‘ದಿ ಪೈಂಟರ್’ ಡೈರೆಕ್ಟರ್ ಜೊತೆಗೆ ಮಾತು
‘ಕೆಂಪಿರ್ವೆ’ ಚಿತ್ರದ ಮೂಲಕ ಕನ್ನಡಿಗರ ಮನ ಸೆಳೆದ ನಿರ್ದೇಶಕ ವೆಂಕಟ್ ಭಾರದ್ವಾಜ್ ತಮಿಳಲ್ಲಿಯೂ ಸಿನೆಮಾ ನಿರ್ದೇಶಿಸಿದ್ದಾರೆ! ‘ಬಬ್ಲೂಷ’, ‘ಎ ಡೇ ಇನ್ ದಿ ಸಿಟಿ’ ಮೊದಲಾದ ಸಿನೆಮಾಗಳ ಜತೆಗೆ ತಮಿಳಲ್ಲಿ ‘ಉಣರ್ವ್’ ಎನ್ನುವ ಸಿನೆಮಾ ನಿರ್ದೇಶಿಸಿದ ಅನುಭವಿ ಇವರು. ಪ್ರಸ್ತುತ ಲಾಕ್‌ಡೌನ್ ಸಮಯದಲ್ಲಿ ಇಡೀ ವೃತ್ತಿರಂಗವೇ ಮುಚ್ಚಿದ್ದಂತಹ ಸಂದರ್ಭದಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ, ಇದೀಗ ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದ್ದಾರೆ ವೆಂಕಟ್ ಭಾರದ್ವಾಜ್. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿರುವ ‘ದಿ ಪೈಂಟರ್’ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸಿನೆಮಾದ ವಿಶೇಷತೆಗಳ ಬಗ್ಗೆ ನಿರ್ದೇಶಕರೊಂದಿಗೆ ‘ವಾರ್ತಾಭಾರತಿ’ ನಡೆಸಿರುವ ವಿಶೇಷ ಮಾತುಕತೆ ಇದು.
ಪ್ರ: ‘ದಿ ಪೈಂಟರ್’ ಸಿನೆಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ?
ಚಿತ್ರ ಗ್ಲೋಬಲ್ ರಿಲೀಸ್ ಆಗಿರುವುದರಿಂದ ಕರ್ನಾಟಕ ಮಾತ್ರವಲ್ಲ, ಆಂಧ್ರ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಕಳೆದ ಎರಡು ದಿನಗಳಿಂದ ಪರಿಚಿತರೆಲ್ಲ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೈಜೀರಿಯಾ, ಕೀನ್ಯ, ಯುಎಸ್‌ಎ, ಯುಕೆಯಲ್ಲಿ ಚಿತ್ರ ವೀಕ್ಷಿಸಿರುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಎಟಿಟಿ ಮೂಲಕ ಬಿಡುಗಡೆಯಾದರೂ ಪರಿಶ್ರಮಕ್ಕೆ ತಕ್ಕ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಖುಷಿಯಿದೆ.
ಪ್ರ: ಇದು ಕನ್ನಡದಲ್ಲಿ ಎಟಿಟಿ ಮೂಲಕ ಬಿಡುಗಡೆಯಾಗುವ ಪ್ರಥಮ ಚಿತ್ರ ಎನ್ನಬಹುದಲ್ಲವೇ?
ಹೌದು. ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇತ್ತೀಚೆಗಷ್ಟೇ ‘ಪವರ್ ಸ್ಟಾರ್’ ಚಿತ್ರವನ್ನು ತಮ್ಮ ಸ್ವಂತ ಆ್ಯಪ್‌ನಲ್ಲಿ ಹಾಕುವುದರ ಜತೆಗೆ ‘ಶ್ರೇಯಸ್ ಎಟಿಟಿ’ಯಲ್ಲಿಯೂ ಹಾಕಿದ್ದರು. ಎಟಿಟಿ ಅಂದರೆ ‘ಎನಿಟೈಮ್ ಥಿಯೇಟರ್’ ಎನ್ನುವ ಪರಿಕಲ್ಪನೆ. ಇಲ್ಲಿ ಒಂದೊಂದು ಚಿತ್ರಕ್ಕೆ ಒಂದೊಂದು ಟಿಕೆಟ್ ಹಣ ನೀಡಿ ನೋಡಬೇಕಾಗಿರುತ್ತದೆ. ಒಂದು ರೀತಿ ಕನ್ನಡದ ಮಟ್ಟಿಗೆ ಹೊಸ ಕಾನ್ಸೆಪ್ಟ್. ಆದರೆ ನಾನು ಈ ಸಿನೆಮಾವನ್ನು ನನ್ನ ಇತರ ಸಿನೆಮಾಗಳನ್ನು ಮಾಡಿದಂತೆ ಥಿಯೇಟರ್‌ಗೆ ಎಂದೇ ಮಾಡಿದ್ದೇನೆ. ಚಿತ್ರಮಂದಿರದಲ್ಲಿ ನೋಡಲು ಏನೆಲ್ಲ ಟ್ರೀಟ್‌ಮೆಂಟ್ ಬೇಕಾಗಿರುತ್ತದೆಯೋ ಅವೆಲ್ಲವೂ ಹಾಗೆಯೇ ಇರುತ್ತದೆ. ಮೇಕಿಂಗ್‌ನಲ್ಲಿ ಯಾವುದೇ ಗುಣಮಟ್ಟದ ಕೊರತೆ ಇಲ್ಲ.
ಪ್ರ: ಲಾಕ್‌ಡೌನ್ ಸಂದರ್ಭದಲ್ಲಿ ಚಿತ್ರ ಮಾಡುವುದು ಸಮಸ್ಯೆಯಾಗಲಿಲ್ಲವೇ?
ಸಮಸ್ಯೆ ಆಗಿಲ್ಲ. ಬದಲಾಗಿ ನಮ್ಮ ಚಿತ್ರ ಲಾಕ್‌ಡೌನ್ ಬಗ್ಗೆಯೇ ಆಗಿರುವ ಕಾರಣ ಚಿತ್ರೀಕರಣ ಸುಲಭವೇ ಆಯಿತು. ಮಾರ್ಚ್ 25ರಿಂದ ಚಿತ್ರೀಕರಣ ಶುರು ಮಾಡಿದ್ದೇವೆ. ಹಾಗಂತ ಇದು ಲಾಕ್‌ಡೌನ್ ಕುರಿತಾದ ಡಾಕ್ಯುಮೆಂಟರಿ ಅಂದುಕೊಳ್ಳಬೇಡಿ. ಇದು ಐದು ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಿರುವಂತಹ ಸಿನೆಮಾ. ನಾನು ಮೂರೇ ದಿನದಲ್ಲಿ ಕತೆ ಮಾಡಿದರೂ ಚಿತ್ರದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಪಾತ್ರಗಳಿವೆ. ದೊಡ್ಡ ಸಾಹುಕಾರರ ಮನೆಯ ಮುಂದುಗಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಬ್ಬ ಡಾನ್ ಮನೆ ಮುಂದೆ ಏನಾಗುತ್ತೆ ಎನ್ನುವಂತಹ ದೃಶ್ಯಗಳನ್ನು ತೋರಿಸಲಾಗಿದೆ. ಪೈಂಟರ್ ಎನ್ನುವ ಪ್ರಧಾನ ಪಾತ್ರವನ್ನು ನಾನೇ ಮಾಡಿದ್ದೇನೆ. 1ಗಂಟೆ 45 ನಿಮಿಷಗಳ ಕಾಲಾವಧಿಯ ಚಿತ್ರ ಇದು.
ಪ್ರ: ಚಿತ್ರದಲ್ಲಿ ಹಾಡು, ಫೈಟ್ಸ್ ಎಲ್ಲ ಇವೆಯೇ?
ಲಾಕ್‌ಡೌನ್ ಸಂದರ್ಭದಲ್ಲಿ ದಿನಗೂಲಿ ಕಾರ್ಮಿಕರು ಅನುಭವಿಸಬೇಕಾದ ಕಷ್ಟ ಏನಿರುತ್ತದೆ; ಎಂತಹ ಅವ್ಯವಸ್ಥೆಗಳನ್ನೆಲ್ಲ ಎದುರಿಸಬೇಕಾಯಿತು ಎನ್ನುವುದರ ಹಿನ್ನೆಲೆಯಲ್ಲಿ ಮಾಡಿರುವಂಥ ಚಿತ್ರ ಇದು. ಇದೇ ಸಂದರ್ಭವನ್ನು ಬಳಸಿಕೊಂಡ ಸಮಾಜ ಘಾತುಕ ಶಕ್ತಿಗಳ ಪಾತ್ರವೇನು?, ಪೊಲೀಸ್ ಮತ್ತು ರಾಜಕೀಯ ವ್ಯವಸ್ಥೆ ಆಗ ಹೇಗೆ ಕಾರ್ಯ ನಿರ್ವಹಿಸಿತು ಎನ್ನುವ ಎಲ್ಲ ವಿಚಾರಗಳನ್ನು ವಾಸ್ತವಕ್ಕೆ ಹೊಂದಿಕೊಂಡಂತೆ ತಯಾರು ಮಾಡಿದಂತಹ ಕತೆ ಇದು. ಹಾಗಾಗಿ ಇದರಲ್ಲಿ ಹಾಡು ಮತ್ತು ಹೊಡೆದಾಟಕ್ಕಿಂತ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್‌ಗೆ ಹೆಚ್ಚು ಅವಕಾಶಗಳಿವೆ. ಆದರೂ ಹಿಂದಿ ಚಿತ್ರದ ಪ್ರಮೋಶನ್ ವಿಚಾರಕ್ಕಾಗಿ ಒಂದು ಹಾಡು ಮಾಡಿದ್ದೆವು. ಅದು ಹಿಂದಿಯಲ್ಲಷ್ಟೇ ಇದೆ. ಟಿಕೆಟ್ ದರ ಐವತ್ತು ರೂಪಾಯಿ ಮಾಡಿದ್ದೇವೆ. ಜಿಎಸ್‌ಟಿ ಸೇರಿ ಅದು 60 ಆಗುತ್ತದೆ. ಅದರಲ್ಲಿ ನನಗೆ ಬರುವುದರ ಇಪ್ಪತ್ತು ಶೇಕಡಾ ಮೊತ್ತವನ್ನು ಕನ್ನಡ ಚಲನಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ನೀಡಬೇಕು ಎನ್ನುವ ಯೋಜನೆ ಹಾಕಿಕೊಂಡಿದ್ದೇನೆ. ಯಾಕೆಂದರೆ ಇದೊಂದು ಕೊರೋನ ಲಾಕ್‌ಡೌನ್‌ನಲ್ಲಿ ಚಿತ್ರೋದ್ಯಮದಲ್ಲಿ ಬಹುಶಃ ಕಾರ್ಮಿಕರಷ್ಟು ನೊಂದವರು ಬೇರೆ ಯಾರೂ ಇಲ್ಲ. ಹಾಗಾಗಿ ಅವರಿಗೆ ಒಂದಷ್ಟು ಡೊನೇಶನ್ ಮಾಡುವ ತೀರ್ಮಾನ ಮಾಡಿದ್ದೇನೆ. ಯಾರು ಏನೇನು ತೊಂದರೆಯಲ್ಲಿದ್ದಾರೆ ಎನ್ನುವ ಬಗ್ಗೆ ನನಗೂ ಒಂದಷ್ಟು ಮಾಹಿತಿ ಇದೆ. ಅದನ್ನು ನೋಡಿಕೊಂಡು ಆ ಬಗ್ಗೆ ಖುದ್ದಾಗಿ ಗಮನಹರಿಸುವೆ.
ಪ್ರ: ಬೇರೆ ಥಿಯೇಟರ್ ರಿಲೀಸ್ ಮಾಡುವ ಚಿತ್ರಗಳ ಯೋಜನೆ ಹಾಕಿದ್ದೀರ?
ಆಗಲೇ ಹೇಳಿದಂತೆ ‘ದಿ ಪೈಂಟರ್’ ಚಿತ್ರವನ್ನು ಕೂಡ ನಾನು ಚಿತ್ರಮಂದಿರಕ್ಕೆಂದೇ ಮಾಡಿದ್ದೆ. ಆದರೆ ಲಾಕ್‌ಡೌನ್ ಮುಗಿದರೂ ಸದ್ಯದ ಮಟ್ಟಿಗೆ ಚಿತ್ರಮಂದಿರ ತೆರೆಯುವ ಅವಕಾಶಗಳೇ ಇಲ್ಲ. ಚಿತ್ರದ ಸಬ್ಜೆಕ್ಟ್ ಬೇರೆ ಲಾಕ್‌ಡೌನ್ ಬಗ್ಗೆಯೇ ಇದೆ. ಹಾಗಾಗಿ ತಡವಾದರೆ ವಿಷಯ ಹಳೆಯದಾಗುತ್ತದೆ ಎನ್ನುವ ಕಾರಣದಿಂದ ಬೇಗ ಬಿಡುಗಡೆಗೊಳಿಸಬೇಕಾದ ಅನಿವಾರ್ಯತೆ ಬಂತು. ಹಾಗಾಗಿ ಎಟಿಟಿಯಲ್ಲಿ ರಿಲೀಸ್ ಮಾಡಲಾಯಿತು. ಇದಕ್ಕೂ ಮೊದಲೇ ಚಿತ್ರೀಕರಣ ಪೂರ್ತಿ ಮಾಡಿರುವ ಚಿತ್ರ ‘ಆಮ್ಲೇಟ್’ ಅದು ಈಗ ಪೂರ್ತಿಯಾಗಿ ಬಿಡುಗಡೆಗೆ ತಯಾರಾಗಿದೆ. ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ನಿರಂಜನ್ ದೇಶಪಾಂಡೆ, ಶೋಭರಾಜ್, ಬಿಗ್ ಬಾಸ್ ಸುಜಾತಾ ಮೊದಲಾದವರು ನಟಿಸಿದ್ದಾರೆ. ವೇಗದ ಬದುಕಿನಲ್ಲಿ ಮುಳುಗಿರುವವರ ಕತೆ ಹೇಳುವ ಚಿತ್ರ ಅದು. ಅದೇ ಕಾರಣಕ್ಕೆ ಆಮ್ಲೇಟ್ ಎನ್ನುವುದನ್ನು ಉಪಮೆಯಾಗಿ ಬಳಸಿದ್ದೇನೆ. ಹಾಸ್ಯ ಮತ್ತು ಭಾವನಾತ್ಮಕತೆಗೆ ಒತ್ತು ನೀಡುವ ಚಿತ್ರ ಅದು. ವೇಗ ಎಷ್ಟು ಒಳ್ಳೆಯದು ಎಷ್ಟು ಕೆಟ್ಟದ್ದು ಎನ್ನುವುದನ್ನು ತೋರಿಸಲಾಗಿದೆ. ಕೋಲ್ಕತಾ ಫಿಲ್ಮ್ ಫೆಸ್ಟಿವಲ್‌ಗೆ ಕಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಲ್ಲದೆ ಎರಡು ಮೂರು ಸ್ಕ್ರಿಪ್ಟ್ ತಯಾರು ಮಾಡಿದ್ದೇನೆ. ಆದರೆ ಚಾಲೆಂಜಾಗಿ ತೆಗೆದುಕೊಂಡು ಚಿತ್ರೀಕರಿಸಿರುವುದು ಅಂದರೆ ‘ದಿ ಪೈಂಟರ್’ ಸಿನೆಮಾ.