ಉಡುಪಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ಹೆಚ್ಚಿದ ಬೇಡಿಕೆ: ಮಕ್ಕಳ ಪ್ರವೇಶ ಸಂಖ್ಯೆಯಲ್ಲಿ ಹೆಚ್ಚಳ
►ಲಾಕ್‌ಡೌನ್ ಆರ್ಥಿಕ ಸಂಕಷ್ಟದಲ್ಲಿ ಪೋಷಕರು ► ಖಾಸಗಿ ಶಾಲೆಗಳ ಶುಲ್ಕ ಭರಿಸಲು ಸಮಸ್ಯೆ
ಉಡುಪಿ, ಸೆ.2: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಎದುರಾದ ಆರ್ಥಿಕ ಸಂಕಷ್ಟದ ಪರಿಣಾಮ ಪೋಷಕರು ಖಾಸಗಿ ಶಾಲೆಗಳ ಬದಲು ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದು, ಇದರಿಂದ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಈ ಬಾರಿ ಮಕ್ಕಳ ಪ್ರವೇಶ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿದೆ.
ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಸುಮಾರು ಒಂದು ಸಾವಿರ ಮಕ್ಕಳ ಪ್ರವೇಶ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ. ಇದರಲ್ಲಿ ಖಾಸಗಿ ಶಾಲೆಗಳಿಂದ ಬಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಾರ್ಹ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 694 ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, ಅದರಲ್ಲಿ ಸುಮಾರು 79 ಸಾವಿರ ಮಕ್ಕಳಿದ್ದಾರೆ. ಮಾರ್ಚ್ ನಿಂದ ಶಾಲೆಗಳು ತೆರೆಯದಿದ್ದರೂ ಶುಲ್ಕದ ಹೊರೆಯು ಇಂದಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಪೋಷಕರನ್ನು ಬಹಳಷ್ಟು ಜರ್ಜರಿತಗೊಳಿಸಿದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ದುಬಾರಿ ಮೊತ್ತದ ಶುಲ್ಕ ಪಾವತಿ ಸುವುದನ್ನು ತಪ್ಪಿಸಲು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಯಿಂದ ಸರಕಾರಿ ಶಾಲೆಗಳಿಗೆ ದಾಖಲಿಸಿಕೊಂಡಿದ್ದಾರೆ.
ಅದೇ ರೀತಿ ಕೋವಿಡ್-19 ಹಿನ್ನೆಲೆ ಯಲ್ಲಿ ದೂರದಲ್ಲಿರುವ ಖಾಸಗಿ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಸಾಧ್ಯವಾಗದೆ ಹತ್ತಿರದಲ್ಲಿಯೇ ಇರುವ ಸರಕಾರಿ ಶಾಲೆಗಳಿಗೆ ಸೇರಿಸಿದ್ದಾರೆ. ಕೊರೋನ ಹರಡುವ ಭೀತಿಯಲ್ಲಿ ಶಾಲೆ ಆರಂಭವಾದ ಬಳಿಕ ವಾಹನಗಳಲ್ಲಿ ಮಕ್ಕಳು ಶಾಲೆಗೆ ಹೋಗುವ ಬಗ್ಗೆ ಆತಂಕದಿಂದಲೂ ಪೋಷಕರು, ಕಾಲ್ನಡಿಗೆಯಲ್ಲೇ ಹೋಗಿ ಬರಬಹುದಾದ ಸಮೀಪದ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಅಭಿಪ್ರಾಯ ಪಟ್ಟಿದ್ದಾರೆ.
ಆನ್‌ಲೈನ್ ಕಲಿಕೆಗೆ ನೆಟ್‌ವರ್ಕ್ ಸಮಸ್ಯೆ: ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು ಈ ಸಾಲಿನ ಶೈಕ್ಷಣಿಕ ವರ್ಷದ ಕಲಿಕೆ ಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ವಿದ್ಯಾಗಮ ಕಾರ್ಯ ಕ್ರಮದಡಿಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್-ಆ್ಲೈನ್ ಶಿಕ್ಷಣ ನೀಡಲು ಆ.1ರಿಂದ ಆರಂಭಿಸಿದೆ.
ಜಿಲ್ಲೆಯಲ್ಲಿ 694 ಸರಕಾರಿ, 250 ಅನುದಾನಿತ ಹಾಗೂ 280 ಅನುದಾನ ರಹಿತ ಶಾಲೆಗಳಿವೆ. ಇದರಲ್ಲಿ 1ರಿಂದ 8ನೇ ತರಗತಿವರೆಗೆ 1,04,565 ವಿದ್ಯಾರ್ಥಿಗಳು ಮತ್ತು 9, 10ನೇ ತರಗತಿಯಲ್ಲಿ 29,115 ವಿದ್ಯಾರ್ಥಿಗಳು ಸೇರಿದಂದೆ ಒಟ್ಟು 1,33,680 ವಿದ್ಯಾರ್ಥಿಗಳಿದ್ದಾರೆ.
ಇಲಾಖೆಯ ಸರ್ವೇ ಅನ್ವಯ ಜಿಲ್ಲೆಯಲ್ಲಿ 1,14,476 ವಿದ್ಯಾರ್ಥಿಗಳ ಮನೆಗಳಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಹಾಗೂ 1,33,000 ವಿದ್ಯಾರ್ಥಿಗಳ ಮನೆಗಳಲ್ಲಿ ಟವಿ, ರೇಡಿಯೊ ಸೌಲಭ್ಯವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಶೇ.10ರಷ್ಟು ವಿದ್ಯಾರ್ಥಿಗಳಿಗೆ ಈ ಆನ್‌ಲೈನ್ ಕಲಿಕೆಗೆ ನೆಟ್‌ವರ್ಕ್ ಸಮಸ್ಯೆ ಅಡ್ಡಿಯಾಗಿದೆ.
ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶದ ಮಕ್ಕಳನ್ನು ಗುರುತಿಸಿ, ಆಯಾ ಶಾಲಾ ವ್ಯಾಪ್ತಿಯಲ್ಲಿ ವಠಾರ ಶಾಲೆಗಳನ್ನು ಆರಂಭಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿರುವ 694 ಶಾಲೆಗಳ ವ್ಯಾಪ್ತಿಯಲ್ಲಿ ತಲಾ 4-6 ವಠಾರ ಶಾಲೆಗಳನ್ನು ಆರಂಭಿಸಿ, ಶಿಕ್ಷಕರೇ ತೆರಳಿ ಮಕ್ಕಳಿಗೆ ತರಗತಿ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
ನೆಟ್‌ವರ್ಕ್ ಸಮಸ್ಯೆಗೆ ಪರಿಹಾರವಾಗಿ ವಠಾರ ಶಾಲೆಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ಒಟ್ಟು 3,500 ಸರಕಾರಿ ಶಿಕ್ಷಕರ ಪೈಕಿ 3,000 ಶಿಕ್ಷಕರು ಇದರಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಉಳಿದ 500 ಮಂದಿ ಶಿಕ್ಷಕರು ಕೋವಿಡ್-19 ಕರ್ತವ್ಯದಲ್ಲಿದ್ದಾರೆ. ಕೋವಿಡ್ ಕರ್ತವ್ಯದಲ್ಲಿರುವ ಶಿಕ್ಷಕರ ಪಾಠವನ್ನು ಬೇರೆ ಶಿಕ್ಷಕರಿಗೆ ವಹಿಸಿಕೊಡಲಾಗಿದೆ. ಆದರೂ ಅವರು ತಮ್ಮ ಪಾಠದ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.
-ಶೇಷಶಯನ ಕಾರಿಂಜ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ
ಮಕ್ಕಳಿಗೆ ಗುಡ್ಡ ಹತ್ತುವ ಶಿಕ್ಷೆ !
ಆನ್‌ಲೈನ್ ತರಗತಿಗೆ ಮೊಬೈಲ್ ನೆಟ್‌ವರ್ಕ್ ಇಲ್ಲದ ಪರಿಣಾಮ ಗುಡ್ಡ ಗಾಡು ಪ್ರದೇಶ ಸೇರಿದಂತೆ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಸಾಕಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳು ಈ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ. ವಿದ್ಯಾರ್ಥಿಗಳು ತರಗತಿ ಪ್ರಾರಂಭಕ್ಕೆ ಮೊದಲು ಒಂದೋ, ಮನೆ ಹತ್ತಿರ ಇರುವ ಗುಡ್ಡ ಹತ್ತಬೇಕು, ಇಲ್ಲವೇ ಮನೆಯ ಮಹಡಿಯ ಮೇಲೆ ಹತ್ತಿ ಇಂಟರ್‌ನೆಟ್ ಸಂಪರ್ಕಕ್ಕೆ ಪ್ರಯತ್ನಿಸಬೇಕಾಗಿದೆ. ಜಿಲ್ಲೆಯ ಜಡ್ಕಲ್, ಮುದೂರು, ಕೊಲ್ಲೂರು, ಹಾಲ್ಕಲ್, ಮಾವಿನ ಕಾರು, ಬಸ್ರಿಬೇರು, ಮಾರಣಕಟ್ಟೆ, ಇಡೂರು, ಕೆರಾಡಿ, ಬೆಳ್ಳಾಲ, ಮೂಡಮುಂದ, ಹೊಸೂರು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಸುಮಾರು ಶೇ.10ರಷ್ಟು ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.