ರಾಜ್ಯದಲ್ಲಿ ಹೆಚ್ಚುತ್ತಿವೆ ‘ಬಿಪಿಎಲ್’ ಜಿಲ್ಲೆಗಳು!
ಪ್ರಾದೇಶಿಕ ಅಸಮಾನತೆ ಕುರಿತು ನಂಜುಂಡಪ್ಪವರದಿಗೆ ಇಪ್ಪತ್ತೈದು ವರ್ಷಗಳು ಕಳೆದರೂ ರಾಜ್ಯದ ಕೆಲವು ಜಿಲ್ಲೆಗಳ ಪರಿಸ್ಥಿತಿ ಏನೂ ಬದಲಾಗಿಲ್ಲ. ಎಪಿಎಲ್ ಜಿಲ್ಲೆಗಳಿಗಿಂತ ಬಿಪಿಎಲ್ ಜಿಲ್ಲೆಗಳ ಸಂಖ್ಯೆ ವರ್ಷ ವರ್ಷ ಹೆಚ್ಚಾಗುತ್ತಿರುವಂತೆ ಅಧ್ಯಯನಗಳು ಹೇಳುತ್ತಿವೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳು ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆ ಕಂಡರೆ ಇನ್ನು ಕೆಲವು ಜಿಲ್ಲೆಗಳು ಅಭಿವೃದ್ಧಿಯ ವಿಚಾರದಲ್ಲಿ ಪಾತಾಳ ನೋಡುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿ ಇನ್ನೂ ಕನಸಾಗಿ ಉಳಿದುಕೊಂಡಿದೆ. ಸರಕಾರದ ಹೆಚ್ಚಿನ ಕಾರ್ಯಕ್ರಮಗಳು ಬೆಂಗಳೂರು ಸೇರಿದಂತೆ ಒಂದೆರಡು ಜಿಲ್ಲೆಗಳನ್ನು ಬಿಟ್ಟು ಹೊರಬರುವಂತೆ ಕಾಣುತ್ತಿಲ್ಲ. ಸರಕಾರಗಳು ಬೆಂಗಳೂರನ್ನು ಬಿಟ್ಟರೆ ಬೇರೆ ಜಿಲ್ಲೆಗಳು ನಮ್ಮಲ್ಲಿ ಇವೆ ಎಂಬುದನ್ನು ಮರೆತಂತೆ ಕಾಣುತ್ತಿದೆ. ಯಾವುದೇ ಬಜೆಟ್‌ನಲ್ಲಿ ಬೆಂಗಳೂರು ಮತ್ತು ಅದರ ಅಕ್ಕ ಪಕ್ಕದ ಕೆಲವು ಜಿಲ್ಲೆಗಳು ಸಿಂಹಪಾಲು ಪಡೆಯುತ್ತಿವೆ. ಉತ್ತರ ಕರ್ನಾಟಕದ ಹಾವೇರಿ, ಯಾದಗಿರಿ, ಕೊಪ್ಪಳ, ಗದಗ, ರಾಯಚೂರು, ಗುಲ್ಬರ್ಗ, ವಿಜಯಪುರ ಬೀದರ್‌ನಂತಹ ಜಿಲ್ಲೆಗಳನ್ನು ಬಿಪಿಎಲ್ ಜಿಲ್ಲೆಗಳು ಎಂದೇ ನಾವು ಪರಿಗಣಿಸಬಹುದು (ಬಿಪಿಎಲ್ ಎಂದರೆ ಅತೀ ಹಿಂದುಳಿದ ಜಿಲ್ಲೆಗಳು ಎಂಬರ್ಥ).
ಆರ್ಥಿಕ ತಜ್ಞರ ಪ್ರಕಾರ ತಲಾದಾಯ ರೂ.ಒಂದು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರುವ ಜಿಲ್ಲೆಗಳನ್ನು ಬಿಪಿಎಲ್ ಜಿಲ್ಲೆಗಳೆಂದು ಗುರುತಿಸಬಹುದು. ತಲಾ ಆದಾಯ ರೂ. ಒಂದು ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಎಪಿಎಲ್ ಜಿಲ್ಲೆಗಳೆಂದು ಪರಿಗಣಿಸಬಹುದು. ಅಂದರೆ ಬಡತನ ರೇಖೆಗಿಂತ ಮೇಲಿರುವ ಜಿಲ್ಲೆಗಳು ಎಂದರ್ಥ. ಬೆಂಗಳೂರು ನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಉತ್ತರ ಕನ್ನಡ, ತುಮಕೂರು ಮುಂತಾದವು ಈ ವರ್ಗಕ್ಕೆ ಸೇರಿಕೊಳ್ಳುತ್ತವೆ. ಇತ್ತೀಚಿನ ವರದಿಗಳ ಪ್ರಕಾರ ಈ ಜಿಲ್ಲೆಗಳ ತಲಾ ವರಮಾನ ರೂ. 1.4 ಲಕ್ಷ ರೂ. ವರೆಗೆ ಇತ್ತೀಚಿನ ದಿನಗಳಲ್ಲಿ ಏರಿದೆ ಎನ್ನುತ್ತವೆ ಅಧ್ಯಯನಗಳು. ಆರ್ಥಿಕ ಪ್ರಗತಿಯ ವಿಚಾರವನ್ನು ತೆಗೆದುಕೊಂಡರೆ 1995ರಿಂದ 2018-19ರ ಅವಧಿಯಲ್ಲಿ ರಾಜ್ಯದ ಎಪಿಎಲ್ ಜಿಲ್ಲೆಗಳು ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಮತ್ತೆ ಬಿಪಿಎಲ್ ಜಿಲ್ಲೆಗಳು ಮಂದಗತಿಯ ಬೆಳವಣಿಗೆಯನ್ನು ಕಂಡಿವೆ. (ವಿದ್ಯಾಶಂಕರ್,2019).
ರಾಷ್ಟ್ರದ ವಿವಿಧ ಆರ್ಥಿಕ ಸಮೀಕ್ಷೆ ಮತ್ತು ಸರ್ವೇಗಳ ಪ್ರಕಾರ ಕಳೆದ ಇಪ್ಪತ್ತು ವರ್ಷಗಳಲ್ಲಿ ಉತ್ತರ ಕರ್ನಾಟಕದ ಒಂದೆರಡು ಜಿಲ್ಲೆಗಳು ಮಾತ್ರ ಬೆಳವಣಿಗೆ ದರದಲ್ಲಿ ಶೇ.18ರಷ್ಟು ಏರಿಕೆ ಕಂಡಿವೆ. ಮಂಡ್ಯ, ಧಾರವಾಡ, ಹಾಸನ, ತುಮಕೂರು ಜಿಲ್ಲೆಗಳು ಶೇ. 15ರಷ್ಟು ಮಾತ್ರ ಬೆಳವಣಿಗೆ ಕಂಡಿವೆ. ಇವುಗಳ ಮಧ್ಯೆ ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆ ಸರಾಸರಿ 14ರಿಂದ 15ರಷ್ಟು ಬೆಳವಣಿಗೆ ಕಂಡಿವೆ ಎನ್ನುತ್ತವೆ ವರದಿಗಳು. 2018-19ರ ಆರ್ಥಿಕ ಸಮೀಕ್ಷೆ ಮತ್ತು ಸರ್ವೇಗಳ ಪ್ರಕಾರ ರಾಜ್ಯದ ಕೆಲವು ಜಿಲ್ಲೆಗಳು ಉದಾರೀಕರಣ ಮತ್ತು ಖಾಸಗೀಕರಣದಿಂದ ತಕ್ಕಮಟ್ಟಿಗೆ ಪ್ರಯೋಜನ, ಕೆಲವು ಅತಿಯಾದ ಪ್ರಯೋಜನ ಪಡೆದುಕೊಂಡಿವೆ. ಇದರಿಂದ ಬೆಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಲಾ ವರಮಾನ ಸಹ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಆಗಿರುವುದನ್ನು ಗಮನಿಸಬಹುದು. ಈ ಗುಂಪಿನಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ರಾಮನಗರದಂತಹ ಅರೆ ಬಿಪಿಎಲ್ ಜಿಲ್ಲೆಗಳು ಎಪಿಎಲ್ ಜಿಲ್ಲೆಗಳಿಗೆ ತಲಾ ವರಮಾನದಲ್ಲಿ ಪೈಪೋಟಿ ಕೊಡುತ್ತಿವೆ. ಆದರೆ ಅದು ಸಾಲುತ್ತಿಲ್ಲ. ಸಮೃದ್ಧ ಕೃಷಿ ಭೂಮಿ ಹೊಂದಿರುವ ಮಂಡ್ಯದ ತಲಾ ಆದಾಯ ಕೇವಲ ರೂ. 1.29 ಲಕ್ಷ. ಇದಕ್ಕೆ ಹೋಲಿಸಿದರೆ ಕರ್ನಾಟಕದ ಬಾಗಲಕೋಟೆ ಸಾಧನೆ (ತಲಾ ವರಮಾನ ರೂ. 1.22 ಲಕ್ಷ) ಸಮಾಧಾನಕರ ಪಟ್ಟಿಯಲ್ಲಿದೆ. ಆರ್ಥಿಕ ಸಮೀಕ್ಷೆಗಳ ವರದಿಯ ಪ್ರಕಾರ ಕಳೆದ 20 ವರ್ಷಗಳ ಸಾಧನೆ ಗಮನಿಸುವುದಾದರೆ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ತಲಾದಾಯ ಶೇ.16 ಪಟ್ಟು ಏರಿಕೆಯಾಗಿದೆ. ಉತ್ತರ ಕರ್ನಾಟಕದ ಬಿಪಿಎಲ್ ಜಿಲ್ಲೆಗಳಲ್ಲಿ ಇದು ತೀರಾ ಮಂದಗತಿಯಲ್ಲಿದೆ.
ತಲಾ ವರಮಾನ ಏರಿಕೆ ಕಂಡುಬಂದರೂ ಜಿಲ್ಲೆಗಳ ಸಮಗ್ರ ಪ್ರಗತಿಯ ದೃಷ್ಟಿಯಿಂದ ಇದು ಏನೇನೂ ಸಾಲದು ಎನ್ನುತ್ತಾರೆ ತಜ್ಞರು. 2015-16ರಲ್ಲಿ ಚಿತ್ರದುರ್ಗ(ರೂ.88,185), ಗದಗ(ರೂ.88,942), ದಾವಣಗೆರೆ (ರೂ.89,946) ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ತಲಾ ವರಮಾನ ಹೆಚ್ಚಿದ್ದರೂ ಇವುಗಳು ಇನ್ನೂ ಸಹ ತಾಂತ್ರಿಕವಾಗಿ ಬಿಪಿಎಲ್ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಬರುವ ಯಾದಗಿರಿ, ರಾಯಚೂರು, ವಿಜಯಪುರ, ಜಿಲ್ಲೆಗಳ ತಲಾ ವರಮಾನ ಇನ್ನೂ ತೀರಾ ಕೆಳಗಿದೆ. ಹಾಗೆ ನೋಡಿದರೆ ರಾಜ್ಯದ ಅತ್ಯಂತ ಪ್ರಸಿದ್ಧ ಜಿಲ್ಲೆಯಾದ ಮತ್ತು ರಾಜಧಾನಿಗೆ ಹತ್ತಿರವಾದ ಮೈಸೂರು ಜಿಲ್ಲೆ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಸಾಕಷ್ಟುಹಿಂದೆ ಉಳಿದಿದೆ ಎನ್ನಬಹುದು. ವಾಣಿಜ್ಯ ಬೆಳೆಗಳಿಂದ ಪ್ರಸಿದ್ಧವಾದ ಕೊಡಗು ಸಹ ಇಂದು ಬಿಪಿಎಲ್ ಜಿಲ್ಲೆ. ಅತಿಯಾದ ಪ್ರಾಕೃತಿಕ ಅನಾಹುತಗಳಿಂದ ಈ ರೀತಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಒಂದು ಕಾಲದಲ್ಲಿ ಕೊಡಗು, ಬೆಂಗಳೂರು ನಗರ, ದಕ್ಷಿಣಕನ್ನಡ ಜಿಲ್ಲೆಗಳಿಗೆ ಪೈಪೋಟಿ ನೀಡುತ್ತಿದ್ದ ಜಿಲ್ಲೆ, ಆದರೆ ಇಂದು ಇದು ತಲಾ ವರಮಾನದಲ್ಲಿ 19ನೇ ಸ್ಥಾನಕ್ಕೆ ಕುಸಿದಿದೆ. 2008-09ರಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಕಂಡಿದ್ದ ಕೊಡಗು 2014-15ರಲ್ಲಿ ಪರಿಸ್ಥಿತಿ ಉತ್ತಮಗೊಂಡಿದ್ದರೂ ಕ್ರಮೇಣ ಕುಸಿಯಲು ಆರಂಭಿಸಿ ಇಂದಿಗೂ ಅದೇ ರೀತಿಯಲ್ಲಿ ಇದೆ.ತಲಾ ವರಮಾನದ ಏರಿಕೆಯ ವಿಚಾರದಲ್ಲಿ ಕಳೆದ 25 ವರ್ಷಗಳಲ್ಲಿ ಮೈಸೂರು ಜಿಲ್ಲೆಯ ಏರಿಕೆಯ ಪ್ರಮಾಣ ಕೇವಲ ಶೇ.12 ಮಾತ್ರ. ಹಾಗೆ ನೋಡಿದರೆ ಏರಿಕೆ ವಿಚಾರದಲ್ಲಿ ಕಲಬುರಗಿ, ರಾಯಚೂರು ಜಿಲ್ಲೆಗಳು ಮೈಸೂರಿಗೆ ಪೈಪೋಟಿ ನೀಡುತ್ತಿವೆ. ಆದರೆ ರಾಜ್ಯದ ಸರಾಸರಿ ತಲಾ ವರಮಾನ ಗಮನಿಸಿದರೆ ಮೈಸೂರು ಜಿಲ್ಲೆಯ ತಲಾ ವರಮಾನ 2015-16ರಲ್ಲಿ ರೂ. 1 ಲಕ್ಷಕ್ಕಿಂತ ಹೆಚ್ಚಾಗಿರುವುದರಿಂದ ಮೈಸೂರು ಜಿಲ್ಲೆಯನ್ನು ಎಪಿಎಲ್ ಜಿಲ್ಲೆಗೆ ಸೇರಿಸಲು ಯಾವುದೇ ಅಡ್ಡಿ ಇಲ್ಲ. ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳು ಬಹಳ ವರ್ಷಗಳಿಂದ ಬಿಪಿಎಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿರುವುದು ಚಿಂತಿಸಬೇಕಾದ ವಿಚಾರ. ರಾಜ್ಯದ ಕಲಬುರ್ಗಿ ಜಿಲ್ಲೆ ಬಹಳ ವರ್ಷಗಳಿಂದ ಬಿಪಿಎಲ್ ಪಟ್ಟಿಯಲ್ಲಿ ಮುಂದುವರಿಯುತ್ತಿದೆ. 1995-96ರಲ್ಲಿ ಸುಮಾರು ರೂ.8,000 ರೂಗಳಿಂದ ತಲಾ ವರಮಾನ ಇಂದು ಹೆಚ್ಚು ಕಡಿಮೆ ರೂ. 69,000ಗಳನ್ನು ತಲುಪಿದರೂ ಸಹ ಇದು ರಾಜ್ಯದ ಸರಾಸರಿ ವರಮಾನಕ್ಕಿಂತ ಬಹಳ ಕಡಿಮೆ ಇರುವುದರಿಂದ ಈ ಜಿಲ್ಲೆ ಬಿಪಿಎಲ್ ಪಟ್ಟಿಯಲ್ಲಿ ಇನ್ನೂ ಮುಂದುವರಿಯುತ್ತಿದೆ! ಬಹಳ ವರ್ಷಗಳಿಂದ ಬಿಪಿಎಲ್ ಪಟ್ಟಿಯಲ್ಲಿ ಮುಂದುವರಿಯುತ್ತಿರುವ ರಾಯಚೂರು ಜಿಲ್ಲೆಯ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ತರಹ ಎನ್ನಬಹುದು. ರಾಯಚೂರಿನಲ್ಲಿ ಕಳೆದ 25 ವರ್ಷಗಳಿಂದ ಬೆಳವಣಿಗೆಯ ದರ ಶೇ.11 ದಾಟುತ್ತಿಲ್ಲ. ಇದಕ್ಕೆ ಕಲಬುರಗಿ ಮತ್ತು ರಾಯಚೂರಿನ ಕೆಲವೊಂದು ಭೌಗೋಳಿಕ ಸಮಸ್ಯೆಗಳು ಮುಖ್ಯ ಕಾರಣವಾಗಿವೆ. ಬೆಳಗಾವಿ ಜಿಲ್ಲೆಯು ಕೇವಲ 9ರಷ್ಟು ಮಾತ್ರ ಆರ್ಥಿಕ ಪ್ರಗತಿಯನ್ನು ಕಳೆದ 10 ವರ್ಷಗಳಲ್ಲಿ ತೋರಿಸುತ್ತಿದ್ದು ಇದು ತಾಂತ್ರಿಕವಾಗಿ ಸಹ ಬಿಪಿಎಲ್ ವ್ಯಾಪ್ತಿಗೆ ಬರುತ್ತದೆ. ಆದರೆ ಬೆಳಗಾವಿ ಜಿಲ್ಲೆಗೆ ಭವಿಷ್ಯದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಕಾಣುವ ಅವಕಾಶವಿದೆ. ಇದಕ್ಕೆ ಪಕ್ಕದ ಮಹಾರಾಷ್ಟ್ರದ ಸಂಪರ್ಕ ಸಹ ಕಾರಣವಾಗಬಹುದು. ಸರ್ವೇ ವರದಿಗಳ ಪ್ರಕಾರ ಹಾವೇರಿ ಜಿಲ್ಲೆಯ ತಲಾ ವರಮಾನ ರೂ. 84,980, ದಾವಣಗೆರೆಯ ವರಮಾನ ರೂ. 89,946ಗಳಿದ್ದು ಕಳೆದ 25 ವರ್ಷಗಳಲ್ಲಿ ಈ ಜಿಲ್ಲೆಗಳ ಬೆಳವಣಿಗೆಯ ದರ ಸರಾಸರಿ ಕಡಿಮೆ ಅಂದರೆ ಶೇ. 9-10ರ ಮಧ್ಯ ಇರುವುದನ್ನು ನಾವು ಗಮನಿಸಬಹುದು(ಮೂಲ: ವಿವಿಧ ವರದಿಗಳಿಂದ).ಪ್ರಾದೇಶಿಕ ಸಮಾನತೆ ಕುರಿತು ನಂಜುಂಡಪ್ಪವರದಿ ನೀಡಿ ಸುಮಾರು ಇಪ್ಪತ್ತೈದು ವರ್ಷಗಳೇ ಕಳೆದರೂ ಇನ್ನೂ ಉತ್ತರ ಕರ್ನಾಟಕದ ಸ್ಥಿತಿಯಲ್ಲಿ ಯಾವುದೇ ರೀತಿಯ ಹೇಳಿಕೊಳ್ಳುವಂತಹ ಬದಲಾವಣೆಗಳಾಗಿಲ್ಲ.ಉತ್ತರ ಕರ್ನಾಟಕದ ಹೆಚ್ಚಿನ ಮಂದಿ ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆಯಾದರೂ ಅವರಿಂದ ಹೇಳಿಕೊಳ್ಳುವಂತಹ ಉಪಯೋಗ ಈ ಭಾಗದ ಜನರಿಗೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ. ಹೈದರಾಬಾದ್ ಕರ್ನಾಟಕದ ಸಮಗ್ರ ಬೆಳವಣಿಗೆ ಕುರಿತು ಒಂದು ವಿಷನ್ ಡಾಕ್ಯೂಮೆಂಟ್ ಸಿದ್ಧ ಇಲ್ಲದಿರುವುದು ರಾಜಕೀಯ ಇಚ್ಛಾಶಕ್ತಿಗೆ ಹಿಡಿದ ಕೈಗನ್ನಡಿ.
ಈ ಒಟ್ಟು ಬೆಳವಣಿಗೆ ಗಮನಿಸಿದರೆ ರಾಜ್ಯದಲ್ಲಿ ಎಪಿಎಲ್ ಜಿಲ್ಲೆಗಳಿಗಿಂತ ಬಿಪಿಎಲ್ ಜಿಲ್ಲೆಗಳು ಗಣನೀಯ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಸರಕಾರದ ಕೆಲವೊಂದು ತಪ್ಪು ನಿರ್ಧಾರಗಳು, ಉತ್ತರ ಕರ್ನಾಟಕದ ಜಿಲ್ಲೆಗಳ ಬಗ್ಗೆ ಸರಕಾರದ ನಿರ್ಲಕ್ಷ, ರಾಜಕೀಯವಾಗಿ ಪ್ರಬಲವಾಗಿರುವ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಗಮನ ನೀಡುವುದು ಮುಖ್ಯಕಾರಣ ಎನ್ನಬಹುದು. ಈ ಹಿನ್ನೆಲೆಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಪದಗಳ ವ್ಯಾಪ್ತಿ ಮತ್ತು ಅರ್ಥವನ್ನು ಮತ್ತಷ್ಟು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ಪರಿಷ್ಕರಿಸಬೇಕಾದ ಅನಿವಾರ್ಯತೆ ಇದೆ. ಒಂದು ಜಿಲ್ಲೆಯ ತಲಾ ವರಮಾನ ಹೆಚ್ಚಿದ ಮಾತ್ರಕ್ಕೆ ಅದರ ಪ್ರತಿಯೊಬ್ಬರ ವರಮಾನ ಹೆಚ್ಚು ಎಂದು ಹೇಳಲು ಬರುವುದಿಲ್ಲ. ಹಾಗೆ ನೋಡಿದರೆ ಅಂಬಾನಿಯವರ ತಲಾ ವರಮಾನವನ್ನು ಅವರ ಇಡೀ ಮುಂಬೈ ಜಿಲ್ಲೆಗೆ ಹೋಲಿಸಲು ಸಾಧ್ಯವೇ? ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಇದರ ನಿವಾರಣೆಗೆ ಉತ್ತರದ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಳ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಬಂಡವಾಳ ಹೂಡಿಕೆಯಂತಹ ಕಾರ್ಯಕ್ರಮಗಳನ್ನು ಸರಕಾರ ಕೂಡಲೇ ಹಮ್ಮಿಕೊಳ್ಳಬೇಕಿದೆ. ಮಳೆಗಾಲದಲ್ಲಿ ಕಂಡುಬರುವ ಪ್ರವಾಹದಿಂದ ಉಂಟಾಗುವ ನಷ್ಟಕ್ಕೆ ಉತ್ತರದ ಕೆಲವು ಜಿಲ್ಲೆಗಳಿಗೆ ಖಾಯಂ ಪರಿಹಾರ ಬೇಕಿದೆ. ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ನೀತಿಗಳು ಕೆಲವು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರತರಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.