ಮಾಸ್ಕ್ ಧರಿಸುವುದರಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?
ಮಾಸ್ಕ್ ಧರಿಸಿದಾಗ ಕೆಲವು ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿದ್ದಾಗ ಬಟ್ಟೆಯ ಮಾಸ್ಕ್‌ನ್ನು ಧರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ. ಮಾಸ್ಕ್ ಧರಿಸುವುದರಿಂದ ಕೊರೋನ ವೈರಸ್ ಅನ್ನು ತಡೆಯಲು ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ನೆರವಾಗುತ್ತದೆ,ಆದರೆ ಮಾಸ್ಕ್ ಧಾರಣೆಯು ಚರ್ಮದ ಆರೋಗ್ಯಕ್ಕೆ ತನ್ನದೇ ಆದ ಸವಾಲುಗಳನ್ನೂ ಒಡ್ಡುತ್ತದೆ. ಚರ್ಮದ ಕಿರಿಕರಿ,ದದ್ದುಗಳು ಮತ್ತು ಮೊಡವೆಗಳು ನಿಯಮಿತವಾಗಿ ಮಾಸ್ಕ್ ಧರಿಸುವವರು ಅನುಭವಿಸಬಹುದಾದ ಕೆಲವು ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬೇಕು ಎನ್ನುವ ಬಗ್ಗೆ ಮಾಹಿತಿಗಳಿಲ್ಲಿವೆ....
* ಚರ್ಮದ ಕಿರಿಕಿರಿಯನ್ನು ತಡೆಯಲು
ಹಿತಕರವಾದ ಮತ್ತು ಸರಾಗವಾಗಿ ಉಸಿರಾಡಲು ಸಾಧ್ಯವಾಗುವ ಮಾಸ್ಕ್‌ನ ಬಳಕೆಯು ತುಂಬ ಮುಖ್ಯವಾಗಿದೆ. ಹತ್ತಿಯ ಬಟ್ಟೆಯಿಂದ ಮಾಡಿದ ಮಾಸ್ಕ್‌ನ್ನೇ ಧರಿಸಿ. ಮಾಸ್ಕ್ ಮೂರು ಪದರಗಳನ್ನು ಹೊಂದಿರಬೇಕು ಹಾಗೂ ನಿಮ್ಮ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಬೇಕು. ಅದು ತುಂಬ ಬಿಗಿಯಾಗಿರಬಾರದು,ತುಂಬ ಸಡಿಲವೂ ಆಗಿರಬಾರದು. ಈ ಸೂತ್ರಗಳ ಪಾಲನೆಯು ಚರ್ಮದ ಕಿರಿಕಿರಿ ಮತ್ತು ಅತಿಯಾಗಿ ಬೆವರುವಿಕೆಯನ್ನು ತಡೆಯುತ್ತದೆ.
* ಮೊಡವೆಗಳನ್ನು ತಡೆಯಲು
ಮುಖವನ್ನು ಆಗಾಗ್ಗೆ ತೊಳೆದುಕೊಳ್ಳುತ್ತಿದ್ದರೆ ಮೊಡವೆಗಳು ಏಳುವುದನ್ನು ತಡೆಯಲು ನೆರವಾಗುತ್ತದೆ. ನೀವು ಅತಿಯಾಗಿ ಬೆವರುತ್ತೀರಾದರೆ ನಿಮ್ಮಿಂದಿಗೆ ಕೆಲವು ಹೆಚ್ಚುವರಿ ಮಾಸ್ಕ್‌ಗಳಿರಲಿ. ಮಾಸ್ಕ್‌ನಡಿ ಬೆವರುವುದು ಮೊಡವೆಗಳು ಏಳಲು ಪೂರಕವಾಗಿದೆ. ಸ್ಯಾಲಿಸಿಲಿಕ್ ಫೇಸ್ ವಾಷ್‌ನ್ನು ಬಳಸುವುದು ಚರ್ಮದಲ್ಲಿಯ ಮುಚ್ಚಿದ ರಂಧ್ರಗಳನ್ನು ತೆರೆಯಲು ನೆರವಾಗುತ್ತದೆ ಮತ್ತು ಮೊಡವೆಗಳು ಏಳುವುದನ್ನು ಕಡಿಮೆ ಮಾಡುತ್ತದೆ. ಅತಿಯಾದ ಮೇಕಪ್ ಬೇಡವೇ ಬೇಡ. ಮೇಕಪ್ ಅನಿವಾರ್ಯವಾಗಿದ್ದರೆ ಅದು ಲಘುವಾಗಿರಲಿ ಮತ್ತು ಚರ್ಮದ ರಂಧ್ರಗಳು ಮುಚ್ಚದಂತೆ ಕಾಳಜಿ ವಹಿಸಿ. ಮಾಸ್ಕ್ ಕಳಚಿದ ಬಳಿಕ ಸ್ಯಾಲಿಸಿಲಿಕ್ ಫೇಸ್ ವಾಷ್‌ನಿಂದ ಮುಖವನ್ನು ತೊಳೆದುಕೊಳ್ಳುವುದನ್ನು ಮರೆಯಬೇಡಿ.
* ಧೂಳು ಮತ್ತು ಕೊಳೆ ಸಂಗ್ರಹವಾಗುವುದನ್ನು ತಡೆಯಲು
ಮಾಸ್ಕ್ ಕಳಚಿದ ಬಳಿಕ ನಿಮ್ಮ ಕೈಗಳೊಂದಿಗೆ ಮುಖವನ್ನೂ ತೊಳೆದುಕೊಳ್ಳಿ. ಇದು ನಿಮ್ಮ ಚರ್ಮದಲ್ಲಿ ಶೇಖರಗೊಂಡಿರಬಹುದಾದ ಬೆವರು ಮತ್ತು ಧೂಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.
* ಮಾಸ್ಕ್ ಕಳಚಿದಾಗ ಎಚ್ಚರಿಕೆಯಿರಲಿ
ಎಲ್ಲ ಸಮಯವೂ ಮಾಸ್ಕ್‌ನ್ನು ಧರಿಸಿಯೇ ಇರುವುದು ಕೆಲವರಿಗೆ ಈಗಲೂ ಕಷ್ಟವಾಗಿರಬಹುದು. ನೀವು ಪದೇ ಪದೇ ಮಾಸ್ಕ್‌ನ್ನು ಕಳಚುವ ವರ್ಗಕ್ಕೆ ಸೇರಿದ್ದರೆ,ಅದನ್ನು ಪುನಃ ಧರಿಸುವಾಗಿ ಒಳಭಾಗವು ಹೊರಗೆ ಆಗದಂತೆ ಎಚ್ಚರಿಕೆ ವಹಿಸಿ. ಏಕೆಂದರೆ ಮಾಸ್ಕನ್ನು ಕಳಚಿದ ಬಳಿಕ ಅದನ್ನು ಉಲ್ಟಾ ಧರಿಸಿದರೆ ಮಾಸ್ಕ್ ಧಾರಣೆಯ ಉದ್ದೇಶವೇ ವಿಫಲಗೊಳ್ಳುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.