ಶೋಷಿತ ಸಮುದಾಯದ ಯೋಜನೆಗಳಲ್ಲಿ ಅಕ್ರಮ ಆರೋಪ: ಬೋರ್ವೆಲ್ ಏಜೆನ್ಸಿದಾರರ ಕಲ್ಯಾಣಕ್ಕೆ ಗಂಗಾ?
ಬೆಂಗಳೂರು, ಸೆ.13: ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಮೂಲಕ ಜಾರಿಗೊಳಿಸಿರುವ ಉಚಿತ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆಯೂ, ಬೋರ್ವೆಲ್ ಏಜೆನ್ಸಿದಾರರ, ಕೆಲ ಅಧಿಕಾರಿಗಳ ಆರ್ಥಿಕ ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ರಾಜ್ಯ ವ್ಯಾಪಿ 2016-17ರಲ್ಲಿ 10,512, 2017-18ರಲ್ಲಿ 10,925 ಹಾಗೂ 2018-19ರಲ್ಲಿ 10,298 ಸೇರಿ ಒಟ್ಟು 31,735 ಕೊಳವೆಬಾವಿ ಕೊರೆಯಲು ಮಂಜೂರು ಮಾಡಲಾಗಿತ್ತು. ಇದರಲ್ಲಿ ಶೇ.20 ಅಂದರೆ 6,400 ಕೊಳವೆ ಬಾವಿಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ಪ್ರಕಾರ ಟೆಂಡರ್ ನಡೆಸದೆ ಕಮಿಷನ್ ಆಸೆಗಾಗಿ ನಿಗಮದ ಅಧಿಕಾರಿಗಳು ತಮಗೆ ಇಷ್ಟ ಬಂದ ಆಯ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರುವ ಬಗ್ಗೆ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ.
ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವಾಗ ಶೇ.80 ಟೆಂಡರ್ ಕರೆಯಲಾಗುತ್ತದೆ. ಇನ್ನುಳಿದ ಶೇ.20 ಕೊಳವೆ ಬಾವಿಗಳನ್ನು ವಿವೇಚನಾ ಕೋಟದಲ್ಲಿ ಸಚಿವರಿಗೆ ಶೇ.15 ಹಾಗೂ ನಿಗಮದ ನಿರ್ದೇಶಕ ಮಂಡಳಿಗೆ ಶೇ.5 ಫಲಾನುಭವಿಗಳನ್ನು ಆಯ್ಕೆ ಮಾಡಲು ಅಧಿಕಾರವಿದೆ. ಆದರೂ, ಶೇ.20 ಕೊಳವೆ ಬಾವಿಗಳನ್ನು ವಿವೇಚನಾ ಕೋಟಾದಡಿ ಅನುಷ್ಠಾನ ಮಾಡಲೂ ಟೆಂಡರ್ ಪ್ರಕ್ರಿಯೆ ನಡೆಸಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕು.
ನೇರವಾಗಿ ಅಕ್ರಮ ಕಾರ್ಯಾದೇಶ: 2018ರಲ್ಲಿ ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ವಿವೇಚನಾ ಕೋಟಾದಡಿ ಆಯ್ಕೆ ಆದ 2400 ಗಂಗಾ ಕಲ್ಯಾಣ ಕಾಮಗಾರಿಗಳನ್ನು ಟೆಂಡರ್ ನಡೆಸದೆ ನಿಗಮದಿಂದ 15 ಗುತ್ತಿಗೆದಾರರಿಗೆ ಹಾಗೂ ಪರಿಶಿಷ್ಟ ವರ್ಗಗಳ ನಿಗಮದಿಂದ 18 ಗುತ್ತಿಗೆದಾರರನ್ನು ನೇರವಾಗಿ ಕಾರ್ಯಾದೇಶ ನೀಡಲಾಗಿದೆ.
ಅಲ್ಲದೆ, ಟೆಂಡರ್ ಉಲ್ಲಂಘಿಸಿ ಪಂಪ್ ಮೋಟರ್ ಪೂರೈಕೆಗಾಗಿ 8 ಸರಬರಾಜುದಾರರಿಗೆ ಅಕ್ರಮವಾಗಿ ಕಾರ್ಯಾದೇಶ ನೀಡಲಾಗಿದೆ. ಈ ಅಕ್ರಮ ಹೊಳಲ್ಕೆರೆಗೆ ಸೀಮಿತವಾಗದೆ ರಾಜ್ಯಾದ್ಯಂತ 250 ಕೋಟಿ ರೂ. ಕಾಮಗಾರಿಗಳು ಅಕ್ರಮವಾಗಿ ನಡೆದಿರುವ ಬಗ್ಗೆ ಸರಕಾರಕ್ಕೆ ದೂರುಗಳು ಸಲ್ಲಿಕೆ ಆಗಿದೆ. ಇದರಲ್ಲಿ ರೂ.50 ಕೋಟಿ ರೂ. ಲಂಚ ವ್ಯವಹಾರ ಆಗಿರುವುದಾಗಿ ಅನುಮಾನಗಳು ಉಂಟಾಗಿವೆ.
ನಿಗಮದ ಅಧಿಕಾರಿಗಳ ಮೇಲೆ ಗುಮಾನಿ: ನಿಗಮದಲ್ಲಿ ಉನ್ನತ ಹುದ್ದೆ ಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಅಕ್ರಮ ನಡೆಸಿರುವ ಬಗ್ಗೆ ಆರೋಪ ಇದೆ. ಗಂಗಾ ಕಲ್ಯಾಣ ಯೋಜನೆಯ ಹಗರಣದ ತನಿಖೆಯ ವ್ಯಾಪ್ತಿಯಲ್ಲಿರುವ, ಮುಖ್ಯ ಕಚೇರಿಯ ನಿಗಮದ ಅಧಿಕಾರಿ ಟಿ.ಕುಮಾರ್ ಹಣಕಾಸು ಇಲಾಖೆ ಅನುಮತಿ ಪಡೆಯದೆ ತಮ್ಮ ಹುದ್ದೆಯನ್ನು ಅಕ್ರಮವಾಗಿ ಮೇಲ್ದರ್ಜೆಗೇರಿಸಿ ಐಎಎಸ್ ದರ್ಜೆಯ ಹುದ್ದೆಯಲ್ಲಿ ಕುಳಿತ್ತಿದ್ದಾರೆ ಮತ್ತು ಇದೇ ಗಂಗಾ ಕಲ್ಯಾಣ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದು ಹಗರಣದ ತನಿಖೆಗೆ ಅಡ್ಡಿಯಾಗಿರುವುದಾಗಿ ದೂರುಗಳು ಕೇಳಿ ಬಂದಿದೆ.
ಎಲ್ಲಿ, ಎಷ್ಟು ಅಡಿಗೆ ಪರ್ಮಿಟ್ ?
ಬಯಲು ಸೀಮೆ ಜಿಲ್ಲೆಗಳಿಗೆ 500ರಿಂದ 1ಸಾವಿರ ಅಡಿವರೆಗೆ ಹಾಗೂ ಕರಾವಳಿ ಭಾಗದ ಜಿಲ್ಲೆಗಳಿಗೆ 300ರಿಂದ 500 ಅಡಿವರೆಗೆ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ 100ರಿಂದ 150 ಅಡಿವರೆಗೆ (ತೆರದ ಬಾವಿ)ಬೊರ್ವೆಲ್ ಹಾಕಿಸಲು ಅನುಮತಿ ಇದೆ. ಹಲವು ಜಿಲ್ಲೆಗಳಲ್ಲಿ ಕಡಿಮೆ ಆಳ ಸಿಕ್ಕರೂ ಹೆಚ್ಚಿನ ಆಳಕ್ಕೆ ಬಿಲ್ ಮಾಡಿರುವುದಾಗಿ ಸಾರ್ವಜನಿಕರು, ಹಾಗೂ ಸಂಘಟನೆಗಳಿಂದ ದೂರುಗಳಿವೆ. ಆದರೆ ಗಂಭೀರ ತನಿಖೆಗಳು ಆಗಿಲ್ಲ.
ಹೇಗೆಲ್ಲ ನಡೆಯುತ್ತದೆ ಅಕ್ರಮ?
►ಟೆಂಡರ್ ಉಲ್ಲಂಘಿಸಿ ತಮಗೆ ಬೇಕಾದವರಿಗೆ ಕಾರ್ಯಾದೇಶ ನೀಡಿಕೆ
►ಪ್ರತಿ ಬೋರ್ವೆಲ್ ಗೆ ಶೇ.20 ಕಮಿಷನ್ ವಸೂಲಿ
►ಅಕ್ರಮ ಕಾರ್ಯಾದೇಶಕ್ಕೆ ಗುತ್ತಿಗೆದಾರರಿಂದ ಇಂಎಂಡಿ ಪಡೆದಿಲ್ಲ
►ಕಾರ್ಯಾದೇಶ ಪತ್ರದಲ್ಲಿ ಟೆಂಡರ್‌ದಾರರಲ್ಲದಿದ್ದರೂ ಇಂತಹ ಗುತ್ತಿಗೆದಾರರಿಗೆ ನೀಡುವಂತೆ ಮೊದಲೇ ನಿರ್ಧಾರ
►ವಿವೇಚನಾ ಕೋಟಾದಲ್ಲಿ ಪ್ರತೀ ಫಲಾನುಭವಿಯ ಆಯ್ಕೆಯಲ್ಲಿ 50ಸಾವಿರದಿಂದ 1 ಲಕ್ಷದವರೆಗೆ ಲಂಚ ವ್ಯವಹಾರ
►ನಕಲಿ ದಾಖಲೆ ಸೃಷ್ಟಿಸಿ ಬಿಲ್ ಪಡೆದುಕೊಳ್ಳುವುದು
►ಕೊಳವೆಬಾವಿ ಕೊರೆದಿರುವ ನೈಜ ಅಳಕ್ಕಿಂತ ಹೆಚ್ಚಿನ ಅಳ ತೋರಿಸಿ ಬಿಲ್ ಮಾಡುವುದು
►ಕಳಪೆ ವಸ್ತುಗಳ ಸರಬರಾಜು
►ಒಂದೇ ದಿನದಲ್ಲಿ ಗುತ್ತಿಗೆ ಕಾರ್ಯಾದೇಶ ನೀಡಿಕೆ
►ಹಣಕಾಸು ಇಲಾಖೆಯಿಂದ 4 ಜಿ. ವಿನಾಯಿತಿ ಪಡೆದಿಲ್ಲ