ಅಜ್ಞಾತವಾಗಿಯೇ ಬದುಕುತ್ತಿರುವ ಪುತ್ತೂರಿನ ಗಾಂಧಿ ಹಾಜಿ ಇಬ್ರಾಹೀಂ ಬೊಳ್ಳಾಡಿ
“ನಾನು ಆಗಿನ್ನೂ ಪುತ್ತೂರು ನಗರದ ಸರಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಲೈಬ್ರೆರಿಗೆ ಹೋಗಿ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಆಗಲೇ ಬೆಳೆಸಿಕೊಂಡಿದ್ದೆ. ಸ್ವಾತಂತ್ರ್ಯ ಸಂಗ್ರಾಮದ ದೈನಂದಿನ ಆಗು ಹೋಗುಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ನಮ್ಮ ಪುತ್ತೂರಿಗೆ ಗಾಂಧೀಜಿ ಬರುತ್ತಾರೆಂಬ ಸುದ್ದಿ ಸಿಕ್ಕಾಗ ಅದನ್ನು ಕೇಳಿ ಪುಳಕಿತಗೊಂಡಿದ್ದೆ” ಎನ್ನುವಾಗ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಬೊಳ್ಳಾಡಿ ಇಬ್ರಾಹೀಂ ಹಾಜಿಯವರ ಮುಖದಲ್ಲಿ ಅದೆಂತಹದೋ ವಿಶೇಷ ಹೊಳಪು..
ಅವರ ಅಂದಿನ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳಿ "ಅದು1934 ಫೆಬ್ರವರಿ 24. ಮನೆಯಿಂದ ಶಾಲೆಗೆಂದು ಹೊರಟವ ಸೀದಾ ಹೋಗಿ ಈಗ ಗಾಂಧಿಕಟ್ಟೆ ಇರುವ ಜಾಗದ ಪಕ್ಕದಲ್ಲೇ ಜಾಗ ಮಾಡ್ಕೊಂಡು ಕೂತು ಗಾಂಧೀಜಿಯ ಬರುವಿಕೆಗಾಗಿ ಕಾದೆ. ಕೊನೆಗೂ ಗಾಂಧೀಜಿ ಬಂದೇ ಬಿಟ್ಟರು. "ಮಹಾತ್ಮಾ ಗಾಂಧೀಜಿ ಕಿ ಜೈ.. ಎಂಬ ಘೋಷಣೆ ಮುಗಿಲು ಮುಟ್ಟಿತು. ನಾನು ಕಿಕ್ಕಿರಿದ ಜನಸಂದಣಿಯ ಮಧ್ಯೆ ತೂರಿಕೊಂಡು ಜೈಕಾರ ಹಾಕುತ್ತಲೇ ಗಾಂಧೀಜಿಯವರ ಪಕ್ಕ ತಲುಪಿ ಅವರಿಗೆ ಹಸ್ತಲಾಘವ ಮಾಡಲು ಯತ್ನಿಸಿದೆ. ಹಸ್ತಲಾಘವ ಮಾಡಲು ಅವಕಾಶ ಸಿಗಲೇ ಇಲ್ಲ. ಗಾಂಧೀಜಿಯವರು ಒಂದಿನಿತೂ ಉದ್ವೇಗಗೊಳ್ಳದೇ ಮೆದುವಾದ ಧ್ವನಿಯಲ್ಲಿ ಭಾಷಣ ಮಾಡುತ್ತಿದ್ದರು. ನಾನು ಮೈಯೆಲ್ಲಾ ಕಿವಿಯಾಗಿಸಿ ಅವರ ಭಾಷಣ ಆಲಿಸಿದೆ. ಅವರು ಸ್ವಾತಂತ್ರ್ಯದ ಅಗತ್ಯತೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಅವರ ಅಂದಿನ ಮಾತುಗಳು ಮುಗಿಯುವುದರೊಳಗಾಗಿ ನಾನು ಒಂದು ತೀರ್ಮಾನಕ್ಕೆ ಬಂದೇ ಬಿಟ್ಟೆ.. ಇನ್ನು ಹಿಂದೆ ಮುಂದೆ ನೋಡಲಾರೆ, ಬೇರೇನೂ ಯೋಚಿಸಲಾರೆ, ನಾನೂ ಹೋರಾಟದ ಕಣಕ್ಕೆ ಧುಮುಕುವೆ..
ಆ ಬಳಿಕ ಗಾಂಧೀಜಿಯವರು ಪುತ್ತೂರು ನಗರದಿಂದ ಸುಮಾರು ಒಂದೂವರೆ-ಎರಡು ಕಿಲೋಮೀಟರ್ ದೂರವಿರುವ ರಾಗಿಕುಮೇರಿಯ ದಲಿತರ ಮನೆಗಳತ್ತ ತೆರಳಿದರು. ನಾನೂ ಗಾಂಧೀಜಿಯವರನ್ನು ಹಿಂಬಾಲಿಸಿದೆ ಎನ್ನುವುದಕ್ಕಿಂತ ಗಾಂಧೀಜಿ ರಾಗಿಕುಮೇರಿಗೆ ಹೋಗುತ್ತಾರೆಂಬ ಸುದ್ದಿ ತಿಳಿದು ನನಗೆ ತಿಳಿದಿದ್ದ ಒಳದಾರಿಗಳಲ್ಲಿ ಓಡಿ ಗಾಂಧೀಜಿಯವರಿಗಿಂತ ಮುನ್ನವೇ ರಾಗಿ ಕುಮೇರಿ ತಲುಪಿದೆ. ಅಲ್ಲಾದರೂ ಆ ಮಹಾತ್ಮನ ಕೈ ಮುಟ್ಟಬೇಕೆಂಬ ಅದಮ್ಯ ಆಶೆ ಮನದಲ್ಲಿತ್ತು. ಅಲ್ಲೂ ಗಾಂಧೀಜಿಯವರಿಗೆ ಹಸ್ತಲಾಘವ ಮಾಡಲು ಸಾಧ್ಯವಾಗಲಿಲ್ಲ.ಎರಡೂ ಕೈಗಳನ್ನೆತ್ತಿ ಗಾಂಧೀಜಿಯವರಿಗೆ ಕೈ ಮುಗಿಯುವ ಅವಕಾಶ ನನಗೆ ಸಿಕ್ಕಿತ್ತು. ಗಾಂಧೀಜಿ ನನ್ನನ್ನು ಗಮನಿಸಿ ಕೈ ಮುಗಿದಾಗ "ಸ್ವರ್ಗಕ್ಕೆ ಎರಡೇ ಗೇಣು" ಎಂಬಷ್ಟು ಸಂತಸಗೊಂಡಿದ್ದೆ.
ಸಂಗ್ರಾಮದ ಕಣಕ್ಕೆ ಧುಮುಕುವ ನನ್ನ ನಿರ್ಧಾರ ಗಟ್ಟಿಯಾಗುತ್ತಲೇ ಇತ್ತು. ಸಂಜೆ ಮನೆಗೆ ತೆರಳುವಾಗ ಸಹಪಾಠಿಗಳಲ್ಲಿ ನಾನೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತೇನೆಂದಾಗ ಸಹಪಾಠಿಗಳಲ್ಲಿ ಕೆಲವರು ಗೇಲಿ ಮಾಡಿ ನಕ್ಕರೆ ಮತ್ತೆ ಕೆಲವರು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರೆ ಪೋಲೀಸರು ಹಿಡಿದು ಜೈಲಿಗೆ ಹಾಕುತ್ತಾರೆಂದು ಹೆದರಿಸಿದರು. ಆದರೆ ನಾನಾಗಲೇ ಗಟ್ಟಿ ನಿರ್ಧಾರ ಮಾಡಿಯಾಗಿತ್ತು.
ಮರುದಿನ ಗಾಂಧೀಜಿಯವರು ಪುತ್ತೂರಿನಿಂದ ಸುಳ್ಯಕ್ಕೆ ಕಾಲ್ನಡಿಗೆ ಜಾಥಾ ಹೊರಡಲಿರುವ ಸುದ್ದಿ ಆಗಲೇ ನನಗೆ ಸಿಕ್ಕಿತ್ತು. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ನನ್ನ ಎರಡು ಜೋಡಿ ಅಂಗಿ ಮತ್ತು ಎರಡು ಲುಂಗಿಗಳನ್ನು ಶಾಲಾ ಪುಸ್ತಕಗಳನ್ನಿಡುವ ಬಟ್ಟೆಯ ಚೀಲಕ್ಕೆ ತುಂಬಿಸಿದೆ. ಅದರಲ್ಲಿದ್ದ ಪುಸ್ತಕಗಳನ್ನು ತೆಗೆದು ಮನೆಯಲ್ಲೇ ಇಟ್ಟೆ. ಅಪ್ಪ ಅಮ್ಮನಿಗೆ ಗೊತ್ತಾದ್ರೆ ಬಿಡಲಾರರು ಎಂದು ಖಚಿತವಿತ್ತು. ಬೆಳಗ್ಗೆ ಬೇಗನೇ ಎದ್ದು ತಯಾರಾದೆ. ಪುತ್ತೂರಿನಿಂದ ಸುಳ್ಯಕ್ಕೆ ಸಾಗುವ ದಾರಿಮಧ್ಯೆ ಸಿಗುವ ಕುಂಬ್ರದಲ್ಲಿ ಗಾಂಧೀಜಿಯವರ ಜಾಥಾದ ಜೊತೆ ಸೇರುವುದೆಂದು ನಿರ್ಧರಿಸಿದೆ. ಗಾಂಧೀಜಿಯವರು ಬಂದು ಕುಂಬ್ರದಲ್ಲಿ ತುಸು ಹೊತ್ತು ವಿಶ್ರಾಂತಿ ಪಡೆಯುವವರಿದ್ದರು. ಕುಂಬ್ರ ಜತ್ತಪ್ಪ ರೈಯವರು ಕುಂಬ್ರಕಟ್ಟೆಯ ಬಳಿ ಗಾಂಧೀಜಿಯ ಭಾಷಣಕ್ಕೆ ಏರ್ಪಾಡು ಮಾಡಿದ ಸುದ್ದಿ ಸಿಕ್ಕಿತು. ಗಾಂಧೀಜಿಯವರು ಬಂದು ಕುಂಬ್ರಕಟ್ಟೆಯ ಬಳಿ ಬರುತ್ತಿದ್ದಾಗ ದಾರಿಯುದ್ದಕ್ಕೂ ಅವರಿಗೆ ಜೈ ಕಾರಗಳು ಮೊಳಗುತ್ತಿತ್ತು. ನಾನೂ ಜೋರಾಗಿ ಜೈಕಾರ ಹಾಕಿದೆ. ಇಂದು ಗಾಂಧೀಜಿಯವರಿಗೆ ಹಸ್ತಲಾಘವ ಮಾಡಲೇಬೇಕೆಂದು ನಿರ್ಧಾರ ಮಾಡಿದ್ದೆ. ಗಾಂಧೀಜಿ ಬಂದು ಕಟ್ಟೆಯಲ್ಲಿ ಕೂತಾಗ ಅವರನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು.ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಗಾಂಧೀಜಿ ನಮ್ಮನ್ನುದ್ದೇಶಿಸಿ ಮಾತನಾಡುವ ಮುನ್ನ ಒಂದಿಷ್ಟು ನೀರು ಕುಡಿದು ಕಟ್ಟೆಯಲ್ಲೇ ಕೂತು ವಿಶ್ರಾಂತಿ ಪಡೆದರು. ಇದೇ ಸುಸಂದರ್ಭವೆಂದು ಬಗೆದು ಹೇಗೂ ಗಾಂಧೀಜಿಯವರ ಬಳಿ ತಲುಪಿ ಹಸ್ತಲಾಘವಕ್ಕೆಂದು ಕೈ ಚಾಚಿದೆ. ಗಾಂಧೀಜಿಯವರೂ ಕೈ ಚಾಚಿದರು. ಎರಡೂ ಕೈಗಳಿಂದ ಅವರ ಬಲಗೈಯನ್ನು ಹಿಡಿದು ಚುಂಬಿಸಿದೆ. ಬಳಿಕ ಗಾಂಧೀಜಿ ತಲೆ ಮೇಲೆ ಕೈ ಇಟ್ಟರು. ನನ್ನ ತಲೆಗೆ ಅವರ ಕರಸ್ಪರ್ಶ ಮಾಡಿದ್ದನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಲು ಅವರು ನನಗೆ ನೀಡಿದ ದೀಕ್ಷೆಯೆಂದೇ ತಿಳಿದೆ.
ಕುಂಬ್ರಕಟ್ಟೆಯಲ್ಲಿ ಭಾಷಣ ಮುಗಿಸಿ ಮತ್ತೆ ಸುಳ್ಯದತ್ತ ಜಾಥಾ ಮುಂದುವರಿಸಿದಾಗ ನಾನೂ ಅವರನ್ನು ಹಿಂಬಾಲಿಸಿದೆ. ನನ್ನ ಜೊತೆಗೆ ಬಂದಿದ್ದ ಗೆಳೆಯರು ಕಾಲ್ನಡಿಗೆ ಜಾಥಾ ಮುಗಿಸಿ ಪುತ್ತೂರಿಗೆ ಮರಳಿದರು. ಗಾಂಧೀಜಿಯವರು ಕಾರಿಗೆ ಹತ್ತಿ ಪ್ರಯಾಣ ಮುಂದುವರಿಸಿದರೆ ನಾನು ಸುಳ್ಯದಿಂದ ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಹೊರಟೆ. ಅಲ್ಲಲ್ಲಿ ವಿಶ್ರಮಿಸುತ್ತಾ ನಡೆದು ನಾನು ಬೆಂಗಳೂರು ತಲುಪಲು ಆರು ದಿನಗಳು ಬೇಕಾದವು.
ನಾನು ಬೆಂಗಳೂರಿನತ್ತ ತೆರಳಲು ಕಾರಣವಿಷ್ಟೆ. ಊರಲ್ಲಿ ನಿಂತರೆ ಸಂಗ್ರಾಮದ ಕೆಲಸಗಳಿಗೆ ಅವಕಾಶ ಕಡಿಮೆ. ಬೆಂಗಳೂರಿನಲ್ಲಾದರೆ ಪ್ರತೀದಿನ ಒಂದಿಲ್ಲೊಂದು ಕಡೆ ಆಂದೋಲನ, ಧರಣಿ, ಸತ್ಯಾಗ್ರಹಗಳಿದ್ದೇ ಇರುತ್ತವೆ. ಅದರಲ್ಲೆಲ್ಲಾ ಪಾಲ್ಗೊಳ್ಳಬಹುದೆಂದು ಮನೆಯಲ್ಲಿ ಹೇಳದೇ ಕೇಳದೇ ಬೆಂಗಳೂರಿಗೆ ಹೊರಟಿದ್ದೆ. ಬೆಂಗಳೂರು ತಲುಪಿ ಎಂಟು ದಿನಗಳಲ್ಲೇ ಕೈಯಲ್ಲಿದ್ದ ಚಿಕ್ಕಾಸು ಮುಗಿದಿತ್ತು. ಬೆಂಗಳೂರಿನ ವಿವಿಧೆಡೆ ನಡೆಯುತ್ತಿದ್ದ ಸತ್ಯಾಗ್ರಹಗಳಲ್ಲಿ ಒಂದು ದಿನವೂ ಬಿಡದೇ ಪಾಲ್ಗೊಂಡೆ. ಸತ್ಯಾಗ್ರಹಿಗಳು ನನ್ನಂತಹ ಬಾಲಕರಿಗೆ ಊಟ-ತಿಂಡಿ ಕೊಡುತ್ತಿದ್ದರು. ಹೀಗೆ ಪ್ರತೀದಿನ ಒಂದಲ್ಲಾ ಒಂದೆಡೆ ಧರಣಿ, ಸತ್ಯಾಗ್ರಹಗಳಿರುತ್ತಿತ್ತು. ಎಷ್ಟೇ ದೂರವಾದರೂ ದಾರಿ ಕೇಳುತ್ತಾ ಒಂದೆಡೆಯಿಂದ ಇನ್ನೊಂದೆಡೆಗೆ ನಡೆದೇ ಹೋಗುತ್ತಿದ್ದೆ. ಅಂದಿನ ಬೆಂಗಳೂರು ಇಂದಿನಷ್ಟು ಬೆಳೆದಿರಲಿಲ್ಲ. ಅದಾಗ್ಯೂ ಅಂದೂ ಬೆಂಗಳೂರು ಒಂದು ಮಹಾನಗರವೇ ಆಗಿತ್ತು.
ಎಲ್ಲಿ ಧರಣಿ, ಸತ್ಯಾಗ್ರಹಗಳಲ್ಲಿ ಭಾಗವಹಿಸುತ್ತಿದ್ದೆನೋ ಅಲ್ಲೇ ಸತ್ಯಾಗ್ರಹಿಗಳು ನೀಡುತ್ತಿದ್ದ ಅನ್ನ ಉಂಡು ಅಲ್ಲೇ ಎಲ್ಲಾದರೂ ಮಸೀದಿಯಿದ್ದರೆ ಮಸೀದಿಗೆ ಹೋಗಿ ಸ್ನಾನ ಮತ್ತು ಶೌಚ ಮುಗಿಸಿ ನಮಾಝು ಮಾಡಿ ಮಸೀದಿಯಲ್ಲಿ ಮಲಗುತ್ತಿದ್ದೆ. ಅನೇಕ ಕಡೆಗಳಲ್ಲಿ ಮಸೀದಿಗಳು ಇರಲಿಲ್ಲವಾದುದರಿಂದ ಹಲವು ದಿನಗಳನ್ನು ಬಸ್ ನಿಲ್ದಾಣ, ಫುಟ್ ಪಾತ್ಗಳಲ್ಲಿ ಕಳೆದಿದ್ದೂ ಇದೆ. ಕೆಲದಿನ ಆಶ್ರಮಗಳಲ್ಲೂ ತಂಗಿದೆ. ಅಲ್ಲಿಯೂ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಗಳಿತ್ತು. ಬಸ್ ನಿಲ್ದಾಣ, ಫುಟ್ಪಾತ್ಗಳಲ್ಲಿ ವಿಪರೀತ ಸೊಳ್ಳೆ ಕಾಟವಿದ್ದುದರಿಂದ ಬೆಂಗಳೂರು ತಲುಪಿ ತಿಂಗಳಾಗುವಷ್ಟು ಹೊತ್ತಿಗೆ ಜೋರಾಗಿ ಚಳಿಜ್ವರ ಬಂತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಮಲೇರಿಯಾ ಬಂದಿರುವುದು ಖಚಿತವಾಯಿತು. ನಿತ್ರಾಣವಾಗಿ ಅನ್ಯದಾರಿ ಕಾಣದೇ ಮತ್ತೆ ಊರಿಗೆ ಮರಳಿದೆ. ಮೊದ ಮೊದಲು ಬೈದ ಅಪ್ಪ ಅಬ್ಬುಕುಂಞಿಯವರಿಗೆ ಕ್ರಮೇಣ ನನ್ನ ಗುರಿಯೇನೆಂದು ತಿಳಿಯಿತು. ಅಮ್ಮ ಆಸಿಯಮ್ಮನವರ ಪ್ರೀತಿಯ ಆರೈಕೆಯಿಂದ ವಾರ ಕಳೆಯುವುದರೊಳಗಾಗಿ ಮತ್ತೆ ಗೆಲುವಾದೆ.
ಕೆಲದಿನಗಳ ಬಳಿಕ ಗಾಂಧೀಜಿ ಬೆಂಗಳೂರಿಗೆ ಬರುವ ಸುದ್ದಿ ಸಿಕ್ಕಿತು.ಮತ್ತೆ ಬೆಂಗಳೂರಿಗೆ ಹೋಗಿ ವಿವಿಧೆಡೆ ಗಾಂಧೀಜಿಯವರ ಭಾಷಣಗಳನ್ನು ಆಲಿಸುತ್ತಿದ್ದೆ. ಅಷ್ಟೊತ್ತಿಗೆ ನಾನೋರ್ವ ಸತ್ಯಾಗ್ರಹಿ ಎಂಬ ವಿಚಾರ ಅನೇಕ ಸಹ ಸತ್ಯಾಗ್ರಹಿಗಳಿಗೆ ತಿಳಿದುದರಿಂದ ನನಗೆ ಊಟ-ವಸತಿಗೆ ಸಮಸ್ಯೆಯಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ಅಂದು ಎರಡ್ಮೂರು ಕಡೆ ತಾತ್ಕಾಲಿಕ ಗಾಂಧಿ ಆಶ್ರಮಗಳನ್ನು ಮಾಡಲಾಗುತ್ತಿತ್ತು. ಸಂಗ್ರಾಮದ ನಿಮಿತ್ತ ಬೆಂಗಳೂರಿಗೆ ಹೋದಾಗೆಲ್ಲಾ ಗಾಂಧಿ ಆಶ್ರಮದಲ್ಲಿ ತಂಗುತ್ತಿದ್ದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಮದ್ರಾಸ್, ಕೊಲ್ಕತ್ತಾ ಅಧಿವೇಶನಗಳಲ್ಲೂ ಭಾಗವಹಿಸಿದ್ದೆ. ಆಗ ಕಾಂಗ್ರೆಸ್ ಎಂದರೆ ಹೋರಾಟ ಎಂಬಂತಿತ್ತು.
ಆ ಬಳಿಕ ಪುತ್ತೂರು-ಪಾಣೆಮಂಗಳೂರು- ಮಂಗಳೂರು ಮುಂತಾದೆಡೆ ನಡೆಯುತ್ತಿದ್ದ ಬ್ರಿಟಿಷ್ ವಿರೋಧಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಕುಂಬ್ರ ಜತ್ತಪ್ಪ ರೈಗಳು ನಮ್ಮ ನಾಯಕರಾಗಿದ್ದರು. ನಾನು ಕುಂಬ್ರ ಲಿಂಗಪ್ಪ ರೈ, ಮುಗಿರೆ ಮೊಯ್ದಿನ್ ಕುಂಞಿಚ್ಚ, ಯು.ಅಬ್ದುಲ್ಲಾ, ಸಾಲ್ಮರ ಅಬ್ಬುಚ್ಚ, ಕುಂಞಿಂಬಿಚ್ಚ ಮುಂತಾದವರು ಪುತ್ತೂರು ಭಾಗದಲ್ಲಿ ಚಳವಳಿಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆವು. ಇವರಲ್ಲದೇ ಅನೇಕ ಮಂದಿ ನಮ್ಮ ಜೊತೆಗಿದ್ದರು. ನನಗೀಗ ಹೆಸರುಗಳೆಲ್ಲಾ ನೆನಪಿಗೆ ಬರುತ್ತಿಲ್ಲ. ಪಾಣೆಮಂಗಳೂರಿನಲ್ಲಿ ಎಂ.ಅದ್ದಾಕ ಎಂಬವರ ನೇತೃತ್ವದಲ್ಲಿ ಸತ್ಯಾಗ್ರಹಗಳು ನಡೆಯುತ್ತಿತ್ತು. ಅವರು ಪಾಣೆಮಂಗಳೂರು ಸತ್ಯಾಗ್ರಹ ಸಮಿತಿಯ ಅಧ್ಯಕ್ಷರಾಗಿದ್ದರು. ಮಂಗಳೂರಿನಲ್ಲಿ ಅಮ್ಮೆಂಬಳ ಬಾಳಪ್ಪರವರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಮಂಗಳೂರಿನಲ್ಲಿ ಯುವ ನಾಯಕ ಬಾಳಪ್ಪ ಮತ್ತವರ ತಂಡದವರು ಅಲ್ಲಲ್ಲಿ ನಡೆಸುತ್ತಿದ್ದ ಸತ್ಯಾಗ್ರಹಗಳಲ್ಲಿಯೂ ಭಾಗವಹಿಸುತ್ತಿದ್ದೆ. ಬಾಳಪ್ಪ ತುಸು ಹೆಚ್ಚೇ ಕ್ರಾಂತಿಕಾರಿಯಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿ ಮತ್ತು ಖಾದಿ ಚಳವಳಿಯಲ್ಲಿ ನಾನು ಹೆಚ್ಚು ಆಸಕ್ತನಾಗಿದ್ದೆ.
ಡಾ.ಮೊಯ್ದಿನಬ್ಬ ಸ್ವಾಲಿಹಿ, ಫರಂಗಿಪೇಟೆಯ ಡಾ.ಎಫ್.ಎಚ್.ಒಡೆಯರ್ ಆಗ ಖಿಲಾಫತ್ ಚಳವಳಿಯ ನೇತೃತ್ವ ವಹಿಸುತ್ತಿದ್ದರು. ಅವರ ನೇತೃತ್ವದ ಅನೇಕ ಹೋರಾಟಗಳಲ್ಲಿಯೂ ಭಾಗವಹಿಸಿದ್ದೇನೆ. ಬೆಂಗಳೂರು, ಪುತ್ತೂರು, ಪಾಣೆಮಂಗಳೂರು , ಮಂಗಳೂರು ಮುಂತಾದೆಡೆ ಪೊಲೀಸರ ಲಾಠಿಯೇಟು ತಿಂದಿದ್ದೇನೆ. ಸ್ವಾತಂತ್ರ್ಯದ ತಹತಹಿಕೆಯಲ್ಲಿದ್ದ ಬಿಸಿರಕ್ತದ ಯುವಕನಾಗಿದ್ದ ನನ್ನಲ್ಲಿ ದೇಶವಿಮೋಚನೆಗಾಗಿ ತಿನ್ನುವ ಒಂದೊಂದು ಏಟೂ ಮತ್ತಷ್ಟು ಸ್ಫೂರ್ತಿ ತುಂಬುತ್ತಿದ್ದವು.
“ನಿಮಗೆ ಸ್ವಾತಂತ್ರ ಹೋರಾಟಗಾರರ ಪಿಂಚಣಿ ಬರುತ್ತಿದೆಯೇ’’ ಎಂದು ಪ್ರಶ್ನಿಸಿದ್ದಕ್ಕೆ
"ಇಲ್ಲ ಮತ್ತು ನನಗೆ ಅದರ ಆಶೆಯೂ ಇರಲಿಲ್ಲ.. ನನಗೆ ಮೂರು ಎಕರೆ ಕೃಷಿ ಭೂಮಿಯಿತ್ತು. ಅದರಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೆ.ನನಗೂ ನನ್ನ ಕುಟುಂಬಕ್ಕೂ ಅದು ಸಾಕಾಗುತ್ತಿತ್ತು.
ಮೂಲತಃ ಕೃಷಿಕರಾಗಿದ್ದ ಹಾಜಿಯವರಿಗೆ ರೈತರ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ. ರೈತರ ಅಭ್ಯುದಯಕ್ಕಾಗಿ 1959ರಲ್ಲಿ ತನ್ನ ಹಳ್ಳಿಯಾದ ಕುಂಬ್ರದಲ್ಲಿ ಮಂಞಣ್ಣ ರೈಗಳೊಂದಿಗೆ ಸೇರಿ "ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ" ಸ್ಥಾಪಿಸಿದರು. ಅದಕ್ಕಾಗಿ ಮೂವತ್ತಾರು ಸೆಂಟ್ಸ್ ಜಾಗವನ್ನೂ ಹಾಜಿಯವರು ದಾನ ಮಾಡಿದ್ದರು.
ಇದೀಗ ನೂರ ಒಂದು ವರ್ಷ ವಯಸ್ಸಿನ ಬೊಳ್ಳಾಡಿ ಇಬ್ರಾಹಿಂ ಹಾಜಿಯವರು ಬೊಳ್ಳಾಡಿಯ ಅವರ ಸಾದಾ ಹೆಂಚಿನ ಮನೆಯಲ್ಲಿ ಮಗನೊಂದಿಗೆ ವಾಸವಾಗಿದ್ದಾರೆ. ಕಳೆದ ವರ್ಷದ ತನಕವೂ ಅವರ ಸ್ಮರಣ ಶಕ್ತಿ ತಾಜಾ ಆಗಿಯೇ ಇತ್ತು. ಕಳೆದ ವರ್ಷ ಒಮ್ಮೆ ಅನಾರೋಗ್ಯಪೀಡಿತರಾಗಿ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಕಳೆದು ಬಂದ ಬಳಿಕ ಅವರ ಸ್ಮರಣ ಶಕ್ತಿ ಕುಂದಿದೆ. ಆಸ್ಪತ್ರೆಗೆ ದಾಖಲಾಗುವವರೆಗೂ ಪ್ರತೀದಿನ ಐದು ಹೊತ್ತಿನ ನಮಾಝಿಗೆ ಕುಂಬ್ರ ಇಸ್ಲಾಮಿಕ್ ಅಕಾಡಮಿಯ ಮಸೀದಿಗೆ ನಡೆದುಕೊಂಡು ಹೋಗುತ್ತಿದ್ದರು.
“ಸ್ವಾತಂತ್ರಾ ನಂತರ ತಾನಾಯಿತು ತನ್ನ ಪಾಡಾಯಿತು ಎಂದು ನನ್ನ ಹಳ್ಳಿಯಲ್ಲೇ ಒಂದಿಷ್ಟು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಈಗಲೂ ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸುವ ಹುಮ್ಮಸ್ಸಿದ್ದರೂ ದೇಹ ಸಹಕರಿಸುತ್ತಿಲ್ಲ” ಎಂದು ಮುಗುಳ್ನಗುತ್ತಾರೆ.
ಇದೀಗ ಕುಂಬ್ರ ಸುತ್ತಮುತ್ತಲ ಜನತೆಯ ಹೊರತಾಗಿ ಜಿಲ್ಲೆಯ ಜನತೆ ಹಾಜಿಯವರನ್ನು ಮರೆತೇ ಬಿಟ್ಟಿದ್ದಾರೆ.ಹಾಜಿಯವರಿಗೆ ಅಂತಹ ಪ್ರಚಾರದ ಬಯಕೆಯೂ ಇಲ್ಲ. ಆದುದರಿಂದ ಗಾಂಧಿವಾದದ ಪಳೆಯುಳಿಕೆಯಂತಿರುವ ದ.ಕ. ಜಿಲ್ಲೆಯ ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಕೊಂಡಿ ಇಂದಿಗೂ ಅಜ್ಞಾತವಾಗಿಯೇ ಬದುಕುತ್ತಿದ್ದಾರೆ.