ಚರ್ಮದ ಸಮಸ್ಯೆಗಳೇ?: ವಿಟಾಮಿನ್ ಇ ಮೂಲಕ ನಿವಾರಿಸಿಕೊಳ್ಳಿ
ವಿಟಾಮಿನ್ ಇ ಚರ್ಮವನ್ನು ಮೃದು,ಕೋಮಲವಾಗಿರಿಸುವ ಜೊತೆಗೆ ಹೊಳಪನ್ನು ನೀಡುತ್ತದೆ. ಹೆಚ್ಚಿನ ಸ್ಕಿನ್‌ಕೇರ್‌ಗಳಲ್ಲಿ ವಿಟಾಮಿನ್ ಇ ಪ್ರಮುಖ ಘಟಕವಾಗಿದೆ. ನೀವು ಅವುಗಳನ್ನು ಬಳಸಿರಬಹುದಾದರೂ ಚರ್ಮದ ಮೇಲೆ ನೇರವಾಗಿ ವಿಟಾಮಿನ್ ಇ ತೈಲವನ್ನು ಬಳಸಿದ್ದೀರಾ? ಬಳಸಿಲ್ಲವಾದರೆ ಅದು ಚರ್ಮಕ್ಕೆ ನೀಡುವ ಆರೋಗ್ಯಲಾಭಗಳು ಗೊತ್ತಾದರೆ ನಿಮಗೆ ಅಚ್ಚರಿಯಾದೀತು.
ವಿಟಾಮಿನ್ ಇ ಚರ್ಮಕ್ಕೆ ಏಕೆ ಒಳ್ಳೆಯದು?
ವಿಟಾಮಿನ್ ಇ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು ಮತ್ತು ಫ್ರೀ ರ್ಯಾಡಿಕಲ್‌ಗಳು ಉಂಟು ಮಾಡುವ ಹಾನಿಯಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಇವೆರಡೂ ಸನ್‌ಬರ್ನ್,ದದ್ದುಗಳು ಮತ್ತು ಅಕಾಲಿಕ ವಯಸ್ಸಾಗುವಿಕೆ ಸೇರಿದಂತೆ ಹಲವಾರು ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿಯೇ ವಿಟಾಮಿನ್ ಇ ಚರ್ಮದ ಪಾಲಿಗೆ ವರದಾನವಾಗಿದೆ.
ವಿಟಾಮಿನ್ ಇ ಕ್ಯಾಪ್ಸೂಲ್‌ಗಳು ಎಲ್ಲ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಚರ್ಮದ ಮೇಲೆ ನೇರವಾಗಿ ವಿಟಾಮಿನ್ ಇ ತೈಲವನ್ನು ಬಳಸುವ ಕೆಲವು ವಿಧಾನಗಳು ಇಲ್ಲಿವೆ......
* ಆರ್ದ್ರಕವಾಗಿ ವಿಟಾಮಿನ್ ಇ
ವಿಟಾಮಿನ್ ಇ ಕ್ಯಾಪ್ಸೂಲ್‌ನ್ನು ತುಂಡರಿಸಿ ಅದರೊಳಗಿನ ದ್ರವವನ್ನು ಹೊರಗೆ ತೆಗೆಯಿರಿ. ನೀವು ನಿಯಮಿತವಾಗಿ ಬಳಸುವ ಸ್ಕಿನ್ ಕ್ರೀಮ್‌ಗೆ ಈ ವಿಟಾಮಿನ್ ಇ ತೈಲವನ್ನು ಮಿಶ್ರಗೊಳಿಸಿ. ನೈಟ್ ಕ್ರೀಮ್‌ಗೆ ವಿಟಾಮಿನ್ ಇ ತೈಲವನ್ನು ಬೆರೆಸಿದರೆ ಒಳ್ಳೆಯದು,ಅದರಿಂದ ಚರ್ಮವು ಸುಸ್ಥಿತಿಗೆ ಮರಳಲು ಇಡೀ ರಾತ್ರಿ ಅವಕಾಶ ದೊರೆಯುತ್ತದೆ. ವಿಟಾಮಿನ್ ಇ ತೈಲವನ್ನು ಬಾಡಿ ಲೋಷನ್‌ಗಳು ಮತ್ತು ಡೇ ಕ್ರೀಮ್‌ಗೆ ಬೆರೆಸಬಹುದು.
* ನೈಟ್ ಐ ಸೀರಮ್
ವಿಟಾಮಿನ್ ಇ ಕ್ಯಾಪ್ಸೂಲ್‌ನಿಂದ ತೈಲವನ್ನು ಹೊರತೆಗೆದು ಅದನ್ನು ಅಂಗೈಯಲ್ಲಿ ಹಾಕಿಕೊಳ್ಳಿ. ಸ್ವಚ್ಛವಾದ ಬೆರಳುಗಳಿಂದ ಅಥವಾ ಹತ್ತಿಯ ತುಂಡಿನಿಂದ ಅದನ್ನು ಕಣ್ಣುಗಳ ಸುತ್ತ ಲೇಪಿಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ. ಚರ್ಮವು ಸುಕ್ಕುಗಟ್ಟುವುದನ್ನು ತಡೆಯಲು ಮತ್ತು ನಿಮ್ಮ ಮುಖವನ್ನು ತಾರುಣ್ಯಪೂರ್ಣವಾಗಿರಿಸಲು ಈ ತೈಲವನ್ನು ಬಾಯಿಯ ಸುತ್ತ ಮತ್ತು ಹಣೆಗೂ ಹಚ್ಚಿಕೊಳ್ಳಬಹುದು. ಈ ತೈಲವನ್ನು ಇನ್ನೊಂದು ಆರ್ಗಾನಿಕ್ ಐ ಕ್ರೀಮ್ ಜೊತೆಗೂ ಮಿಶ್ರಗೊಳಿಸಬಹುದು. ಆದರೆ ಈ ತೈಲವು ಅಂಟಂಟಾಗಿರುವುದರಿಂದ ಚರ್ಮಕ್ಕೆ ಅತಿಯಾಗಿ ಲೇಪಿಸಿಕೊಳ್ಳಬೇಡಿ. ಅತಿಯಾದ ಬಳಕೆಯು ಹೆಚ್ಚಿನ ಫಲಿತಾಂಶವನ್ನೇನೂ ನೀಡುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ.
* ಚರ್ಮವನ್ನು ಮೃದುವಾಗಿಸುತ್ತದೆ
ಮೊಣಕೈ ಮತ್ತು ಮಂಡಿಗಳ ಸುತ್ತಲಿನ ಚರ್ಮವು ಒಣಗಿರುವುದು ಮತ್ತು ಒರಟಾಗಿರುವುದು ಸಾಮಾನ್ಯ. ಶರೀರದ ಇತರ ಭಾಗಗಳ ಚರ್ಮದ ಬಗ್ಗೆ ವಹಿಸುವ ಕಾಳಜಿಯನ್ನು ನಾವು ಈ ಜಾಗಗಳ ಬಗ್ಗೆ ವಹಿಸುವುದಿಲ್ಲ. ಕಾಲಕ್ರಮೇಣ ಈ ಜಾಗಗಳಲ್ಲಿಯ ಚರ್ಮ ಒಣಗುತ್ತದೆ ಮತ್ತು ತನ್ನ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತದೆ. ವಿಟಾಮಿನ್ ಇ ತೈಲದ ಬಳಕೆಯು ಇಲ್ಲಿಯ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಕಪ್ಪುಛಾಯೆಯನ್ನು ಕಡಿಮೆಗೊಳಿಸುತ್ತದೆ. ಮೊದಲು ಮೃತಕೋಶಗಳನ್ನು ನಿರ್ಮೂಲಿಸಲು ಚರ್ಮವನ್ನು ಚೆನ್ನಾಗಿ ಉಜ್ಜಿರಿ ಮತ್ತು ನಂತರ ವಿಟಾಮಿನ್ ಇ ತೈಲವನ್ನು ಲೇಪಿಸಿ ಲಘುವಾಗಿ ಮಸಾಜ್ ಮಾಡಿ. ವಾರದಲ್ಲಿ 3-4 ಬಾರಿ ಇದನ್ನು ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
* ಒಡೆದ ತುಟಿಗಳಿಗೆ
ಒಣ ಮತ್ತು ಒಡೆದ ತುಟಿಗಳಿಂದ ನಿಮಗೆ ಕಿರಿಕಿರಿಯಾಗಿದ್ದರೆ ವಿಟಾಮಿನ್ ಇ ಅತ್ಯುತ್ತಮ ಪರಿಹಾರವಾಗಿದೆ. ವಿಟಾಮಿನ್ ಇ ತೈಲವನ್ನು ತುಟಿಗೆ ನೇರವಾಗಿ ಲೇಪಿಸಿ ಮಸಾಜ್ ಮಾಡಬಹುದು. ಲಿಪ್ ಬಾಮ್‌ಗೆ ಈ ತೈಲವನ್ನು ಸೇರಿಸಿಯೂ ಬಳಸಬಹುದು. ಇದರಿಂದ ತುಟಿಯು ತುಂಬಿಕೊಳ್ಳುವುದರ ಜೊತೆಗೆ ಗುಲಾಬಿ ವರ್ಣವನ್ನೂ ಪಡೆಯುತ್ತದೆ.
* ಸನ್‌ಬರ್ನ್‌ಗಳಿಗೆ ವಿಟಾಮಿನ್ ಇ
ಬಿಸಿಲಿನಿಂದ ಚರ್ಮ ಸುಟ್ಟು ಹಾನಿಯಾಗಿದ್ದರೆ ವಿಟಾಮಿನ್ ಇ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಬೌಲ್‌ನಲ್ಲಿ ಸ್ವಲ್ಪ ಮೊಸರು,ಲಿಂಬೆರಸ ಮತ್ತು ವಿಟಾಮಿನ್ ಇ ತೈಲವನ್ನು ಬೆರೆಸಿ ಮೃದುವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಈ ಪೇಸ್ಟ್‌ನ್ನು ಪೀಡಿತ ಜಾಗಗಳಿಗೆ ಲೇಪಿಸಿಕೊಳ್ಳಿ ಮತ್ತು 30-40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲೆ ಹಿತಕರ ಪರಿಣಾಮವುಂಟಾಗುತ್ತದೆ.