ಉಪ್ಪಿನಕಾಯಿ ಹೃದಯದ ಆರೋಗ್ಯಕ್ಕೆ ಕೆಟ್ಟದ್ದೇ?
ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ....ಉಪ್ಪಿನಕಾಯಿ ಜೊತೆಯಲ್ಲಿದ್ದರೆ ಊಟದ ರುಚಿಯೇ ಬೇರೆ. ಮಾವು,ಲಿಂಬೆ,ಮೆಣಸು,ಬೆಳ್ಳುಳ್ಳಿ,ಶುಂಠಿ ಇವೆಲ್ಲ ಸಾಮಾನ್ಯವಾಗಿ ಜನಪ್ರಿಯವಾಗಿರುವ ಉಪ್ಪಿನಕಾಯಿ ವೈವಿಧ್ಯಗಳಾಗಿವೆ. ಸ್ವಲ್ಪ ಎಣ್ಣೆ,ಉಪ್ಪು,ಅರಿಷಿಣ,ಕೆಂಪು ಮೆಣಸಿನ ಹುಡಿಯಂತಹ ಸಂಬಾರ ಪದಾರ್ಥಗಳು,ಜೀರಿಗೆ,ಕರಿಜೀರಿಗೆ ಮತ್ತು ಬಡೆಸೋಪುಗಳಂತಹ ಬೀಜಗಳನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರೋಗ್ಯಯುತ ಕರುಳಿಗೆ ಪೂರಕವಾಗಿರುವ ಉಪ್ಪಿನಕಾಯಿ ವಿಟಾಮಿನ್ ಬಿ 12 ಕೊರತೆಯನ್ನು ನೀಗಿಸುತ್ತದೆ.
ಉಪ್ಪಿನಕಾಯಿ ತಯಾರಿಕೆಗೆ ಬಳಸುವ ಎಣ್ಣೆ,ಉಪ್ಪಿನಿಂದ ಹಿಡಿದು ಸಂಬಾರ ಪದಾರ್ಥಗಳವರೆಗೂ ಅನೇಕ ಆತಂಕಗಳು ಹಲವರಲ್ಲಿದ್ದು. ಇದು ಅವರು ಉಪ್ಪಿನಕಾಯಿಯಿಂದ ದೂರವಿರುವಂತೆ ಮಾಡಿದೆ. ಊಟಕ್ಕೆ ರುಚಿ ನೀಡುವ ಉಪ್ಪಿನಕಾಯಿಯ ಬಗ್ಗೆ ಹಲವು ಮಿಥ್ಯೆಗಳು ಜನರಲ್ಲಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ....
* ಉಪ್ಪಿನಕಾಯಿಯಲ್ಲಿ ಎಣ್ಣೆ ಮತ್ತು ಉಪ್ಪು ಹೆಚ್ಚಿರುತ್ತವೆ
-ಉಪ್ಪು ಮತ್ತು ಎಣ್ಣೆ ಉಪ್ಪಿನಕಾಯಿ ತಯಾರಿಕೆಗೆ ಅತ್ಯಗತ್ಯವಾಗಿವೆ. ಆದರೆ ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ತಯಾರಿಸಿದ್ದರೆ ಈ ಬಗ್ಗೆ ಆತಂಕ ಬೇಕಿಲ್ಲ. ಅದು ಕರುಳಿನ ಆರೋಗ್ಯಕ್ಕೆ ಪೂರಕವಾದ ಬ್ಯಾಕ್ಟೀರಿಯಾಗಳನ್ನು ಒದಗಿಸುತ್ತದೆ. ಕರುಳು ಆರೋಗ್ಯಯುತವಾಗಿದ್ದರೆ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ,ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ.
* ಉಪ್ಪಿನಕಾಯಿಯಲ್ಲಿರುವ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ
-ಅಧಿಕ ಸೋಡಿಯಂ ಹೊಂದಿರುವ ಆಹಾರಗಳು ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುವ ಸಂಸ್ಕರಿತ ಮತ್ತು ಪ್ಯಾಕೇಜ್ಡ್ ಆಹಾರಗಳು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಇಂತಹವರಿಗೆ ಕಲ್ಲುಪ್ಪು ಅಥವಾ ಕಪ್ಪುಉಪ್ಪು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಯಮಿತ ವ್ಯಾಯಾಮ ಮತ್ತು ಒಳ್ಳೆಯ ನಿದ್ರೆ ಮಾಡಿದರೆ ಉಪ್ಪಿನ ಕಾಯಿ ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಕಡಿಮೆ. ಇದೇ ವೇಳೆ ಸಂಸ್ಕರಿತ ಮತ್ತು ಪ್ಯಾಕೇಜ್ಡ್ ಆಹಾರಗಳ ಸೇವನೆ ಕನಿಷ್ಠವಾಗಿರಬೇಕು.
* ಎಣ್ಣೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ
-ಕಡಲೆ ಎಣ್ಣೆ,ಸಾಸಿವೆ ಎಣ್ಣೆ,ಎಳ್ಳೆಣ್ಣೆ ಬಳಸಿ ಮನೆಯಲ್ಲಿಯೇ ಉಪ್ಪಿನಕಾಯಿ ತಯಾರಿಸುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯ. ಎಣ್ಣೆಯನ್ನು ನಮ್ಮ ಸಾಂಪ್ರದಾಯಿಕ ಆಹಾರ ಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಉಪ್ಪಿನಕಾಯಿಯಲ್ಲಿರುವ ಎಣ್ಣೆ ಹೃದಯದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳು ತೀರ ಕಡಿಮೆ.
* ಉಪ್ಪಿನಕಾಯಿ ಅನಾರೋಗ್ಯಕಾರಿ
ಉಪ್ಪಿನಕಾಯಿ ಖನಿಜಗಳು,ವಿಟಾಮಿನ್‌ಗಳು ಮತ್ತು ಕರುಳುಸ್ನೇಹಿ ಬ್ಯಾಕ್ಟೆರಿಯಾಗಳ ಕಣಜವಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರತಿದಿನ ಒಂದೆರಡು ಚಮಚಗಳಷ್ಟು ಉಪ್ಪಿನಕಾಯಿ ಸೇವಿಸಿದರೆ ಅದು ಹೊಟ್ಟೆಯುಬ್ಬರ,ವಿಟಾಮಿನ್ ಡಿ ಮತ್ತು ಬಿ12 ಕೊರತೆ,ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಸುಗಮ ಚಲನವಲನಕ್ಕೂ ನೆರವಾಗುತ್ತದೆ.
ಉಪ್ಪಿನಕಾಯಿ ಎಲ್ಲ ನೈಸರ್ಗಿಕ ಘಟಕಗಳ ಸೂಕ್ತ ಪ್ರಮಾಣದಲ್ಲಿ ಮಿಶ್ರಣದೊಂದಿಗೆ ಮನೆಯಲ್ಲಿಯೇ ತಯಾರಾಗಿದ್ದರೆ ಅದನ್ನು ಆರೋಗ್ಯಕರ ಎಂದೇ ಪರಿಗಣಿಸಬಹುದು.