varthabharthi


ಕಾಲಂ 9

NEP- ನವ ಶಿಕ್ಷಣ ನೀತಿ-2020: ಪ್ರತಿಗಾಮಿ ಇಂಜಿನ್‌ಗೆ ಹುಸಿ ಆದರ್ಶದ ಬೋಗಿಗಳು

ವಾರ್ತಾ ಭಾರತಿ : 19 Aug, 2020
ಶಿವಸುಂದರ್

ಭಾಗ-2

ಇಂದು ಪ್ರಾಥಮಿಕ ಶಿಕ್ಷಣವೆಂಬ ಉದ್ಯಮವನ್ನು ಇಂಗ್ಲಿಷ್ ಮಾಧ್ಯಮ ಶಾಲಾ ಲಾಬಿಗಳು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದು ಎಲ್ಲಾ ಸರಕಾರಗಳ ಒಳಗೂ ಮತ್ತು ಅವುಗಳ ಮೇಲೂ ಇದೇ ಲಾಬಿಗಳು ಕೆಲಸ ಮಾಡುತ್ತವೆ. ಅಷ್ಟು ಮಾತ್ರವಲ್ಲದೆ ಸುಪ್ರೀಂಕೋರ್ಟ್ ಸಹ ಮಕ್ಕಳ ಶಿಕ್ಷಣ ಮಾಧ್ಯಮವು ಪೋಷಕರ ಆಯ್ಕೆಯೇ ವಿನಾ ಸರಕಾರವು ಪೋಷಕರ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲವೆಂದು ಆದೇಶಿಸಿದೆ. ಹೀಗಿರುವಾಗ ಈ ಆದೇಶವನ್ನು ಬದಿಗೆ ಸರಿಸುವ ಸಂವಿಧಾನ ತಿದ್ದುಪಡಿಯಾಗದೆ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ರದ್ದು ಮಾಡದೆ ‘‘ಎಲ್ಲೆಲ್ಲಿ ಸಾಧ್ಯವೋ ಅಲ್ಲಿ’’ ಮಾತೃಭಾಷಾ ಮಾಧ್ಯಮ ಶಿಕ್ಷಣವನ್ನು ಜಾರಿಗೊಳಿಸಲಾಗುವುದು ಎಂಬ ಹೊಸ ಶಿಕ್ಷಣ ನೀತಿಯು ಸಾರಾಂಶದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಈಗಾಗಲೇ ಇರುವ ಸಪ್ತ ವರ್ಣಾಶ್ರಮ ಪದ್ಧತಿಗೆ ನೀತಿಪೂರ್ವಕ ಸಮರ್ಥನೆಯನ್ನಷ್ಟೇ ಒದಗಿಸಿದೆ.


ಉನ್ನತ ಶಿಕ್ಷಣದಲ್ಲಿ ನಾಲ್ಕು ವರ್ಷದ ಕೋರ್ಸನ್ನು ದಿಲ್ಲಿ ವಿಶ್ವವಿದ್ಯಾನಿಲಯ ದಲ್ಲಿ ಯುಪಿಎ ಸರಕಾರ ಜಾರಿಗೊಳಿಸಿದ್ದಾಗ ಬಿಜೆಪಿ ಅದನ್ನು ವಿರೋಧಿಸಿತ್ತು ಮತ್ತು 2014ರಲ್ಲಿ ಅದು ಅಧಿಕಾರಕ್ಕೆ ಬಂದಾಗ ಅದನ್ನು ರದ್ದುಗೊಳಿಸಿತ್ತು. ಈಗ ಅದೇ ಸರಕಾರ ಅದನ್ನು ದೇಶಾದ್ಯಂತ ಜಾರಿ ಮಾಡುತ್ತಿದೆ.

ಹಾಗೆಯೇ ಉನ್ನತ ಶಿಕ್ಷಣವನ್ನು Multiple Exit and Multi-Disciplinary ಆಗಿ ಮಾಡುವ ಹಿಂದಿನ ಅಸಲಿ ಉದ್ದೇಶ ಹಾಗೂ ಪರಿಣಾಮಗಳು ಗಂಭೀರವಾಗಿವೆ. ಈ ವ್ಯವಸ್ಥೆಯಲ್ಲಿ ಪದವಿಯ ಮೊದಲ ವರ್ಷದ ನಂತರವೇ ಹೊರಬೀಳುವ ವಿದ್ಯಾರ್ಥಿಗೆ ಸರ್ಟಿಫಿಕೇಟ್ ಕೊಡಲಾಗುವುದು, ಎರಡನೇ ವರ್ಷದಲ್ಲಿ ಹೊರ ಬಿದ್ದರೆ ಡಿಪ್ಲೋಮಾ, ಮೂರನೇ ವರ್ಷದಲ್ಲಿ ಪದವಿ ಮುಗಿಸಿದ ಪತ್ರ ಹಾಗೂ ನಾಲ್ಕನೇ ವರ್ಷ ಮುಗಿಸಿದಲ್ಲಿ ಮಾತ್ರ ‘ಪದವೀಧರ ಪ್ರಮಾಣ ಪತ್ರ’ ಸಿಗುತ್ತದೆ. ಪದವಿ ವ್ಯವಸ್ಥೆಯಲ್ಲಿ ಪದವಿ ಮುಗಿಸಲಾಗದೆ ಹೊರಬೀಳುವವರು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರೇ ಆಗಿರುತ್ತಾರೆ. ಅವರನ್ನು ಉನ್ನತ ಶಿಕ್ಷಣದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾದ ಸರಕಾರ ಈ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಹೆಸರಲ್ಲಿ ಪದವಿ ವ್ಯವಸ್ಥೆಯಿಂದ ಹೊರಬೀಳುವುದಕ್ಕೆ ಹೊಸ ಹೆಸರೊಂದನ್ನು ನೀಡುತ್ತಿದೆ ಅಷ್ಟೆ.

ಅಲ್ಲದೆ ಈಗಾಗಲೇ ಪದವಿ ಪತ್ರಗಳೇ ಉದ್ಯೋಗ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡು, ಪ್ರತಿಯೊಂದು ಸಂಸ್ಥೆಗಳೂ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿರುವಾಗ ಪದವಿ ಮುಗಿಸಿಲ್ಲ ಎಂದು ಸಾರಿ ಹೇಳುವ ಸರ್ಟಿಫಿಕೇಟ್ ಅಥವಾ ಡಿಪ್ಲೋಮಾದಿಂದ ಏನು ಪ್ರಯೋಜನ? ಇದು ಸರಕಾರವು ಸಕಲರಿಗೂ ಉನ್ನತ ಶಿಕ್ಷಣದ ಅವಕಾಶವನ್ನು ಸಮಾನವಾಗಿ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕುತಂತ್ರವಲ್ಲದೇ ಮತ್ತೇನು?

ಅದೇ ರೀತಿ ಸಮಗ್ರ ಕಲಿಕೆಯ ಹೆಸರಿನಲ್ಲಿ ಪರಿಚಯಿಸಲಾಗುತ್ತಿರುವ Multi-Disciplinary- ಬಹುಶಿಸ್ತೀಯ ಶಿಕ್ಷಣದಿಂದ ಯಾರಿಗೆ ಪ್ರಯೋಜನ? ಮತ್ತದರ ಉದ್ದೇಶ-ಪರಿಣಾಮಗಳೂ ಕೂಡಾ ಕುತಂತ್ರದಿಂದ ಕೂಡಿವೆ. ಒಂದು ವಿಷಯವನ್ನು ಆರ್ಥಿಕ, ಸಮಾಜಶಾಸ್ತ್ರೀಯ, ಸಾಹಿತ್ಯಿಕ ಇನ್ನಿತ್ಯಾದಿ ಜ್ಞಾನ ಶಿಸ್ತುಗಳ ಕಣ್ಣೋಟಗಳ ಮೂಲಕ ಅರ್ಥಮಾಡಿಕೊಳ್ಳುವುದನ್ನು Inter-Disciplinary- ಅಂತರ್-ಶಿಸ್ತೀಯ- ಎನ್ನುತ್ತಾರೆ. ಅದು ಈ ನೀತಿಯಲ್ಲಿರುವ Multi-Disciplinary-  ಬಹುಶಿಸ್ತೀಯ ಅಲ್ಲ. ಇದು ಹೆಚ್ಚೆಂದರೆ ಪದವಿಯ ಮೊದಲ ಹಂತದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹತ್ತನೇ ತರಗತಿಯ ಇತಿಹಾಸವನ್ನು ಮತ್ತೊಮ್ಮೆ ಬಹುಶಿಸ್ತೀಯದ ಹೆಸರಿನಲ್ಲಿ ಮತ್ತೊಮ್ಮೆ ಪರಿಚಯಿಸಬಹುದಷ್ಟೆ.

ಹಾಗೆಯೇ M.Phil ಕೋರ್ಸ್ ರದ್ದತಿಯೂ ವಂಚಿತ ಸಮುದಾಯದ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ಹಾಗೂ ಸಂಶೋಧನಾ ಮತ್ತು ಡಾಕ್ಟೊರೇಟ್ ಪದವಿಗಳಿಂದ ದೂರ ಮಾಡಲಿವೆ. ಸಾಮಾನ್ಯವಾಗಿ ಪದವಿ ಶಿಕ್ಷಣದ ಹಂತದಲ್ಲಿ ಆಯಾ ವಸ್ತು-ವೃತ್ತಿಗಳ ಅಧ್ಯಯನವಿರುತ್ತದೆಯೇ ವಿನಾ ಅವೇ ವಿಷಯಗಳನ್ನು ಆಳವಾದ ಶೈಕ್ಷಣಿಕ ಹಾಗೂ ಸಂಶೋಧನಾ ದೃಷ್ಟಿಯಿಂದ ಕಲಿಸುವುದಿಲ್ಲ. ಆದರೆ M.Phil ಕೋರ್ಸ್ ಪದವಿ ಜ್ಞಾನ ಹಾಗೂ ಸಂಶೋಧನಾ ಪರಿಣತಿಯ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಿತ್ತು ಹಾಗೂ ಇತ್ತೀಚಿನವರೆಗೆ ಅದನ್ನು NETಗೆ ಸಮನಾಗಿ ಪರಿಗಣಿಸಲಾಗುತ್ತಿತ್ತು. ಹೀಗಾಗಿ ವಂಚಿತ ಸಮುದಾಯಗಳ ವಿದ್ಯಾರ್ಥಿಗಳು M.Phil ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿಕೊಂಡು ಆ ನಂತರ ಡಾಕ್ಟೊರೇಟ್ ಹಂತದ ಸಂಶೋಧನೆಯನ್ನು ಮಾಡುತ್ತಿದ್ದರು. ಈಗ ಈ ಕೋರ್ಸೇ ರದ್ದಾಗಿರುವುದರಿಂದ ಸಂಶೋಧನಾ ಕ್ಷೇತ್ರವೂ ಸಂಪೂರ್ಣವಾಗಿ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಯಾಜಮಾನ್ಯಕ್ಕೆ ಸಿಲುಕುತ್ತದೆ.

ಶಿಕ್ಷಣದ ಸಮಗ್ರ ವ್ಯಾಪಾರೀಕರಣ

ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳೆರಡರಲ್ಲೂ ವ್ಯಾಪಾರೀಕರಣವನ್ನು ಪ್ರೋತ್ಸಾಹಿಸುವುದಾಗಿ NEP2020ರಲ್ಲಿ ಯಾವುದೇ ಎಗ್ಗುಸಿಗ್ಗಿಲ್ಲದೆ ಘೋಷಿಸಲಾಗಿದೆ. ಆದರೆ ಆ ಪ್ರಸ್ತಾಪವನ್ನು ನಯವಂಚಕ ಭಾಷೆಯಲ್ಲಿ ಚೆನ್ನಾಗಿ ಪ್ಯಾಕೇಜ್ ಮಾಡಲಾಗಿದೆ. ಉದಾಹರಣೆಗೆ NEP2020 ನೀತಿಯ ಸೆಕ್ಷನ್18.14ರಲ್ಲಿ ಹೀಗೆ ಹೇಳಲಾಗಿದೆ:

‘‘18.14-ಸಾರ್ವಜನಿಕ ಹಿತಾಸಕ್ತಿಯುಳ್ಳ ಮತ್ತು ಪರೋಪಕಾರಿ ಮನೋಭಾವದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೇಲ್ಮುಖಿ ಶುಲ್ಕ ನಿಗದಿ ವ್ಯವಸ್ಥೆಯ ಮೂಲಕ ಉತ್ತೇಜಿಸಲಾಗುವುದು. ಪ್ರತಿಯೊಂದು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಾವು ಪಡೆದುಕೊಂಡಿರುವ ಶ್ರೇಯಾಂಕಗಳನ್ನು ಆಧರಿಸಿ ಮತ್ತು ಒಂದು ನಿರ್ದಿಷ್ಟ ಮೇಲ್ಮಿತಿಗೆ ಒಳಪಟ್ಟು ಬೇರೆಬೇರೆ ಪ್ರಮಾಣದ ಶುಲ್ಕಗಳನ್ನು ವಿಧಿಸುವ ಪಾರದರ್ಶಕ ವ್ಯವಸ್ಥೆಯನ್ನು ಜಾರಿಮಾಡಲಾಗುವುದು. ಆ ಮೂಲಕ ಯಾವೊಂದು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು. ಇದು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಾವು ಒದಗಿಸುವ ಶೈಕ್ಷಣಿಕ ಯೋಜನೆಗೆ ಸ್ವತಂತ್ರವಾಗಿ ತಮ್ಮದೇ ಆದ ಶುಲ್ಕವನ್ನು ವಿಧಿಸಲು ಬೇಕಾದ ಅಧಿಕಾರವನ್ನು ಒದಗಿಸುವುದು’’.
(NEP2020, ಸೆಕ್ಷನ್18.14)

ಅದೇ ರೀತಿ ಉನ್ನತ ಶಿಕ್ಷಣವನ್ನು ಇನ್ನು 15 ವರ್ಷಗಳಲ್ಲಿ ಸಂಪೂರ್ಣವಾಗಿ ವ್ಯಾಪಾರೀಕರಿಸುವ ಉದ್ದೇಶವನ್ನು ಈ ನೀತಿ ಸ್ಪಷ್ಟವಾಗಿ ಘೋಷಿಸುತ್ತದೆ. ಆದರೆ ಅದಕ್ಕೆ ‘ಸ್ವಾಯತ್ತತೆ’ ಎಂಬ ಚಂದದ ಹೆಸರನ್ನು ಇಟ್ಟಿರುವುದಷ್ಟೇ ಮೋದಿ ಮ್ಯಾಜಿಕ್ (ಸೆಕ್ಷನ್19.2). ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಂಶೋಧನಾ ವಿಶ್ವವಿದ್ಯಾಲಯಗಳು ‘ಶ್ರೇಷ್ಠ’ ಸ್ಥಾನದಲ್ಲಿದ್ದು ಅಲ್ಲಿ ವಿದೇಶೀ ವಿಶ್ವವಿದ್ಯಾನಿಲಯಗಳಿಗೂ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಹಾಗೂ WTO ಮತ್ತು GATS ಒಪ್ಪಂದವನ್ನು ಶಿರಸಾವಹಿಸಿ ಪಾಲಿಸುತ್ತಾ ಆ ವಿದೇಶಿ ವಿದ್ಯಾಲಯಗಳಿಗೆ ತಮ್ಮ ದೇಶದಲ್ಲಿ ವಿಧಿಸುತ್ತಿದ್ದ ಶುಲ್ಕವನ್ನೇ ಇಲ್ಲೂ ಮುಂದುವರಿಸಲು ಅವಕಾಶ ಕೊಡಲಾಗಿದೆ. ‘ಮಧ್ಯಮ’ ಶ್ರೇಣಿಯಲ್ಲಿ ‘ಬೋಧನಾ’ ವಿಶ್ವವಿದ್ಯಾನಿಲಯಗಳಿವೆ. ಇವೆರಡಕ್ಕೂ ಅಲ್ಪಸ್ವಲ್ಪಸರಕಾರಿ ಗ್ರಾಂಟುಗಳೂ ಸಿಗಲಿವೆ. ಆದರೆ ‘ಮೂರನೇ ದರ್ಜೆ’ಯಲ್ಲಿ ಪದವಿ ಬೋಧಿಸುವ ಸಹಸ್ರಾರು ಉನ್ನತ ಶಿಕ್ಷಣ ಸಂಸ್ಥೆಗಳಿದ್ದು ಅವೆಲ್ಲಕ್ಕೂ ಕ್ರಮೇಣವಾಗಿ ಸ್ವಾಯತ್ತಗೊಳಿಸುವ ಪ್ರಸ್ತಾಪವಿದೆ. ಅರ್ಥಾತ್ ಸರಕಾರ ಅವುಗಳ ನಿರ್ವಹಣೆಯಿಂದ, ಹಣಕಾಸು ಜವಾಬ್ದಾರಿಯಿಂದ ಹಿಂದೆಗೆಯುವ ಪ್ರಸ್ತಾಪವಿದೆ. ಅಂದರೆ ಈ ಸ್ವಾಯತ್ತ ಕಾಲೇಜುಗಳು ಇನ್ನು ಮುಂದೆ ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸುವ ಮೂಲಕ ಮಾತ್ರ ತಮ್ಮ ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ!

ಇದರ ಜೊತೆಗೆ ಸರಕಾರವು ಎಲ್ಲೂ ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಇತರ ಬೆಂಬಲಗಳನ್ನು ಮುಂದುವರಿಸುವ ಮಾತನಾಡಿಲ್ಲ. ಬದಲಿಗೆ ಈ ಖಾಸಗಿ ಸಂಸ್ಥೆಗಳು ವಂಚಿತ ಸಮುದಾಯದ ಮಕ್ಕಳಿಗೆ ‘ಫ್ರೀ ಶಿಪ್’ ಮತ್ತು ‘ಸ್ಕಾಲರ್‌ಶಿಪ್’ಗಳನ್ನು ಒದಗಿಸಲು ‘ಉತ್ತೇಜಿಸಲಾಗುವುದು’ ಎಂಬ ಮಾತಷ್ಟೇ ಇದೆ. ಆದರೆ ವಿಷಯ ಸ್ಪಷ್ಟ. ಈ ಹೊಸ ಶೈಕ್ಷಣಿಕ ವರ್ಣಾಶ್ರಮ ಪದ್ಧತಿಯಲ್ಲಿ ಬಡ ಹಾಗೂ ದಮನಿತ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ಮೊದಲಿಗಿಂತಲೂ ತೀವ್ರವಾಗಿ ಹೊರದಬ್ಬಲ್ಪಡುತ್ತಾರೆ.

ವೃತ್ತಿ ಶಿಕ್ಷಣೀಕರಣ(vocatinoalisation):ಅಕ್ಷರಸ್ಥ ಅಗ್ಗದ ಕೂಲಿಗಳಿಗಾಗಿ

ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವುದು ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಸಜ್ಜುಗೊಳಿಸುವುದು ‘‘ಈ ಹೊಸ ಶಿಕ್ಷಣ ನೀತಿಯ ಉದ್ದೇಶ’’ವೆಂದು NEP-2020ಯು ಘೋಷಿಸುತ್ತದೆ (ಸೆಕ್ಷನ್11.4). ಈ ನಾಲ್ಕನೇ ಕೈಗಾರಿಕಾ ಕ್ರಾಂತಿಯೆಂಬುದು ವಿಶ್ವದ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟವಾದ World Economic Forum- WEFನ ಪರಿಕಲ್ಪನೆ. ಹಾಗಿದ್ದಲ್ಲಿ ಜಗತ್ತಿನ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ ಸ್ಥಾನವೇನು? ಮೋದಿ ಸರಕಾರ ಎಷ್ಟೇ ‘ನಾಲೆಡ್ಜ್ ಸೂಪರ್ ಪವರ್’, ‘ವಿಶ್ವಗುರು’ ಎಂದು ಮಾತಾಡಿದರೂ ಅಸಲಿ ವಿಷಯವನ್ನು ಸರಕಾರ ಕೋವಿಡ್ ಸಂದರ್ಭದಲ್ಲೂ ಉದ್ಯಮಿಗಳ ಹಿತಾಸಕ್ತಿಗೆ ತಕ್ಕಂತೆ ಬದಲು ಮಾಡಿರುವ ಕಾರ್ಮಿಕ ಕಾನೂನುಗಳು ಹಾಗೂ ‘ಸ್ಕಿಲ್ ಇಂಡಿಯಾ’ ಮತ್ತು ‘ಮೇಕ್ ಇನ್ ಇಂಡಿಯಾ’ ನೀತಿಗಳು ಸ್ಪಷ್ಟಪಡಿಸುತ್ತವೆ. ಮೋದಿ ಸರಕಾರ ಜಗತ್ತಿನ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವನ್ನು ಅಗ್ಗದ ಆದರೆ ಅಕ್ಷರಸ್ಥ ಕಾರ್ಮಿಕರನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಅದರ ಭಾಗವಾಗಿಯೇ ಈ ಹೊಸ ಶಿಕ್ಷಣ ನೀತಿಯಲ್ಲಿ ‘ವೃತ್ತಿಶಿಕ್ಷಣೀಕರಣ’ (vocatinoalisation) ಕಾರ್ಯಕ್ರಮಗಳು ಉದ್ದಕ್ಕೂ ಬೆಸೆದುಕೊಂಡಿವೆ.

ಸಮಗ್ರ ಹಾಗೂ ಸರ್ವರಿಗೂ ಶಿಕ್ಷಣವೆಂಬ ಆದರ್ಶದ ಹೇಳಿಕೆಗಳನ್ನು ಮಾಡುವ ಈ ‘ಹೊಸ ನೀತಿ’ ಅದರ ಜೊತೆಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಾರ್ಪೆಂಟರಿಂಗ್, ವೃತ್ತಿಕೌಶಲ್ಯವನ್ನು ಕಲಿಸಿಕೊಡುವ ಯೋಜನೆಯನ್ನು ರೂಪಿಸಿದೆ. ಅದರ ಮೂಲಕ ಮಾಧ್ಯಮಿಕ ಹಾಗೂ ಉನ್ನತ ಪ್ರಾಥಮಿಕ ಹಂತದಿಂದಲೇ ಹೊರಬೀಳಬಯಸುವ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ ಎಂಬ ತೇಪೆಯನ್ನು ಹಚ್ಚಲಾಗಿದೆ. ಅಂದರೆ 12ನೇ ತರಗತಿಯ ತನಕ ಕಡ್ಡಾಯ ಕಲಿಕೆಯ ಬಗ್ಗೆ ಸರಕಾರಕ್ಕಿರುವ ಬದ್ಧತೆ ಇದರಲ್ಲೇ ಅರ್ಥವಾಗುತ್ತದೆ ಹಾಗೂ ಬದುಕು ಕೌಶಲ್ಯದ ಹೆಸರಲ್ಲಿ ಉದ್ಯಮಗಳಿಗೆ ಅಗ್ಗದ ಆದರೆ ಕುಶಲಿ ಕಾರ್ಮಿಕರನ್ನು ಒದಗಿಸುವ ಹುನ್ನಾರ ಈ ಶಿಕ್ಷಣ ನೀತಿಯಲ್ಲಿ ಉದ್ದಕ್ಕೂ ವ್ಯಕ್ತವಾಗಿದೆ.

ಆನ್‌ಲೈನ್ ಶಿಕ್ಷಣ: ನವಉದಾರವಾದಿ ಶೋಷಣೆಯ ಹೊಸ ಸಾಧನ

ಬೋಧನೆ ಹಾಗೂ ಪರೀಕ್ಷೆಗಳನ್ನೂ ಒಳಗೊಂಡಂತೆ ಶಿಕ್ಷಣದ ಎಲ್ಲ ಹಂತಗಳಲ್ಲೂ ಆನ್‌ಲೈನ್ ಶಿಕ್ಷಣವನ್ನು ಜಾರಿ ಮಾಡುವ ಆಘಾತಕಾರಿ ಯೋಜನೆಯನ್ನು ಈ NEP-2020 ಮುಂದಿಟ್ಟಿದೆ.

ಇದು ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ಔಪಚಾರಿಕ ಶಿಕ್ಷಣದ ಜವಾಬ್ದಾರಿಯಿಂದ ಮುಕ್ತವಾಗಲೂ ದಾರಿ ಅವಕಾಶ ನೀಡುವುದಲ್ಲದೆ ಅಂಬಾನಿಯ ಜಿಯೋ ಹಾಗೂ ಡಿಜಿಟಲ್ ಲೋಕದ ದೈತ್ಯ ಎಂಎನ್‌ಸಿಗಳಾದ ಗೂಗಲ್ ನಂತಹ ಉದ್ಯಮಗಳಿಗೆ ಸಾವಿರಾರು ಕೋಟಿ ಲಾಭಗಳಿಸಿಕೊಡಲಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಬರಲಿರುವ ವರ್ಷಗಳಲ್ಲಿ ಆನ್‌ಲೈನ್ ಶಿಕ್ಷಣದ ದಂಧೆಯು 75,000 ಕೋಟಿ ರೂಪಾಯಿಗಳ ವ್ಯವಹಾರವಾಗಲಿದೆ. ಆದರೆ ಈಗಾಗಲೇ ಇರುವ ಅಗಾಧ ಭೌತಿಕ ಅಸಮಾನತೆಯನ್ನು ಈ ಆನ್‌ಲೈನ್ ಶಿಕ್ಷಣ ಮತ್ತಷ್ಟು ತೀವ್ರಗೊಳಿಸಲಿದೆ. ದೇಶದ ಶೇ. 8ರಷ್ಟು ವಿದ್ಯಾರ್ಥಿಗಳ ಬಳಿಯೂ ಕಂಪ್ಯೂಟರ್, ಇಂಟರ್‌ನೆಟ್‌ಗಳೆರಡೂ ಇಲ್ಲದಿರುವುದರಿಂದ ಡಿಜಿಟಲ್ ಶಿಕ್ಷಣ ಸಾರಾಂಶದಲ್ಲಿ ಉಚ್ಚವರ್ಗೀಯ ಶಿಕ್ಷಣವೇ ಆಗಿರುತ್ತದೆ. ಆನ್‌ಲೈನಿನ ಹೆಸರಿನಲ್ಲಿ ಔಪಚಾರಿಕ ಶಿಕ್ಷಣದಿಂದ ಸರಕಾರಗಳು ಹಿಂದೆಗೆಯುವುದರಿಂದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಹಿನ್ನೆಲೆಯ ಕೋಟ್ಯಂತರ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ.

‘‘ಸಾಧ್ಯವಿದ್ದೆಡೆ ಮಾತೃಭಾಷಾ ಶಿಕ್ಷಣ’’: ಅರ್ಥಾತ್ ಸಾಧ್ಯಗೊಳಿಸುವ ಉದ್ದೇಶವಿಲ್ಲ!

ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಅಥವಾ ಪರಿಸರದ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವುದು ಅತ್ಯಗತ್ಯ ಎಂದು ಈ ನೀತಿಯೂ ಘೋಷಿಸುತ್ತದೆ. ಆದರೆ ಅದೇ ಸಮಯದಲ್ಲಿ ‘ಸಾಧ್ಯವಿದ್ದೆಡೆಗಳಲ್ಲಿ’ ಮಾತ್ರ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಲಾಗುವುದೆಂದು ಪೂರ್ತಿಯಾಗಿ ಉಲ್ಟಾ ಹೊಡೆಯುತ್ತದೆ(ಸೆಕ್ಷನ್4.11).

ಇಂದು ಪ್ರಾಥಮಿಕ ಶಿಕ್ಷಣವೆಂಬ ಉದ್ಯಮವನ್ನು ಇಂಗ್ಲಿಷ್ ಮಾಧ್ಯಮ ಶಾಲಾ ಲಾಬಿಗಳು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದು ಎಲ್ಲಾ ಸರಕಾರಗಳ ಒಳಗೂ ಮತ್ತು ಅವುಗಳ ಮೇಲೂ ಇದೇ ಲಾಬಿಗಳು ಕೆಲಸ ಮಾಡುತ್ತವೆ. ಅಷ್ಟು ಮಾತ್ರವಲ್ಲದೆ ಸುಪ್ರೀಂಕೋರ್ಟ್ ಸಹ ಮಕ್ಕಳ ಶಿಕ್ಷಣ ಮಾಧ್ಯಮವು ಪೋಷಕರ ಆಯ್ಕೆಯೇ ವಿನಾ ಸರಕಾರವು ಪೋಷಕರ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲವೆಂದು ಆದೇಶಿಸಿದೆ. ಹೀಗಿರುವಾಗ ಈ ಆದೇಶವನ್ನು ಬದಿಗೆ ಸರಿಸುವ ಸಂವಿಧಾನ ತಿದ್ದುಪಡಿಯಾಗದೆ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ರದ್ದು ಮಾಡದೆ ‘‘ಎಲ್ಲೆಲ್ಲಿ ಸಾಧ್ಯವೋ ಅಲ್ಲಿ’’ ಮಾತೃಭಾಷಾ ಮಾಧ್ಯಮ ಶಿಕ್ಷಣವನ್ನು ಜಾರಿಗೊಳಿಸಲಾಗುವುದು ಎಂಬ ಹೊಸ ಶಿಕ್ಷಣ ನೀತಿಯು ಸಾರಾಂಶದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಈಗಾಗಲೇ ಇರುವ ಸಪ್ತ ವರ್ಣಾಶ್ರಮ ಪದ್ಧತಿಗೆ ನೀತಿಪೂರ್ವಕ ಸಮರ್ಥನೆಯನ್ನಷ್ಟೇ ಒದಗಿಸಿದೆ.

ತ್ರಿಶೂಲ ಮತ್ತು ತ್ರಿಭಾಷಾ ಸೂತ್ರ:

ತ್ರಿಭಾಷಾ ಸೂತ್ರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ತ್ರಿಭಾಷಾ ಸೂತ್ರ ನೀತಿಯನ್ನು ಈ ದೇಶದಲ್ಲಿ ಜಾರಿ ಮಾಡುತ್ತಿರುವುದು ಮಕ್ಕಳ ಶೈಕ್ಷಣಿಕ ಅಗತ್ಯಕ್ಕಿಂತಲೂ ಹೆಚ್ಚಾಗಿ ರಾಜಕೀಯಕಾರಣಕ್ಕಾಗಿಯೇ ಆಗಿದೆ. ಒಂದು ದೇಶ- ಒಂದು ಭಾಷೆ ಇದ್ದರೆ ಮಾತ್ರ ಈ ದೇಶದ ಐಕ್ಯತೆ ಸಾಧ್ಯ ಎಂಬ ದುರಭಿಮಾನಿ ರಾಜಕೀಯದಿಂದಲೇ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಪ್ರಾಥಮಿಕ ಹಂತದಿಂದಲೇ ಮಕ್ಕಳ ಮೇಲೆ ಹೇರಲಾಯಿತು. ಈಗ ಮತ್ತೊಮ್ಮೆ ಅಧಿಕಾರದಲ್ಲಿರುವ ಹಿಂದೂ ದುರಭಿಮಾನಿ ಧೋರಣೆಯ ಭಾಗವಾದ ಹಿಂದಿ-ಹಿಂದೂ-ಹಿಂದೂಸ್ಥಾನ ಧೋರಣೆಯ ಭಾಗವಾಗಿ NEP-2020ಯಲ್ಲಿ ಕೂಡಾ ‘ರಾಷ್ಟ್ರೀಯ ಐಕ್ಯತೆ’ಯ ಹೆಸರಿನಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿ ಮಾಡಲಾಗುತ್ತಿದೆ. ಅದರ ಜೊತೆಗೆ ಹಾಲಿ ಸರಕಾರದಲ್ಲಿರುವವರ ಬ್ರಾಹ್ಮಣೀಯ ಮೇಲರಿಮೆಯ ಭಾಗವಾಗಿ ಸಂಸ್ಕೃತವನ್ನು ಪೂರ್ವಪ್ರಾಥಮಿಕ ಹಂತದಿಂದಲೂ ಪರಿಚಯಿಸುವ ಹುನ್ನಾರವನ್ನು ಮಾಡಲಾಗಿದೆ (ಸೆಕ್ಷನ್4.13).

ಭಾರತೀಯ ಪರಂಪರೆಯ ಹೆಸರಿನಲ್ಲಿ ಹಿಂದುತ್ವ ರಾಜಕಾರಣ
ಇದರ ಜೊತೆಗೆ ಭಾರತೀಯ ಜ್ಞಾನ ಪರಂಪರೆಯನ್ನು ಪರಿಚಯಿಸುವ ಹೆಸರಿನಲ್ಲಿ ಪ್ರಧಾನವಾಗಿ ವೈದಿಕ ಜ್ಞಾನವನ್ನು ಪ್ರಾಥಮಿಕ ಹಂತದಲ್ಲೂ ಹಾಗೂ ಒಂದು ಜ್ಞಾನ ಶಿಸ್ತಾಗಿ ಮುಂದಿನ ಹಂತದಲ್ಲೂ ಕಡ್ಡಾಯಗೊಳಿಸುವ ಹುನ್ನಾರವು ಹೊಸ ಶಿಕ್ಷಣ ನೀತಿಯಲ್ಲಿದೆ. ಭಾರತೀಯ ಸಾಂಪ್ರದಾಯಿಕ ಜ್ಞಾನವೆಂಬ ಮುಸುಕಿನಲ್ಲಿ ಈ ನೀತಿಯು ಆರೆಸ್ಸೆಸ್‌ನ ಅಜೆಂಡಾಗಳನ್ನು ಯಥಾವತ್ ಜಾರಿ ಮಾಡಲಿದೆ. NEP-2020ರಲ್ಲಿ ಪ್ರಸ್ತಾಪವಾಗಿರುವ ಭಾರತೀಯ ಸಂಪ್ರದಾಯದಲ್ಲಿ ಬೌದ್ಧ ಇಲ್ಲ. ಜೈನ ಇಲ್ಲ, ಚಾರ್ವಾಕವಿಲ್ಲ, ಲೋಕಾಯತವಿಲ್ಲ. 1,300 ವರ್ಷಗಳಿಂದ ಭಾರತೀಯ ಜ್ಞಾನ ಪರಂಪರೆಯ ಭಾಗವೇ ಆಗಿರುವ ಭಾರತೀಯ ಇಸ್ಲಾಮಿಲ್ಲ. ಬದಲಿಗೆ ವೈದಿಕ ಬ್ರಾಹ್ಮಣ್ಯವನ್ನು ಭಾರತೀಯ ಪರಂಪರೆಯ ಹೆಸರಿನಲ್ಲಿ ಬಿತ್ತುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಹುಸಿ ಹಿರಿಮೆ, ಮೌಢ್ಯ ಹಾಗೂ ಅನ್ಯದ್ವೇಷವನ್ನು ಬಿತ್ತುತ್ತದೆ. (ಸೆಕ್ಷನ್11.1)

ಹೀಗೆ ಶಿಕ್ಷಣದ ಬಗ್ಗೆ ಉದ್ದುದ್ದನೆಯ ಆದರ್ಶದ ಮಾತುಗಳನ್ನು ಮಾತ್ರ ಆಡುವ NEP-2020, ಶಿಕ್ಷಣದ ಕಾರ್ಪೊರೇಟೀಕರಣ, ವ್ಯಾಪಾರೀಕರಣ, ಅನೌಪಚಾರೀಕರಣ, ಬ್ರಾಹ್ಮಣೀಕರಣ ಹಾಗೂ ಕೋಮುವಾದೀಕರಣಗೊಳಿಸುವ ಉದ್ದೇಶ ಮತ್ತು ಯೋಜನೆಗಳನ್ನು ಹೊಂದಿದೆ. ವಂಚಿತ ಸಮುದಾಯದ ವಿದ್ಯಾರ್ಥಿಗಳನ್ನು ಕನಿಷ್ಠ ಅಕ್ಷರಜ್ಞಾನದಿಂದಲೂ ವಂಚಿತಗೊಳಿಸಿ ಅಗ್ಗದ ಹಾಗೂ ಅತಂತ್ರದ ಕೂಲಿಗಳನ್ನಾಗಿಸಲಾಗಿದೆ ಹಾಗೂ ಜ್ಞಾನದ ಬ್ರಾಹ್ಮಣೀಕರಣ ಹಾಗೂ ವಸಾಹತೀಕರಣಕ್ಕೂ ಏಕಕಾಲದಲ್ಲಿ ಅವಕಾಶ ಮಾಡಿಕೊಡಲಿದೆ. ಹೀಗಾಗಿ ಇದು ಅಮೃತದ ಹೊಸ ಲೇಬಲ್ಲನ್ನು ಹಚ್ಚಿಕೊಂಡಿರುವ ಹಳೆಯ ವಿಷ. ಪ್ರತಿಗಾಮಿ ಇಂಜಿನ್‌ಗೆ ಹುಸಿ ಆದರ್ಶದ ಬೋಗಿಯನ್ನು ಕೂಡಿಸಿಕೊಂಡಿರುವ ಸನಾತನ್ ‌ಎಕ್ಸ್‌ಪ್ರೆಸ್. ಆದ್ದರಿಂದ ಇಂದು ದೊಡ್ಡ ಚಳವಳಿಯನ್ನು ಕಟ್ಟುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)