ಉನ್ನತ- ಸ್ವತಂತ್ರ ನ್ಯಾಯಾಂಗವೆಂಬ ಲೊಳಲೊಟ್ಟೆ
ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳನ್ನು ನಿಂದನೆಯೆಂದು ಪರಿಗಣಿಸುವ ಮೂಲಕ, ಅದಕ್ಕೆ ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಶಿಕ್ಷೆ ವಿಧಿಸುವ ಮೂಲಕ, ಖುದ್ದು ಸುಪ್ರೀಂಕೋರ್ಟೇ ತನ್ನ ನಿಂದನೆಯನ್ನು ಮಾಡಿಕೊಂಡಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಕಳೆದಿದೆ.
ಇದಕ್ಕೆ ವಿರುದ್ಧವಾಗಿ, ತನ್ನ ಸತ್ಯನಿಷ್ಟ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು, ಅದಕ್ಕಾಗಿ ಯಾವುದೇ ಶಿಕ್ಷೆ ವಿಧಿಸಿದರೂ ಅನುಭವಿಸಲು ಸಿದ್ಧವಾಗುವ ಮೂಲಕ ಪ್ರಶಾಂತ್ ಭೂಷಣ್ ಅವರು ದೇಶದ ಮಾನವನ್ನು ಮತ್ತು ಪ್ರತಿಷ್ಠೆಯನ್ನು ಉಳಿಸಿದ್ದಾರೆ.
ಪ್ರಶಾಂತ್ ಭೂಷಣ್ ಅವರಿಂದ ಒತ್ತಾಯಪೂರ್ವಕವಾಗಿ ‘ಕ್ಷಮಾಪಣೆ’ಯನ್ನು ಪಡೆದುಕೊಂಡು ತನ್ನ ಮಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲವಾದ ಸುಪ್ರೀಂಕೋರ್ಟ್‌ನ ಜಸ್ಟಿಸ್ ಅರುಣ್‌ಕುಮಾರ್ ಮಿಶ್ರಾ ಅವರ ಪೀಠ, ಮೊನ್ನೆ, ನ್ಯಾಯಾಂಗ ‘ನಿಂದನೆ’ಗೆ ಒಂದು ರೂಪಾಯಿ ಶಿಕ್ಷೆ ವಿಧಿಸಿದೆ.
ವಾಸ್ತವವಾಗಿ ಪ್ರಶಾಂತ್ ಭೂಷಣ್ ಅವರು ಮಾಡಿದ ಎರಡು ಟ್ವೀಟ್‌ಗಳಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಶಿಕ್ಷೆ ನೀಡಿರುವ ಸುಪ್ರೀಂಕೋರ್ಟ್ ಹೇಗೆ ತಮ್ಮ ಟ್ವೀಟ್‌ಗಳು ನಿಂದನೆಯಲ್ಲ- ವಾಸ್ತವ ಎಂದು ಪ್ರತಿವಾದ ಮಾಡಲು ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಆಗಸ್ಟ್ 14ರಂದು ಸುಪ್ರೀಂಕೋರ್ಟ್ ಏಕಪಕ್ಷೀಯವಾಗಿ ‘ನಿಂದನಾ’ ಆದೇಶವನ್ನು ಮಾಡಿದಾಗಲೇ ಸುಪ್ರೀಂಕೋರ್ಟ್ ನ ಮಾನವನ್ನು ಜಸ್ಟೀಸ್ ಮಿಶ್ರಾ ಅವರ ಪೀಠ ಹರಾಜುಹಾಕಿಯಾಗಿತ್ತು.
ಸುಪ್ರೀಂ ಮಾಡಿದ್ದೂ ನ್ಯಾಯ ಪ್ರಕ್ರಿಯೆಗಳ ನಿಂದನೆಯೇ!
ಅದಕ್ಕೂ ಮುಂಚೆ ಪ್ರಶಾಂತ್ ಭೂಷಣ್‌ರ ಟ್ವೀಟನ್ನು ಸ್ವಪ್ರೇರಣೆಯಿಂದ ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತಷ್ಟೆ. ಕೋವಿಡ್ ಸಂದರ್ಭದಲ್ಲಿ ಜನರ ಮಾನ, ಪ್ರಾಣ, ಬದುಕು ಮತ್ತು ಉದ್ಯೋಗಗಳ ಬಗ್ಗೆ ನೂರಾರು ಪ್ರಕರಣಗಳು ವಿಚಾರಣೆಯಾಗದೆ ನೆನೆಗುದಿಗೆ ಬಿದ್ದಿದ್ದರೂ ಈ ನ್ಯಾಯಾಂಗ ನಿಂದನೆಯೆಂಬ ವಿಷಯಕ್ಕೆ ತುರ್ತುಪೀಠವೊಂದನ್ನು ರಚಿಸುವ ಮೂಲಕವೂ ಸುಪ್ರೀಂಕೋರ್ಟ್ ತನ್ನ ನಿಂದನೆಯನ್ನು ತಾನೇ ಮಾಡಿಕೊಂಡಿತ್ತು. ಮೇಲಾಗಿ ಜಸ್ಟೀಸ್ ಅರುಣ್‌ಕುಮಾರ್ ಮಿಶ್ರಾ ಅವರಿಗೆ ವಕೀಲ ಪ್ರಶಾಂತ್ ಭೂಷಣ್ ಅವರ ಬಗ್ಗೆ ವಿಶೇಷ ಪೂರ್ವಾಗ್ರಹಗಳಿರುವುದು ಲೋಕವಿದಿತವಾಗಿ ದ್ದರೂ, ಭೂಷಣ್ ಅವರ ವಕೀಲರು ಇದೇ ಕಾರಣವನ್ನು ಮುಂದೊಡ್ಡಿ ನ್ಯಾಯಸಮ್ಮತ ವಿಚಾರಣೆ ನಡೆಯುವಂತಾಗಲು ಈ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕೆಂದು ವಿನಂತಿಸಿದರೂ, ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಹಠ ಹಿಡಿದು ಜಸ್ಟೀಸ್ ಮಿಶ್ರಾ ಅವರ ನೇತೃತ್ವದ ಪೀಠವನ್ನು ರಚಿಸುವ ಮೂಲಕವೂ ದೇಶದ ಉನ್ನತ ನ್ಯಾಯಾಂಗ ನಿಷ್ಪಕ್ಷಪಾತಿ ನ್ಯಾಯಪ್ರಕ್ರಿಯೆಗಳ ನಿಂದನೆ ಮಾಡಿಬಿಟ್ಟಿತ್ತು.
ಇನ್ನು ವಿಚಾರಣೆಯ ಸಂದರ್ಭದಲ್ಲಿ ‘‘ತುರ್ತುಪರಿಸ್ಥಿತಿಯನ್ನು ಔಪಚಾರಿಕವಾಗಿ ಘೋಷಿಸದೆಯೇ ಕಳೆದ ಆರು ವರ್ಷಗಳಲ್ಲಿ ಈ ದೇಶದಲ್ಲಿ ಪ್ರಜಾತಂತ್ರ ಅಧಃಪತನಗೊಳ್ಳುವಲ್ಲಿ ಹಿಂದಿನ ನಾಲ್ವರು ಮುಖ್ಯ ನ್ಯಾಯಾಧೀಶರ ಪಾತ್ರವೂ’’ ಹೇಗೆ ಕಾರಣವಾಗಿದೆ ಎಂಬ ಭೂಷಣ್‌ರ ಹೇಳಿಕೆಯ ವಾಸ್ತವಿಕತೆಯನ್ನು ಸಾಬೀತುಪಡಿಸಲು ಅವಕಾಶ ಕೊಡದೆಯೇ ಮಿಶ್ರಾ ಅವರ ಪೀಠ ಅದನ್ನು ನಿಂದನೆಯೆಂದು ತೀರ್ಮಾನಿಸಿಬಿಟ್ಟಿತು. ಹಾಗೆಯೇ ‘‘ಮುಖ್ಯ ನ್ಯಾಯಾಧೀಶ ಬೋಬ್ಡೆಯವರು ದೇಶವೆಲ್ಲವೂ ಕೋವಿಡ್ ಲಾಕ್‌ಡೌನ್‌ನಲ್ಲಿರಬೇಕಾದರೆ ಆಡಳಿತರೂಢ ಪಕ್ಷದಿಂದ ಐಷಾರಾಮಿ ಬೈಕ್ ಒಂದನ್ನು ಸ್ವೀಕರಿಸಿ ಹೆಲ್ಮೆಟ್ ಮತ್ತು ಮಾಸ್ಕ್ ಇಲ್ಲದೆ ಓಡಿಸುತ್ತಿದ್ದಾರೆ’’ ಎಂದು ಮಾಡಿದ ಟ್ವೀಟ್ ವಾಸ್ತವಿಕ ವರದಿಯೇ ಹೊರತು ನಿಂದನೆಯಲ್ಲ ಎಂದು ಸಾಬೀತು ಪಡಿಸಲು ಕೂಡಾ ಕೋರ್ಟ್ ಅವಕಾಶ ಕೊಡಲಿಲ್ಲ.
ಏಕೆಂದರೆ ಅದಕ್ಕೆ ಅವಕಾಶ ಕೊಟ್ಟಿದ್ದರೆ ಕೋರ್ಟ್‌ನ ಮಾನ ಒಂದು ರೂಪಾಯಿಗಲ್ಲ... ಮೂರು ಕಾಸಿಗೆ ಹರಾಜಾಗುತ್ತಿತ್ತು. ಹೀಗೆ ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳನ್ನು ನಿಂದನೆಯೆಂದು ಪರಿಗಣಿಸುವ ಮೂಲಕ, ಅದಕ್ಕೆ ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಶಿಕ್ಷೆ ವಿಧಿಸುವ ಮೂಲಕ, ಖುದ್ದು ಸುಪ್ರೀಂ ಕೋರ್ಟೇ ತನ್ನ ನಿಂದನೆಯನ್ನು ಮಾಡಿಕೊಂಡಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಕಳೆದಿದೆ.
ಇದಕ್ಕೆ ವಿರುದ್ಧವಾಗಿ, ತನ್ನ ಸತ್ಯನಿಷ್ಟ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು, ಅದಕ್ಕಾಗಿ ಯಾವುದೇ ಶಿಕ್ಷೆ ವಿಧಿಸಿದರೂ ಅನುಭವಿಸಲು ಸಿದ್ಧವಾಗುವ ಮೂಲಕ ಪ್ರಶಾಂತ್ ಭೂಷಣ್ ಅವರು ದೇಶದ ಮಾನವನ್ನು ಮತ್ತು ಪ್ರತಿಷ್ಠೆಯನ್ನು ಉಳಿಸಿದ್ದಾರೆ. ಅದೇ ಸಮಯದಲ್ಲಿ, ಕರ್ಣನ್ ಅವರ ಪ್ರಕರಣದ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್ ಸ್ಥಾನದಲ್ಲಿ ಬೇರೆಯವರು ಇದ್ದಿದ್ದರೆ ಸುಪ್ರೀಂಕೋರ್ಟ್ ಇಷ್ಟು ಕಡಿಮೆ ಶಿಕ್ಷೆ ಕೊಡುತ್ತಿತ್ತೇ ಎಂಬ ಗಂಭೀರವಾದ ಪ್ರಶ್ನೆಯನ್ನು ಮುಲಾಜಿಲ್ಲದೆ ಕೇಳಬೇಕಿದೆ. ಆದರೆ ಅದೇ ಸಮಯದಲ್ಲಿ ಪ್ರಶಾಂತ್ ಭೂಷಣ್ ನಡೆಸಿದ ತಾತ್ವಿಕ ಹೋರಾಟ ಮತ್ತು ಈ ದೇಶಕ್ಕೆ ಗಳಿಸಿಕೊಟ್ಟ ನೈತಿಕ ಗೆಲುವಿಗೆ ಅವರನ್ನು ಅಭಿನಂದಿಸಬೇಕಿದೆ. ಹಾಗೂ ನ್ಯಾಯಾಂಗದ ಪ್ರಜಾತಾಂತ್ರೀಕರಣದ ಹೋರಾಟವನ್ನು ಯಾವುದೇ ಬೆಲೆ ತೆತ್ತಾದರೂ ಮುಂದುವರಿಸಲೇ ಬೇಕಿದೆ.
ಉನ್ನತ ನ್ಯಾಯಾಂಗ ಎಷ್ಟು ಉನ್ನತ?
ಪ್ರಶಾಂತ್ ಭೂಷಣ್ ಮತ್ತು ಕರ್ಣನ್ ಅವರಿಬ್ಬರೂ ತಮ್ಮದೇ ಆದ ರೀತಿಗಳಲ್ಲಿ ಉನ್ನತ ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಗೆ ಕ್ಯಾನ್ಸರ್ ಹತ್ತಿದೆ ಎಂಬ ಅತ್ಯಂತ ಕಳವಳಕಾರಿಯಾಗಿರುವ ಸತ್ಯವನ್ನು ಹೊರಗೆಡವಿದ್ದಾರೆ. ಹಾಗೆ ನೋಡಿದರೆ ಇದನ್ನು 2012ರಲ್ಲಿ ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಪಕ್ಷದ ನಾಯಕರೇ ಸಂಸತ್ತಿನಲ್ಲಿ ಹೇಳಿದ್ದರು.
ಉದಾಹರಣೆಗೆ ರಾಜ್ಯಸಭೆಯಲ್ಲಿ ಆಗ ಬಿಜೆಪಿ ಪಕ್ಷದ ನಾಯಕರಾಗಿದ್ದ ಅರುಣ್‌ಜೇಟ್ಲಿಯವರು ‘‘ಈ ದೇಶದಲ್ಲಿ ಕೆಲವು ನ್ಯಾಯಾಧೀಶರಿಗೆ ಮಾತ್ರ ಕಾನೂನು ಗೊತ್ತು. ಇನ್ನುಳಿದವರಿಗೆ ಕೇವಲ ಕಾನೂನು ಮಂತ್ರಿ ಮಾತ್ರ ಗೊತ್ತು’’ ಎಂದು ಹೇಳಿದ್ದರು.
‘‘ನ್ಯಾಯಾಧೀಶರ ನಿವೃತ್ತಿಪೂರ್ವ ತೀರ್ಮಾನಗಳು ನಿವೃತ್ತಿಯ ನಂತರದ ಸೌಲಭ್ಯಗಳ ಲಾಲಸೆಯಿಂದ ಪ್ರಭಾವಿತವಾಗಿರುತ್ತವೆ’’ ಎಂದು ಕೂಡಾ ಹೇಳಿದ್ದರು. ನಿತಿನ್ ಗಡ್ಕರಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘‘ನಿವೃತ್ತಿಯಾದ ನಂತರ ಕನಿಷ್ಠ ಎರಡು ವರ್ಷಗಳ ಕಾಲ ನ್ಯಾಯಾಧೀಶರು ಯಾವ ಸಾರ್ವಜನಿಕ ಹುದ್ದೆಯನ್ನೂ ಅಲಂಕರಿಸದಿದ್ದರೆ ಮಾತ್ರ ನ್ಯಾಯಾಂಗದ ಬಗ್ಗೆ ಜನರಿಗೆ ಗೌರವ ಉಳಿಯುತ್ತದೆ’’ ಎಂದು ಹೇಳಿದ್ದರು.
ಆದರೆ ಇದೇ ಬಿಜೆಪಿ ಪಕ್ಷವೇ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಗುಜರಾತಿನ ಕ್ರಿಮಿನಲ್ ಕೇಸುಗಳಲ್ಲಿ ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷರನ್ನು ಬಚಾವು ಮಾಡಿದರೆಂಬ ಸಾರ್ವಜನಿಕ ಆರೋಪ ಹೊತ್ತಿದ್ದ ಸುಪ್ರೀಂಕೋರ್ಟ್ ನ ಆಗಿನ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ನಿವೃತ್ತರಾದ ನಾಲ್ಕೇ ತಿಂಗಳಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿತು. ಮುಖ್ಯ ನ್ಯಾಯಾಧೀಶರಾಗಿದ್ದಾಗ ರಾಜಕೀಯವಾಗಿ ಅತ್ಯಂತ ವಿವಾದಾಸ್ಪದವಾಗಿದ್ದ ಎಲ್ಲಾ ಪ್ರಕರಣಗಳಲ್ಲೂ ಆಡಳಿತರೂಢ ಬಿಜೆಪಿ ಪಕ್ಷದ ಪರವಾಗಿ ಆದೇಶ ನೀಡಿದ ರಂಜನ್ ಗೊಗೋಯಿ ಅವರನ್ನು ನಿವೃತ್ತರಾದ ಕೇವಲ ಮೂರೇ ತಿಂಗಳಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿತು.
ಈ ರೀತಿ ಪೀಠದಲ್ಲಿರುವವರ ನಿಷ್ಟೆಗಳು ಮೇಲ್ನೋಟಕ್ಕೆ ಸಂದೇಹಾಸ್ಪದವೆಂದು ಸ್ಪಷ್ಟವಾಗಿ ಕಂಡುಬರುತ್ತಿರುವಾಗ ಅದನ್ನು ಪ್ರಶ್ನಿಸುವುದು ಮಾತ್ರ ಹೇಗೆ ನಿಂದನೆಯಾಗುತ್ತದೆ?
ಯುವರ್ ಆನರ್, ನ್ಯಾಯದಂಡಗಳು ಬದಲಾದದ್ದು ಕಾಕತಾಳಿಯವೇ?
2016ರ ಆಗಸ್ಟ್ 9ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕಾಲಿಕೋ ಪೂಲ್ ಅವರು ಒಂದು ಮರಣ ಹೇಳಿಕೆಯನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಅದರ ಪ್ರಕಾರ ರಾಜ್ಯದಲ್ಲಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿರುವ ಕೇಸಿನಲ್ಲಿ ತನ್ನ ಪರವಾಗಿ ತೀರ್ಮಾನ ಮಾಡಲು ಸುಪ್ರೀಂಕೋರ್ಟ್‌ನ ಆಗಿನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಖೇಹರ್ ಅವರ ಮಗ ಅಪಾರ ಮೊತ್ತದ ಲಂಚವನ್ನು ಕೇಳಿದ್ದರು. ಅದನ್ನು ತಾನು ಭರಿಸಲಾಗುವುದಿಲ್ಲವಾದ್ದರಿಂದ ತನಗೆ ನ್ಯಾಯ ಸಿಗುವುದಿಲ್ಲವೆಂದು ಖಾತರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ದಾಖಲಿಸಿದ್ದರು. ಅದರ ಬಗ್ಗೆ ಸಿಬಿಐ ತನಿಖೆ ನಡೆಸುವ ಹುಯಿಲೆದ್ದಿತ್ತು. ಆಮೇಲೆ ಅದು ಮುಚ್ಚಿಹೋಯಿತು. 2016ರ ಆಗಸ್ಟ್ 9ರ ನಂತರ ಜಸ್ಟೀಸ್ ಖೇಹರ್ ಅವರ ಆದೇಶಗಳು ಕೇಂದ್ರ ಸರಕಾರದ ವಿರುದ್ಧ ಬರಲಿಲ್ಲ.
ಖೇಹರ್ ಅವರ ನಂತರ ದೀಪಕ್ ಮಿಶ್ರಾ ಅವರು ಮುಖ್ಯ ನ್ಯಾಯಾಧೀಶ ರಾದರು. ಅವರ ಮೂಲ ರಾಜ್ಯವಾದ ಒಡಿಶಾದಲ್ಲಿ ಮೆಡಿಕಲ್ ಕಾಲೇಜು ಹಗರಣದಲ್ಲಿ ಕೆಳಹಂತದ ನ್ಯಾಯಾಧೀಶರು ಎರಡುಕೋಟಿ ಲಂಚದ ಹಣದೊಂದಿಗೆ ಪತ್ತೆಯಾಗಿ ಬಂಧನಕ್ಕೊಳಗಾದರು. ಆ ಪ್ರಕರಣವೂ ಸಿಬಿಐ ವಿಚಾರಣೆಗೆ ಒಳಪಟ್ಟು ದೀಪಕ್ ಮಿಶ್ರಾ ಅವರ ಹೆಸರು ಕೂಡಾ ಅಲ್ಲಲ್ಲಿ ಕೇಳಿಬರುತ್ತಿತ್ತು. ವಿಷಯ ಸುಪ್ರೀಂಕೋರ್ಟ್‌ಗೆ ಬಂದಾಗ ಅವರ ನೆಚ್ಚಿನ ನ್ಯಾಯಾಧೀಶರಾದ ಜಸ್ಟೀಸ್ ಅರುಣ್ ಮಿಶ್ರಾ ಅವರ ಬೆಂಚಿಗೇ ವರ್ಗಾಯಿಸಲಾಯಿತು. ಸಿಬಿಐ ತನಿಖೆ ಮುಂದುವರಿಯಲಿಲ್ಲ. ತದ ನಂತರದಲ್ಲೇ ಅಮಿತ್ ಶಾ ಅವರ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಜಸ್ಟೀಸ್ ಲೋಯಾ ಅವರ ಅನುಮಾನಾಸ್ಪದ ಸಾವಿನ ಮರು ವಿಚಾರಣೆಯ ಅರ್ಜಿಯನ್ನು ದೀಪಕ್‌ಮಿಶ್ರಾ ಅವರು ಅರುಣ್ ಮಿಶ್ರಾ ಅವರ ಪೀಠಕ್ಕೆ ವರ್ಗಾಯಿಸಿದರು ಮತ್ತು ಅವರು ಆ ಅರ್ಜಿಯನ್ನು ವಜಾ ಮಾಡಿದರು. ಇವೆರಡೂ ಕಾಕತಾಳಿಯವೇ?
ಅಲ್ಲವೇ ಅಲ್ಲ ಎಂದು ಹೇಳಿದ್ದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶರೇ.. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರು 2018ರ ಜನವರಿ 18ರಂದು ಬಹಿರಂಗ ಪತ್ರಿಕಾಗೋಷ್ಟಿಯನ್ನು ನಡೆಸಿ ಆಗಿನ ಮುಖ್ಯ ನ್ಯಾಯಾಧೀಶ ದೀಪಕ್‌ಮಿಶ್ರಾ ಅವರ ಮೇಲೆ ಪ್ರಶಾಂತ್ ಭೂಷಣ್ ಮಾಡುತ್ತಿರುವ ಆರೋಪಗಳನ್ನೆಲ್ಲಾ ಮಾಡಿದ್ದರು. ನಾಲ್ವರು ಹಿರಿಯ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದ ರಂಜನ್‌ಗೊಗೋಯಿ ಅವರು ನಂತರ ಮುಖ್ಯ ನ್ಯಾಯಾಧೀಶರಾಗಿದ್ದರು. ತಮ್ಮ ಮಹಿಳಾ ಸಹೋದ್ಯೋಗಿಯೋರ್ವರ ಜೊತೆ ಅವರ ವರ್ತನೆಗಳ ಬಗ್ಗೆ ದೂರು ದಾಖಲಾದ ನಂತರ ಗೊಗೋಯಿ ಅವರೂ ಸಹ ದೀಪಕ್ ಮಿಶ್ರಾ ರೀತಿಯಲ್ಲೇ ವರ್ತಿಸಿದರು. ಆ ಕೇಸಿನಲ್ಲಿ ಸರಕಾರ ಗಟ್ಟಿಯಾಗಿ ಗೊಗೋಯಿ ಪರವಾಗಿ ನಿಂತಿತು. ನಂತರದಲ್ಲಿ ಗೊಗೋಯಿ ಕೊಟ್ಟ ಎಲ್ಲ ತೀರ್ಪುಗಳೂ ಮೋದಿ ಸರಕಾರದ ಪರವಾಗಿದ್ದವು.
ಇವು ಕೂಡಾ ಕಾಕತಾಳೀಯವೇ?
ಇದೇ ಬಗೆಯ ಬೆಳವಣಿಗೆಗಳು ಶಾಸಕಾಂಗ ಅಥವಾ ಕಾರ್ಯಾಂಗದಲ್ಲಿ ನಡೆದಿದ್ದರೆ ಸಮಾಜ ಹಾಗೂ ನ್ಯಾಯಾಂಗ ಸುಮ್ಮನಿರುತ್ತಿತ್ತೇ? ನಿಷ್ಪಕ್ಷಪಾತ ತನಿಖೆಯನ್ನು ಕೇಳುತ್ತಿರಲಿಲ್ಲವೇ? ಹಾಗಿದ್ದಲ್ಲಿ ಅದೇ ಪ್ರಶ್ನೆಯನ್ನು ನ್ಯಾಯಾಂಗದ ಬಗ್ಗೆ ಕೇಳಿದರೆ ನ್ಯಾಯಾಂಗ ನಿಂದನೆ ಹೇಗಾದೀತು?
ಸುಪ್ರೀಂ ಭ್ರಷ್ಟಾಚಾರ-ಅಪರೂಪವೋ? ಸಾಂಸ್ಥಿಕವೋ?
2020ರಲ್ಲಿ ಸಿಂಗಾಪೂರದ ಮೂರು ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಒಟ್ಟುಗೂಡಿ ಭಾರತದ ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಅಧ್ಯಯನ ನಡೆಸಿದ್ದಾರೆ. ಆ ವರದಿಯು Jobs for Justice(s): Corruption in the Supreme Court of India ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ಅವರು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರಕಾರವೂ ಪಾರ್ಟಿಯಾಗಿರುವ 2,000ಕ್ಕೂ ಹೆಚ್ಚು ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಎಷ್ಟು ತೀರ್ಮಾನಗಳು ಬಂದಿವೆ ಮತ್ತು ಅಂತಹ ತೀರ್ಮಾನಗಳನ್ನು ಕೊಟ್ಟ ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ಯಾವುದಾದರೂ ಲಾಭಗಳಾಗಿವೆಯೇ ಎಂಬುದು ಅವರ ಅಧ್ಯಯನದ ವಸ್ತು.
jobs for Justice(s): Corruption in the Supreme Court of India ವರದಿಯ ಪ್ರಕಾರ ಕೇಂದ್ರ ಸರಕಾರದ ಪರವಾಗಿ ತೀರ್ಮಾನ ನೀಡಿದ ಶೇ. 93ಕ್ಕಿಂತಲೂ ಹೆಚ್ಚಿನ ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ಹಲವು ಬಗೆಯ ಲಾಭಗಳಾಗಿವೆ.
ಅವರ ಅಧ್ಯಯನದ ಪ್ರಕಾರ ಈ ಬಗೆಯಲ್ಲಿ ತೀರ್ಪುಕೊಟ್ಟ 40ಕ್ಕೂ ಹೆಚ್ಚು ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ರಾಜ್ಯಪಾಲ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ರಾಯಭಾರಿ, ವಿದ್ಯುತ್ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ, ಅಂತರ್‌ರಾಷ್ಟ್ರೀಯ ಕೋರ್ಟ್‌ನ ಸದಸ್ಯ ನ್ಯಾಯಾಧೀಶ ಸ್ಥಾನ, ಲಾ ಕಮಿಷನ್‌ಅಧ್ಯಕ್ಷ, ಗ್ರಾಹಕ ವ್ಯಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಹಸಿರು ಪೀಠ ಇನ್ನಿತ್ಯಾದಿ ಹತ್ತು ಹಲವು ಪುನರ್ವಸತಿಗಳನ್ನು ಮಾಡಿಕೊಡಲಾಗಿದೆ. ಹೀಗಾಗಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕಪೋಲ ಕಲ್ಪಿತವೂ ಅಲ್ಲ. ವ್ಯಕ್ತಿಗತವಾದದ್ದೂ ಅಲ್ಲ. ಅದು ಸಾಂಸ್ಥಿಕವಾಗಿದೆ.
ಸಾಂಸ್ಥಿಕ ಕೇಸರೀಕರಣ?
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಜೊತೆಗೆ ಸ್ಪಷ್ಟವಾದ ಹಿಂದೂತ್ವವಾದಿ ಹಾಗೂ ಕಾರ್ಪೊರೇಟ್ ಪರವಾದಿ ನ್ಯಾಯ ಸಂಹಿತೆ ಸಾಂಸ್ಥಿಕವಾಗಿಯೇ ಈ ದೇಶದ ಉನ್ನತ ನ್ಯಾಯಾಂಗವನ್ನು ಆವರಿಸಿಕೊಳ್ಳುತ್ತಿದೆ. ಒಂದೆಡೆ ಅತ್ಯುನ್ನತ ನ್ಯಾಯಾಂಗದಲ್ಲಿ ಮೀಸಲಾತಿಯೂ ಇಲ್ಲದಿರುವುದರಿಂದ ಅದೂ ಕೂಡಾ ಮೇಲ್ಜಾತಿ ಮತ್ತು ಮೇಲ್ವರ್ಗದ ಪುರುಷರ ಪಂಚಾಯತ್‌ಕಟ್ಟೆಯಾಗಿ ಬಿಟ್ಟಿದೆ. ಇದು ಸಹಜವಾಗಿಯೇ ನ್ಯಾಯಾಂಗದಲ್ಲಿ ಕಳೆದ ಆರು ವರ್ಷಗಳಲ್ಲಿ ಬಲವಾಗಿ ಬೀಸುತ್ತಿರುವ ಬಲಪಂಥೀಯ ಬಿರುಗಾಳಿಗೆ ನ್ಯಾಯಾಂಗವು ಸೈದ್ಧಾಂತಿಕವಾಗಿಯೇ ಮತ್ತು ಸಹಜವಾಗಿಯೇ ಒಗ್ಗುವಂತೆ ಮತ್ತು ಬಗ್ಗುವಂತೆ ಮಾಡಿದೆ. ನೆಪಮಾತ್ರಕ್ಕೆ ಒಂದಿಬ್ಬರು ಮಹಿಳೆಯರು, ಮುಸ್ಲಿಮರು, ಒಬ್ಬ ದಲಿತರು ಇದ್ದರೂ ಆ ಮಹಾಶಯರುಗಳು ತಮ್ಮ ಬಲಪಂಥೀಯಪರತೆಯನ್ನು ಇತರಿಗಿಂತ ಹೆಚ್ಚು ನಿಷ್ಟವಾಗಿ ಪ್ರದರ್ಶಿಸುತ್ತಿದ್ದಾರೆ. ನ್ಯಾಯಾಂಗದ ಕೇಸರೀಕರಣ ವಾಸ್ತವ ಸ್ಥಿತಿಯಾಗಿದೆ. ಅದು ಭಾರತದ ಪ್ರಜಾಸತ್ತೆಗೆ ಅತ್ಯಂತ ದೊಡ್ಡ ಕಂಟಕವಾಗಿದೆ. ಹೀಗಾಗಿ ಅದರ ಮರುಪ್ರಜಾತಾಂತ್ರೀಕರಣದ ಹೋರಾಟವನ್ನು ಒಬ್ಬಿಬ್ಬರು ಮಹನೀಯರಿಗೆ ವಹಿಸಿ ಸುಮ್ಮನಿರಲಾಗುವುದಿಲ್ಲ. ನ್ಯಾಯಾಂಗದ ಪ್ರಜಾತಾಂತ್ರೀಕರಣ ಈ ದೇಶದ ಎಲ್ಲಾ ಜನಪರ ಹೋರಾಟಗಳ ಅಜೆಂಡಾ ಆಗಬೇಕಿದೆ.