ಬೆಂಗಳೂರು: ಒಂದೇ ದಿನ 3,357 ಜನರಿಗೆ ಕೊರೋನ ಪಾಸಿಟಿವ್; ಸೋಂಕಿಗೆ 59 ಮಂದಿ ಮೃತ್ಯು
ಬುಧವಾರ 3,362 ಮಂದಿ ಗುಣಮುಖ
ಬೆಂಗಳೂರು, ಆ.27: ನಗರದಲ್ಲಿ ಗುರುವಾರ ಒಂದೆ ದಿನ 3,357 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 59 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 1,18,728 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,845 ಜನರು ಸೋಂಕಿಗೆ ಬಲಿಯಾಗಿದ್ದಾರೆ. 80,893 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಬುಧವಾರ 3,362 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 35,989 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 1,57,473 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಸೋಂಕಿತರು ಹೆಚ್ಚಿದ್ದರೂ ಕೊರೋನ ಆರೈಕೆ ಕೇಂದ್ರಗಳು ಖಾಲಿ, ಖಾಲಿ
ಬೆಂಗಳೂರಿನಲ್ಲಿರುವ ಒಟ್ಟು 12 ಕೊರೋನ ಆರೈಕೆ ಕೇಂದ್ರಗಳಲ್ಲಿ 4,576 ಬೆಡ್ಗಳು ಲಭ್ಯವಿವೆ. ಆದರೆ, ಈ 4,576 ಬೆಡ್ಗಳ ಪೈಕಿ 3 ಸಾವಿರ ಬೆಡ್ಗಳು ಮಾತ್ರ ಭರ್ತಿಯಾಗಿವೆ. ಬಿಐಇಸಿನಲ್ಲಿ 10 ಸಾವಿರ ಬೆಡ್ಗಳ ಪೈಕಿ 5 ಸಾವಿರ ಬೆಡ್ಗಳು ಉಪಯೋಗಕ್ಕೆ ಲಭ್ಯವಿವೆ. ಆದರೂ ಕೇವಲ 1,500 ಬೆಡ್ಗಳ ಬಳಕೆ ಮಾತ್ರ ಮಾಡಲಾಗುತ್ತಿದೆ 1,500 ಬೆಡ್ಗಳಿದ್ದರೂ 700 ರಿಂದ 800 ಸೋಂಕಿತರು ಮಾತ್ರ ದಾಖಲಾಗಿದ್ದಾರೆ. ಉಳಿದ ಬೆಡ್ಗಳು ಖಾಲಿ ಇವೆ ಎನ್ನಲಾಗಿದೆ.
ಕೊರೋನ ಆರೈಕೆ ಕೇಂದ್ರಗಳಾಗಿ ಜಿಕೆವಿಕೆ ಹಾಸ್ಟೆಲ್, ಜ್ಞಾನಭಾರತಿ ಹಾಸ್ಟೆಲ್, ಹಜ್ ಭವನ, ಸರಕಾರಿ ಆಯುರ್ವೇದಿಕ್ ಕಾಲೇಜು, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್, ರವಿಶಂಕರ್ ಗುರೂಜಿ ಆಸ್ಪತ್ರೆ, ಹೆಚ್ಎಎಲ್, ಬಿಐಇಸಿ, ಜ್ಞಾನ ಭಾರತಿ ನ್ಯೂಗರ್ಲ್ಸ್ ಹಾಸ್ಟೆಲ್ ಸೇರಿದಂತೆ ಒಟ್ಟು 12 ಕಡೆ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗಿದೆ. ಆದರೆ, ಹೆಚ್ಚಿನ ಸೋಂಕಿತರು ಹೋಮ್ ಐಸೋಲೇಶನ್ ಆಗುತ್ತಿರುವುದರಿಂದ ಕಾಲೇಜು ಹಾಸ್ಟೆಲ್ಗಳನ್ನ ಕೊರೋನ ಆರೈಕೆ ಕೇಂದ್ರದಿಂದ ಮುಕ್ತಿ ನೀಡುವಂತೆ ಆಯಾ ವಿಶ್ವವಿದ್ಯಾಲಯಗಳಿಂದ ಮನವಿ ಬರುತ್ತಿವೆ. ಹೀಗಾಗಿ ಕೆಲ ಕೇರ್ ಸೆಂಟರ್ ಗಳನ್ನ ಕೈ ಬಿಡುವ ಬಗ್ಗೆ ಚರ್ಚೆ ನಡೆದಿದ್ದು, ಖಾಲಿ ಬಿದ್ದಿರುವ ಬೆಡ್ ಮತ್ತು ಕಾಟ್ ಗಳನ್ನ ಸರಕಾರಿ ಹಾಸ್ಟೆಲ್ಗಳಿಗೆ ಸ್ಥಳಾಂತರ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.