ಕೆಂಪು ದೀಪ: ಕೆಂಪು ದೀಪದಿ ಕಂಡ ಬಾಳ ಬೆಳಕು
ಕೆಂಪು ದೀಪ ಎನ್ನುವ ಹೆಸರು ಚಿತ್ರದಲ್ಲಿ ಹೇಳಿರುವ ವಿಚಾರ ಏನಿರಬಹುದು ಎನ್ನುವುದನ್ನು ಸೂಚಿಸುತ್ತದೆ. ಆದರೆ ಅದರ ಕಡೆಗೆ ಸಾಗುವ ದಾರಿ ಮಾತ್ರ ನಮ್ಮೆಲ್ಲರ ನಿರೀಕ್ಷೆಯನ್ನು ಮೀರುವ ರೀತಿಯಲ್ಲಿದೆ.
ಅದೊಂದು ಹಳ್ಳಿ ಮನೆ. ಸಹೋದರಿಯರ ವಿವಾಹ ಮೊದಲಾದ ಜವಾಬ್ದಾರಿ ನೆರವೇರಿಸುವ ಹೊತ್ತಲ್ಲಿ ಮದುವೆಯ ವಯಸ್ಸು ದಾಟಿದ ಶ್ರೀಧರ ಚಿತ್ರದ ನಾಯಕ. ವಯಸ್ಸು ದಾಟಿ ಹೋಗುತ್ತಿದ್ದರೂ ಎಳೆಯ ಪ್ರಾಯದ ಯುವತಿಗೇ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗುವ ನಾಯಕನ ಅಕ್ಕ. ಆದರೆ ಅದಾಗಲೇ ಒಂದು ಪ್ರೇಮ ವೈಫಲ್ಯದ ಕಾರಣ ಈ ದಾಂಪತ್ಯದಲ್ಲಿ ಆಸಕ್ತಿ ತೋರದ ಪತ್ನಿ. ಪತಿಯಿಂದ ಸುಖವೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ವಿವಾಹದ ಎರಡು ವರ್ಷಗಳ ಬಳಿಕ ಪುನಃ ಹಳೆಯ ಪ್ರೇಮಿಯನ್ನು ಹುಡುಕಿ ಹೊರಡುತ್ತಾಳೆ. ಶ್ರೀಧರನಿಗೆ ತಾನು ನಂಬಿದ ಎಲ್ಲ ಸಂಬಂಧಗಳು ಕೂಡ ಸುಳ್ಳು ಎನ್ನುವ ಅರಿವು ಮೂಡತೊಡಗುತ್ತದೆ. ಸ್ನೇಹಿತನ ಮೂಲಕ ವೇಶ್ಯಾವಾಟಿಕೆ ನಡೆಯುವ ಕೇಂದ್ರದ ಪರಿಚಯವಾಗುತ್ತದೆ. ಅಲ್ಲಿ ಮೊದಲು ಸಿಗುವ ಯುವತಿಯ ಜತೆಗೆ ಪ್ರೇಮದಲ್ಲಿ ಬೀಳುತ್ತಾನೆ. ಈ ಹೊತ್ತಿಗೆ ಪತ್ನಿ ಮನೆಗೆ ಮರಳಿರುವುದಾಗಿ ಆತನ ಅಕ್ಕ ಬಂದು ಹೇಳುತ್ತಾಳೆ. ಆಗ ಶ್ರೀಧರನ ನಿರ್ಧಾರ ಏನಾಗಿರುತ್ತದೆ? ಪ್ರೇಮಿಯ ಕಡೆಗೆ ಹೋಗಿ ಬಂದ ಪತ್ನಿಯನ್ನು ಸ್ವೀಕರಿಸುತ್ತಾನೋ? ಅಥವಾ ವೇಶ್ಯೆಯನ್ನೇ ಮದುವೆಯಾಗುವ ನಿರ್ಧಾರ ಮಾಡುತ್ತಾನೋ? ಇಷ್ಟಕ್ಕೂ ಆ ವೇಶ್ಯೆ ವೈವಾಹಿಕ ಬದುಕಿಗೆ ಒಪ್ಪುತ್ತಾಳೆಯೇ? ಎನ್ನುವುದನ್ನು ವಾಸ್ತವ ಶೈಲಿಯಲ್ಲಿ ತೋರಿಸಿರುವ ಚಿತ್ರ ಕೆಂಪು ದೀಪ.
ಕಥಾ ನಾಯಕ ಶ್ರೀಧರನ ಪಾತ್ರದಲ್ಲಿ ಕಿರುತೆರೆಯ ಜನಪ್ರಿಯ ನಟ ಮೈಕೊ ಮಂಜು ನಟಿಸಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿರುವ ಅವರ ಅಭಿನಯಕ್ಕೆ ಸಂಭಾಷಣೆ ಕಲಶ ಇಟ್ಟಂತಿದೆ. ‘‘ಉತ್ತಮವಾದ ನಿರ್ಧಾರ ಅನುಭವದಿಂದ ಬರುತ್ತದೆ. ಆದರೆ ಅನುಭವ ತಪ್ಪುನಿರ್ಧಾರದಿಂದ ಬರುತ್ತದೆ’’ ಎನ್ನುವ ಮಾತಾಗಲೀ, ‘‘ಕೆಟ್ಟ ಕೆಲಸ ಮಾಡುವಾಗ ಇರದ ಹೆದರಿಕೆ ಒಳ್ಳೆಯದಾಗಿ ಬದಲಾಗುವಾಗ ಯಾಕೆ?’’ ಎನ್ನುವ ಪ್ರಶ್ನೆಯಾಗಲೀ ಮಾರ್ಮಿಕವಾಗಿವೆ. ಪತ್ನಿಯ ಪಾತ್ರದಲ್ಲಿ ಸೌಮ್ಯಾ ಅವರು ತಮ್ಮ ಚಿಕ್ಕ ಪಾತ್ರವನ್ನು ಚೊಕ್ಕವಾಗಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಪ್ರಮುಖ ತಿರುವು ನೀಡುವ ವೇಶ್ಯೆಯ ಪಾತ್ರದಲ್ಲಿ ಸೌಮ್ಯಾ ಗಂಗಟ್ಕಾರ್ ನೀಡಿರುವ ಅಭಿನಯ ಆಕರ್ಷಕ. ಶ್ರೀಧರನ ಅಕ್ಕ ಭಾಗ್ಯಳಾಗಿ ರಶ್ಮಿ ಸಾರಕ್ಕಿ ಮಂಜು ಅವರು ನೆನಪಲ್ಲಿ ಉಳಿಯುವಂತೆ ನಟಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರು ನಾಯಕಿಯರು ಸೇರಿದಂತೆ ಪೋಷಕ ನಟಿಗೂ ಚಿತ್ರದಲ್ಲಿ ಪ್ರಾಧಾನ್ಯತೆ ಇರುವುದರಿಂದ ಕಥಾಹಂದರ ಗಟ್ಟಿಯಾದ ತಳಹದಿಯಲ್ಲೇ ಮೂಡಿದೆ ಎನ್ನಬಹುದು.
ಕುಂದಾಪುರ ಕನ್ನಡ ಭಾಷೆಯೊಂದಿಗೆ ನಟಿಸಿರುವ ಸ್ನೇಹಿತ ರಘು ಪಾತ್ರಧಾರಿ ನಾಗರಾಜ್ ಭಟ್ ಅಗತ್ಯಕ್ಕಿಂತ ಹೆಚ್ಚೇ ನಟಿಸಿದಂತೆ ಕಾಣುತ್ತದೆ! ನಿರ್ದೇಶಕ ವರುಣ್ ಅವರಿಗೆ ಇದು ಪ್ರಥಮ ಸಿನೆಮಾ. ಆದರೆ ಚಿತ್ರ ನೋಡುತ್ತಿದ್ದರೆ ಅಂತಹದ್ದೊಂದು ನೆನಪೇ ಮೂಡಿಸುವುದಿಲ್ಲ ಎನ್ನುವುದು ಅವರ ಕಾರ್ಯವೈಖರಿಗೆ ಸಾಕ್ಷಿ. ಸಿನೆಮಾದಲ್ಲಿ ಒಲ್ಲದ ಮಡದಿಯ ಪ್ರಸ್ಥದ ದೃಶ್ಯವನ್ನು ವಿಭಿನ್ನವಾಗಿ ತೋರಿಸುವಲ್ಲಿಂದ ಕತೆ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಅದಕ್ಕೆ ತಕ್ಕಂತೆ ಹಿತಮಿತವಾಗಿ ಬಳಕೆಯಾಗಿರುವ ಮಾನಸ ಹೊಳ್ಳ ಅವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಆಕರ್ಷಕ ಘಟ್ಟಕ. ಜಿ.ಬಿ. ಸಿದ್ದೇಗೌಡರ ಛಾಯಾಗ್ರಹಣದಲ್ಲಿ ಕಲಾತ್ಮಕತೆ ಇದೆ.
ಹಾಡು, ಹೊಡೆದಾಟಗಳೆಂಬ ಕಮರ್ಷಿಯಲ್ ಚೌಕಟ್ಟುಗಳಿಲ್ಲದೆಯೂ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ವಿಷಯಾಂತರವಾಗದೆ ಸಾಗುವ ಕತೆ ಅದೇ ಕಾರಣಕ್ಕೆ ಒಂದೂವರೆ ಗಂಟೆಯೊಳಗೆ ಪೂರ್ತಿಯಾಗುತ್ತದೆ. ಸಿನೆಮಾವು ಐದು ದಿನಗಳ ಹಿಂದೆ ‘ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿ’ಯಲ್ಲಿ ನೇರವಾಗಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಎ ಸರ್ಟಿಫಿಕೆಟ್ ಇದೆಯಾದರೂ ವಯಸ್ಕರು ಯಾವ ಇರುಸು ಮುರಿಸುಗಳಿಲ್ಲದೆ ‘ಸಾಂಸಾರಿಕ ಚಿತ್ರ’ವಾಗಿ ನೋಡಬಹುದು.
ತಾರಾಗಣ: ಮೈಕೊ ಮಂಜು, ಸೌಮ್ಯಾ ಗಂಗಾಟ್ಕರ್
ನಿರ್ದೇಶನ: ವರುಣ್ ಎಸ್.
ನಿರ್ಮಾಣ: ವರುಣ್ ಎಸ್.