ಬೆಂಗಳೂರು ಹಿಂಸಾಚಾರ: ಗೋಲಿಬಾರಿಗೆ ಕಣ್ಣು ಗುಡ್ಡೆಯೇ ಹೊರಬಂದು ದೃಷ್ಟಿ ಕಳೆದುಕೊಂಡ ಯುವಕ
ಬೆಂಗಳೂರು, ಆ.20: ಒಂದೆಡೆ ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಬಂಧಿತರ ಪೋಷಕರ ನೋವು, ಮೃತರ ಕುಟುಂಬಸ್ಥರ ಗೋಳು ಹೆಚ್ಚಾಗುತ್ತಿವೆ. ಇದರ ನಡುವೆ ಪೊಲೀಸರ ಗುಂಡೇಟಿನಿಂದ 21ರ ಹರೆಯದ ಯುವನೋರ್ವನ ಕಣ್ಣು ಗುಡ್ಡೆಯೇ ಹೊರಬಂದು, ದೃಷ್ಟಿಯೇ ಕಳೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನಗರದ ಅರೇಬಿಕ್ ಕಾಲೇಜು ರಸ್ತೆಯ ಮುಸ್ಲಿಮ್ ಕಾಲನಿ ನಿವಾಸಿ 21 ವರ್ಷದ ಸದಾಪ್ ಬೇಗ್ ಎನ್ನುವ ಯುವಕ ಗೋಲಿಬಾರ್ ನ ಗಾಯಾಳು ಆಗಿದ್ದು, ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದುರದೃಷ್ಟವೆಂದರೆ, ಗಲಾಟೆಯಲ್ಲಿ ಪೊಲೀಸರು ಹಾರಿಸಿದ ಗುಂಡು ಕಿವಿ ಮತ್ತು ಕಣ್ಣಿಗೆ ಬಿದ್ದ ಪರಿಣಾಮ ಬಲಭಾಗದ ಕಣ್ಣು ಸಂಪೂರ್ಣ ಗಾಯಗೊಂಡಿದೆ. ಎಡಭಾಗ ಕಣ್ಣು ಮಾತ್ರ ಶೇಕಡ 50ರಷ್ಟು ನೋಡುವ ಸ್ಥಿತಿ ಕಳೆದುಕೊಂಡಿದೆ ಎಂದು ವೈದ್ಯರು ವರದಿ ನೀಡಿರುವುದಾಗಿ ಹೇಳಲಾಗುತ್ತಿದೆ.
ಏನಿದು ಘಟನೆ?: ಮೊಬೈಲ್ ಅಂಗಡಿಯೊಂದರಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದ ಸದಾಪ್ ಬೇಗ್, ಎಂದಿನಂತೆ ರಾತ್ರಿ 10:30ಕ್ಕೆ ಮನೆಗೆ ಹೋಗುತ್ತಿದ್ದ. ಆ.11ರ ಕಾವಲ್ ಭೈರಸಂದ್ರ ಗಲಾಟೆ ನಡೆದ ದಿನದ ರಾತ್ರಿಯೂ ಟ್ಯಾನರಿ ರಸ್ತೆಯ ಮೂಲಕ ತಮ್ಮ ಮನೆಗೆ ತಲುಪಲು ಹೊರಟಿದ್ದು, ಈ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡಿದ್ದ ಯುವಕರನ್ನು ನೋಡಿ, ಗಾಬರಿಗೊಂಡು ಸ್ಥಳದಲ್ಲಿಯೇ ನಿಂತಿದ್ದ ಎನ್ನಲಾಗಿದ್ದು, ಅದೇ ಸಂದರ್ಭ ಉದ್ರಿಕ್ತರ ಗುಂಪನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಒಂದು ಗುಂಡು, ಸದಾಪ್ ಬೇಗ್‍ನ ಮುಖಕ್ಕೆ ಬಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ತದನಂತರ, ಸ್ಥಳೀಯರ ಸಹಾಯದಿಂದ ಆಂಬ್ಯಲೆನ್ಸ್ ನಲ್ಲಿ ಮೊದಲಿಗೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆದರೆ ದಾಖಲಿಸಲು ಅವರು ನಿರಾಕರಿಸಿದ್ದಾರೆ. ಬಳಿಕ, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಆತನ ಒಂದು ಕಣ್ಣು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದು, ಮತ್ತೊಂದು ಕಣ್ಣು ಶೇ.50ರಷ್ಟು ಭಾಗ ನೋಡುವ ಶಕ್ತಿ ಹೊಂದಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಕುಟುಂಬ ಸದಸ್ಯರು ಹೇಳಿದರು.
ಆಸರೆಯಾಗಿದ್ದ: ಸದಾಪ್ ಬೇಗ್ ಅವರ ತಂದೆ ನಿಧನ ಹೊಂದಿದ್ದು, ಹಿರಿಯ ಪುತ್ರನಾದ ಈತನ ಮೇಲೆಯೇ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಇತ್ತು. ಇದಕ್ಕಾಗಿಯೇ ಪ್ರತಿದಿನ ಮೊಬೈಲ್ ಅಂಗಡಿಯಲ್ಲಿ ಕೂಲಿಗೆ ಹೋಗುತ್ತಿದ್ದು, ಅಂಗಡಿ ಮಾಲಕ 350 ರೂ. ಪಾವತಿ ಮಾಡುತ್ತಿದ್ದರು. ಆದರೆ, ಇದೀಗ ತನ್ನ ದೃಷ್ಟಿಯನ್ನು ಕಳೆದುಕೊಂಡು, ಬದುಕು ಕತ್ತಲೆಯಾಗಿದೆ. ಈ ಕುಟುಂಬಕ್ಕೆ ಇನ್ಯಾರು ಗತಿ ಎಂದು ಅವರ ಕುಟುಂಬದ ಸದಸ್ಯರು ಪ್ರಶ್ನಿಸಿದರು.
ಶಸ್ತ್ರಚಿಕಿತ್ಸೆಗೆ ಹಣವಿಲ್ಲ: ಆ.11ರಿಂದ ಇಲ್ಲಿನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಪ್ರತಿದಿನವೂ ಹಣ ಖರ್ಚು ಆಗುತ್ತಿದ್ದು, ಈಗಾಗಲೇ ಸಾಲ ಮಾಡಲಾಗಿದೆ. ಕಣ್ಣಿಗೆ ಸಂಬಂಧಿಸಿದಂತೆ ವೈದ್ಯರು ಶಸ್ತ್ರ ಚಿಕಿತ್ಸೆಯೊಂದು ಮಾಡಬೇಕೆಂದು ಹೇಳಿದರೂ, ನಮ್ಮ ಬಳಿ ಹಣವಿಲ್ಲ ಎಂದು ಸದಾಪ್ ಬೇಗ್ ತಾಯಿ ಪರ್ವಿನ್(ಹೆಸರು ಬದಲಾಯಿಸಲಾಗಿದೆ) ಕಣ್ಣೀರು ಹಾಕಿದರು.
'ಇನ್ನಷ್ಟು ದಿನ ಚಿಕಿತ್ಸೆ ಬೇಕಿದೆ'
ಗಲಾಟೆ ಪ್ರಕರಣ ಸಂಬಂಧ ಸದಾಪ್ ಬೇಗ್ ಯಾವುದೇ ತಪ್ಪು ಎಸಗಿಲ್ಲ. ಆದರೂ, ಕೆಲ ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ, ಸದಾಪ್ ಬೇಗ್, ಕಣ್ಣುಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಇನ್ನಷ್ಟು ಒಳ್ಳೆಯ ಚಿಕಿತ್ಸೆ ಬೇಕಾಗಿದೆ ಎಂದು ಸದಾಪ್ ಬೇಗ್ ಅವರ ಸಂಬಂಧಿ ಇರ್ಶಾದ್ ಒತ್ತಾಯಿಸಿದರು.