ಬೆನ್ನುನೋವು ಕಾಡುತ್ತಿದೆಯೇ?: ಈ ಏಳು ಮನೆಮದ್ದುಗಳನ್ನು ಪ್ರಯತ್ನಿಸಿ
ಬೆನ್ನನೋವು ಈ ದಿನಗಳಲ್ಲಿ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ನರಗಳು ಮತ್ತು ಮೂಳೆಗಳ ಕ್ಷೀಣಗೊಳ್ಳುವಿಕೆ, ಗಾಯ ಅಥವಾ ಪೆಟ್ಟು, ಊತ ಅಥವಾ ಅಪರೂಪಕ್ಕೆ ಕ್ಯಾನ್ಸರ್ ಕಾಯಿಲೆ ಬೆನ್ನುನೋವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ವ್ಯಕ್ತಿಯು ಮುಂದಕ್ಕೆ ಬಗ್ಗಿದಾಗ ನೋವು ಹೆಚ್ಚಾಗುತ್ತದೆ. ಬೆನ್ನಿನ ಸ್ನಾಯುಗಳು ದುರ್ಬಲಗೊಳ್ಳಬಹುದು ಮತ್ತು ಮೃದುವಾಗಬಹುದು. ಹಿರಿಯರಲ್ಲಿ ವಯೋಸಂಬಂಧಿತ ಬದಲಾವಣೆಗಳಿಂದ ಉಂಟಾಗುವ ಬೆನ್ನುನೋವು ಬೆನ್ನುಹುರಿಯ ಮೇಲಿನ ಒತ್ತಡದಿಂದಾಗಿ ಕಾಲುಗಳಿಗೆ ಹರಡಬಹುದು. ಬೆನ್ನುನೋವು ಸಾಮಾನ್ಯವಾಗಿ ಬೆನ್ನಿನ ಸ್ನಾಯುಗಳ ಬಿಗಿತವನ್ನು ಸೂಚಿಸುತ್ತದೆ. ನಮ್ಮ ನೇರ ನಿಲುವನ್ನು ಕಾಯ್ದುಕೊಳ್ಳುವ ಸುಮಾರು 200 ನರಗಳು ಬೆನ್ನಿನಲ್ಲಿರುತ್ತವೆ. ಭಾರವನ್ನು ಸಾಗಿಸುವುದು, ಅಸಹಜ ಭಂಗಿಯಲ್ಲಿ ಏನನ್ನಾದರೂ ಎತ್ತುವುದು ಅಥವಾ ಬೆನ್ನಿನ ಸ್ನಾಯುಗಳ ಮೇಲಿನ ಅತಿಯಾದ ಒತ್ತಡ ಇವು ಬೆನ್ನುನೋವಿಗೆ ನಾಂದಿ ಹಾಡಬಲ್ಲವು. ಬೆನ್ನುನೋವಿನಿಂದ ಪಾರಾಗಲು ಮನೆಯಲ್ಲಿಯೇ ಪ್ರಯತ್ನಿಸಬಹುದಾದ ಕೆಲವು ಸರಳ ಉಪಾಯಗಳಿಲ್ಲಿವೆ.
► ಮಂಜುಗಡ್ಡೆಯ ಪ್ಯಾಕ್
ಮಂಜುಗಡ್ಡೆಯು ಅತ್ಯುತ್ತಮ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮಂಜುಗಡ್ಡೆಯನ್ನು ಟವೆಲ್‌ನಲ್ಲಿ ಸುತ್ತಿ ದಿನಕ್ಕೆ 2-3 ಬಾರಿ ನೋವಿರುವ ಭಾಗದಲ್ಲಿ ಇಟ್ಟುಕೊಂಡರೆ ನೋವು ತಕ್ಷಣ ಕಡಿಮೆಯಾಗುತ್ತದೆ.
► ದೇಹಭಂಗಿ ಸರಿಯಾಗಿರಲಿ
ಹೆಚ್ಚಿನವರು ದಿನದ ಹೆಚ್ಚಿನ ಸಮಯ ಕುಳಿತುಕೊಂಡೇ ಕೆಲಸಮಾಡುವುದರಿಂದ ಸರಿಯಾದ ದೇಹಭಂಗಿಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸರಿಯಾಗಿ ಕುಳಿತುಕೊಳ್ಳುವುದರಿಂದ ಬೆನ್ನಿನ ಮೇಲಿನ ಬಿಗಿತದ ಪ್ರಮಾಣವನ್ನು ತಗ್ಗಿಸಬಹುದು. ಸರಿಯಾದ ಭಂಗಿಯೆಂದರೆ ಎಲ್ಲ ಮೂಳೆಗಳು ಸಹಜ ಸ್ಥಿತಿಯಲ್ಲಿರಬೇಕು ಮತ್ತು ಪಾದಗಳು ನೆಲವನ್ನು ಪೂರ್ಣವಾಗಿ ಸ್ಪರ್ಶಿಸಿರಬೇಕು. ನಿದ್ರೆ ಮಾಡುವಾಗಲೂ ದೇಹಭಂಗಿ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
► ನಿಯಮಿತ ಮಸಾಜು
ಒಳ್ಳೆಯ ಮಸಾಜ್ ಬೆನ್ನುನೋವಿನಿಂದ ಮುಕ್ತಿ ನೀಡುವುದು ಮಾತ್ರವಲ್ಲ, ಒತ್ತಡ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಆಯಿಂಟ್‌ಮೆಂಟ್‌ಗಳನ್ನೂ ಬಳಸಬಹುದು.
► ಬೆಳ್ಳುಳ್ಳಿ
ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿಯ 2-3 ಎಸಳುಗಳನ್ನು ತಿಂದರೆ ಬೆನ್ನುನೋವು ಶಮನಗೊಳ್ಳುತ್ತದೆ. ಬೆಳ್ಳುಳ್ಳಿಯ ಎಣ್ಣೆಯಿಂದ ಬೆನ್ನಿನ ಮಸಾಜ್ ಅನ್ನು ಸಹ ಮಾಡಬಹುದು. ಸ್ವಲ್ಪ ತೆಂಗಿನೆಣ್ಣೆ, ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಕಡಿಮೆ ಉರಿಯಲ್ಲಿ ಕಾಯಿಸಿ ಅದಕ್ಕೆ 8-10 ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಅವು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಎಣ್ಣೆಯನ್ನು ಸೋಸಿ ಕೋಣೆಯ ತಾಪಮಾನಕ್ಕೆ ಇಳಿಯಲು ಬಿಡಿ. ಈಗ ಬೆಳ್ಳುಳ್ಳಿ ಎಣ್ಣೆ ತಯಾರು. ಇದರಿಂದ ಬೆನ್ನಿಗೆ ಮಸಾಜ್ ಮಾಡಿ ಸ್ವಲ್ಪ ಸಮಯದ ನಂತರ ಬಿಸಿನೀರಿನ ಸ್ನಾನ ಮಾಡಿದರೆ ಬೆನ್ನುನೋವು ಕಡಿಮೆಯಾಗುತ್ತದೆ.
► ನಿಯಮಿತ ವ್ಯಾಯಾಮ
ಬೆನ್ನಿನ ಸ್ನಾಯುಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವುಗಳ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಬೆನ್ನುನೋವನ್ನು ತಡೆಯಲು ಅತ್ಯುತ್ತಮ ಮಾರ್ಗವಾಗಿದೆ. ಇದಕ್ಕಾಗಿ ಪ್ರತಿದಿನ ಬೆನ್ನು ಮತ್ತು ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಅಗತ್ಯವಾಗುತ್ತದೆ. ಸ್ಟ್ರೆಚಿಂಗ್ ವ್ಯಾಯಾಮಗಳೂ ಉತ್ತಮ ಪರಿಣಾಮವನ್ನು ನೀಡುತ್ತವೆ.
► ಎಪ್ಸಮ್ ಬಾತ್ ಸಾಲ್ಟ್
ಎಪ್ಸಮ್ ಸಾಲ್ಟ್ ಬೆರೆಸಿದ ಬಿಸಿನೀರಿನಲ್ಲಿ ಸ್ನಾನವು ಬೆನ್ನುನೋವನ್ನು ತಗ್ಗಿಸಲು ನೆರವಾಗುತ್ತದೆ. ಈ ಸಾಲ್ಟ್ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ದಿನವಿಡೀ ಕೆಲಸ ಮಾಡಿ ದಣಿದ ದೇಹಕ್ಕೆ ಎಪ್ಸಮ್ ಸಾಲ್ಟ್‌ನ ಸ್ನಾನ ಪೂರ್ಣ ಚೇತರಿಕೆಯನ್ನು ನೀಡುತ್ತದೆ.
► ಅರಿಷಿಣ ಮತ್ತು ಜೇನು
ಹಾಲಿಗೆ ಅರಿಷಿಣ ಮತ್ತು ಜೇನನ್ನು ಬೆರೆಸಿ ಸೇವಿಸುವುದು ಬೆನ್ನುನೋವನ್ನು ಗುಣಪಡಿಸಲು ಅತ್ಯಂತ ಸಾಂಪ್ರದಾಯಿಕ ವಿಧಾನವಾಗಿದೆ. ಇದು ಶರೀರದ ಇತರ ಭಾಗಗಳಲ್ಲಿಯ ಮತ್ತು ಸಂದುಗಳ ನೋವನ್ನೂ ನಿವಾರಿಸುತ್ತದೆ. ಇಷ್ಟಾಗಿಯೂ ಬೆನ್ನುನೋವು ಉಳಿದುಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.