ಕನ್ನಡದ ಕೈಯ ದೀವಿಗೆ ಡಿ. ಆರ್. ನಾಗರಾಜ್
ಭಾಗ-2
ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಡಿ. ಆರ್. ಜಗತ್ತಿನ ಘನ ಸಿದ್ಧಾಂತಗಳನ್ನು ವಿವರಿಸುವಾಗಲೂ ಕನ್ನಡದ ಸಾಹಿತ್ಯ ಕೃತಿಗಳ ನೆರವು ಪಡೆಯುತ್ತಿದ್ದರು. ಪಟ ಎಷ್ಟು ಎತ್ತರಕ್ಕೆ ಹಾರಿದರೂ ಸೂತ್ರ ಕೈ ಬಿಟ್ಟು ಹೋಗುತ್ತಿರಲಿಲ್ಲ. ಮಾರ್ಕ್ಸ್‌ವಾದಿ ಅಧ್ಯಯನ ಕ್ರಮದ ಕುರಿತು ನಿಧಾನಕ್ಕೆ ಉದಾಸೀನ ತಾಳಿದರೂ, ಪ್ರಮೇಯಗಳೊಂದಿಗೆ ಎದುರಾಳಿಗಳನ್ನು ಮುಖಾಮುಖಿಯಾಗುವಾಗ ಬಿಕ್ಕಟ್ಟು ಬಂದರೆ ಬತ್ತಳಿಕೆಗೆ ಕೈ ಹಾಕಿದಾಗಲೆಲ್ಲ ಸಿಕ್ಕುತ್ತಿದ್ದ ಅಸ್ತ್ರ ಮಾರ್ಕ್ಸ್‌ವಾದವೆ.
ಡಿ. ಆರ್.ರ ನಂತರದ ಬರಹಗಳು ಕಥನದ ಮಾದರಿಗೆ ತಿರುಗಿದವು. ಅವು ಫಿಕ್ಷನ್- ನಾನ್ ಫಿಕ್ಷನ್ನಿನ ಗಡಿರೇಖೆಗಳನ್ನು ಒರೆಸಿ ಹಾಕಿದವು. ರೂಪಕ, ಪ್ರತಿಮೆಗಳ ಮಾಲಕತ್ವ ಪಡೆದಿದ್ದ ಕಾವ್ಯಚಂದ್ರನನ್ನು ಮೀರಿಸಿ ಅವುಗಳನ್ನು ಮೀಮಾಂಸೆ, ವಿಮರ್ಶೆಗಳಿಗೆ ಬಳಸಲಾರಂಭಿಸಿದರು. ಹಿಂದೆ ಕುವೆಂಪು ಮುಂತಾದವರು ಈ ಕೆಲಸ ಮಾಡಿದ್ದರೂ ಡಿ. ಆರ್. ಕಥನ ಮಾದರಿಗಳ ಎಲ್ಲ ಶಕ್ತಿ ಸಾಧ್ಯತೆಗಳನ್ನೂ ಬಳಸಿಕೊಂಡರು. ಹಾಗಾಗಿ ಬರಹ ತೀವ್ರವೂ, ಸಾಂದ್ರವೂ ಆಯಿತು. ಅವರ ಮಾತಿಗೆ ಅದುವರೆಗೂ ಇಲ್ಲದ ಲಾಲಿತ್ಯ ಮತ್ತು ಬನಿ ಬಂತು.ಈ ನಾದ, ಲಾಲಿತ್ಯ ಹಾಗೂ ಸಂಕ್ಷಿಪ್ತ ಗುಣದ ಗದ್ಯ ವಚನಗಳ ಗದ್ಯದಂತೆ ಅನೇಕ ಸಾರಿ ಭಾಸವಾಗುತ್ತದೆ. ಆದರೆ, ಅವರು ಸೃಷ್ಟಿಸಿದ ಅನೇಕ ಪರಿಭಾಷೆಗಳು ಸಂಸ್ಕೃತದಿಂದ ಎತ್ತಿಕೊಂಡವಾಗಿದ್ದವು. ವಿಕಲ್ಪ, ವಿಸ್ಮತಿ, ವಿರಾಟ್, ಅಮೃತ, ಸಕೀಲ, ಅವಸರ್ಪಿಣಿ, ಉತ್ಸರ್ಪಿಣಿ, ಆಕ್ಷೇಪಣೆ, ವಿಕ್ಷೇಪಣೆ... ಪಟ್ಟಿ ಮುಗಿಯುವುದಿಲ್ಲ. ವಿರಾಟ್ ಆದುದರ ಜೊತೆಗೆ ಸ್ಥಳೀಯವಾದುದನ್ನು ಜೋಡಿ ಮಾಡಿ ನೋಡುತ್ತಿದ್ದರು.
ಮಾರ್ಕ್ಸ್‌ವಾದಿಯಾಗಿದ್ದ ಡಿ. ಆರ್.ರನ್ನು ಮೊದಲಿಗೆ ಬಸವಣ್ಣ ಸೆಳೆದಿದ್ದಾನೆ. ನಿಧಾನಕ್ಕೆ ಭಾರತೀಯ ತತ್ವಶಾಸ್ತ್ರಗಳ ಮೋಹಕ್ಕೆ ಸಿಕ್ಕಿದ ನಂತರ ಅಲ್ಲಮನ ತೆಕ್ಕೆಗೆ ಸಿಕ್ಕಿಕೊಳ್ಳುತ್ತಾರೆ. ‘‘ಹೋಮ ಮಾಡುವವರ ಕಂಡೆ, ಹೊಗೆಯ ನಿಲ್ಲಿಸುವವರನಾರನೂ ಕಾಣೆ’’ ಎಂಬುದನ್ನು ಸವಾಲಾಗಿ ಸ್ವೀಕರಿಸಲು ಹೊರಟ ಯಕ್ಷನಂತೆ ಕೆಲವೊಮ್ಮೆ ಕಂಡಿದ್ದಾರೆ. ವಿದ್ವಾಂಸನ ತೀವ್ರ ಬೌದ್ಧಿಕ ಹಸಿವು ಮತ್ತು ಅದನ್ನು ಜಾಹೀರುಗೊಳಿಸಿಕೊಳ್ಳುವ ಮಗುತನ ಎರಡೂ ಅವರೊಳಗಿದ್ದವು. ಕೆಲವೊಮ್ಮೆ ಔಷಧಕ್ಕಿಂತ ಸಕ್ಕರೆ ಲೇಪನವೂ ಜಾಸ್ತಿಯಾಗಿದ್ದೂ ನಿಜ.
ಡಿ. ಆರ್. ರ ಮತ್ತೊಂದು ಅತ್ಯಂತ ಪ್ರಬಲ ಅಭಿವ್ಯಕ್ತಿ, ತೌಲನಿಕ ವಿಧಾನ. ಬಿಸಿಲು ಮಂಜನ್ನು ಎರಕ ಹೊಯ್ಯುವ ಮಾಯಕವನ್ನು ಬೇಂದ್ರೆ ವಿವರಿಸುತ್ತಾರೆ. ವಚನಕಾರರು ಮಂಜಿನ ಶಿವಾಲಯಕ್ಕೆ ಬೆಳಕಿನ ಕಲಶ ಎನ್ನುತ್ತಾರೆ. ಹುಲಿ-ಹುಲ್ಲೆಗಳು ಏಕತ್ರಗೊಳ್ಳುವ ಚೋದ್ಯವನ್ನು ಅಲ್ಲಮ ವಿವರಿಸುತ್ತಾನೆ. ವಿರುದ್ಧ ಶಕ್ತಿಗಳನ್ನು ಸಾಮರಸ್ಯದ ಪೊಟ್ಟಣದೊಳಗೆ ಕಟ್ಟಿಡಲು ಭಾರತೀಯ ಪರಂಪರೆ ಯತ್ನಿಸಿದೆ. ನವಿಲು ಮತ್ತು ಹಾವು, ಹಾವು ಮತ್ತು ಇಲಿಯನ್ನು ಒಟ್ಟಿಗೆ ಇಟ್ಟುಕೊಂಡು ಬದುಕುವ ಪ್ರತಿಮೆಯನ್ನು ಸೃಷ್ಟಿಸಲಾಗಿದೆ. ತತ್ವಶಾಸ್ತ್ರದಲ್ಲೂ ಈ ವಿಧಾನ ಪದೇ ಪದೇ ಬಳಕೆಯಾಗುತ್ತದೆ. ದೊಡ್ಡ ಬೌದ್ಧಿಕರು ವಿರುದ್ಧ ಪ್ರತಿಮೆಗಳನ್ನು ತಂದು ಅವುಗಳನ್ನು ಎದುರು ಕೂರಿಸಿಕೊಂಡು ಜೋಡಿಸಿ ಆಡಿಸಲು ಸಾಧ್ಯವೇ ಎಂದು ನೋಡುತ್ತಾರೆ. ಡಿ. ಆರ್. ಈ ವಿಧಾನದ ಕುರಿತು ತನಗೆ ಸಹಮತಿ ಇಲ,್ಲ ಇದು ವಾಸ್ತವ ದೂರ ಎನ್ನುತ್ತಾರೆ. ಆದರೆ ಹೋಲಿಕೆಗಳಿಲ್ಲದೆ ತಾತ್ವಿಕ ಪ್ರಸ್ಥಾನಗಳನ್ನು ಅವರು ಮುನ್ನಡೆಸಲಾರರು. ಅವರ ತೀವ್ರ ತತ್ವಶಾಸ್ತ್ರೀಯ ಬರಹಗಳು ಹುಟ್ಟಿರುವುದೇ ಹೋಲಿಕೆಗಳಲ್ಲಿ. ಅಲ್ಲಮ- ಅಭಿನವಗುಪ್ತ, ವೈದಿಕ-ಶ್ರಮಣ, ವೈದಿಕ-ಶಿವಾದ್ವೈತ. ಅಮೃತ ಮತ್ತು ಗರುಡ, ಮಾವೋ-ಗಾಂಧಿ, ಗಾರ್ಗಿ-ಕಾತ್ಯಾಯಿನಿ, ಆಲೂರು- ಚಿಮೂ, ಕಂಕಾ-ಗಂಗಾ, ಡೆರಿಡಾ- ನಾಗಾರ್ಜುನ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ನನಗನ್ನಿಸುವ ಮಟ್ಟಿಗೆ ವಸಾಹತು ಆಡಳಿತಕ್ಕೆ ಸಿಕ್ಕಿದ ಸಂಸ್ಕೃತಿಗಳ ಗೋಳು ಇದು. ಆಳುವವರಿಗೆ ತನ್ನ ಆಳಿನೊಂದಿಗೆ ಸಮೀಕರಿಸಿಕೊಳ್ಳಲು ಆಸಕ್ತಿ ಇರುವುದಿಲ್ಲ. ಅದನ್ನು ಅವರು ಲಜ್ಜೆ, ಅವಮಾನ ಎಂದು ಭಾವಿಸುತ್ತಾರೆ. ದುರಂತವೆಂದರೆ ಆಳಿಸಿಕೊಂಡವರು ತಮ್ಮ ಕೀಳರಿಮೆ ಮೀರಿಕೊಳ್ಳಲು ಇರುವ ದಾರಿಗಳಲ್ಲಿ ಹೋಲಿಕೆಯೂ ಒಂದು ವಿಧಾನವಾಗಿರುವಂತೆ ಕಾಣುತ್ತದೆ.
ನಾನು ನಿನಗಿಂತ ಕಡಿಮೆಯಲ್ಲ ಎಂದು ನಿರಾಕರಿಸುವಾಗ, ತಾನು ಹೇಗೆ ಸಮ ಎಂದು ತೋರಿಸಬೇಕಲ್ಲ?. ಪಶ್ಚಿಮವು ಪೂರ್ವದೊಂದಿಗೆ ಹೋಲಿಸಿಕೊಳ್ಳಲಾರದು. ಪೂರ್ವಕ್ಕೆ ಪಶ್ಚಿಮದೊಂದಿಗೆ ಹೋಲಿಸಿಕೊಳ್ಳದೆ ಇರಲಾಗದು. ಭಾರತದ್ದು ಇನ್ನೂ ವಿಚಿತ್ರ. ಇಲ್ಲಿ ವಿವಿಧ ಮಜಲುಗಳಲ್ಲಿ ತುಳಿದ ನೆನಪುಗಳಿವೆ. ತುಳಿಸಿಕೊಂಡವರ ಚರ್ಮ ಸುಲಿದು ಹುಲ್ಲು ಮುಂದೆ ಹಿಡಿದರೆ ಸಾಕು, ಹಿಂಬಾಲಿಸುವ ಕುರಿಯಾಗುತ್ತಾರೆಂದು ಬಲ್ಲಾಳರು ಹೇಳುತ್ತಾರೆ. ಹಾಗಲ್ಲ ಎಂದು ತೋರಿಸಲು ಡಿ. ಆರ್. ‘ದಾರು ಪ್ರತಿಮಾನ ಪೂಜಿವೆ’ ಎಂಬ ಭೀಮಾಬೋಯಿಯ ನಿರ್ಭೇದ ಸಾಧನವನ್ನು ಮುಂದೆ ಒಡ್ಡುತ್ತಾರೆ. ಇಂಥ ಕೆಲವು ದೃಷ್ಟಾಂತಗಳು ಸಾಕಾಗುವುದಿಲ್ಲ. ನಾವು ಮಾತ್ರ ತ್ರಿಮೂರ್ತಿಗಳ ಅಂಶವೆಂದು ನಮ್ಮ ಗ್ರಾಮ ದೇವತೆಗಳನ್ನು ಹೋಲಿಸಿಕೊಂಡು ಸಂಭ್ರಮಿಸುತ್ತಿದ್ದೇವೆ. ಸಂಸ್ಕೃತಾನುಕರಣೆ ಯಾವ ಯಾವುದೋ ರೂಪಗಳಲ್ಲಿ ನುಗ್ಗಿ ಬರುತ್ತಿದೆ. ನಮ್ಮ ನಾಡೊಳಗೆ ಹೋಲಿಕೆ ಮಾಡಿಕೊಳ್ಳುವ ಹುಮ್ಮಸ್ಸು ಮೊದಲಿಗಿಂತ ಹೆಚ್ಚಾಗಿದೆ. ದಮನಿತರಲ್ಲಿ ಮಧ್ಯಮ ವರ್ಗ ಬೆಳೆದಂತೆಲ್ಲ ಅದಕ್ಕೆ ದೊಡ್ಡ ಸಾಂಸ್ಕೃತಿಕ ಪರಂಪರೆಗೆ ವಾರಸುದಾರರಾಗುವ ಹಂಬಲ ಹುಟ್ಟುತ್ತದೆ. ಇಂಥ ಸಂಕೀರ್ಣಗಳಲ್ಲೇ ನಮ್ಮ ಸಂಸ್ಕೃತಿಗಳ ಫರಕಿದೆ.
ಎರಡನೆಯದಾಗಿ, ವಸಾಹತುವಾದ ಮತ್ತು ವಿಸ್ಮತಿ ತತ್ವ ಅವರ ಪ್ರಮುಖ ಆಸಕ್ತಿಯ ಕ್ಷೇತ್ರ. ಇತಿಹಾಸದ ಮಂಜಿನಲ್ಲಿ ಮುಚ್ಚಿ ಹೋಗಿರುವ ನೆನಪು, ದಾಖಲೆಗಳನ್ನು ಹೆಕ್ಕಿ ತರಬೇಕು ಎಂಬ ಉದ್ದೇಶದಿಂದ ವಿಸ್ಮತಿ ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸುತ್ತಾರೆ. ‘‘ಈ ದೇಶದಲ್ಲಿ ವೈದಿಕ ಮತ್ತು ಅವೈದಿಕಗಳ ನಡುವಣ ವಾಗ್ವಾದಗಳಿಗೆ ಸಾವಯವ ಸಂಪರ್ಕ ಇದೆ. ಅವೈದಿಕ ದಾರ್ಶನಿಕ ಕ್ರಮಗಳಿಗೆ ಹೊಸ ಚೈತನ್ಯ ಬರೋದರೊಂದಿಗೇ ಸೊರಗಿ ಹೋಗಿರುವ ವೈದಿಕ ಲೋಕದಶರ್ನಗಳಿಗೂ ಚೈತನ್ಯ ಬಂದು ಇಡೀ ಸಂಸ್ಕೃತಿಯೇ ತನ್ನನ್ನು ಪುನರುಜ್ಜೀವನಗೊಳಿಸಿಕೊಳ್ಳುವುದೆಂಬ ನಂಬಿಕೆ ನನ್ನದು.’’ ‘‘... ವಸಾಹತು ಶಾಹಿ ತಂದ ವಿಸ್ಮತಿಯ ಸ್ವರೂಪ ಏನಂದ್ರೆ ಬ್ರಾಹ್ಮಣೇತರ ಜಾತಿಗಳಿಗೆ, ಅವೈದಿಕ ಜನಾಂಗಗಳಿಗೆ ದೀರ್ಘ ಸಾಂಸ್ಕೃತಿಕ ಸ್ಮತಿ ಇಲ್ಲ ಎಂಬ ಭಾವನೆಯನ್ನು ಪ್ರತಿಷ್ಠಾಪಿಸುವುದು. ಆದ್ದರಿಂದ ಅವೈದಿಕ ಜೀವನ ದರ್ಶನಗಳ ಸಾಂಸ್ಕೃತಿಕ ಸ್ಮತಿಯನ್ನು ಗಳಿಸಿಕೊಳ್ಳೋದು, ಆಧುನಿಕ ಮೌಲ್ಯಗಳಿಂದ ಪರಿಷ್ಕರಿಸೋದು ವಿಸ್ಮತಿ ಕಲ್ಪನೆಯ ಗುರಿ. ಆಧುನಿಕ ಪ್ರಕ್ರಿಯೆ ವೈದಿಕ ಜೀವನ ಕ್ರಮಗಳಿಗೆ ಸವಲತ್ತನ್ನು ನೀಡಿ ಬಿಟ್ಟಿದೆ... ಕೆಳ ಜಾತಿಗಳಿಗೆ ಬಿಡುಗಡೆಯ ಮಾರ್ಗದಂತೆ ಕಂಡಿದ್ದರೂ ನಿಜವಾದ ಲೌಕಿಕಾಧಿಕಾರವನ್ನು, ಪ್ರಬಲ ಶಕ್ತಿಯನ್ನು ಮೇಲು ಜಾತಿಗಳಿಗೆ, ಬ್ರಾಹ್ಮಣ ಶಕ್ತಿಗಳಿಗೆ ನೀಡಿದೆ. ಆದ್ದರಿಂದಲೇ ಅವೈದಿಕ ಜೀವನ ಕ್ರಮಗಳ ಸಾಂಸ್ಕೃತಿಕ ಶಕ್ತಿ ಮತ್ತು ಸಾಂಸ್ಕೃತಿಕ ಅಧಿಕಾರದ ಕುರಿತು ವಿಸ್ಮತಿಯ ಪರಿಕಲ್ಪನೆಯಲ್ಲಿ ಒತ್ತು ಇದೆ’’ ಎನ್ನುತ್ತಾರೆ. ಡಿ. ಆರ್.ರ ಈ ಮಾತುಗಳಲ್ಲಿ ಮಹತ್ವಾಕಾಂಕ್ಷೆಯಿತ್ತು.
ಅಕ್ಷರ ಚಿಂತನ ಮಾಲೆಯಿಂದ ಪ್ರಾರಂಭಿಸಿದ ವಿಸ್ಮತಿ ಸರಣಿ ಕನ್ನಡಕ್ಕೆ ಅಪರೂಪದ ಅನುಭವವನ್ನು ದಕ್ಕಿಸಿಕೊಟ್ಟಿತು. ಆದರೆ ವಸಾಹತು ಆಕ್ರಮಣದಕಾರಣದಿಂದಾಗಿ ಹೆಪ್ಪುಗಟ್ಟಿದ ಕನ್ನಡದ ಮಂಪರನ್ನು ತೊಡೆದು ಹಾಕುವುದು ಸುಲಭವಾಗಿರಲಿಲ್ಲ. ಅವರ ವಿಸ್ಮತಿ ಮಾಲೆಯಲ್ಲಿ ರೂಪುಗೊಂಡ ಕೃತಿಗಳು ಕನ್ನಡದವಾಗಿರಲಿಲ್ಲ. ಅಖಿಲ ಭಾರತೀಯ ನೆಲೆಗಟ್ಟುಗಳ ಮಿತಿ ಅವುಗಳಿಗಿತ್ತು. ಜೈನ ದರ್ಶನಗಳು, ಆನಂದ ಕುಮಾರ ಸ್ವಾಮಿ, ಭರ್ತೃಹರಿ, ನಾಗಾರ್ಜುನ, ಭೀಮಾಬೋಯಿ, ವಿದ್ಯಾಪತಿ, ದಾರಾಶಿಖೊ ಮುಂತಾದವರೆಲ್ಲ ಇದೇ ಮಾದರಿಯವರು. ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ದೂರವಾದೆ ಎಂದುಕೊಂಡ ಡಿ. ಆರ್. ಬೌದ್ಧ, ಜೈನ, ಶೈವ ದರ್ಶನಗಳಲ್ಲಿನ ಜನಮುಖೀ ಪ್ರವಾಹವನ್ನು ಹಿಡಿದು ಬರೆದರು. ಆತ್ಮವಾದಿ ಪರಂಪರೆಯನ್ನು ಪಕ್ಕಕ್ಕಿರಿಸಿ ಅನಾತ್ಮವಾದಿ ಅದ್ವೈತ ದರ್ಶನವನ್ನು ಈ ವಿಸ್ಮತಿ ಪ್ರಸ್ಥಾನದಲ್ಲಿ ಹುಡುಕಲಾರಂಭಿಸಿದರು. ಈ ಹೆಸರುಗಳು ಮತ್ತು ದರ್ಶನಗಳೇನೂ ಕನ್ನಡಕ್ಕೆ ಹೊಸದಾಗಿರಲಿಲ್ಲ. ಆದರೆ ಹೊಸ ದೃಷ್ಟಿಕೋನದಲ್ಲಿ ನಿರ್ವಚಿಸುವ, ಅನುಸಂಧಾನ ಮಾಡುವ ಅಗತ್ಯವನ್ನು ಒತ್ತಾಯಿಸಿದ್ದವು. ಡಿ. ಆರ್. ಈ ಒತ್ತಾಯಕ್ಕೆ ಮಣಿದು ಇವೇ ಸಬಾಲ್ಟರ್ನ್ ತತ್ವಗಳೆಂದು ವಿವರಿಸಿದರು. ಅವರ ವಸಾಹತು ಪ್ರಸ್ಥಾನಗಳು ಕೂಡ ಕನ್ನಡಕ್ಕೆ ಹೊಸ ದೃಷ್ಟಿಕೋನಗಳನ್ನು ನೀಡಿದವು.
ದ್, ಫ್ಯಾನನ್, ಆನಂದ ಕುಮಾರಸ್ವಾಮಿ, ಅಶೀಶ್ ನಂದಿ ಮುಂತಾದವರ ಮೂಲಕ ವಿವಿಧ ದೃಷ್ಟಿಕೋನಗಳನ್ನು ವಿವರಿಸಿದರು. ಆದರೆ ಅವರ ವಸಾಹತೋತ್ತರವಾದ, ಆಧುನಿಕೋತ್ತರವಾದ ಮುಂತಾದ ಪರಿಕಲ್ಪನೆಗಳಲ್ಲಿನ ಊನಗಳೇನು ಎಂಬುದು ನಿಧಾನಕ್ಕೆ ನಮಗೆ ಅರಿವಾಗ ತೊಡಗಿತು. ಫ್ಯಾನನ್ ತನ್ನ ‘ರೆಚಡ್ ಆಫ್ ದ ಅರ್ಥ್’ನಲ್ಲಿ ಲಾಚಾರ್ರಾಗಿ ಹೋದ ಮಧ್ಯಮ ವರ್ಗ ತಮ್ಮ ದೇಶಗಳನ್ನು ಹೇಗೆ ಮತ್ತೆ ವಸಾಹತುವಾದಿಗಳ ಕಾಲ ಬುಡಕ್ಕೆ ತಳ್ಳುತ್ತಿದೆ ಎಂದು 1961ರಲ್ಲಿ ಬರೆದ. ಹಬರ್ ಮಾಸ್ ತನ್ನ ‘ಮಾಡರ್ನಿಟಿ; ಯಾನ್ ಅನ್ ಫಿನಿಶ್ಡ್ ಪ್ರಾಜೆಕ್ಟ್’ ಕೃತಿಯಲ್ಲಿ ಆಧುನಿಕೋತ್ತರವೆಂಬುದು ಇರಲು ಸಾಧ್ಯವಿಲ್ಲ. ಆಧುನಿಕತೆ ಎಂಬುದು ನಿರಂತರ ಪ್ರಕ್ರಿಯೆ ಅಂದ. ಜೊತೆಗೆ ದುಡಿವ ವರ್ಗಗಳ ವಿರೋಧಿ ಶಕ್ತಿಗಳು ಹಿಮ್ಮುಖವಾಗಿ ಕಾಲವನ್ನು ಉರುಳಿಸಿ ತಮ್ಮ ವೈಭವವನ್ನು ಮರುಗಳಿಸಿಕೊಳ್ಳಲು ನೋಡುತ್ತಿದ್ದಾರೆ, ಅಂಥವರು ಆಧುನಿಕೋತ್ತರವೆಂಬ ಥಿಯರಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಬರೆದ. ಡಿ. ಆರ್. ಈ ಆಯಾಮಗಳನ್ನು ಗಮನಿಸಿದಂತಿಲ್ಲ.
ಡಿ. ಆರ್. ವಿಸ್ಮತಿ ತತ್ವವನ್ನು ಒಂದು ಪ್ರಾಜೆಕ್ಟಿನಂತೆ ಮಾಡಿ ಮುಗಿಸಿದರು. ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವ ಅನೇಕ ಬಸವಣ್ಣರು ಬೇಕಾಗಿತ್ತು. ಚಳವಳಿಗಳ ಅಗತ್ಯವಿತ್ತು. ಇಲ್ಲಿ ಅವೆರಡೂ ಇಲ್ಲದಾಗಿತ್ತು. ದುಂಬಿ ಸ್ವಭಾವದ ಡಿ. ಆರ್. ಹೂವು ಹೂವಿಗೆ ಹಾರಿ ಜೇನು ತರುತ್ತಿದ್ದರು. ಕೆಲವೊಮ್ಮೆ ರೇಷ್ಮೆ ಹುಳುವಿನಂತೆ ಗೂಡು ಕಟ್ಟುತ್ತಿದ್ದರು. ತನ್ನ ನೂಲು ತನ್ನನೇ ಸುತ್ತಿ ಉಸಿರುಗಟ್ಟಿಸುತ್ತದೆ ಎಂದಾಗ ಹುಷಾರಾಗಿ ಜಾರಿಕೊಳ್ಳುತ್ತಿದ್ದರು. ವಿದ್ವಾಂಸನಿಗೆ ಆತ್ಮ ವಿಸರ್ಜನೆಯ ಗುಣ ಇರಬೇಕು.
ಇಲ್ಲದಿದ್ದರೆ ಆತನ ವಿದ್ವತ್ತು ಅಧಿಕಾರದ ಭಾಗವಾಗಿ ಬರುವ ಶಾಪದ ಭಾರ ಹೊರಬೇಕು ಎಂದರು. ಹಾಗಾಗಿ ಒಂದು ಕಡೆ ನಿಂತು ಯಾವುದನ್ನೂ ನೆಟ್ಟಗೆ ಮುನ್ನಡೆಸಲಾಗಲಿಲ್ಲ. ಕಡೆ ಕಡೆಗೆ ತನ್ನನ್ನು ರಾಜಕೀಯ ಕಾರ್ಯಕರ್ತ ಎಂದು ನೋಡಿಕೊಳ್ಳಲು ಅಸಹ್ಯ ಪಟ್ಟುಕೊಳ್ಳುತ್ತಿದ್ದರು. ಸಿದ್ಧಾಂತಿ ಎಂದ ಕೂಡಲೇ ಗರ್ವ ಪಡುತ್ತಿದ್ದರು. ತನ್ನ ಬೌದ್ಧಿಕ ಕ್ರಿಯೆ ಕಾರ್ಯ ರೂಪಕ್ಕೆ ಇಳಿಸಲು ಬೇಕಾದ ಹೋರಾಟಗಳಿಲ್ಲದಿದ್ದರೆ ಎಲ್ಲವೂ ನಿರರ್ಥಕ ಎಂಬುದು ಯಾಕೆ ಅರ್ಥವಾಗಲಿಲ್ಲವೋ ತಿಳಿಯದು. ಡಿ. ಆರ್. ಬರೆಯುತ್ತಿರುವಾಗ ಕೆನ್ ಸರೊ ವಿವಾನನ್ನು ಗಲ್ಲಿಗೆ ಹಾಕಲಾಯಿತು. ಅದಕ್ಕೂ ಮೊದಲು ಲ್ಯಾಟಿನ್ ಅಮೆರಿಕದ ನೆರೂಡ, ಮಾರ್ಕ್ವೆಜ್ ಮುಂತಾದವರು ಜನರ ಜೊತೆ ನಿಂತಿದ್ದರು. ಸ್ವತಃ ಡಿ. ಆರ್. ಕೂಡ ತುರ್ತುಪರಿಸ್ಥಿತಿಯಲ್ಲಿ ಬೀದಿ ಚಳವಳಿ ಮಾಡಿದ್ದವರೇ. ನಿಧಾನಕ್ಕೆ ತನ್ನದು ಬೌದ್ಧಿಕ ಕೆಲಸ ಅಂದು ಕೊಂಡರು. ಕುಸಿಯುತ್ತಿರುವ ಸಮಾಜಕ್ಕೆ ಸಿದ್ಧಾಂತಗಳಷ್ಟೇ ಸಾಕಾಗುವುದಿಲ್ಲ. ಭಿಕ್ಕುಗಳೂ ಬೇಕು ಎಂದು ಡಿ. ಆರ್.ಗೆ ಅನ್ನಿಸಬೇಕಾಗಿತ್ತು.
ಮೂರನೆಯದಾಗಿ, ಅವರೊಬ್ಬ ಸಮಾಜ ವಿಜ್ಞಾನಿಯಂತೆ, ರಾಜಕೀಯ-ಆರ್ಥಿಕ ತಜ್ಞನಂತೆ ಕೆಲಸ ಮಾಡುತ್ತಿದ್ದರು. ಡಿ. ಆರ್. ಯಾವೆಲ್ಲ ತಾತ್ವಿಕ ಪ್ರಸ್ಥಾನಗಳನ್ನು ನೇವರಿಸಿಕೊಂಡು ಅವುಗಳನ್ನು ಹೆಣೆಯುತ್ತ, ಬಿಚ್ಚುತ್ತಾ ಕೂರುತ್ತಿದ್ದಾಗಲೂ ತಕ್ಷಣದ ತುರ್ತುಗಳಿಗೆ ಸ್ಪಂದಿಸುವ ಸಮಾಜ ವಿಜ್ಞಾನಿಯ, ರಾಜಕೀಯ ಚಿಂತಕನ ಗುಣವನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಮೀಸಲಾತಿ, ಜಾತಿ, ಜಾಗತೀಕರಣ, ಭಾಷೆ, ಧರ್ಮ, ರಾಷ್ಟ್ರ, ರಾಷ್ಟ್ರೀಯತೆ, ಮಧ್ಯಮ ವರ್ಗದ ಗೋಳುಗಳು, ಪ್ರಭುತ್ವದ ಅಸೂಕ್ಷ್ಮತೆ, ಬಿದಿರು ಹೂ ಬಿಟ್ಟಿದೆಯೆಂದು ಸಂಭ್ರಮಿಸುವ ಅಜ್ಞಾನ, ವಿದ್ಯಾರ್ಥಿಗಳ ಜಡತೆ, ಮೇಷ್ಟ್ರುಗಳ ದುಷ್ಟತೆ, ಶತ ಸೋಮಾರಿತನ ಮುಂತಾದ ವಿಷಯಗಳ ಬಗ್ಗೆ ಕೂಡ ತನ್ನ ಸಮಕಾಲೀನರಿಗಿಂತ ಭಿನ್ನ ರೀತಿಯಲ್ಲಿ ಯೋಚಿಸುತ್ತಿದ್ದರು. ಯಮುನೆಯಲ್ಲಿ ಪ್ರವಾಹ ಬಂದಾಗ ಅದನ್ನು ನಗರವೊಂದು ಅನುಭವಿಸುವ ಸಂಭ್ರಮ ಮತ್ತು ಸಂಕಟಗಳ ರೂಪಕದಲ್ಲಿ ಅದ್ದಿ ತೆಗೆದಿರುವ ಮಾದರಿ ವಿದ್ವತ್ತಿನ ಕೆಲಸ ಮಾಡುವವರಿಗೆ ಮಾದರಿ ಎನ್ನಿಸುತ್ತದೆ.
ನಾಲ್ಕನೆಯದಾಗಿ, ತಮ್ಮ ಕಡೆಯ ಕಾಲದಲ್ಲಿ ಭಾರತೀಯ ತತ್ವ ದರ್ಶನ ಗಳನ್ನು ಆಳವಾಗಿ ಧ್ಯಾನಿಸಲಾರಂಭಿಸಿದ್ದರು. ವಿರಾಟ್ ದರ್ಶನಗಳ ಮೂಲಕ ವೈದಿಕ- ಅವೈದಿಕ ತತ್ವಗಳನ್ನು ಎದುರುಗೊಳ್ಳಬೇಕು ಎಂಬ ಹಂಬಲವೂ ಅವರಿಗೆ ಇದ್ದ ಹಾಗೆ ಕಾಣುತ್ತದೆ. ಈ ಹಂಬಲ ಅವರ ಶಕ್ತಿ ಶಾರದೆಯ ಮೇಳ ರಚಿಸುವ ಹೊತ್ತಿಗೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಅಖಿಲ ಭಾರತೀಯ ತಾತ್ವಿಕ ಪ್ರಸ್ಥಾನಗಳನ್ನು ಕನ್ನಡದ ದೃಷ್ಟಾಂತಗಳ ಮೂಲಕ ವಿವರಿಸಲು ಪ್ರಯತ್ನಿಸುತ್ತಾರೆ. ವಿಸ್ಮತಿ ತತ್ವಗಳನ್ನು ವಿವರಿಸುವ ಸಂದರ್ಭದಲ್ಲಿ, ಪರಂಪರೆಗೆ ಮುಖಾಮುಖಿಯಾಗುವುದರಿಂದ ವೈದಿಕ ದರ್ಶನಗಳಿಗೂ ಚೈತನ್ಯ ಬರುತ್ತದೆ ಎಂದು ಷರಾ ಬರೆಯುತ್ತಾರೆ. ಈ ಸಾಮರಸ್ಯದ ಕನಸು ಹುಸಿಯಾದುದು ಎಂದು ಸ್ವತಃ ಡಿ.ಆರ್.ಗೆ 97ರ ಹೊತ್ತಿಗೆ ಬಂದಿತ್ತು. ಆ ವೇಳೆಗೆ ಅವರು ವಿಸ್ಮತಿ ತತ್ವವನ್ನು ಬಿಟ್ಟು ಭಾರತದ ತಾತ್ವಿಕ ಪ್ರಸ್ಥಾನಗಳ ಕುರಿತು ಕೆಲಸ ಮಾಡುತ್ತಿದ್ದರು. ಭಾರತೀಯ ತತ್ವಶಾಸ್ತ್ರೀಯ ಪ್ರಸ್ಥಾನಗಳಲ್ಲಿ ಪರಮ ಶತ್ರು, ಪರಮ ಸಾಮರಸ್ಯ ಮತ್ತು ಮೂಲ ಮಾತೃಕೆಗಳ ಹಂಬಲ ಎಂಬ ಈ ಮೂರೂ ಸಂಗತಿಗಳು ಅಪಾಯಕಾರಿ ಎಂಬ ನಿಲುವಿಗೆ ಕಡೆಯದಾಗಿ ತಲುಪಿದರು. ಆದರೆ ಭಾಮಹನ ಕರುಣೆಯ ರಸ ಮತ್ತು ಭವಭೂತಿಯ ಶೃಂಗಾರ ರಸ ತತ್ವಗಳ ಮೂಲದಲ್ಲಿ ಭಾರತದ ದರ್ಶನ ಅಡಗಿದೆ ಎಂಬ ಅಪೂರ್ವ ಒಳನೋಟವನ್ನು ನೀಡಿದರು. ಕ್ಷಾತ್ರ ಮುಂತಾದ ವಿಷಯಗಳಲ್ಲಿ ಜೈನನಾದ ಪಂಪನಿಗೂ ವೈದಿಕ ತತ್ವದ ಕಾಳಿದಾಸನಿಗೂ ವ್ಯತ್ಯಾಸವಿಲ್ಲ ಎಂದಾಗ ಸಾಹಿತ್ಯದ ವಿದ್ಯಾರ್ಥಿಗಳಾದ ನನ್ನಂತಹವರು ಬೆಚ್ಚಿ ಕೂತೆವು.
ವೈದಿಕ ದರ್ಶನಗಳನ್ನು ಅರ್ಥ ಮಾಡಿಕೊಳ್ಳಲು ದೃಷ್ಟಾಂತ ಮತ್ತು ಇತಿಹಾಸದ ಮಾದರಿಗಳು ಸೂಕ್ತವಲ್ಲ ಎಂದು ಮೂಲ ನಿಷ್ಠ ಪಂಡಿತರು ಛೇಡಿಸಿದಾಗ, ಹೌದು ಅದು ಸಾಹಿತ್ಯದ ವಿದ್ಯಾರ್ಥಿಯಾದ ನನ್ನ ಮಿತಿ ಎಂದು ಸೋಲು ಒಪ್ಪಿಕೊಳ್ಳುತ್ತಿದ್ದ ಡಿ. ಆರ್. ತಕ್ಷಣವೇ ದ್ವಂದ್ವಾತ್ಮಕ ಭೌತವಾದದ ಮೊರೆ ಹೋಗುತ್ತಿದ್ದರು. ಯಾವುದೇ ವೇದ, ವೇದಾಂತ ಪ್ರಸ್ಥಾನಗಳಿಗೆ ವಾಸ್ತವದ ಗಾಯಗಳಿಗೆ ಮದ್ದು ಅರೆಯುವ ಶಕ್ತಿ ಇಲ್ಲದಿದ್ದರೆ, ಅಂಥ ತಾತ್ವಿಕ ಪ್ರಸ್ಥಾನಕ್ಕೆ ಮರ್ಯಾದೆಯೇನು? ಎಂದು ಕೇಳಿ ಪಂಡಿತನನ್ನು ಇಕ್ಕಳದಲ್ಲಿ ಹಿಡಿದು ಬಿಡುವ ಚೈತನ್ಯವನ್ನು ಸದಾ ಕಾಪಾಡಿಕೊಳ್ಳುತ್ತಿದ್ದರು.
ಇವುಗಳಲ್ಲದೆ ಚಳವಳಿಗಳು, ದಲಿತ ಮೀಮಾಂಸೆಗಳು, ಅನೇಕ ಪತ್ರಿಕೆಗಳಿಗೆ ಬರೆದ ತಕ್ಷಣದ ಬರಹಗಳು ಮುಂತಾದವುಗಳೆಲ್ಲ ಅವರ ಬೌದ್ಧಿಕ ಸಾಹಸದ ಭಾಗಗಳೆಂದೇ ನೋಡಬೇಕು. ಜೊತೆಗೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ಮುಂತಾದವರ ಕುರಿತಂತೆಯೂ ಹೊಸ ದೃಷ್ಟಿಕೋನಗಳನ್ನು ಕನ್ನಡಕ್ಕೆ ದಕ್ಕಿಸಿ ಕೊಟ್ಟರು.
ಮೊನ್ನೆ ದೇವನೂರ ಮಹದೇವ ಅವರು ಮಾತನಾಡುತ್ತಾ, ‘‘ಡಿ. ಆರ್. ಮೊದಲಿಗೆ ಸಣ್ಣ ವಕೀಲನಾಗಿದ್ದರು, ನಂತರ ಹಿರಿಯ ವಕೀಲನಾದರು, ನ್ಯಾಯಾಧೀಶರೂ ಆದರು. ಕಡೆಯ ದಿನಗಳಲ್ಲಿ ಅದನ್ನು ಮೀರುತ್ತಿದ್ದರು. ಆದರೆ ಶಾಶ್ವತವಾಗಿ ಎದ್ದು ನಡೆದು ಬಿಟ್ಟರು’’ ಎಂದು ಮೌನವಾದರು. ಡಿ. ಆರ್.ರ ಸಾಹಿತ್ಯ ವಿಮರ್ಶೆ ಕುರಿತಂತೆ ಇವು ಅತ್ಯುತ್ತಮ ರೂಪಕದ ಮಾತುಗಳು. ಸಂಸ್ಕೃತಿ ವಿಮರ್ಶಕ ಡಿ. ಆರ್.ರನ್ನು ಈ ರೂಪಕದ ಆಚೆಗೆ ನೋಡಬೇಕು ಅನ್ನಿಸುತ್ತದೆ. ಅವರ ಕಡೆಯ ವರ್ಷಗಳಲ್ಲಿ ಜ್ಞಾನ, ವಿಜ್ಞಾನಗಳ ಹಂತದಾಚೆಗಿನ ಸುಜ್ಞಾನದ ಮರದ ಕೊಂಬೆಯಲ್ಲಿ ಅವರ ಕೈಯಿತ್ತು ಎನ್ನಿಸುತ್ತದೆ.
ಆಗಸ್ಟ್ 12ಕ್ಕೆ ಡಿ. ಆರ್. ಮಡಿದು 22 ತುಂಬಿ 23ನೇ ವರ್ಷಕ್ಕೆ ಹೋಗುತ್ತಿದೆ. ಕೇವಲ 44 ವರ್ಷ ಬದುಕಿ, ಬದುಕಿದ್ದಷ್ಟೂ ಕಾಲ ಬೌದ್ಧಿಕ ಹಂಬಲಗಳಲ್ಲಿ ಬದುಕಿದ ಡಿ. ಆರ್. ನಾಗರಾಜ್ ಮುಂತಾದವರನ್ನು ಮರೆತ ಕನ್ನಡ ಸಂಸ್ಕೃತಿ ಭೀಕರ ತಲ್ಲಣಗಳಲ್ಲಿ ಪತರುಗುಟ್ಟುತ್ತಿದೆ.