ಲೈಸೀನಿಡೀ ಚಿಟ್ಟೆ ಹುಳ-ಕೆಂಪಿರುವೆಯ ಪ್ರಕೃತಿದತ್ತ ಸ್ನೇಹ
ಉಡುಪಿ ಬ್ರಹ್ಮಗಿರಿಯ ಹೊಳೆ ದಾಸವಾಳ ಮರದಲ್ಲೊಂದು ಸಹಬಾಳ್ವೆ ಜೀವನ!
ಉಡುಪಿ, ಸೆ.15: ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹೊಳೆ ದಾಸವಾಳ ಮರದಲ್ಲಿ ಕಂಡುಬರುತ್ತಿರುವ ಪ್ರಕೃತಿದತ್ತವಾಗಿರುವ ಸಹಬಾಳ್ವೆಯ ಬದುಕು ಇಡೀ ಮಾನವ ಕುಲಕ್ಕೆ ಸಂದೇಶ ಸಾರುವಂತಿದೆ. ಸಾಮಾನ್ಯವಾಗಿ ಇರುವೆಗಳು ಚಿಟ್ಟೆಯ ಹುಳಗಳನ್ನು ಕೊಂದು ತಿಂದರೆ, ಇಲ್ಲಿ ಮಾತ್ರ ಅದ್ಭುತ ಎಂಬಂತೆ ಲೈಸೀನಿಡೀ(ಬ್ಲೂಸ್/ನೀಲಿ ಚಿಟ್ಟೆಗಳು) ಕುಟುಂಬಕ್ಕೆ ಸೇರಿದ ಚಿಟ್ಟೆಯ ಹುಳಗಳನ್ನು ಕೆಂಪಿರುವೆಗಳು ರಕ್ಷಣೆ ಮಾಡುತ್ತವೆ. ಹೀಗೆ ಈ ಎರಡು ಜೀವಿಗಳ ಸ್ನೇಹಮಯ ಜೀವನ ನಿಬ್ಬೆರಗುಗೊಳಿಸುತ್ತದೆ. ಚಿಟ್ಟೆಗಳು ಪರಾಗಸ್ಪರ್ಶ, ಸೂಚಕ ಜೀವಿಗಳಾಗಿ ಮತ್ತು ಇತರ ಜೀವಿಗಳಿಗೆ ಆಹಾರವಾಗುವ ಮೂಲಕ ಪ್ರಕೃತಿಯಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತವೆ. ಹೀಗೆ ಇರುವೆಗಳಿಗೂ ಚಿಟ್ಟೆಗಳು ಮತ್ತು ಹುಳಗಳು ಆಹಾರವಾಗಿರುತ್ತವೆ. ಚಿಟ್ಟೆ ಜಗತ್ತಿನ ಒಟ್ಟು ಆರು ಕುಟುಂಬಗಳ ಪೈಕಿ ಲೈಸೀನಿಡೀ ಕೂಡ ಒಂದು. ಈ ಕುಟುಂಬಕ್ಕೆ ಸೇರಿದ ಚಿಟ್ಟೆಗಳು ಬಹುತೇಕ ಸಣ್ಣ ಗ್ರಾತದ್ದಾಗಿರುತ್ತವೆ ಮತ್ತು ಅವುಗಳ ರೆಕ್ಕೆಗಳ ಮೇಲ್ಮೈಯಲ್ಲಿ ನೀಲಿ ಬಣ್ಣದಿಂದ ಕೂಡಿರುತ್ತವೆ. ಈ ಕುಟುಂಬಕ್ಕೆ ಸೇರಿದ ವೆಸ್ಟರ್ನ್ ಸೆಂಟಾರ್ ಓಕ್ ಬ್ಲೂ, ಸಿಲಿಯೆಟ್ ಬ್ಲೂ ಸೇರಿದಂತೆ ವಿವಿಧ ಪ್ರಬೇಧದ ಚಿಟ್ಟೆಗಳು ಹೊಳೆ ದಾಸವಾಳ ಮರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊದಲ ಮಳೆ ಬೀಳುತ್ತಿದ್ದಂತೆ ಈ ಮರದಲ್ಲಿ ಕಾಣುವ ಚಿಗುರೆಲೆಗಳಲ್ಲಿ ಈ ಕುಟುಂಬಕ್ಕೆ ಸೇರಿದ ಚಿಟ್ಟೆಗಳು ಮೊಟ್ಟೆಗಳನ್ನು ಇಡುತ್ತವೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಚಿಟ್ಟೆಗಳು ಮೊಟ್ಟೆಗಳನ್ನು ಇಡುತ್ತವೆ. ಹೀಗೆ ಮೊಟ್ಟೆಗಳಿಂದ ಹೊರಬಂದಿರುವ ಚಿಟ್ಟೆಯ ಹುಳಗಳು ಚಿಗುರೆಲೆಗಳನ್ನು ತಿನ್ನುತ್ತ, ಇದೇ ಮರಗಳಲ್ಲಿ ಹೇರಳವಾಗಿರುವ ಕೆಂಪಿರುವೆ(ತುಳುವಿನಲ್ಲಿ ತಬುರು)ಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತವೆ. ಇದು ಈ ಹುಳಗಳು ವೈರಿಗಳ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಮಾಡುವ ತಂತ್ರವಾಗಿದೆ. ಈ ಹುಳಗಳ ಸುತ್ತ ಇರುವೆಗಳಿರುವುದರಿಂದ ಒಮ್ಮೆಗೇ ವೈರಿಗಳು ಈ ಹುಳದ ಮೇಲೆ ದಾಳಿ ನಡೆಸಲು ಹಿಂದೇಟು ಹಾಕುತ್ತವೆ. ಹೀಗೆ ಈ ಮರದ ಎಲೆಗಳಲ್ಲಿ ಎಲ್ಲಿ ಕೆಂಪಿರುವೆ ಕಾಣಸಿಗುತ್ತದೆಯೋ ಅಲ್ಲಿ ಈ ಹುಳಗಳು ಸಾಮಾನ್ಯವಾಗಿ ಕಂಡು ಬರುತ್ತವೆ.
ತನಗೆ ರಕ್ಷಣೆ ನೀಡುವ ಕೆಂಪಿರುವೆಗಳಿಗೆ ಪ್ರತಿಯಾಗಿ ಈ ಹುಳಗಳು ತನ್ನ ಬೆನ್ನ ಹಿಂದೆ ಸಿಹಿಯಾದ ದ್ರವ (ಹನಿಡೀವ್)ವನ್ನು ಹೊರಸೂಸುತ್ತವೆ. ಇದು ಈ ಹುಳಗಳಿಗೆ ರಕ್ಷಣೆ ನೀಡುವ ಇರುವೆಗಳಿಗೆ ಆಹಾರವಾಗಿದೆ. ಇದನ್ನು ಸೇವಿಸಿಕೊಂಡೇ ಕೆಂಪಿರುವೆಗಳು ಹುಳಗಳಿಗೆ ರಕ್ಷಣೆಯನ್ನು ನೀಡುತ್ತವೆ. ಈ ರೀತಿಯಲ್ಲಿ ಇವುಗಳು ಸಹಬಾಳ್ವೆಯ ಬದುಕನ್ನು ನಡೆಸುತ್ತವೆ ಎಂದು ಚಿಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಮಾತ್ರವಲ್ಲದೆ ವೈರಿಯ ದಾಳಿ ಬಗ್ಗೆ ಮುನ್ಸೂಚನೆ ಬಂದ ಕೂಡಲೇ ಇರುವೆಗಳು ಅಲರ್ಟ್ ಆಗಿ ಸಣ್ಣ ಸಣ್ಣ ಚಿಟ್ಟೆಯ ಹುಳಗಳನ್ನು ತನ್ನ ಬಾಯಿಯಿಂದ ಕಚ್ಚಿಕೊಂಡು ಸುರಕ್ಷತಾ ಸ್ಥಳಗಳಿಗೆ ಕೊಂಡೊಯ್ಯುತ್ತವೆ. ಕೆಲವೊಮ್ಮೆ ಇರುವೆಗಳು ತನ್ನ ಗೂಡಿಗೂ ಆ ಹುಳಗಳನ್ನು ಕೊಂಡೊಯ್ಯುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹೀಗೆ ಈ ಹುಳಗಳು ಕೋಶ ರಚಿಸಿ, ಅದರಿಂದ ಚಿಟ್ಟೆಯಾಗಿ ಹೊರ ಬರುವವರೆಗೂ ಇರುವೆಗಳು ರಕ್ಷಣೆ ಒದಗಿ ಸುತ್ತವೆ ಎಂಬುದು ವಿಶೇಷವಾಗಿದೆ.
ಸಾಮಾನ್ಯವಾಗಿ ಇರುವೆಗಳು ಚಿಟ್ಟೆಗಳ ಹುಳಗಳನ್ನು ಕೊಂದು ತಿನ್ನುತ್ತವೆ. ಆದರೆ ಲೈಸೀನಿಡೀ ಕುಟುಂಬದ ಚಿಟ್ಟೆಯ ಹುಳಗಳನ್ನು ಇರುವೆಗಳು ರಕ್ಷಿಸುವ ಕೆಲಸ ಮಾಡುತ್ತವೆ. ಈ ಕುಟುಂಬದ ಹುಳಗಳು ತಮ್ಮ ದೇಹದಲ್ಲಿ ಸಿಹಿಯಾದ ದ್ರವವನ್ನು ಉತ್ಪಾದಿಸಿ, ಇರುವೆಗಳಿಗೆ ಕೊಡುತ್ತವೆ. ಇದು ಇರುವೆಗಳಿಗೆ ಆಹಾರವಾಗಿರುತ್ತದೆ. ಅದಕ್ಕೆ ಪ್ರತಿಯಾಗಿ ಈ ಇರುವೆಗಳು ಆ ಹುಳಗಳನ್ನು ರಕ್ಷಿಸುತ್ತವೆ. ಇದು ಅದ್ಭುತವಾಗಿದ್ದರೂ ಪ್ರಕೃತಿಯಲ್ಲಿ ನಡೆಯುತ್ತಿರುವ ಸತ್ಯ.
ಸಮ್ಮಿಲನ್ ಶೆಟ್ಟಿ, ಸಂಸ್ಥಾಪಕ,ಚಿಟ್ಟೆ ಪಾರ್ಕ್ ಬೆಳುವಾಯಿ