್ನ ದೇಶವನ್ನು ಆಳುವ ಪ್ರಭುತ್ವದ ಬಗ್ಗೆ ದಿಟ್ಟವಾಗಿ ಧ್ವನಿ ಎತ್ತುವ ಧೈರ್ಯವಿರುತ್ತದೆ. ಅಂತೆಯೇ ತಲಾ ಆದಾಯ ಕಡಿಮೆಯಾದಂತೆ ತನ್ನದೇ ದೇಶದ ಪ್ರಜಾಪ್ರಭುತ್ವದ ಬಗ್ಗೆ ನಾಗರಿಕರು ಧ್ವನಿ ಎತ್ತುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಬಹುಶಃ ಭಾರತದ ಈಗಿನ ಸ್ಥಿತಿಯೂ ಅದೇ ಆಗಿದೆ. ಇದೀಗ ಕೋವಿಡ್-19 ಬಿಕ್ಕಟ್ಟಿನ ಕಾರಣ ಭಾರತೀಯರ ತಲಾ ಆದಾಯದಲ್ಲಿ (ಪಿಸಿಐ) ಶೇ. 5.4ರಷ್ಟು ಕುಸಿದು 1.43 ಲಕ್ಷ ರೂ.ಗೆ ಇಳಿಯಬಹುದು, ಇದು ಸಾಮಾನ್ಯ ಜಿಡಿಪಿ ಕುಸಿತಕ್ಕಿಂತ ಶೇ. 3.8 ರಷ್ಟಿದೆ ಎಂದು ವರದಿಯೊಂದು ತಿಳಿಸಿದೆ. ಹೀಗೆ ಜಿಡಿಪಿ ಕುಸಿತಕ್ಕೂ ಪ್ರಜಾಪ್ರಭುತ್ವದ ಕುಸಿತಕ್ಕೂ ಒಂದಕ್ಕೊಂದು ಪೂರಕವಾಗಿವೆ.
ಒಂದು ದೇಶವನ್ನು ಆ ದೇಶದ ನಾಗರಿಕರು ರೂಪಿಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿಯೇ ‘‘ಭಾರತದ ಪ್ರಜೆಗಳಾದ ನಾವು...’’ ಎಂದು ಆರಂಭವಾಗುತ್ತದೆ. ಆದ್ದರಿಂದ, ದೇಶದ ಸ್ವಾತಂತ್ರ ಎಂದರೆ ಆ ದೇಶದಲ್ಲಿ ನೆಲೆಸಿರುವ ಜನರ ಸ್ವಾತಂತ್ರ. ಇದರರ್ಥ ಎಲ್ಲಾ ನಾಗರಿಕರಿಗೆ ಅದರ ಸಂಪನ್ಮೂಲಗಳ ಸಮಾನ ಪಾಲು ಮತ್ತು ಹಕ್ಕು ದಕ್ಕಬೇಕು. ಆದರೆ ಸ್ವತಂತ್ರ ಭಾರತದಲ್ಲಿ ಬಡತನದ ಪ್ರಮಾಣ ಏರುತ್ತಲೇ ಇದೆ. ಈ ಅರ್ಥದಲ್ಲಿ ಬಡ ಜನರ ಶ್ರೀಮಂತ ದೇಶವಾಗಿದೆ. ಸ್ವಾತಂತ್ರ ಚಳವಳಿ ಸಾಮ್ರಾಜ್ಯಶಾಹಿ ಬ್ರಿಟಿಷರನ್ನು ಓಡಿಸಿ ಈ ನೆಲದ ಸಂಪನ್ಮೂಲಗಳ ಮೇಲೆ ಭಾರತದ ಜನರ ಹಕ್ಕುಗಳನ್ನು ಸ್ಥಾಪಿಸಿತು. ಆದರೆ ಬೆರಳೆಣಿಕೆಯ ಜನರು ಮಾತ್ರ ಈ ದೇಶದ ಎಲ್ಲಾ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಸಾಧಿಸಿದ್ದಾರೆ. ದೇಶದ ಬಹುಪಾಲು ಜನರು ಅಮಾನವೀಯ ಪರಿಸ್ಥಿತಿಯಲ್ಲಿ ಬಡತನವನ್ನು ಅನುಭವಿಸುತ್ತಿದ್ದಾರೆ.
ಭಾರತದ ಕೇವಲ ಶೇ. 1ರಷ್ಟು ಶ್ರೀಮಂತರು ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇ. 58.4ರಷ್ಟು ಹೊಂದಿದ್ದರೆ, ಶೇ. 70ರಷ್ಟು ಜನರು ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇ. 7ರಷ್ಟು ಮಾತ್ರ ಹೊಂದಿದ್ದಾರೆ. ಈ ದೇಶದ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಾಧಿಸಲು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಲಾಯಿತು, ಆದರೆ ಪ್ರಸ್ತುತ ಭಾರತದಲ್ಲಿ ಕ್ರೋನಿ ಕ್ಯಾಪಿಟಲಿಸ್ಟುಗಳು ದಿನದಿಂದ ದಿನಕ್ಕೆ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಮೇಲೇರಲು ಹವಣಿಸುತ್ತಿದ್ದಾರೆ. ಬಡವರು ಒಂದೊತ್ತಿನ ಊಟಕ್ಕೂ ಹೆಣಗಾಡುತ್ತಿದ್ದಾರೆ. ಖಂಡಿತಾ ಇದು ನಮ್ಮ ಪೂರ್ವಜರು ಕಲ್ಪಿಸಿಕೊಂಡ ಸ್ವಾತಂತ್ರದ ಕನಸಾಗಿರಲಿಲ್ಲ. ಸಂವಿಧಾನದ ಕಲಂ 39 (ಎ)(ಬಿ)(ಸಿ) ಭಾಗಗಳಲ್ಲಿ ಪ್ರತಿಪಾದಿಸಲಾಗಿದ್ದ ‘‘ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು’’ ಎನ್ನುವ ಸಂವಿಧಾನಿಕ ಸ್ವಾತಂತ್ರ ಈಗ ಉಳಿದಿದೆಯೇ?
ಸ್ವಾತಂತ್ರ ಹೋರಾಟದ ನೆನಪಿನ ದಿನ ದೊಡ್ಡ ಪ್ರಶ್ನೆಗಳನ್ನು ಬದಿಗಿಟ್ಟು ಕನಿಷ್ಠ ಹಸಿವಿನಿಂದಾದರೂ ಈ ದೇಶ ಸ್ವಾತಂತ್ರವಾಗಿದೆಯೇ ಎಂಬ ಕನಿಷ್ಠ ಪ್ರಶ್ನೆ ಕೇಳಿಕೊಂಡಾಗಲೂ ಬರುವ ಉತ್ತರ ಶೋಚನೀಯವಾಗಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಸರ್ವೇಯಲ್ಲಿ 117 ರಾಷ್ಟ್ರಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ ಎನ್ನುವುದು ಈ ದೇಶದ ಹಸಿವಿನ ಸ್ಥಿತಿಯನ್ನು ವಿವರಿಸುತ್ತಿದೆ. ಇದು ಏಶ್ಯದಲ್ಲಿಯೇ ಅತ್ಯಂತ ಕಡಿಮೆ ಶ್ರೇಯಾಂಕ. ಈ ದೇಶದ ಶೇ. 15ರಷ್ಟು ಜನರು ರಾತ್ರಿ ಊಟವಿಲ್ಲದೆ ಮಲಗುತ್ತಾರೆ ಎನ್ನುವುದನ್ನು ಈ ಸರ್ವೆ ಹೇಳುತ್ತದೆ. ತೀರಾ ಈಚೆಗೆ ಎಪ್ರಿಲ್ ಹೊತ್ತಿಗೆ ಕೊರೋನ ಲಾಕ್‌ಡೌನ್ ಕಾರಣಕ್ಕೆ ಹಸಿವಿನಿಂದ ಸಾವನ್ನಪ್ಪಿದವರ ಸಂಖ್ಯೆ 200ರಷ್ಟಿದೆ.
ಹಾಗಾದರೆ ಈ ದೇಶದಲ್ಲಿ ಮಹಿಳೆ ಸ್ವಾತಂತ್ರವಾಗಿದ್ದಾಳೆಯೇ? ಎನ್ನುವ ಪ್ರಶ್ನೆಯೂ ನಮ್ಮನ್ನು ಕಾಡುತ್ತದೆ. 2019ರ ಅಕ್ಟೋಬರ್ 21ರಂದು ಬಿಡುಗಡೆಯಾದ 2017ರ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ಪ್ರಕಾರ ಮಹಿಳೆಯ ಮೇಲಿನ ದೌರ್ಜನ್ಯದ ಕಾರಣಕ್ಕೆ ವರದಿಯಾದ ಕೇಸುಗಳ ಸಂಖ್ಯೆ 3,59,849ರಷ್ಟಿದೆ. ಇದು 2016ಕ್ಕಿಂತ ಶೇ. 6ರಷ್ಟು ಹೆಚ್ಚಾಗಿದೆ. ಈ ದೇಶದ ಮಕ್ಕಳ ಸ್ಥಿತಿ ಹೇಗಿದೆ ಎಂದು ನೋಡಿದರೂ ಅಚ್ಚರಿಯಾಗುತ್ತದೆ, 2018ರಲ್ಲಿ ಯುನಿಸೆಫ್ ಬಿಡುಗಡೆ ಮಾಡಿದ ವರದಿ ಪ್ರಕಾರ ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವು ಎಂಟು ಲಕ್ಷಕ್ಕಿಂತ ಹೆಚ್ಚು ಎಂದು ವರದಿ ಮಾಡಿತ್ತು. ಇದರಲ್ಲಿ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ.
ಈ ದೇಶದ ಸ್ವಾತಂತ್ರಕ್ಕಾಗಿ ದಲಿತರು, ದಮನಿತರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಆದಿವಾಸಿ ಬುಡಕಟ್ಟುಗಳು ರಕ್ತ ಸುರಿಸಿದ್ದಾರೆ. ಆದರೆ ಕೇಂದ್ರದಲ್ಲಿ 2014ರಿಂದ ಬಿಜೆಪಿ ಸರಕಾರದ ಆಡಳಿತ ಶುರುವಾದಂದಿನಿಂದ ಈ ಸಮುದಾಯಗಳಿಗೆ ಶಾಸಕಾಂಗದಲ್ಲಿ ಯಾವ ಮಟ್ಟದ ಪ್ರಾತಿನಿಧ್ಯವಿದೆ ಎಂದು ಪರಿಶೀಲಿಸಿದರೆ, ಈ ಎಲ್ಲಾ ಸಮುದಾಯಗಳು ಶಾಸಕಾಂಗದಲ್ಲಿ ಪಡೆಯಬೇಕಾದ ಅಧಿಕಾರ ಮೊಟಕಾಗುತ್ತಿದ್ದು, ಶೇ. 64ರಷ್ಟು ಜನರು ಮೇಲ್ಜಾತಿಯ ಪ್ರತಿನಿಧಿಗಳೇ ತುಂಬಿದ್ದಾರೆ. ಅದರ ಅಂಕಿ-ಅಂಶಗಳನ್ನು ನೋಡಿದರೆ ಮತ್ತಷ್ಟು ಸ್ಪಷ್ಟವಾಗುತ್ತದೆ.
ಶಾಸಕಾಂಗದಲ್ಲಿ ದಲಿತ ದಮನಿತ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವೆಷ್ಟು, ಇವರು ಪಡೆದ ಸ್ವಾತಂತ್ರವೆಷ್ಟು ಎಂದು ಪರಿಶೀಲಿಸಿದರೆ ಅಚ್ಚರಿಯಾಗುತ್ತದೆ. 2011ರ ಜನಗಣತಿಯ ಪ್ರಕಾರ ದಲಿತರು ದೇಶದ ಜನಸಂಖ್ಯೆಯ ಶೇ. 16.6 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳು ಶೇ. 8.6ರಷ್ಟಿದೆ. ಮುಸ್ಲಿಮರು ಶೇ. 14 ರಷ್ಟಿದ್ದಾರೆ. 2007ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ನಡೆಸಿದ ಸಮೀಕ್ಷೆಯ ಪ್ರಕಾರ ಒಬಿಸಿ ಜನಸಂಖ್ಯೆ ಶೇ. 41 ರಷ್ಟಿದೆ. ಈ ಪ್ರಾತಿನಿಧ್ಯಕ್ಕೆ ತಕ್ಕ ಹಾಗೆ ಶಾಸಕಾಂಗದಲ್ಲಿ ಈ ಸಮುದಾಯಗಳಿಗೆ ರಾಜಕೀಯ ಸ್ವಾತಂತ್ರ ಲಭಿಸಿದೆಯೇ?
ಬಿಜೆಪಿ ಅಧ್ಯಕ್ಷರಲ್ಲಿ, 36 ರಾಜ್ಯ ಘಟಕಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಯಾರೂ ದಲಿತರಿಲ್ಲ. ಏಳು ಮಂದಿ ಬ್ರಾಹ್ಮಣರು, 17 ಮಂದಿ ಇತರ ಜಾತಿಗಳಿಗೆ ಸೇರಿದವರು, ಆರು ಮಂದಿ ಎಸ್ಟಿಗಳು, ಐದು ಮಂದಿ ಒಬಿಸಿಗಳು ಮತ್ತು ಒಬ್ಬರು ಮುಸ್ಲಿಮ್. ಇದರಲ್ಲಿ ಶೇ. 66ಕ್ಕಿಂತ ಹೆಚ್ಚು ಜನರು ಮೇಲ್ಜಾತಿಯವರು. ಜಿಲ್ಲಾ ಮಟ್ಟದಲ್ಲಿಯೂ ಸಹ, ಪಕ್ಷದ ಅಧ್ಯಕ್ಷರಲ್ಲಿ 65 ಪ್ರತಿಶತ ಜನರು ಮೇಲ್ಜಾತಿಯವರಾಗಿದ್ದು, ಅವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಬ್ರಾಹ್ಮಣರಾಗಿದ್ದಾರೆ. ಬಿಜೆಪಿಯಲ್ಲಿ 752 ಜಿಲ್ಲಾಧ್ಯಕ್ಷರು ಇರಬೇಕಿದ್ದರೆ, ಮೂರು ಹುದ್ದೆಗಳು ಖಾಲಿ ಇರುವುದರಿಂದ 746ಕ್ಕೆ ದತ್ತಾಂಶಗಳು ಲಭ್ಯವಿದ್ದು, ಮೂವರು ಜಿಲ್ಲಾಧ್ಯಕ್ಷರ ಜಾತಿಗಳು ಸ್ಪಷ್ಟವಾಗಿಲ್ಲ. ಈ ಪೈಕಿ 487 ಮೇಲ್ಜಾತಿಯವರಾಗಿದ್ದರೆ, ಶೇ. 25ರಷ್ಟು ಒಬಿಸಿ, ಬಿ.ಸಿ., ಎಂಬಿಸಿ ವರ್ಗಗಳಿಗೆ ಸೇರಿದವರಾಗಿದ್ದರೆ, ಶೇ. 4ಕ್ಕಿಂತ ಕಡಿಮೆ ಎಸ್ಸಿಗಳು. ಶೇ.2 ಸಹ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರಿಲ್ಲ. ಇವುಗಳಲ್ಲಿ ಯಾವುದೂ ಜನಸಂಖ್ಯೆಯಲ್ಲಿ ಪ್ರತಿ ಸಮುದಾಯದ ಪಾಲಿಗೆ ಅನುಗುಣವಾಗಿಲ್ಲ.
ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳಲ್ಲಿ 17 ಮಂದಿ ಬ್ರಾಹ್ಮಣರು, 21 ಮಂದಿ ಇತರ ಮುಂದುವರಿದ ಜಾತಿ, ನಾಲ್ಕು ಒಬಿಸಿಗಳು, ಮೂವರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡ, ಇಬ್ಬರು ಮುಸ್ಲಿಂ ಸಮುದಾಯದವರು ಮತ್ತು ಒಬ್ಬರು ಸಿಖ್. ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಅಲ್ಪಸಂಖ್ಯಾತರ ಕನಿಷ್ಠ ಪ್ರಾತಿನಿಧ್ಯ ಹೀಗಿದೆ: ಮೂವರು ದಲಿತರಲ್ಲಿ ಒಬ್ಬರು ಪಕ್ಷದ ಎಸ್ಸಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇಬ್ಬರು ಮುಸ್ಲಿಮರಲ್ಲಿ ಒಬ್ಬರು ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥರಾಗಿದ್ದಾರೆ. ಬುಡಕಟ್ಟು ಪ್ರತಿನಿಧಿಗಳ ವಿಷಯದಲ್ಲಿ ಇದು ಇನ್ನೂ ಕೆಟ್ಟದಾಗಿದೆ, ಏಕೆಂದರೆ ಒಬ್ಬರು ಪಕ್ಷದ ಎಸ್ಟಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇನ್ನೊಬ್ಬರು ಮಧ್ಯಪ್ರದೇಶದ ಜ್ಯೋತಿ ಧ್ರುವೆ. ರಾಜ್ಯ ಸರಕಾರ ಆಕೆಯ ಎಸ್ಟಿ ಪ್ರಮಾಣಪತ್ರವನ್ನು ರದ್ದುಪಡಿಸಿದೆ. ಈ ವಿಷಯ ಇನ್ನೂ ನ್ಯಾಯಾಲಯದಲ್ಲಿದೆ. ಪರಿಣಾಮ, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಶೇ. 76ರಷ್ಟು ಮೇಲ್ಜಾತಿಯವರಾಗಿದ್ದರೆ, ಕೇವಲ ಶೇ. 8ರಷ್ಟು ಮಾತ್ರ ಒಬಿಸಿ ಮತ್ತು ಶೇ. 6ರಷ್ಟು ಎಸ್ಸಿ. ಇನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿರುವ 97 ಸದಸ್ಯರಲ್ಲಿ 29 ಮಂದಿ ಬ್ರಾಹ್ಮಣರು, 37 ಮಂದಿ ಇತರ ಮೇಲ್ಜಾತಿಯವರು, 18 ಮಂದಿ ಒಬಿಸಿಗಳು ಅಥವಾ ಬಿ.ಸಿ.ಗಳು, ಏಳು ಮಂದಿ ಪರಿಶಿಷ್ಟ ಜಾತಿ, ಮೂವರು ಅಲ್ಪಸಂಖ್ಯಾತ ಸಮುದಾಯಗಳು, ಒಬ್ಬರು ಸಿಖ್ ಮತ್ತು ಒಬ್ಬರು ಎಸ್ಟಿ ಪರಿಣಾಮವಾಗಿ, ಶೇ. 69ರಷ್ಟು ಜನರು ಮುಂದುವರಿದ ಜಾತಿಗಳಿಂದ ಬಂದವರು ಮತ್ತು ಕೇವಲ 27 ಪ್ರತಿಶತದಷ್ಟು ಜನರು ಇತರ ಸಮುದಾಯಗಳಿಂದ ಬಂದವರು.
‘ದಿ ಪ್ರಿಂಟ್’ ಪತ್ರಿಕೆ ಮಾಡಿರುವ ಈ ಸರ್ವೇಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ದೇಶದ ದಲಿತರು, ದಮನಿತರು, ಬುಡಕಟ್ಟು ಅಲೆಮಾರಿಗಳು, ಅಲ್ಪಸಂಖ್ಯಾತರನ್ನು ಬಹಳ ಪೂರ್ವಯೋಜಿತವಾಗಿ ಶಾಸಕಾಂಗದಿಂದ ದೂರ ಇಡಲಾಗಿದೆ. ಹಾಗೆಂದು ಕಾರ್ಯಾಂಗದಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯ ಚೆನ್ನಾಗಿದೆಯೇ ಎಂದು ಪರಿಶೀಲಿಸಿದರೆ ಅದೂ ಕೂಡ ಆತಂಕಕಾರಿಯಾಗಿದೆ. ಮಂಡಲ್ ಆಯೋಗದ ಶಿಫಾರಸಿನ ನಂತರ, ಸರಕಾರವು ಒಬಿಸಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ. 27.5, ಎಸ್ಸಿಗಳಿಗೆ 15 ಮತ್ತು ಎಸ್ಟಿಗಳಿಗೆ 7.5 ಶೇಕಡಾ ಮೀಸಲಾತಿಯನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಸಚಿವಾಲಯವು 1993ರಿಂದ ಪಾಲಿಸಿಕೊಂಡು ಬಂದಿದೆ. ಆದರೆ ಈಗಿರುವ 275 ಜಂಟಿ ಕಾರ್ಯದರ್ಶಿಗಳಲ್ಲಿ 13 (ಶೇ. 4.73) ಎಸ್ಸಿಗಳು, ಒಂಭತ್ತು (ಶೇ. 3.27) ಎಸ್ಟಿಗಳು ಮತ್ತು 19 ಮಂದಿ ಒಬಿಸಿ ವರ್ಗಕ್ಕೆ ಸೇರಿದವರು. ಇದೀಗ ಕೇಂದ್ರದಲ್ಲಿ ನೇಮಕಗೊಂಡ 89 ಕಾರ್ಯದರ್ಶಿಗಳಲ್ಲಿ ಒಬ್ಬರು ಮಾತ್ರ ಪರಿಶಿಷ್ಟ ಜಾತಿ (ಎಸ್ಸಿ)ಗೆ ಸೇರಿದವರಾಗಿದ್ದರೆ, ಮೂವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಇತ್ತೀಚಿನ ಸರಕಾರದ ಅಂಕಿಅಂಶಗಳು ತೋರಿಸುತ್ತವೆ.
ಕೇಂದ್ರ ಕಾರ್ಯದರ್ಶಿಗಳು, ಅಧಿಕಾರಿಗಳು, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರ ಮಟ್ಟದಲ್ಲಿಯೂ ಎಸ್ಸಿ/ಎಸ್ಟಿ/ಒಬಿಸಿ ಪ್ರಾತಿನಿಧ್ಯವು ಕಡಿಮೆಯಾಗಿದೆ. ಉದಾಹರಣೆಗೆ ಕೇಂದ್ರ ಸರಕಾರದ ಸಚಿವಾಲಯಗಳಲ್ಲಿನ 93 ಹೆಚ್ಚುವರಿ ಕಾರ್ಯದರ್ಶಿಗಳಲ್ಲಿ ಕೇವಲ ಆರು ಮಂದಿ ಎಸ್ಸಿಗಳು ಮತ್ತು ಐವರು ಎಸ್ಟಿಗಳು, ಆದರೆ ಈ ಶ್ರೇಣಿಯ ಒಬ್ಬರೂ ಒಬಿಸಿಗಳಿಲ್ಲ. ಅಂದರೆ ಕಾರ್ಯಾಂಗದಲ್ಲಿಯೂ ದಲಿತ, ದಮನಿತ, ಆದಿವಾಸಿ, ಅಲ್ಪಸಂಖ್ಯಾತರ ನ್ಯಾಯಯುತ ಪ್ರಾತಿನಿಧ್ಯದ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿದೆ. ಇನ್ನಾದರೂ ಈ ಪ್ರಾತಿನಿಧ್ಯಕ್ಕಾಗಿ ಈ ಎಲ್ಲಾ ಸಮುದಾಯಗಳು ಒಟ್ಟಾಗಿ ಹೋರಾಟ ಮಾಡದಿದ್ದರೆ ಈ ಸಮುದಾಯಗಳಿಗೆ ಈ ದೇಶದಲ್ಲಿ ಸ್ವಾತಂತ್ರ ಉಳಿಯುತ್ತದೆಯೇ?
ದೊಡ್ಡಮಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿದೆ. ಪಿತೃಪ್ರಧಾನ ಪ್ರಭುತ್ವದ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ ಶೋಮಾ ಸೇನ್ ಅವರನ್ನು ಜೂನ್ 8, 2018ರಲ್ಲಿ ಮುಂಬೈ ಪೊಲೀಸರು ಬಂಧಿಸುತ್ತಾರೆ. ಎಂಭತ್ತು ವರ್ಷದ ಕ್ರಾಂತಿಕಾರಿ ಕವಿ ವರವರ ರಾವ್ ಅವರನ್ನು ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಆದಿವಾಸಿಗಳು ಮತ್ತು ಕಾರ್ಮಿಕರಿಗಾಗಿ ವಕೀಲಿಕೆ ಮಾಡಿ ನ್ಯಾಯ ಒದಗಿಸುತ್ತಿದ್ದ ಐಐಟಿಯ ಗಣಿತ ಪದವೀಧರೆ ಸುಧಾ ಭಾರದ್ವಾಜ್ ಬಂಧನದಲ್ಲಿದ್ದಾರೆ. ಸದಾ ನ್ಯಾಯಕ್ಕಾಗಿ ದುಡಿಯುತ್ತಿದ್ದ ವರ್ನನ್ ಗೋನ್ಸಾಲ್ವಿಸ್, ಮಾನವ ಹಕ್ಕುಗಳ ಹೋರಾಟಗಾರ ರೋನಾ ವಿಲ್ಸನ್, ದೇಶದ ದಮನಿತರ ಸಾಕ್ಷಿಪ್ರಜ್ಞೆಯಾದ ಬಾಬಾ ಸಾಹೇಬ್ ಅಂಬೇಡ್ಕರ್‌ಅವರ ಚಿಂತನೆಗಳ ವಾರಸುದಾರ ಆನಂದ ತೇಲ್ತುಂಬ್ಡೆ, ಸಂವಿಧಾನಾತ್ಮಕ ಹಕ್ಕುಗಳ ಹೋರಾಟಗಾರ ಡಾ. ಹನಿಬಾಬು, ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರಣೆಯಾದ ಗೌತಮ್ ನವ್ಲಾಖ, ಆದಿವಾಸಿಗಳ ಹೋರಾಟಕ್ಕೆ ಬೆಂಬಲವಾಗಿ ನಿಂತ ಮಹೇಶ್ ರಾವುತ್, ಚಳವಳಿಯಿಂದಲೇ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸಾಧ್ಯ ಎಂದು ನಂಬುವ ಸುಧೀರ್ ದಾವ್ಳೆ, ದಮನಿಕರ ಪರವಾದ ಕಾನೂನು ಹೋರಾಟ ಮಾಡುತ್ತಿದ್ದ ಅರುಣ್ ಫಿರೇರಾ, ತನ್ನ ಬಂಧನದಲ್ಲೂ ಕಾನೂನು ನೆರವು ನೀಡುತ್ತಿದ್ದ ಸುರೇಂದ್ರ ಗಾಡ್ಲಿಂಗ್ ಇಂತಹ ನೂರಾರು ಹೋರಾಟಗಾರರು, ಪತ್ರಕರ್ತರು, ನ್ಯಾಯವಾದಿಗಳು, ಚಿಂತಕರು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಬಂಧಿತರಾಗಿದ್ದಾರೆ. ಇವರೆಲ್ಲಾ ಈ ದೇಶದ ಸಾಮಾನ್ಯ ಜನರ ಸ್ವಾತಂತ್ರವನ್ನು ಕಾಪಾಡಲು ಹೋರಾಡಿದ ನಮ್ಮ ಕಾಲದ ಸ್ವಾತಂತ್ರ ಹೋರಾಟಗಾರರು. ಇಂತವರ ‘ಸ್ವಾತಂತ್ರಕ್ಕಾಗಿ ಹೋರಾಡುವ ಪಣವನ್ನು ಈ ದಿನದಂದು ನಾವು ತೊಡಬೇಕಿದೆ. ಹಾಗಾದಲ್ಲಿ ಈ ದಿನದ ಸ್ವಾತಂತ್ರ ಹೋರಾಟದ ನೆನಪು ಅರ್ಥಪೂರ್ಣವಾಗುತ್ತದೆ.
ಸ್ವೀಡೀಷ್‌ನ ವಿ-ಡೆಮ್ ಸಂಸ್ಥೆಯವರು ಜಾಗತಿಕವಾಗಿ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಸಮೀಕ್ಷಿಸಿ ಈಚೆಗೆ ವರದಿ ಮಂಡಿಸಿದ್ದಾರೆ. ಇದರ ಪ್ರಕಾರ ಕಳೆದ 14 ವರ್ಷದಿಂದ ಜಾಗತಿಕವಾಗಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವ ಸೂಚ್ಯಂಕವು ಇಳಿಕೆಯ ಪ್ರಮಾಣದಲ್ಲಿ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಂದರೆ ಜಾಗತಿಕವಾಗಿಯೂ ಪ್ರಜಾಪ್ರಭುತ್ವ ನಿಧಾನವಾಗಿ ಸರ್ವಾಧಿಕಾರಿ ಧೋರಣೆಯತ್ತ ಚಲಿಸುತ್ತಿದೆ. ಈ ವರದಿಯಲ್ಲಿ ಭಾರತದ ಪ್ರಜಾಪ್ರಭುತ್ವ ಆತಂಕಕಾರಿಯಾಗಿ ಕುಸಿಯುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಭಾರತದಲ್ಲಿ ನೆಲೆಸಿದ ಜನರಿಗೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ಮನವರಿಕೆಯಾಗಲು ಈ ವರದಿಯ ಅಗತ್ಯವೇನು ಇಲ್ಲ. ಅದು ಕಣ್ಣೆದುರೇ ಢಾಳಾಗಿ ಕಾಣುತ್ತಿದೆ. ಆದರೆ ಇಂತಹ ಜಾಗತಿಕ ಅಧ್ಯಯನ ಸಂಸ್ಥೆಗಳು ಭಾರತದ ಸ್ಥಿತಿಯನ್ನು ಜಗತ್ತಿನ ಮುಂದೆ ಆತಂಕದ ಸಂಗತಿಯನ್ನಾಗಿ ಮಂಡಿಸುತ್ತಿರುವುದು ಈ ಹೊತ್ತಿನ ಸ್ವಾತಂತ್ರ ಹೋರಾಟದ ನೆನಪಿನ ದಿನವನ್ನೂ ಆತಂಕಕ್ಕೆ ದೂಡುತ್ತಿದೆ. ಭಾರತದಲ್ಲಿ ವರದಿಗಾರರಿಗೆ ಮತ್ತು ಭಿನ್ನಮತೀಯ ಧ್ವನಿಗಳಿಗೆ ಕಿರುಕುಳದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಸಿದ್ಧಪಡಿಸಿದ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತದ ಸ್ಥಾನವು 2015ರಲ್ಲಿ 136ನೇ ಸ್ಥಾನದಲ್ಲಿದ್ದರೆ, ಇದೀಗ 2020 ರಲ್ಲಿ 142ನೇ ಸ್ಥಾನಕ್ಕೆ ಇಳಿದಿದೆ. ನೆರೆಯ ರಾಷ್ಟ್ರಗಳಾದ ಭೂತಾನ್ (67), ನೇಪಾಳ (112), ಮತ್ತು ಶ್ರೀಲಂಕಾ (127) ಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ. ಹೀಗಿರುವಾಗ ಎಲ್ಲಾ ಕ್ಷೇತ್ರದಲ್ಲೂ ಸ್ವಾತಂತ್ರ ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ನಾವು ಸ್ವಾತಂತ್ರ ದಿನಾಚರಣೆಯನ್ನು ಎದುರುಗೊಳ್ಳುತ್ತಿದ್ದೇವೆ.
ಒಬ್ಬ ಸಾಮಾನ್ಯ ನಾಗರಿಕ ಮನಸ್ಸು ಬಿಚ್ಚಿ ಮಾತನಾಡುವ ಹಕ್ಕನ್ನು ಚಲಾಯಿಸುವುದು, ಮುಕ್ತವಾದ ಅಭಿವ್ಯಕ್ತಿ ಸ್ವಾತಂತ್ರವನ್ನು ಅನುಭವಿಸುವುದು, ತನ್ನ ಆಯ್ಕೆಯ ಆಹಾರವನ್ನು ಉಣ್ಣುವುದು, ಇಷ್ಟದ ಉಡುಪನ್ನು ಧರಿಸುವುದು ಕೂಡ ಕಷ್ಟವಾದ ಈ ಸಂದರ್ಭದಲ್ಲಿ ನಮ್ಮ ಸಂವಿಧಾನ ಧರ್ಮ, ಜನಾಂಗ, ಜಾತಿ, ಲಿಂಗ, ಭಾಷೆ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಈ ಎಲ್ಲಾ ಹಕ್ಕುಗಳನ್ನು ನಮಗೆ ನೀಡಿದೆ ಎಂದು ಗಟ್ಟಿಯಾಗಿ ಹೇಳುವುದೇ ಅಪರಾಧವಾಗಿದೆ. ಏಕ ಸಂಸ್ಕೃತಿಯ ಹೆಸರಿನಲ್ಲಿ ಪ್ರತಿಯೊಬ್ಬರ ಮೇಲೆ ಬಲವಂತದ ಆಯ್ಕೆಯನ್ನು ಹೇರಲಾಗುತ್ತಿದೆ. ಬಹುಸಂಖ್ಯಾತರ ದೃಷ್ಟಿಕೋನಗಳಿಗೆ ಇಡೀ ದೇಶದ ಜನರನ್ನು ಒಗ್ಗಿಸುವ ಒತ್ತಾಯ, ಹಿಂಸೆ ಎಗ್ಗಿಲ್ಲದೆ ನಡೆದಿದೆ. ಆಳುವ ಪ್ರಭುತ್ವದ ಮೌನವೂ ಇದನ್ನು ಪರೋಕ್ಷವಾಗಿ ಬೆಂಬಲಿಸುವಂತೆ ಕಾಣುತ್ತಿದೆ. ಹೀಗಾಗಿ ನಾವಿಂದು ವ್ಯಾಪಕವಾಗಿ ಕಳೆದುಕೊಳ್ಳುತ್ತಿರುವ ಸ್ವಾತಂತ್ರದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕು, ಅಂತೆಯೇ ಪಡೆದ ಸ್ವಾತಂತ್ರವನ್ನು ಮತ್ತೆ ಉಳಿಸಿಕೊಳ್ಳಲು ಕಟಿಬದ್ಧರಾಗಿ ಹೋರಾಡುವ ಕನಿಷ್ಠ ಬದ್ಧತೆಯನ್ನು ನಾವು ತೋರಬೇಕಾಗಿದೆ. ‘ಸ್ವಾತಂತ್ರದ ಅಪೇಕ್ಷೆಯೆ ಅಪರಾಧದಂತೆ ಕಾಣುವ ಈ ದಿನಗಳಲ್ಲಿ, ನಮಗೆ ಸ್ವಾತಂತ್ರದ ಹಕ್ಕನ್ನು ಕೊಟ್ಟ ಸಂವಿಧಾನವೇ ತನ್ನ ಸ್ವಾತಂತ್ರದ ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ�