ಅರ್ಹರಿಗೆ ಅವಕಾಶ ಕೊಟ್ಟ ಅರಸು -ಡಾ.ಡಿ.ತಿಮ್ಮಯ್ಯ
ಇಂದು ದೇವರಾಜ ಅರಸು ಜನ್ಮದಿನ
ಭಾಗ-1
ನಾನು ನಮ್ಮ ತಂದೆಯನ್ನು ಕಳೆದುಕೊಂಡು ದಿಕ್ಕು ತೋಚದೆ ಒಬ್ಬನೇ ಅನಾಥನಂತೆ ಅಳುತ್ತಾ ನಿಂತಿದ್ದೆ. ನನ್ನಲ್ಲಿಗೆ ಬಂದ ಅರಸರು, ತಲೆ ಮುಟ್ಟಿ, ಬೆನ್ನು ಸವರಿ, ‘‘ಚೆನ್ನಾಗಿ ಓದು, ನಾನಿದ್ದೇನೆ’’ ಎಂದು ಸಮಾಧಾನ ಮಾಡಿ, ಧೈರ್ಯ ತುಂಬಿದರು. ಅಪಘಾತ ನಡೆದ ಸ್ಥಳಕ್ಕೆ ಮಂತ್ರಿಗಳು ಭೇಟಿ ನೀಡುವುದು ಬಹಳ ಕಡಿಮೆ. ಆದರೆ ಅರಸರು ಆ ತಕ್ಷಣವೇ ಸ್ಥಳಕ್ಕೆ ಬಂದಿದ್ದರು. ನನಗೆ ಧೈರ್ಯ ತುಂಬಿದ್ದರು.
ಹುಣಸೂರು ತಾಲೂಕಿನ ಸದಾಶಿವನ ಕೊಪ್ಪಲಿನ ಪರಿಶಿಷ್ಟ ಜಾತಿಗೆ ಸೇರಿದ ದಾಸಪ್ಪನವರು ಆ ಕಾಲಕ್ಕೇ ಎಲ್ಲೆಸ್ ಪಾಸ್ ಮಾಡಿ, ಹುಣಸೂರು ಕಾಫಿ ವರ್ಕ್ಸ್ನಲ್ಲಿ ಮೇಸ್ತ್ರಿಯಾಗಿದ್ದರು. ಇವರು ದೇವರಾಜ ಅರಸರ ಆತ್ಮೀಯ ಸ್ನೇಹಿತರು. ಆ ಸ್ನೇಹದ ಕುರುಹಾಗಿ ಪ್ರತಿ ಚುನಾವಣೆಯಲ್ಲೂ ಅರಸು ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗುತ್ತಿದ್ದರು. ಅವರಿಬ್ಬರ ನಡುವಿನ ಸ್ನೇಹ, ಚುನಾವಣೆಗಷ್ಟೇ ಸೀಮಿತವಾಗಿರಲಿಲ್ಲ. ಅದಕ್ಕೂ ಮೀರಿದ ಮಾನವೀಯ ಸಂಬಂಧಗಳಿಂದ ಕೂಡಿತ್ತು. ಕಷ್ಟಕಾಲದಲ್ಲಿ ಪರಸ್ಪರ ಆತುಕೊಳ್ಳುವ ಆತ್ಮೀಯ ಒಡನಾಟವಿತ್ತು. ಇಂತಹ ದಾಸಪ್ಪನವರು ರಸ್ತೆ ಅಪಘಾತದಲ್ಲಿ ಅಕಾಲಿಕ ಸಾವಿಗೀಡಾದಾಗ, ಸ್ಥಳಕ್ಕೆ ಬಂದ ಅರಸು ದಾಸಪ್ಪನವರ ಮಗ ತಿಮ್ಮಯ್ಯನವರಿಗೆ ಓದು ಮುಂದುವರಿಸುವಂತೆ ಧೈರ್ಯ ತುಂಬಿದ್ದರು. ತಿಮ್ಮಯ್ಯನವರು ಕಷ್ಟಪಟ್ಟು ಶ್ರದ್ಧೆಯಿಂದ ಓದಿ ಎಂಬಿಬಿಎಸ್ ಮುಗಿಸಿ, ಅರಸರ ಬಳಿ ಹೋದಾಗ ವಾರದೊಳಗೆ ಸರಕಾರಿ ವೈದ್ಯಾಧಿಕಾರಿಯಾಗಿ ನೇರ ನೇಮಕ ಮಾಡಿದ್ದರು. 1946ಲ್ಲಿ ಸದಾಶಿನವನ ಕೊಪ್ಪಲಿನಲ್ಲಿ ಜನಿಸಿದ ತಿಮ್ಮಯ್ಯನವರು ಬಾಲ್ಯದಲ್ಲಿಯೇ ಓದಿನಲ್ಲಿ ಮುಂದಿದ್ದರು. ಅವರ ಬುದ್ಧಿವಂತಿಕೆಗೆ ಇನ್ನಷ್ಟು ಸಾಣೆ ಹಿಡಿದವರು, ಹುಣಸೂರಿನ ಜಾತ್ಯತೀತ ಮನೋಭಾವದ ಮೇಲ್ಜಾತಿಯ ಮೇಸ್ಟ್ರುಗಳು.
ಆ ಮೇಸ್ಟ್ರುಗಳ ಪ್ರೋತ್ಸಾಹದ ಫಲವಾಗಿ 1962ರಲ್ಲಿಯೇ ಪರಿಶಿಷ್ಟ ಜಾತಿಯ ಹುಡುಗನೊಬ್ಬ ಎಸೆಸೆಲ್ಸಿಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡೆಯಾಗಿ, ಹುಣಸೂರು ತಾಲೂಕು ಇತಿಹಾಸದಲ್ಲಿ ‘ಮೊದಲ ದಲಿತ ಹುಡುಗ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಪಿಯುಸಿ ಓದಲು ಮೈಸೂರಿಗೆ ಬಂದು, 1973ರಲ್ಲಿ ಎಂಬಿಬಿಎಸ್ ಪದವಿಯನ್ನೂ ಪಡೆದರು. ಪದವಿ ಪಡೆದು ವಾರದೊಳಗೆ ಮುಖ್ಯಮಂತ್ರಿ ದೇವರಾಜ ಅರಸರನ್ನು ಕಾಣಲು ಬೆಂಗಳೂರಿಗೆ ಹೋದವರು, ಒಂದೇ ದಿನದಲ್ಲಿ ವೈದ್ಯಾಧಿಕಾರಿಯಾಗಿ ನೇರ ನೇಮಕಾತಿ ಪತ್ರವನ್ನೂ ಹಿಡಿದುಕೊಂಡು ಬಂದಿದ್ದರು. ಆ ನಂತರ ಪಬ್ಲಿಕ್ ಹೆಲ್ತ್ನಲ್ಲಿ ಎಂಎಸ್ ಮಾಡಿ ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್ ಆದರು. ತಿಮ್ಮಯ್ಯನವರು ಅಧಿಕಾರಿಯಾಗಿ ಹೋದ ಕಡೆಯಲ್ಲೆಲ್ಲ ಮಾಸ್ ಚೆಕಪ್ ಕ್ಯಾಂಪ್ಗಳ ಮೂಲಕ ಗ್ರಾಮೀಣ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಸಮಾಜದ ಆರೋಗ್ಯವನ್ನು ಸುಧಾರಿಸುತ್ತಾ ಜನಾನುರಾಗಿಯಾದರು. ಅವರು ಸಲ್ಲಿಸಿದ ಸೇವೆಯ ಆಧಾರದ ಮೇಲೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ಸ್ಕಾಲರ್ಶಿಪ್ ನೀಡಿ ಉನ್ನತ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟಿತ್ತು. 1973ರಿಂದ 2003ರವರೆಗೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ತಿಮ್ಮಯ್ಯನವರು ನಿರ್ದೇಶಕರಾಗಿ ನಿವೃತ್ತರಾದರು. 2006ರಲ್ಲಿ ಮೈಸೂರಿನಲ್ಲಿ ದಾಸ್ಟಿ ಪ್ಯಾರಾ ಮೆಡಿಕಲ್ ಕಾಲೇಜ್ ಸ್ಥಾಪಿಸಿ, ತಾವು ಬೆಳೆದ, ಬೆಳೆಸಿದ ಸಮಾಜಕ್ಕೇ ತಮ್ಮ ಸೇವೆಯನ್ನು ಮುಡಿಪಾಗಿಟ್ಟವರು. ಸೌಮ್ಯ ಸ್ವಭಾವದ, ಸರಳ ಸಜ್ಜನಿಕೆಯ ಮಿತಭಾಷಿ ತಿಮ್ಮಯ್ಯನವರು, ಹಳ್ಳಿಯ ಹಿಂಜರಿಕೆ, ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಕಾಪಿಟ್ಟುಕೊಂಡವರು. ಇಂತಹ ತಿಮ್ಮಯ್ಯನವರು ಹುಣಸೂರಿನ ಶಾಲಾ ದಿನಗಳಿಂದ ಹಿಡಿದು ಕೊನೆ ದಿನಗಳವರೆಗೆ ಕಂಡ ದೇವರಾಜ ಅರಸರನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಬೆಲೆ ತಂದವರು...
ಹುಣಸೂರು ತಾಲೂಕಿನ ಸದಾಶಿವನಕೊಪ್ಪಲು ನಮ್ಮೂರು. ನಮ್ಮ ತಂದೆ ದಾಸಪ್ಪನವರು ಆ ಕಾಲಕ್ಕೇ ಎಲ್ಲೆಸ್ ಪಾಸ್ ಮಾಡಿದ ವಿದ್ಯಾವಂತರು. ಆ ಕಾರಣಕ್ಕಾಗಿಯೇ ಬ್ರಿಟಿಷರ ಕೊಲಿನ್ ಮೆಕೆನ್ಜಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಹುಣಸೂರು ಕಾಫಿ ವರ್ಕ್ಸ್ನಲ್ಲಿ ಮೇಸ್ತ್ರಿಯಾಗಿದ್ದರು. ಈ ಸಮಯದಲ್ಲಿಯೇ ದೇವರಾಜ ಅರಸರಿಗೂ ನಮ್ಮ ತಂದೆಗೂ ಸ್ನೇಹ ಬೆಳೆದಿತ್ತು. ಅರಸರು ಹುಣಸೂರಿಗೆ ಬಂದಾಗೆಲ್ಲ ಕಾಫಿ ವರ್ಕ್ಸ್ ಕಡೆ ಬರುವುದು, ‘‘ಏನ್ ದಾಸಪ್ಪ...’’ ಎಂದು ಮಾತನಾಡಿಸಿಕೊಂಡು ಹೋಗುವುದು ಮಾಮೂಲಾಗಿತ್ತು. ನಮ್ಮ ತಂದೆ ಮೇಸ್ತ್ರಿಯಾದ ಕಾರಣ, ಅವರ ಕೈ ಕೆಳಗೆ ಒಂದು ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದರಲ್ಲೂ ಕಾಫಿ ಸಂಸ್ಕರಿಸುವ ಕೆಲಸದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲ ನಮ್ಮ ತಂದೆ ಹೇಳಿದಂತೆ ಕೇಳುತ್ತಿದ್ದರು. ಚುನಾವಣಾ ಸಮಯದಲ್ಲಿ ದೇವರಾಜ ಅರಸರು ನೇರವಾಗಿ ನಮ್ಮ ಮನೆಗೆ ಬಂದುಬಿಡುತ್ತಿದ್ದರು. ನಮ್ಮದು ಹೆಂಚಿನ ಮನೆ. ಅರಸರು ಬಂದು ಕೈ ಮುಗಿದು ‘‘ದಾಸಪ್ಪ, ಏನ್ ಮಾಡ್ತಿಯಪ್ಪಾ’’ಎಂದರೆ, ಮುಗಿಯಿತು. ನಮ್ಮ ತಂದೆ ‘‘ನಾವಿದ್ದೀವಿ ಬುಡಿ ಬುದ್ಧಿ’’ ಅಂತಿದ್ದರು. ಹೇಳಿದಂತೆಯೇ ಮಾಡುತ್ತಿದ್ದರು. ತಮ್ಮ ಕೈಕೆಳಗಿನ ಕೆಲಸಗಾರರಿಗೆ ಫರ್ಮಾನು ಹೊರಡಿಸಿ ಮತ ಹಾಕಿಸುತ್ತಿದ್ದರು. ಅರಸರು ಮತ್ತು ನಮ್ಮ ತಂದೆಯವರ ನಡುವಿನ ಸ್ನೇಹ, ನಂಬಿಕೆ, ವಿಶ್ವಾಸಕ್ಕೆ, ಇಬ್ಬರೂ ಬೆಲೆ ಬರುವಂತೆ ನಡೆದುಕೊಂಡರು.
ನಾನಿದ್ದೇನೆ..
1965, ಜನವರಿ 26. ಕಾಫಿ ವರ್ಕ್ಸ್ನ ಸಹೋದ್ಯೋಗಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ, ಕಂಪೆನಿಯ ಕಾರಿನಲ್ಲಿ ನಮ್ಮ ತಂದೆ ಅವರನ್ನು ಮೈಸೂರಿಗೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ವಾಪಾಸ್ ಹುಣಸೂರಿಗೆ ಹೋಗುವಾಗ, ಬಿಳಿಕೆರೆ ಎಂಬಲ್ಲಿ ಎದುರಿನಿಂದ ಬಂದ ಕೆಎಸ್ಸಾರ್ಟಿಸಿ ಬಸ್ ನಮ್ಮ ತಂದೆ ಇದ್ದ ಕಾರಿಗೆ ಗುದ್ದಿ, ನಮ್ಮ ತಂದೆಯೂ ಸೇರಿದಂತೆ ಕಾರಿನಲ್ಲಿದ್ದ ನಾಲ್ಕೂ ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ನಾನಾಗ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿ. ವಿಷಯ ತಿಳಿದು ಸ್ಥಳಕ್ಕೆ ಹೋದೆ. ಅದೇ ಸಮಯದಲ್ಲಿ ನಿಜಲಿಂಗಪ್ಪನವರ ಕ್ಯಾಬಿನೆಟ್ನಲ್ಲಿ ದೇವರಾಜ ಅರಸರು ಸಾರಿಗೆ ಮಂತ್ರಿ. ದುರದೃಷ್ಟವಶಾತ್, ಅವರ ಸಾರಿಗೆ ಇಲಾಖೆಯ ಬಸ್ನಿಂದಲೇ ಅವರ ಸ್ನೇಹಿತನ ಕಾರಿಗೆ ಅಪಘಾತವಾಗಿ ಸಾವು ಸಂಭವಿಸಿತ್ತು. ವಿಷಯ ತಿಳಿದ ತಕ್ಷಣ ಅರಸರು ಸ್ಥಳಕ್ಕೆ ಧಾವಿಸಿ ಬಂದರು. ಸ್ನೇಹಿತನ ಮೃತದೇಹ ನೋಡಿ ಮಮ್ಮಲ ಮರುಗಿದರು. ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದೆ ಮಾಡಬೇಕಿರುವುದನ್ನು ವಿವರಿಸಿದರು.
ನಾನು ನಮ್ಮ ತಂದೆಯನ್ನು ಕಳೆದುಕೊಂಡು ದಿಕ್ಕು ತೋಚದೆ ಒಬ್ಬನೆ ಅನಾಥನಂತೆ ಅಳುತ್ತಾ ನಿಂತಿದ್ದೆ. ನನ್ನಲ್ಲಿಗೆ ಬಂದ ಅರಸರು, ತಲೆ ಮುಟ್ಟಿ, ಬೆನ್ನು ಸವರಿ, ‘‘ಚೆನ್ನಾಗಿ ಓದು, ನಾನಿದ್ದೇನೆ’’ ಎಂದು ಸಮಾಧಾನ ಮಾಡಿ, ಧೈರ್ಯ ತುಂಬಿದರು. (ಇದನ್ನು ಹೇಳುವಾಗ ತಿಮ್ಮಯ್ಯನವರ ಕಣ್ಣಾಲಿಗಳು ತುಂಬಿದ್ದವು). ಅಪಘಾತ ನಡೆದ ಸ್ಥಳಕ್ಕೆ ಮಂತ್ರಿಗಳು ಭೇಟಿ ನೀಡುವುದು ಬಹಳ ಕಡಿಮೆ. ಆದರೆ ಅರಸರು ಆ ತಕ್ಷಣವೇ ಸ್ಥಳಕ್ಕೆ ಬಂದಿದ್ದರು. ನನಗೆ ಧೈರ್ಯ ತುಂಬಿದ್ದರು. ಇದಾದ 2 ವಾರಕ್ಕೆ ನಮ್ಮ ತಂದೆ ಕೆಲಸ ಮಾಡುತ್ತಿದ್ದ ಕಾಫಿ ವರ್ಕ್ಸ್ನವರು ನನಗೆ ನಮ್ಮ ತಂದೆಯ ಕೆಲಸ ಕೊಡಲು ಮುಂದೆ ಬಂದರು. ನಾನು ನನ್ನ ಅನಕ್ಷರಸ್ಥೆ ತಾಯಿಯನ್ನು ಕೇಳಿದೆ. ಅವರು ‘‘ನೀನು ಡಾಕ್ಟರಾಗುವುದು ನಿಮ್ಮಪ್ಪನ ಆಸೆಯಾಗಿತ್ತು. ಅದೆಷ್ಟೇ ಕಷ್ಟವಾದರೂ ಸರಿ, ಮನೆ ಚಿಂತೆ ಬಿಡು, ನೀನು ಓದು ಮುಂದುವರಿಸು’’ ಎಂದರು. ಹಾಗಾಗಿ ಕೆಲಸಕ್ಕೆ ಹೋಗಲಿಲ್ಲ. ಅದೇ ಸಮಯದಲ್ಲಿ ಧನಶೀಲ ನಾಡಾರ್- ತಂದೆಯ ಮತ್ತೊಬ್ಬ ಸ್ನೇಹಿತರು, ‘‘ನೀನು ಯಾವಾಗ ಬಂದು, ಎಷ್ಟು ಬೇಕಾದರೂ ಹಣ ತೆಗೆದುಕೊಂಡು ಹೋಗಬಹುದು’’ ಎಂದರು. ಜೊತೆಗೆ 150 ರೂಪಾಯಿ ಸ್ಕಾಲರ್ಶಿಪ್ ಬರುತ್ತಿತ್ತು. ಅದೆಲ್ಲವನ್ನು ಬಳಸಿಕೊಂಡು ಎಂಬಿಬಿಎಸ್ ಅನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದೆ.
ತಂದೆಯ ಋಣ ತೀರಿಸಿದ್ದೇನೆ...
1972 ಡಿಸೆಂಬರ್ನಲ್ಲಿ ಎಂಬಿಬಿಎಸ್ ಪದವಿ ಮುಗಿಸಿ, 1973ರ ಮಾರ್ಚ್ನಲ್ಲಿ ಮಾರ್ಕ್ಸ್ ಕಾರ್ಡ್ನ್ನು ಕೈಯಲ್ಲಿಡಿದುಕೊಂಡು, ಎಚ್.ಡಿ. ನರಸಿಂಹಯ್ಯ(ಹುಣಸೂರಿನ ಕುರುಬ ಜನಾಂಗದ ಹಿರಿಯರು)ರನ್ನು ಕರೆದುಕೊಂಡು ದೇವರಾಜ ಅರಸರನ್ನು ನೋಡಲು ಬೆಂಗಳೂರಿಗೆ ಹೋದೆ. ಆಗ ಅರಸರು ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಗಳ ನಿವಾಸ ಬಾಲಬ್ರೂಯಿಗೆ ಬೆಳಗ್ಗೆ 9ಕ್ಕೆ ಹೋದೆ. ನರಸಿಂಹಯ್ಯನವರು, ‘‘ಬುದ್ಧಿ, ಮೇಸ್ತ್ರಿ ದಾಸಪ್ಪನವರ ಮಗ, ಮೆಡಿಕಲ್ ಮಾಡಿದ್ದಾನೆ’’ ಎಂದರು. ನನ್ನನ್ನು ನೋಡಿದ ಅರಸರು, ‘‘ಇಷ್ಟು ದಿನ ಯಾಕೆ ಬರಲಿಲ್ಲ, ಸರಿ, ಮುಂದಕ್ಕೆ ಏನ್ ಮಾಡಬೇಕಂತಿದ್ದೀಯ?’’ ಎಂದರು. ‘‘ಕೆಲಸಕ್ಕೆ ಸೇರಬೇಕು ಅಂತಿದೀನಿ ಬುದ್ಧಿ’’ ಎಂದೆ. ಅವತ್ತು ಹಬ್ಬದ ದಿನ, ಸರಕಾರಿ ರಜೆ ಅಂತ ಕಾಣ್ತದೆ, ‘‘ನಾಳೆ ಬೆಳಗ್ಗೆ ಇದೇ ಟೈಮಿಗೆ ಇಲ್ಲಿಗೆ ಬಂದ್ಬಿಡು’’ ಎಂದು ಹೇಳಿ, ಮನೆಯ ಮುಂದಿದ್ದ ಪೊಲೀಸರನ್ನು ಕರೆದು, ‘‘ನೋಡಪ್ಪ, ಈ ಹುಡುಗ ಬಂದ್ ಕೂಡಲೇ ಒಳಗೆ ಕಳಿಸು’’ ಎಂದು ಸೂಚಿಸಿದರು. ನನ್ನತ್ತ ತಿರುಗಿ ‘‘ಎಲ್ಲಿ ಉಳಕೊಂಡಿದೀಯ?’’ ಎಂದು ವಿಚಾರಿಸಿಕೊಂಡರು