ಅರಣ್ಯ ರಕ್ಷಕರಿಗೆ ಆತ್ಮ ರಕ್ಷಣೆಯೇ ದೊಡ್ಡ ಸವಾಲು
ಕೆ.ಕೃಷ್ಣಪ್ಪ -
ಅರಣ್ಯ ಸಂರಕ್ಷಣೆ ಎನ್ನುವುದು ಕೇವಲ ಅರಣ್ಯ ಸಿಬ್ಬಂದಿಯ, ಇಲ್ಲವೇ ಅರಣ್ಯ ಇಲಾಖೆಯ, ಸರಕಾರದ ಕರ್ತವ್ಯ ಮಾತ್ರವಲ್ಲ. ಅರಣ್ಯ ಇದ್ದರೆ ಮಾತ್ರ ನಾವು-ನೀವು ಎಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಹೀಗಾಗಿ ಅರಣ್ಯ ಸಂರಕ್ಷಣೆ ಎನ್ನುವುದು ಪ್ರತಿಯೊಬ್ಬರಿಗೂ ಸೇರಿದ್ದಾಗಿದೆ ಎಂಬ ಮನಸ್ಥಿತಿ ರೂಪುಗೊಳ್ಳುವುದು ಮುಖ್ಯವೆಂದು ಅರಣ್ಯ ರಕ್ಷಕನಾಗಿ ಹಾಗೂ ಉಪವಲಯ ಅರಣ್ಯಾಧಿಕಾರಿಯಾಗಿ 32ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೆ.ಕೃಷ್ಣಪ್ಪ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.
ಸೆ.11 ಅರಣ್ಯ ರಕ್ಷಕರ ಹುತಾತ್ಮರ ದಿನವಾಗಿದೆ. ಹೀಗಾಗಿ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿರುವ ಕೆ.ಕೃಷ್ಣಪ್ಪ, ತಮ್ಮ ವೃತ್ತಿಯಲ್ಲಿ ಎದುರಿಸಿದ ಸವಾಲುಗಳು, ಸರಕಾರದಿಂದ ಅವರಿಗಿದ್ದ ನಿರೀಕ್ಷೆಗಳೇನಿತ್ತು ಹಾಗೂ ಅರಣ್ಯ ಉಳಿಸಿ, ಬೆಳೆಸುವುದಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಕುರಿತು ಅವರು ವಾರ್ತಾಭಾರತಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅರಣ್ಯ ರಕ್ಷಕರಾಗಿ ನೀವು ಎದುರಿಸಿದ ಸವಾಲುಗಳೇನು?
ಕೆ.ಕೃಷ್ಣಪ್ಪ: ಕೊಡಗು, ಮಂಗಳೂರಿನಲ್ಲಿ ಅರಣ್ಯ ರಕ್ಷಕನಾಗಿ ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಮುಖ್ಯವಾಗಿ ಅರಣ್ಯದಲ್ಲಿ ರಾತ್ರಿ ವೇಳೆ ನಡೆಯುವ ಕಳ್ಳ ಸಾಗಣೆ ದೊಡ್ಡ ತಲೆನೋವು. ಅರಣ್ಯದಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲಾಗುತ್ತದೆ. ಈ ವೇಳೆ ಕಳ್ಳ ಸಾಗಣೆ ಮಾಡುವವರನ್ನು ಹಲವು ಸಂದರ್ಭಗಳಲ್ಲಿ ಅರಣ್ಯ ರಕ್ಷಕನಾಗಿ ನಾನೊಬ್ಬನೇ ಎದುರಿಸಿದ್ದೇನೆ. ಇಂತಹ ಸಂದರ್ಭದಲ್ಲಿ ನಮ್ಮ ರಕ್ಷಣೆಗೆ ಏನೂ ಇರುವುದಿಲ್ಲ. ರಾತ್ರಿ ವೇಳೆ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಹೀಗಾಗಿ ಅರಣ್ಯ ರಕ್ಷಕರಿಗೆ ಮುಖ್ಯವಾಗಿ ಗನ್ ನೀಡಲೇಬೇಕು. ಜತೆಗೆ ರೈನ್ ಕೋಟ್, ಗಮ್ ಶೂ ಅಗತ್ಯವಿರುತ್ತದೆ.
ಅರಣ್ಯ ರಕ್ಷಕರಿಗೆ ಸರಕಾರದ ವತಿಯಿಂದ ದೊರೆಯಬೇಕಾದ ಸೌಲಭ್ಯಗಳೇನು?
ಕೆ.ಕೃಷ್ಣಪ್ಪ: ಸರಕಾರದ ನಿಯಮದಂತೆ ಅರಣ್ಯ ರಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಮೂರು ಭಡ್ತಿ ಸಿಗಬೇಕು. ಆದರೆ, 20-25ವರ್ಷ ಕಳೆದರೂ ಭಡ್ತಿ ಎಂಬುದು ನಮ್ಮ ಪಾಲಿಗೆ ಇಲ್ಲವಾಗುತ್ತದೆ. ಇದರಿಂದಾಗಿ ಬಹುತೇಕ ಅರಣ್ಯ ರಕ್ಷಕರಿಗೆ ಕೆಲಸದ ಉತ್ಸಾಹವೇ ಬತ್ತಿ ಹೋಗುತ್ತದೆ. ಹೀಗಾಗಿ ಕೆಲಸಕ್ಕೆ ಸೇರಿದ ಹತ್ತು ವರ್ಷಗಳ ಒಳಗಾಗಿ ಒಂದು ಭಡ್ತಿ ನೀಡಬೇಕು. ಅರಣ್ಯ ರಕ್ಷಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಸ್ಥಳದಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಉಚಿತ ರೇಷನ್‌ಕಾರ್ಡ್ ನೀಡಬೇಕೆಂದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ.
ನಿಮ್ಮ ಅನುಭವದ ಪ್ರಕಾರ ಕಾಡ್ಗಿಚ್ಚು ಸೃಷ್ಟಿಯಾಗುವುದು ಹೇಗೆ?
ಕೆ.ಕೃಷ್ಣಪ್ಪ: ನನ್ನ ವೃತ್ತಿ ಅನುಭವದ ಪ್ರಕಾರ ಶೇ.100ರಷ್ಟು ಕಾಡ್ಗಿಚ್ಚು ಮಾನವ ನಿರ್ಮಿತವೇ ಆಗಿರುತ್ತದೆ. ಇದಕ್ಕೆ ನಾನಾ ಕಾರಣಗಳಿರುತ್ತವೆ. ಮುಖ್ಯವಾಗಿ ಕಾಡಂಚಿನ ಜನತೆ ಹಾಗೂ ಅರಣ್ಯ ಸಿಬ್ಬಂದಿಯ ನಡುವೆ ವೈಮನಸ್ಸು ಉಂಟಾದರೆ ಕೆಲವು ಮಂದಿ ಕಾಡಿಗೆ ಬೆಂಕಿ ಇಡುವ ಮೂಲಕ ಸೇಡು ತೀರಿಸಿಕೊಳ್ಳುತ್ತಾರೆ. ಕೆಲವರು ಅರಣ್ಯದ ಬಗ್ಗೆ ಕಾಳಜಿಯೇ ಇಲ್ಲದೆ ಕೇವಲ ವಿನೋದಕ್ಕಾಗಿ ಬೆಂಕಿ ಹಾಕುವವರೂ ಇದ್ದಾರೆ. ಬೀಡಿ, ಸಿಗರೇಟು ಸೇದಿ ಬೇಜವಾಬ್ದಾರಿಯಿಂದ ಕಾಡ್ಗಿಚ್ಚಿಗೆ ಕಾರಣರಾಗುತ್ತಾರೆ.
ಅರಣ್ಯ ಬೆಳೆಸಿ-ಉಳಿಸುವಲ್ಲಿ ಇರುವ ಸಮಸ್ಯೆಗಳೇನು?
ಕೆ.ಕೃಷ್ಣಪ್ಪ: ಅರಣ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದಲೇ ಗ್ರಾಮ ಅರಣ್ಯ ಸಮಿತಿಯನ್ನು ರಚಿಸಲಾಗಿದೆ. ಜನತೆ ಹಾಗೂ ಅರಣ್ಯ ಸಿಬ್ಬಂದಿ ಒಟ್ಟಾಗಿ ಸೇರಿ ಅರಣ್ಯವನ್ನು ಸಂರಕ್ಷಿಸಬೇಕೆಂಬ ಸದುದ್ದೇಶವಿದೆ. ಆದರೆ, ಯಾವುದೇ ನಿಯಮ ಜಾರಿಗೆ ತರುವುದು ಸುಲಭ. ಅದನ್ನು ಕಾರ್ಯಾಚರಣೆಗೆ ಇಳಿಸುವುದು ದೊಡ್ಡ ಸವಾಲಾಗಿದೆ. ಮುಖ್ಯವಾಗಿ ಅರಿವು, ಆಸಕ್ತಿ, ನಿರಂತರತೆಯ ಕೊರತೆಯೇ ಅರಣ್ಯ ಬೆಳೆಸುವಲ್ಲಿ ಇರುವ ಸಮಸ್ಯೆಯಾಗಿದೆ.
ನಾವು ಒಂದು ಗಿಡವನ್ನು ನೆಟ್ಟು ಬಿಡಬಹುದು. ಆದರೆ, ಅದನ್ನು ಕನಿಷ್ಠ ಮೂರು ವರ್ಷಗಳವರೆಗೆ ಸಂರಕ್ಷಿಸುವುದು ದೊಡ್ಡ ಸವಾಲು. ನೆಡುವ ಪ್ರತಿ ಗಿಡದ ಯೋಗಕ್ಷೇಮ ನೋಡಿಕೊಳ್ಳುವಂತಹ ಮನಸ್ಥಿತಿ ಸಾರ್ವಜನಿಕವಾಗಿ ಮೂಡಬೇಕು. ಒಟ್ಟಾರೆ ಅರಣ್ಯ ಎಂಬುದು ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಅತಿಮುಖ್ಯವಾದ ಭಾಗವಾದರೆ ಮಾತ್ರ ಅರಣ್ಯ ಬೆಳೆಯಲು ಸಾಧ್ಯ ಎಂಬುದು ನನ್ನ ಅಭಿಮತ.