varthabharthi


ಭಿನ್ನ ರುಚಿ

ಮಿಠಾಯಿಯ ನೆನಪು

ವಾರ್ತಾ ಭಾರತಿ : 18 Aug, 2020
ರಾಜೇಂದ್ರ ಪ್ರಸಾದ್

ಎಲ್ಲರ ಬಾಲ್ಯವು ಸಿಹಿತಿಂಡಿಗಳ ನೆನೆಪಿನ ಸವಿಯಿಂದ ತುಂಬಿ ತುಳುಕುತ್ತಿವೆ.. ಈ ಸವಿಯಲ್ಲಿ ಭಿನ್ನತೆಗಳಿವೆ ನಿಜ. ನಮ್ಮ ಆರ್ಥಿಕ ಸ್ಥಿತಿಗಳು ನಮಗೆ ಸಿಕ್ಕಿದ್ದ ಸಿಹಿಯ ಸ್ವರೂಪಗಳು ಬೇರೆ ಬೇರೆ. ಅದಾಗ್ಯೂ ನಮ್ಮ ಸಿಹಿ ತಿಂಡಿಗಳ ನೆನಪು ಮಾಸುವುದಿಲ್ಲ. ಎಳೆಯ ಮಕ್ಕಳಿಗೆ ಸಕ್ಕರೆ ಅಥವಾ ಬೆಲ್ಲದ ಸಿಹಿಯನ್ನು ಬೆರಳಿಂದ ಚೀಪಿಸುವುದರಿಂದ ಶುರುವಾಗುವ ಈ ಪ್ರಯಾಣವು ಸಕ್ಕರೆ ಕಾಯಿಲೆ ನಮ್ಮ ಆಕ್ರಮಣ ಮಾಡಿ ಅದನ್ನು ನಿಯಂತ್ರಿಸುವವರೆಗೆ ಅವಿರತವಾಗಿ ಮುಂದುವರಿಯುತ್ತದೆ. ಅದಾದ ಮೇಲೂ ಸುಮ್ಮನಿರುವ ಜನರೇನು ಅಲ್ಲ ನಾವು, ಕಡಿಮೆ ಕ್ಯಾಲೊರಿಯ ಸಿಹಿ ತಿಂಡಿಗಳನ್ನು ಗುಳುಂ ಮಾಡುವುದು ಶುರುವಾಗುತ್ತದೆ. ಬಹುಶಃ ಸಿಹಿ ಕೊಡುವ ತೃಪ್ತಿಯನ್ನು ಉಳಿದ ರುಚಿಗಳು ಕೊಡಲಾರವು! ಆದರೆ ಸಿಹಿಯನ್ನು ನಾವು ಹೊಟ್ಟೆ ಬಿರಿಯುವಷ್ಟು ತಿನ್ನಲಾರೆವು. ಒಂದಷ್ಟು ತಿಂದ ಕೂಡಲೇ ಸಿಹಿ ಸಾಕು ಎನಿಸಿಬಿಡುತ್ತದೆ. ಇವತ್ತಿಗೂ ಮಕ್ಕಳನ್ನು ವಶೀಕರಣ ಮಾಡಿಕೊಳ್ಳಲು, ಅವರ ಕೋಪ, ಅಳು ತಗ್ಗಿಸಲು ಇರುವ ಪ್ರಾಚೀನ ಕಾಲದ ಉಪಾಯ ‘ಸಿಹಿ ತಿಂಡಿ’ಯ ಆಮಿಷ ತೋರಿಸುವುದು. ಇದರಷ್ಟು ಪರಿಣಾಮಕಾರಿ ಮತ್ತೊಂದಿಲ್ಲ.

2000ನೇ ಇಸವಿಯ ಈಚೆಗಿನ ಪ್ರಪಂಚಕ್ಕೂ ಅದರ ಹಿಂದಿನ ಪ್ರಪಂಚಕ್ಕೂ ಬೇಕಾದಷ್ಟು ವ್ಯತ್ಯಾಸಗಳಿವೆ. ಮಲಯಮಾರುತದಂತೆ ಇದ್ದ ಮನುಷ್ಯನ ಬದುಕು ಸುಂಟರಗಾಳಿಯಷ್ಟು ವೇಗ ಪಡೆದುಕೊಂಡಿದೆ. ಆ ವೇಗದಲ್ಲಿ ಹಳೆಯ ರುಚಿ, ಆಕಾರ, ಲಭ್ಯತೆಗಳು ಹೋಗಿ ಹೊಸ ಹೊಸ ತಿನಿಸುಗಳು ಆಧಿಪತ್ಯ ಸಾಧಿಸಿಕೊಂಡಿವೆ. ಆದರೆ ನೆನಪುಗಳು ಅಷ್ಟು ಸುಲಭದಲ್ಲಿ ಹೋಗಲು ಸಾಧ್ಯವಿಲ್ಲ. 2000 ಇಸವಿಯ ಹಿಂದೆ ಜನಿಸಿದ ತಲೆಮಾರುಗಳೆಲ್ಲವೂ ಇಂತಹ ಸಿಹಿಯ ನೆನಪನ್ನು ಹೊತ್ತು ಮೆಲುಕು ಹಾಕುವುದು ಸಾಮಾನ್ಯ. ಅಂತಹ ಸವಿಗಳಲ್ಲಿ ಹೆಚ್ಚು ದಾಖಲಾಗುವುದು ಮಿಠಾಯಿಗಳು ಮತ್ತು ಬತ್ತಾಸುಗಳು. ಗ್ರಾಮೀಣ ಭಾಗಗಳಲ್ಲಿ ದೊರಕುತ್ತಿದ್ದ ಸಿಹಿ ತಿಂಡಿಗಳು ಇವೇ ಆಗಿದ್ದವು. ಮಿಠಾಯಿ ಅಂದರೆ ಸಿಹಿಯಾದ ಚಕ್ಕೆ ಆಕಾರದ ತಿನಿಸು. ಕಡ್ಲೆ ಮಿಠಾಯಿ, ಕೊಬ್ಬರಿ ಮಿಠಾಯಿ, ಸಕ್ಕರೆ ಮಿಠಾಯಿ, ಕಡೆಗೆ ಬೊಂಬಾಯಿ ಮಿಠಾಯಿಗಳು ಮಕ್ಕಳ ಲೋಕದ ಗಂಧರ್ವ ತಿನಿಸುಗಳು. ಅಂಗಡಿಗಳಿಗೆ ಹೋದರೆ ಸಿಗುತ್ತಿದ್ದವು. ಸಂತೆ ಅಥವಾ ಸಿಟಿಯ ಕಡೆಗೆ ಬಂದಾಗ ಮೈಸೂರು ಪಾಕು, ಜಿಲೇಬಿ, ಜಹಂಗೀರು, ಲಾಡುಗಳ ದರ್ಶನವಾಗುತ್ತಿತ್ತೇ ಹೊರತು ಸಿಗುತ್ತಿರಲಿಲ್ಲ.

ಹೆಚ್ಚು ಎಣ್ಣೆ-ತುಪ್ಪಗಳನ್ನು ಬೇಡುವ ತಿನಿಸುಗಳನ್ನು ಮನೆಗಳಲ್ಲಿ ಮಾಡುತ್ತಿದ್ದುದು ಬಹಳ ಕಡಿಮೆ. ಅದರಲ್ಲಿ ‘ಅತಿರಸ/ಕಜ್ಜಾಯ’ ಮತ್ತು ಪಾಯಸಗಳು ಮಾತ್ರವೇ ಎಲ್ಲರ ಮನೆಯ ಸಾಮಾನ್ಯ ಸಿಹಿಗಳು. ಅದರಲ್ಲೂ ಹಬ್ಬಗಳಲ್ಲಿ ಇತರ ವಿಶೇಷಗಳಲ್ಲಿ ಮಾತ್ರ ಇವು ಲಭ್ಯ. ದುರಂತವೆಂದರೆ ಕೆಳಸ್ತರದ ಜಾತಿಯ ಮನೆಗಳಲ್ಲಿ ಇಂತಹ ಅಡುಗೆಗಳು ಕಷ್ಟ ಸಾಧ್ಯವಾಗಿದ್ದವು. ಮೇಲುಜಾತಿಗರ ಮನೆಗಳು ಉದಾರವಾಗಿ ನೀಡಿದರೆ ಮಾತ್ರ ಲಭ್ಯವಾಗುತ್ತಿತ್ತು. ಜಾತಿ ಮತ್ತು ವರ್ಗಗಳ ದೆಸೆಯಿಂದ ಆಹಾರದಲ್ಲೂ ಅಸಮತೆಯನ್ನು ನಾವು ಕಂಡಿದ್ದೇವೆ. ಇವೆರಡನ್ನು ದಾಟಿದರೆ ಕೊಬ್ಬರಿ ಮತ್ತು ಸಕ್ಕರೆ ಮಿಠಾಯಿಗಳು ಆಣೆಗೋ ಪೈಸೆಗೋ ಸಿಗುತ್ತಿದ್ದವು. ಬೆಲ್ಲ ಅಥವಾ ಸಕ್ಕರೆ ಪಾಕಕ್ಕೆ ಹದವಾಗಿ ಹುರಿದ ಕೊಬ್ಬರಿ/ತೆಂಗಿನ ತುರಿ ಯಾಲಕ್ಕಿ ಸೇರಿಸಿ ಕಲಸಿ ತಟ್ಟೆಗಳಲ್ಲಿ ಹರಡಿ ಸಮನಾದ ಚಕ್ಕೆಗಳಾಗಿ ಕುಯ್ದು ಇಡಲಾಗುತ್ತಿತ್ತು. ಕಡ್ಲೆ ಮಿಠಾಯಿಗೂ ಇದೇ ಪದ್ಧತಿ ಅನುಸರಿಸಿ ಬೆಲ್ಲದ ಪಾಕಕ್ಕೆ ಹುರಿದ ಒಡೆದ ಕಡಲೆ ಬೀಜಗಳ ಸೇರಿಸಿ ಪಾಕ ಕಲಸಿ ತಟ್ಟೆಗೆ ಹೊಯ್ದು ಪಾಲು ಮಾಡುವುದು. ಇವುಗಳನ್ನು ತಿನ್ನದಿರುವ ಜನರೇ ಇಲ್ಲ.

ಸಂತೆಗಳಲ್ಲಿ, ಅಂಗಡಿಗಳಲ್ಲಿ ಎಂಟಾಣೆ, ರೂಪಾಯಿಗೆ ಕೊಂಡು ಜೇಬಲ್ಲಿಟ್ಟುಕೊಂಡು ಶಾಲೆಗೆ ಹೋದವನು ಅವತ್ತಿಗೆ ರಾಜಕುಮಾರ ತರಹ. ಇವುಗಳ ಜೊತೆಗೆ ಅರಿಶಿನ, ಪಿಂಕು, ಹಸಿರು, ಬಿಳಿ ಬಣ್ಣದ ಬತ್ತಾಸುಗಳು ಬಹಳ ಆಕರ್ಷಕ. ಸಕ್ಕರೆಯ ಒಣಪಾಕದಂತೆ ಕಾಣುತ್ತಿದ್ದ ಇವೇ ನಮ್ಮ ಪಾಲಿನ ಚಾಕೊಲೆಟ್ ಆಗಿದ್ದುವು. ‘ಕಲ್ಯಾಣ ಸೇವೆ’ ಅಂತೂ ನಮ್ಮ ಪೀಳಿಗೆಗೆ ಕೊನೆ ಅನಿಸತ್ತೆ. ಉಳಿದಂತೆ ಪೆಪ್ಪರ್ ಮೆಂಟುಗಳ ಹುಳಿ ಮತ್ತು ಸಿಹಿ ರುಚಿ ಮರೆಯಲಾಗದ್ದು. ಮನೆಗಳಲ್ಲಿ ಮಿಠಾಯಿ ಮಾಡಿದರೆ ಮುಗಿಯಿತು ಅದು ದಾಯಾದಿಗಳಿಗೆಲ್ಲಾ ಹಂಚಿ ಕಡೆಗೆ ಹಿಂಡಾಲಿಯಂ ಬಾಕ್ಸ್‌ನಲ್ಲಿ ಸಂಗ್ರಹವಾಗುತ್ತಿದ್ದವು. ಶಾಲೆಯಿಂದ ಬಂದಾಗಲೋ ಯಾವಾಗಲೋ ಒಂದೊಂದು ತುಂಡು ಸಿಕ್ಕರೆ ಹೆಚ್ಚಾಗಿತ್ತು. ಒಂದಷ್ಟು ದಿನ ಇಟ್ಟ ಬಳಿಕ ಸಕ್ಕರೆ ಮಿಠಾಯಿ ಒಣಗಿ ಉದುರುದುರಾಗಿ ಕಂಡರೆ, ಬೆಲ್ಲದ ಕೊಬ್ಬರಿ ಮಿಠಾಯಿ ಅಂಟಂಟಾಗಿ ಮೆದುವಾಗೋದು. ಮರೆತು ಹೆಚ್ಚು ದಿನ ಇಟ್ಟರೆ ಹುಳಿ ಬಂದು ಹಾಳಾಗುತ್ತಿತ್ತು. ದಿನಕಳೆದಂತೆ ಉತ್ತರ ಭಾರತದ ಕಡೆಯ ಹಲವು ಮಿಠಾಯಿಗಳು ಪರಿಚಿತವಾಗುತ್ತ ಹಾಲು ಖೋವಾ, ಬರ್ಫಿಗಳು, ಬಂಗಾಳಿ ಸ್ವೀಟ್‌ಗಳು, ನಾನಾ ತರಹದ ಪಾಕಗಳು ಬಾಯಲ್ಲಿ ನೀರೂರಿಸುವ ಹಾಗೆ ಮಾರುಕಟ್ಟೆಗೆ ಬಂದು ಜನಪ್ರಿಯವಾದವು.

ಹಾಲುಬಾಯಿ ಮಿಠಾಯಿ ಅಥವಾ ಬರ್ಫಿ ತರಹದ್ದೇ ಸ್ವರೂಪದ ಒಂದು ಮನೆ ತಿನಿಸು. ಕರಾವಳಿ ಭಾಗದಲ್ಲಿ ಇದನ್ನು ‘ಮಣ್ಣಿ’ ಎನ್ನುತ್ತಾರೆ. ನೆನೆಸಿದ ಅಕ್ಕಿ, ತೆಂಗಿನ ತುರಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಬೆಲ್ಲ ಏಲಕ್ಕಿಯನ್ನು ಸೇರಿಸಿ ಮತ್ತಷ್ಟು ನುಣ್ಣಗೆ ರುಬ್ಬಿ ಬನಿಯಾಗಿ ಬರುವಂತೆ ಕಲಸಿ ನಂತರ ಪಾತ್ರೆಗೆ ಹಾಕಿ ಮಂದವಾದ ಉರಿಯಲ್ಲಿ ತಳಹಿಡಿಯದ ಹಾಗೆ ಬೇಯಿಸಬೇಕು. ಹದವಾಗಿ ಬೆಂದ ಹಿಟ್ಟನ್ನು ತೆಗೆದು ಎಣ್ಣೆ / ತುಪ್ಪ ಸವರಿದ ಅಥವಾ ಬಾಳೆಲೆ ಹರಡಿದ ತಟ್ಟೆಗೆ ಸುರಿವಿ ಮತ್ತೆ ಇಡ್ಲಿಯ ಹಾಗೆ ಹಬೆಯಲ್ಲಿ ಹಲವು ನಿಮಿಷ ಬೇಯಿಸಬೇಕು. ನಂತರ ಹೊರ ತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಬಹುದು. ಇದಂತೂ ಹಳ್ಳಿಗಳಲ್ಲಿ ಆಗಿಂದಾಗ್ಗೆ ಮಕ್ಕಳಿಗೆ ಮಾಡಿಕೊಡುವ ರುಚಿಕರ ತಿಂಡಿಯಾಗಿತ್ತು. ಇದೆಲ್ಲ ನಡುವೆ ನೆನಪಾಗುವುದು ಬೊಂಬಾಯಿ ಮಿಠಾಯಿ. 80-90ರ ದಶಕದ ಮಕ್ಕಳು ಯಾವತ್ತೂ ಇದನ್ನು ಮರೆಯಲು ಸಾಧ್ಯವಿಲ್ಲ. ಕಾಯಿ ಮಿಠಾಯಿ, ಸಕ್ಕರೆ ಮಿಠಾಯಿ, ಕಡ್ಲೆ ಮಿಠಾಯಿ ಇತ್ಯಾದಿಗಳು ನಮಗೆ ಮನೆಯಲ್ಲಿ ಅಂಗಡಿಗಳಲ್ಲಿ ದೊರಕುತ್ತಿದ್ದರೂ ಈ ಬೊಂಬಾಯಿ ಮಿಠಾಯಿ ಮಾತ್ರ ಬಹಳ ವಿಶೇಷದ ಆಕರ್ಷಣೆಯಾಗಿತ್ತು. ಇದರಲ್ಲಿ ಎರಡು ಬಗೆಗಳಿವೆ. ಒಂದು ನಾರು ನಾರಾಗಿ ಸಿಗುವ ಕ್ಯಾಂಡಿ ಮಾದರಿಯದ್ದು ಮತ್ತೊಂದು ತೆಳುವಾದ ಎಳೆಗಳನ್ನು ಮೆಷಿನ್‌ನಿಂದ ಮಾಡಿದ್ದು. ಮೊದಮೊದಲು ಚಾಲ್ತಿಗೆ ಬಂದದ್ದು ಬೊಂಬೆಯ ಕೋಲಿಗೆ ಸಿಹಿಯ ನಾರು ಕಟ್ಟಿಕೊಂಡು ಗಂಟೆ ಬಾರಿಸಿಕೊಂಡು ಬೀದಿಬೀದಿಗೆ ಬರುತ್ತಿದ್ದ ಮಿಠಾಯಿಮಾರುವವರು. ಚೆಂದದ ಒಂದು ಬೊಂಬೆಯನ್ನು ಕೋಲಿನ ಕೊನೆಗೆ ಸಿಕ್ಕಿಸಿ ಅದರಡಿಯಲ್ಲಿ ಸಕ್ಕರೆ ಬಣ್ಣದ ನಾರಿನ ಕ್ಯಾಂಡಿಯನ್ನು ಸುತ್ತಿಕೊಂಡು ಬರುತ್ತಿದ್ದ ಇವರು ಮಕ್ಕಳಿಗೆ ಆ ಕ್ಯಾಂಡಿಯಿಂದ ವಾಚು, ಉಂಗುರ, ಕೋಳಿ, ಮೀನು ಇತ್ಯಾದಿ ಮಾಡಿಕೊಟ್ಟು ರಂಜಿಸಿ, ತಾನೂ ನಕ್ಕು ಜೀವನ ಕಟ್ಟಿಕೊಂಡಿದ್ದ ಹಲವಾರು ಜನರಿದ್ದರು.

ಹಗಲಿಗೆ ಒಂದು ಬಟ್ಟೆ ಜೋಳಿಗೆ ಹಾಕಿ ಅದಕ್ಕೆ ಕೋಲು ಊರಿಕೊಂಡು ಊರುಗಳ ಮೇಲೆ ಊರು ತಿರುಗಿ ಮಾರಾಟ ಮಾಡುತ್ತಿದ್ದರು. ಇವರ ನಂತರ ಶುರುವಾಗಿದ್ದು ಸೈಕಲ್ ಅಥವಾ ತಳ್ಳಬಹುದಾದ ಸಣ್ಣ ಗಾಡಿಯಲ್ಲಿ ಮೆಷಿನ್ ಇಟ್ಟುಕೊಂಡು ಸಕ್ಕರೆಯ ಬಣ್ಣದ ನಾರನ್ನು ಪೊದರುಪೊದರಾಗಿ ತೆಗೆದು ಒಂದು ಬಿದಿರಿನ ಕಡ್ಡಿಗೆ ನುಲಿಯುತ್ತಾ ಬೊಗಸೆ ಗಾತ್ರ ಮಾಡಿ ಕೊಡುತ್ತಿದ್ದರು. ಅದನ್ನು ಬಾಯಿಗಿಟ್ಟರೆ ಸಾಕು ಕರಗಿ ಬಿಡುತ್ತಿತ್ತು. ಈಗಲೂ ಜಾತ್ರೆಗಳಲ್ಲಿ ಇಂತಹ ಬೊಂಬಾಯಿ ಮಿಠಾಯಿ ಸಿಗುತ್ತದೆ. ಅದರೆ ಎರಡು ಮೂರು ದಶಕಗಳ ಹಿಂದೆ ಇಂತಹ ರೋಚಕತೆ, ಆಸಕ್ತಿ, ರುಚಿ ನಮಗೀಗ ಸಿಕ್ಕುವುದಿಲ್ಲ. ಈ ಧಾವಂತದ ಕಾಲ ನಮಗೆ ನೆನಪುಗಳನ್ನು ಉಳಿಸಿದಷ್ಟು ಭಾವಗಳನ್ನು ಉಳಿಸಿಲ್ಲ. ಹಿಂದೂಸ್ಥಾನಿ ಭಾಷೆಯಲ್ಲಿ ಮಿಠಾಯಿ ಎಂದರೆ ‘ಸಿಹಿ’ ಎಂದು ಮಾತ್ರ. ನಮಗೆ ಹಲವರು ಸಿಹಿಪಾಕಗಳು (ಮೈಸೂರು ಪಾಕ್, ಕೇಸರಿ ಬಾತ್) ಇರುವ ಕಾರಣ ಮಿಠಾಯಿ ನಿಗದಿತವಾಗಿ ಹೆಸರಲ್ಲಿ ಮಿಠಾಯಿ ಪದ ಇರಲೇ ಬೇಕು. ಇವಾಗ ಬರ್ಫಿಯನ್ನು ನಾವು ಮಿಠಾಯಿ ಎಂದು ಕರೆಯಲು ಆಗುವುದೇ ಇಲ್ಲ. ಆದರೆ ಬರ್ಫಿಯೂ ಮಿಠಾಯಿಯೇ ಅಲ್ಲವೇ? ಆದರೆ ದೇಶಭಾಷೆಗಳ ಭಿನ್ನತೆ, ಕೊಡು ಕೊಳ್ಳುವಿಕೆಗಳು ಆಹಾರ ಸಂಸ್ಕೃತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಉಂಟು ಮಾಡುತ್ತವೆ. ‘ಮಿಠಾಯಿ’ ಪದವು ದಕ್ಷಿಣಕ್ಕೆ ಬಂದಾಗ ಅಂತಹ ಬದಲಾವಣೆಗೆ ಒಳಪಟ್ಟಿದೆ. ಮನೆಗಳಲ್ಲಿ ಮಾಡುತ್ತಿದ್ದ ಮಿಠಾಯಿಗಳು ಬೇರೆ, ಈಗ ಬೇಕರಿ ಮಿಠಾಯಿಗಳು ಬೇರೆ. ಅವುಗಳು ಪ್ರತಿನಿತ್ಯ ಬೇರೆ ಬೇರೆ ಭಾಗದ ಸಿಹಿತಿಂಡಿಗಳ ರುಚಿಯನ್ನು ಪರಿಚಯಿಸುತ್ತಾ ವ್ಯವಹಾರ ವಿಸ್ತರಿಸಿಕೊಳ್ಳುತ್ತಿವೆೆ. ಹಾಲಿನ ಉತ್ಪನ್ನಗಳಿಂದ ಮಾಡುವ ಮಿಠಾಯಿಗಳ ಬಹುದೊಡ್ಡ ಸಂಖ್ಯೆಯೇ ಇದೆ. ಸಿಹಿ ಇವತ್ತು ಸಂತೋಷವನ್ನು ಹಂಚಿಕೊಳ್ಳುವ ಸಂಗತಿಯ ವಿಚಾರಕ್ಕಿಂತಲೂ ಜಾಗತಿಕ ವ್ಯವಹಾರದ ದೊಡ್ಡ ಮಾರುಕಟ್ಟೆ ಮತ್ತು ಆರೋಗ್ಯ ಕಾಳಜಿಯಲ್ಲಿ ಮಿತಕ್ಕೆ ಒಳಪಡುವ ವಿಚಾರವಾಗಿರುವುದನ್ನು ನಾವು ಬಹುಮುಖ್ಯವಾಗಿ ಗಮನಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)