varthabharthi


ನಿಮ್ಮ ಅಂಕಣ

'ಕೊರೋನ ಚಿಕಿತ್ಸೆಗೆ ನಿರುಪಯುಕ್ತ, ಅಪಾಯಕಾರಿ ಔಷಧಗಳು ಬೇಡ'

ವಾರ್ತಾ ಭಾರತಿ : 13 Sep, 2020
ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಬಾಲಸರಸ್ವತಿ

ಮೇ 15, 2020ರಂದು ಕರ್ನಾಟಕ ಸರಕಾರವು ಪ್ರಕಟಿಸಿದ್ದ ಕೊರೋನ ಚಿಕಿತ್ಸೆಯ ಶಿಷ್ಟಾಚಾರದಲ್ಲಿ ಆಧಾರರಹಿತವಾದ, ಅನಗತ್ಯವಾದ ಚಿಕಿತ್ಸಾಕ್ರಮಗಳನ್ನು ಸೂಚಿಸಿದ್ದುದನ್ನು ಪ್ರಶ್ನಿಸಿ, ಅದರಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಎಚ್ಚರಿಸಿ, ಆ ಶಿಷ್ಟಾಚಾರವನ್ನು ಆ ಕೂಡಲೇ ಹಿಂಪಡೆಯ ಬೇಕೆಂದು ಮೇ 23ರಂದೇ ಆಗ್ರಹಿಸಿದ್ದೆವು. ರಾಜ್ಯದಲ್ಲೀಗ ಕೊರೋನ ವ್ಯಾಪಿಸುತ್ತಿರುವಾಗ ಹೆಚ್ಚಿನೆಡೆಗಳಲ್ಲಿ ಅದೇ ಆಧಾರರಹಿತ ಶಿಷ್ಟಾಚಾರವನ್ನು ಅನುಸರಿಸಿ ಚಿಕಿತ್ಸೆ ನೀಡುತ್ತಿರುವಂತೆ ಕಾಣುತ್ತಿದ್ದು, ನಮ್ಮ ಆತಂಕವೆಲ್ಲವೂ ನಿಜವಾಗಿರುವಂತೆ ಅನಿಸುತ್ತಿದೆ, ಕೆಲವರಲ್ಲಿ ಮಾರಣಾಂತಿಕ ಸಮಸ್ಯೆಗಳಿಗೂ ಅವು ಕಾರಣವಾಗಿರಬಹುದೇ ಎಂಬ ಸಂಶಯವು ಕೂಡಾ ಕಾಡತೊಡಗಿದೆ. ಆದ್ದರಿಂದ ಈ ವರೆಗೆ ಲಭ್ಯವಾಗಿರುವ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಈಗ ಬಳಸಲಾಗುತ್ತಿರುವ ಚಿಕಿತ್ಸಾಕ್ರಮವನ್ನು ಈ ಕೂಡಲೇ ಮರುಪರಿಶೀಲಿಸಿ, ಸೂಕ್ತವಾದ ಎಚ್ಚರಿಕೆಗಳನ್ನು ವೈದ್ಯರಿಗೂ, ಜನ ಸಾಮಾನ್ಯರಿಗೂ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ. 

ಕೊರೋನ ನಿಭಾವಣೆಯ ಬಗ್ಗೆ ಜುಲೈ 4ರಂದು ನಾವು ಸೂಚಿಸಿದ್ದ ಕ್ರಮಗಳನ್ನು ಸರಕಾರವು ಒಂದೊಂದಾಗಿ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಚಿಕಿತ್ಸಾ ಶಿಷ್ಟಾಚಾರದ ಬಗ್ಗೆಯೂ ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ಕಾರ್ಯಪ್ರವೃತ್ತವಾಗಬೇಕೆಂದು ಆಗ್ರಹಿಸುತ್ತೇವೆ.

ಕೊರೋನ ರೋಗದ ಚಿಕಿತ್ಸೆಯಲ್ಲಿ ವಿವಿಧ ಔಷಧಗಳ ಬಳಕೆಯ ಬಗ್ಗೆ ಇದುವರೆಗೆ ನಡೆಸಲಾಗಿರುವ ಅಧ್ಯಯನಗಳ ಆಧಾರದಲ್ಲಿ ಅಮೆರಿಕದ ಔಷಧ ಪರಿಣತರ ಸಂಘಟನೆಯು ಸೆಪ್ಟೆಂಬರ್ 10ರಂದು, ಮತ್ತು ಸೋಂಕು ರೋಗ ತಜ್ಞರ ಸಂಘಟನೆಯು ಸೆಪ್ಟೆಂಬರ್ 4ರಂದು ಸವಿವರವಾದ ವರದಿಗಳನ್ನು ಪ್ರಕಟಿಸಿದ್ದು (ಈ ಕೆಳಗಿನ ಕೊಂಡಿಗಳಲ್ಲಿ ಲಭ್ಯವಿವೆ), ಕೊರೋನ ರೋಗದ ಚಿಕಿತ್ಸೆಯ ಶಿಷ್ಟಾಚಾರವನ್ನು ಈ ಕೂಡಲೇ ಪರಿಷ್ಕರಿಸಲು ಇವು ನೆರವಾಗಬಹುದು.

https://www.ashp.org/-/media/assets/pharmacy-practice/resource-centers/Coronavirus/docs/ASHP-COVID-19-Evidence-Table.ashx ಮತ್ತು https://www.idsociety.org/globalassets/idsa/practice-guidelines/covid-19/treatment/idsa-covid-19-gl-tx-and-mgmt-v3.1.0.pdf

ಮಲೇರಿಯಾ, ಸಂಧಿವಾತಗಳಲ್ಲಿ ಬಳಸುವ ಕ್ಲೋರೋಕ್ವಿನ್/ಹೈಡ್ರಾಕ್ಸಿ ಕ್ಲೋರೋಕ್ವಿನ್, ಪ್ರತಿಜೈವಿಕ ಅಝಿತ್ರೋಮೈಸಿನ್, ಡಾಕ್ಸಿಸೈಕ್ಲಿನ್, ಎಚ್‌ಐವಿ ನಿರೋಧಕ ಲೊಪಿನಾವಿರ್/ರಿಟೊನಾವಿರ್, ಫ್ಲೂ ನಿರೋಧಕ ಒಸೆಲ್ಟಾಮಿವಿರ್, ಫಾವಿಪಿರಾವಿರ್, ಜಂತು ನಿರೋಧಕ ಐವರ್‌ಮೆಕ್ಟಿನ್, ಇಬೋಲಕ್ಕೆಂದು ಸಿದ್ಧಪಡಿಸಿದ್ದ ರೆಮ್ಡಿಸಿವಿರ್ ಎಲ್ಲವನ್ನೂ ಈಗಾಗಲೇ ಸಾವಿರಾರು ಜನರಲ್ಲಿ ಬಳಸಿ ನೋಡಲಾಗಿದ್ದು, ಇವುಗಳಿಂದ ಕೊರೋನ ಸೋಂಕನ್ನು ಮಣಿಸಬಹುದೆನ್ನುವುದಕ್ಕೆ ಇದುವರೆಗೆ ಯಾವುದೇ ಪ್ರಬಲವಾದ ಆಧಾರಗಳು ದೊರೆತಿಲ್ಲ. ಹಾಗೆಯೇ, ವಿಟಮಿನ್ ಸಿ, ಸತು (ಜಿಂಕ್), ಕಷಾಯ/ಕ್ವಾದ, ಅರಸಿನ ಹಾಲು, ಹೋಮಿಯೋಪತಿ ಇತ್ಯಾದಿಗಳಿಂದಲೂ ಯಾವುದೇ ಪ್ರಯೋಜನಗಳಿವೆ ಎನ್ನಲು ಯಾವುದೇ ಆಧಾರಗಳಿಲ್ಲ. ಆದ್ದರಿಂದ, ಅತಿ ಗಂಭೀರ ಸಮಸ್ಯೆಗಳಾಗಿರುವ ರೋಗಿಗಳಲ್ಲಿ ಸ್ಟೀರಾಯ್ಡ್ ಮತ್ತು ಕೆಲವರಲ್ಲಿ ಪ್ರಾಯೋಗಿಕವಾಗಿ ರೆಮ್ಡಿಸಿವಿರ್ ಬಳಸಬಹುದೆನ್ನುವುದನ್ನು ಬಿಟ್ಟರೆ ಇನ್ನುಳಿದ ಎಲ್ಲಾ ಔಷಧಗಳ ಬಳಕೆಯನ್ನು ನಿಲ್ಲಿಸಬೇಕೆಂದೇ ಎಲ್ಲಾ ಸಂಸ್ಥೆ/ಸಂಘಟನೆಗಳು ಸ್ಪಷ್ಟವಾಗಿ ಹೇಳಿವೆ.

ರಾಜ್ಯ ಸರಕಾರವು ಪ್ರಕಟಿಸಿರುವ, ಈಗ ಪಾಲಿಸಲಾಗುತ್ತಿರುವ, ಶಿಷ್ಟಾಚಾರದನುಸಾರ ಈ ಔಷಧಗಳನ್ನು ಜೊತೆಜೊತೆಯಾಗಿ, ಅಥವಾ ಒಂದರ ಬಳಿಕ ಒಂದರಂತೆ ನೀಡಲಾಗುತ್ತಿದೆ. ಈ ಔಷಧಗಳು ಒಂದರೊಡನೊಂದು ಪ್ರತಿವರ್ತಿಸಿ ಗಂಭೀರವಾದ ಅಡ್ಡ ಪರಿಣಾಮಗಳಾಗುವ ಅಪಾಯಗಳಿವೆ. ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅಝಿತ್ರೋಮೈಸಿನ್ ಔಷಧಗಳೆರಡೂ ನಮ್ಮ ದೇಹದಿಂದ ಹೊರಹಾಕಲ್ಪಡುವುದಕ್ಕೆ ಹಲವು ವಾರಗಳೇ ಬೇಕಾಗುವುದರಿಂದ, ಮತ್ತು ಹಲವು ಔಷಧಗಳೊಂದಿಗೆ ಅವು ಪ್ರತಿವರ್ತಿಸುವುದರಿಂದ ಕೊರೋನ ಚಿಕಿತ್ಸೆಯಲ್ಲಿ ಅವುಗಳ ಬಳಕೆಯು ಇನ್ನಷ್ಟು ಅಪಾಯಕಾರಿಯಾಗಬಹುದು. ಕೊರೋನ ಸೋಂಕಿನಂತಹ ಸನ್ನಿವೇಶಗಳಲ್ಲಿ ಬಳಸಿದಾಗ, ಇವೆರಡೂ ಔಷಧಗಳು ಹೃದಯದ ವಿದ್ಯುತ್ ಹರಿವಿನ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿ, ಹೃದಯದ ಗತಿಯಲ್ಲಿ ಒಮ್ಮಿಂದೊಮ್ಮೆಗೇ ಅತೀವ ಏರಿಕೆಯಾಗಿ, ಹೃದಯ ಸ್ತಂಭನದಂತಹಾ ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ಕ್ಲೋರೋಕ್ವಿನ್ ಮತ್ತು ಅಝಿತ್ರೋಮೈಸಿನ್‌ಗಳನ್ನು ಜೊತೆಯಾಗಿ ಬಳಸಿದರೆ ಈ ಅಪಾಯವು ಇನ್ನೂ ಹೆಚ್ಚಾಗುತ್ತದೆ. ಈ ಕಾರಣಗಳಿಗಾಗಿ, ಅವುಗಳ ಬಳಕೆಯನ್ನು ತಡೆಹಿಡಿಯಬೇಕೆಂದು ಅಮೆರಿಕದ ಎಫ್‌ಡಿಎ ಸೇರಿದಂತೆ ಅನೇಕ ಉನ್ನತ ಸಂಸ್ಥೆಗಳು ಎಚ್ಚರಿಸಿವೆ.

ಮನೋರೋಗಗಳಲ್ಲಿ ಬಳಸಲಾಗುವ ಅನೇಕ ಔಷಧಗಳು, ಸಕ್ಕರೆ ಕಾಯಿಲೆಯಲ್ಲಿ ಬಳಸುವ ಔಷಧಗಳು, ಅಸ್ತಮಾ, ಹೃದ್ರೋಗಗಳಲ್ಲಿ ಬಳಸುವ ಔಷಧ ಗಳು ಹೈಡ್ರಾಕ್ಸಿ ಕ್ಲೋರೋಕ್ವಿನ್ ಜೊತೆ ಸೇರಿದಾಗ ಹೃದಯದ ಮೇಲೂ, ರಕ್ತದ ಗ್ಲೂಕೋಸ್ ನಿಯಂತ್ರಣದ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಹುದು. ಇನ್ನೂ ಮುಖ್ಯವಾಗಿ, ವಾಕರಿಕೆ ಅಥವಾ ವಾಂತಿಯನ್ನು ತಡೆಯಲು ಸಾಮಾನ್ಯವಾಗಿ ಬಳಸುವ ಡೋಮ್‌ಪೆರಿಡೋನ್, ಒಂಡಾನ್‌ ಸೆಟ್ರಾನ್‌ನಂತಹ ಔಷಧಗಳು ಮತ್ತು ಭೇದಿಯನ್ನು ತಡೆಯಲು ಬಳಸುವ ಲೊಪೆರಮೈಡ್ ಅನ್ನು ಹೈಡ್ರಾಕ್ಸಿ ಕ್ಲೋರೋಕ್ವಿನ್, ಅಝಿತ್ರೋಮೈಸಿನ್ ಜೊತೆ ಬಳಸಿದರೆ ಹೃದಯದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳು ಹೆಚ್ಚಬಹುದು. ಆದ್ದರಿಂದ ಕೊರೋನ ಸೋಂಕಿನ ತಡೆಯುವಿಕೆ ಅಥವಾ ಚಿಕಿತ್ಸೆಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅಝಿತ್ರೋಮೈಸಿನ್ ಬಳಕೆಯನ್ನು ಈ ಕೂಡಲೇ ನಿಲ್ಲಿಸಬೇಕು, ಮತ್ತು ಈ ಔಷಧಗಳ ಜೊತೆಗೆ ಇಲ್ಲೀಗ ಹೆಸರಿಸಲಾ ಗಿರುವ ಇತರ ಔಷಧಗಳನ್ನು ಬಳಸಬಾರದು.

ಫಾವಿಪಿರಾವಿರ್ ಔಷಧವು ಜ್ವರನಿವಾರಕ ಔಷಧವಾದ ಪಾರಸಿಟಮಾಲ್ ವಿಸರ್ಜನೆಗೆ ಅಡ್ಡಿಯಾಗುವುದರಿಂದ, ಇವೆರಡನ್ನೂ ಜೊತೆಯಾಗಿ ಬಳಸಿದರೆ ದೇಹದಲ್ಲಿ ಪಾರಸಿಟಮಾಲ್ ಪ್ರಮಾಣವು ಹೆಚ್ಚುವ ಅಪಾಯವಿದೆ. ಆದ್ದರಿಂದ ಫಾವಿಪಿರಾವಿರ್ ಬಳಸಿದಾಗ, ದಿನಕ್ಕೆ 3 ಗ್ರಾಂಗಿಂತ ಹೆಚ್ಚು ಪಾರಸಿಟಮಾಲ್ ನೀಡಬಾರದು.

ಒಸೆಲ್ಟಾಮಿವಿರ್, ಫಾವಿಪಿರಾವಿರ್, ಐವರ್‌ಮೆಕ್ಟಿನ್, ಡಾಕ್ಸಿಸೈಕ್ಲಿನ್, ವಿಟಮಿನ್ ಸಿ, ಸತು, ಇತ್ಯಾದಿಗಳು ನಿರುಪಯುಕ್ತವಾದುದರಿಂದ, ಮತ್ತು ಅವೆಲ್ಲವುಗಳಿಂದಲೂ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳಿರುವುದರಿಂದ, ಅವುಗಳ ಬಳಕೆಯನ್ನೂ ನಿಲ್ಲಿಸಬೇಕು. ಅರಸಿನಯುಕ್ತ ಹಾಲು, ಕಷಾಯ ಇತ್ಯಾದಿಗಳ ಸೇವನೆಯಿಂದ ಅಡ್ಡ ಪರಿಣಾಮಗಳಾಗುತ್ತಿರುವ ಬಗ್ಗೆಯೂ ಅನೇಕ ವರದಿಗಳಾಗುತ್ತಿರುವುದರಿಂದ ಅವುಗಳನ್ನು ಬಳಸದಂತೆಯೂ ಜನರಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಬೇಕು.

ರೆಮ್ಡಿಸಿವಿರ್ ಮತ್ತು ಪ್ಲಾಸ್ಮಾ ಚಿಕಿತ್ಸೆಗಳಿಂದ ಪ್ರಯೋಜನಗಳಾಗುವ ಬಗ್ಗೆ ಸ್ಪಷ್ಟವಾದ ಆಧಾರಗಳಿನ್ನೂ ಲಭ್ಯವಿಲ್ಲದಿರುವುದರಿಂದ, ಮನಬಂದಂತೆ ಅವನ್ನು ಬಳಸದಂತೆ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಸ್ಟೀರಾಯ್ಡ್ ಔಷಧಗಳು ಅತಿ ಗಂಭೀರ ಸಮಸ್ಯೆಗಳಾದವರಲ್ಲಷ್ಟೇ ಉಪಯುಕ್ತವೆಂದು ಕಂಡು ಬಂದಿರುವು ದರಿಂದ ಅವುಗಳನ್ನು ಅನಗತ್ಯವಾಗಿ, ಸೌಮ್ಯ ರೂಪದ ಸೋಂಕುಳ್ಳವರಲ್ಲಿ, ಬಳಸದಂತೆ ಎಚ್ಚರಿಸಬೇಕು.

ಒಟ್ಟಿನಲ್ಲಿ, ಶೇ.99ಕ್ಕೂ ಹೆಚ್ಚು ಸೋಂಕಿತರಲ್ಲಿ ಕೊರೋನ ರೋಗವು ಸೌಮ್ಯ ರೂಪದ್ದಾಗಿದ್ದು, ಅವರೆಲ್ಲರೂ ಚಿಕಿತ್ಸೆಯಿಲ್ಲದೆಯೇ ತಾವಾಗಿ ಗುಣಮುಖರಾಗುವುದರಿಂದ ಅಂಥವರಿಗೆ ಯಾವುದೇ ಔಷಧವನ್ನು ನೀಡಬೇಕಾಗಿಲ್ಲ. ಕೊರೋನ ರೋಗದಿಂದ ತುಸು ತೀವ್ರವಾದ ಸಮಸ್ಯೆಗಳಾದವರಿಗೆ ಆಮ್ಲಜನಕವನ್ನಷ್ಟೇ ಕೊಟ್ಟರೆ ಸಾಕಾಗುತ್ತದೆ. ಅತಿ ತೀವ್ರವಾದ ಸಮಸ್ಯೆಗಳಾದವರನ್ನು  ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ, ಆಮ್ಲಜನಕದ ಜೊತೆಗೆ ಸ್ಟೀರಾಯ್ಡ್ ಔಷಧಗಳನ್ನು ನೀಡಬೇಕಾಗಬಹುದು, ಪ್ರಾಯೋಗಿಕವಾಗಿ ರೆಮ್ಡಿಸಿವಿರ್ ಅನ್ನು ನೀಡಬಹುದು. ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಸರಕಾರವು ಈ ಕೂಡಲೇ ಪ್ರಕಟಿಸಬೇಕು, ವೈದ್ಯರೂ, ಜನಸಾಮಾನ್ಯರೂ ಅದನ್ನೇ ಪಾಲಿಸಬೇಕು.

- ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಬಾಲಸರಸ್ವತಿ ಮಂಗಳೂರು

http://srinivaskakkilaya.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)