ನಾನು ಈಗಲೂ ಬ್ಯುಝಿಯಾಗಿದ್ದೇನೆ: ಪ್ರಿಯಾಮಣಿ
ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು ಹಲವರು. ಇನ್ನು ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡವರು. ಆದರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಈ ಎರಡೂ ತೊಂದರೆಗಳನ್ನು ಅನುಭವಿಸಿಲ್ಲ. ಅವರು ಮುಂಬೈನ ಗಂಡನ ಮನೆಯಲ್ಲಿ ಪತಿ ಮುಸ್ತಫಾ ರಾಜ್ ಮತ್ತು ಕುಟುಂಬದ ಜತೆಗೆ ಮನೆಯ ಸದಸ್ಯೆಯಾಗಿ ಕಾಲಕಳೆದಿದ್ದಾರೆ. ಮಾತ್ರವಲ್ಲ ಮದುವೆಯ ಬಳಿಕ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಬರುತ್ತಿದ್ದು ಅವುಗಳಲ್ಲಿ ಬ್ಯುಝಿಯಾಗಿರುವುದಾಗಿ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರ: ಪ್ರಸ್ತುತ ಯಾವುದಾದರೂ ಭಾಷೆಯ ಸಿನೆಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರ?
ಪ್ರಿಯಾಮಣಿ: ಇಲ್ಲ. ಜೂನ್ ತಿಂಗಳಿನಿಂದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದೇನೆ. ತೆಲುಗು ‘ಢೀ’ ಎನ್ನುವ ಡಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಲ್ಲಿ ನಾನೂ ಒಬ್ಬಳು. ಸರಕಾರದ ಸೂಚನೆಗೆ ಅನುಸಾರವಾಗಿ ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಶೂಟಿಂಗ್ ನಡೀತಿದೆ. ಮುಂದಿನ ತಿಂಗಳಿನಿಂದ ನನ್ನ ಸಿನೆಮಾ ಚಿತ್ರೀಕರಣ ಕೂಡ ಆರಂಭವಾಗುವ ಲಕ್ಷಣಗಳಿವೆ. ಹಾಗಂತ ಈಗ ಬಿಡುವಿನಲ್ಲಿದ್ದೇನೆ ಎಂದು ಖಂಡಿತವಾಗಿ ಅಂದುಕೊಳ್ಳಬೇಡಿ. ಹಿಂದಿಯಲ್ಲಿ ‘ಮೈದಾನ್’, ತೆಲುಗಲ್ಲಿ ವೆಂಕಟೇಶ್ ಅವರೊಂದಿಗೆ ‘ನಾರಪ್ಪ’, ರಾಣಾ ದಗ್ಗುಬಾಟಿ ಜತೆಗೆ ‘ವಿರಾಟಪರ್ವಂ’ ಮೊದಲಾದ ಚಿತ್ರಗಳಲ್ಲಿ ಭಾಗಿಯಾಗಿದ್ದೇನೆ. ಆ ಯಾವುದೇ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಿರ್ಮಾಣ ಸಂಸ್ಥೆಯ ಜತೆಗೆ ಕಾಂಟ್ರಾಕ್ಟ್ ಆಗಿದೆ. ಅವರಿಂದ ಒಪ್ಪಿಗೆ ಸಿಕ್ಕ ಮೇಲೆಯೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ. ವಿರಾಟಪರ್ವಂನಲ್ಲಿ ನಕ್ಸಲೈಟ್ ಪಾತ್ರ ಮಾಡುತ್ತಿದ್ದೇನೆ. ಅದರ ಬಗ್ಗೆ ಕೂಡ ಹೆಚ್ಚು ಮಾತನಾಡಲಾರೆ. ಅದು ಕೂಡ ಒಂದು ಡಿಗ್ಲಾಮರೈಸ್ಡ್ ಪಾತ್ರ. ಇವಲ್ಲದೆ ಎರಡು ಮೂರು ಹೊಸ ಪ್ರಾಜೆಕ್ಟ್‌ಗಳಿಗೆ ಕಮಿಟ್ ಆಗಿದ್ದೀನಿ. ಅವುಗಳ ಬಗ್ಗೆ ಸದ್ಯದಲ್ಲಿ ಏನೂ ಹೇಳಲಾರೆ.
ಪ್ರ: ಲಾಕ್‌ಡೌನ್ ದಿನಗಳನ್ನು ಹೇಗೆ ನಿಭಾಯಿಸಿದಿರಿ?
ಪ್ರಿಯಾಮಣಿ: ಲಾಕ್‌ಡೌನ್ ದಿನಗಳನ್ನು ನಿಭಾಯಿಸುವುದು ನನಗೆ ಕಷ್ಟದ ವಿಚಾರವೇನೂ ಆಗಿರಲಿಲ್ಲ. ಆ ಸಂದರ್ಭದಲ್ಲಿ ನಾನು ಮುಂಬೈನಲ್ಲಿ ಗಂಡನ ಮನೆಯಲ್ಲಿದ್ದೆ. ಬಿಡುವಿನ ವೇಳೆಯಲ್ಲಿ ನನಗೆ ಮುಂಚಿನಿಂದಲೂ ಮನೆಯೊಳಗಿದ್ದು ಅಭ್ಯಾಸ ಇದೆ. ಮನೆಯಲ್ಲಿರುವುದು ಅಂದರೆ ನನಗೆ ಇಷ್ಟ ಕೂಡ. ಹಾಗಾಗಿ ಲಾಕ್‌ಡೌನ್ ದಿನಗಳನ್ನು ಫ್ಯಾಮಿಲಿ ಜೊತೆಗೆ ಮನೆಯಲ್ಲಿ ಆರಾಮಾಗಿಯೇ ಕಳೆದೆ. ಆನ್‌ಲೈನ್‌ನಲ್ಲಿ ಸಿನೆಮಾ, ಸೀರೀಸ್ ನೋಡಿಕೊಂಡು ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ. ಮೂರು ತಿಂಗಳಕಾಲ ಅಲ್ಲಿ ಮನೆಗೆಲಸದವರನ್ನು ಕೂಡ ಇರಿಸಿಕೊಳ್ಳುವಂತೆ ಇರಲಿಲ್ಲ. ಹಾಗಾಗಿ ನಾನೇ ಮನೆಗೆಲಸ ಮಾಡುತ್ತಿದ್ದೆ. ಇದೆಲ್ಲ ನನಗೆ ಹೊಸದೇನೂ ಅಲ್ಲ. ಮದುವೆಗಿಂತ ತುಂಬ ಮೊದಲೇ ನಮ್ಮ ಮನೆಯಲ್ಲಿ ನಾನು ಕಸ ಗುಡಿಸುವುದು ಇತ್ಯಾದಿ ಕೆಲಸಗಳ ಮೂಲಕ ನನ್ನ ತಾಯಿಗೆ ಸಹಾಯ ಮಾಡಿದ್ದೇನೆ! ಆದರೆ ಗಂಡನ ಮನೆಯ ಅಡುಗೆ ವಿಚಾರದಲ್ಲಿ ನಾನು ತಲೆ ಹಾಕಿಲ್ಲ. ಯಾಕೆಂದರೆ ಅಡುಗೆ ವಿಭಾಗವನ್ನು ಅವರೇ ನೋಡಿಕೊಂಡಿದ್ರು. ಮನೆ ಕ್ಲೀನ್ ಮಾಡುವುದು ಸೇರಿದಂತೆ ಉಳಿದ ವಿಚಾರವನ್ನೆಲ್ಲ ನಾನು ನನ್ನ ಗಂಡ ಮಾಡಿದ್ದೇವೆ.
ಪ್ರ: ಗಂಡನ ಮನೆಯಲ್ಲಿ ಅವರ ಉತ್ತರ ಭಾರತೀಯ ಆಹಾರ ಶೈಲಿಗೆ ಹೊಂದಿಕೊಂಡಿದ್ದೀರ?
ಪ್ರಿಯಾಮಣಿ: ಹೌದು ಆಹಾರದಲ್ಲಿ ಒಂದಷ್ಟು ವ್ಯತ್ಯಾಸ ಇದೆ. ಆದರೆ ಅಷ್ಟು ಹೊಂದಾಣಿಕೆ ಸಾಧ್ಯವಾಗಲ್ಲ ಅಂದರೆ ಮದುವೆಯಾಗುವುದರಲ್ಲಿ ಅರ್ಥ ಏನಿದೆ? ನನ್ನ ಗಂಡ ಮತ್ತು ಮನೆಯವರು ಹೆಲ್ತೀ ಫುಡ್ ಬಗ್ಗೆ ತುಂಬ ಆಸಕ್ತಿ ವಹಿಸುತ್ತಾರೆ. ಯಾವಾಗಲೂ ಚೆನ್ನಾಗಿರುವ ಆಹಾರವನ್ನೇ ಸೇವಿಸಬೇಕು, ಜಂಕ್ ಫುಡ್ ತಿನ್ನಬಾರದು ಎನ್ನುವುದು ಚಾಲೆಂಜ್ ಅನಿಸಬಹುದು. ಆದರೆ ನಮ್ಮೆಲ್ಲರ ಆದ್ಯತೆಯೂ ಅದೇ ಆಗಿರುವ ಕಾರಣ ಅದರಲ್ಲಿ ಸಮಸ್ಯೆ ಏನೂ ಇಲ್ಲ. ರೋಟಿ, ದಾಲ್ ಹೀಗೆ ಮುಖ್ಯವಾಗಿ ಸಸ್ಯಾಹಾರವೇ ಆಹಾರವಾಗಿತ್ತು. ವಾರಕ್ಕೊಮ್ಮೆ ಹೋಗಿ ಮನೆಗೆ ದಿನಸಿ ತರುವ ಕೆಲಸವನ್ನು ನಾನೇ ಮಾಡುತ್ತಿದ್ದೆ.
ಪ್ರ: ಹೊಂದಾಣಿಕೆಯ ವಿಚಾರಕ್ಕೆ ಬಂದರೆ ಎರಡು ಧರ್ಮಗಳ ಸಂಗಮ ಹೇಗೆ ಅನಿಸಿದೆ?
ಪ್ರಿಯಾಮಣಿ: ಇಲ್ಲಿ ಧರ್ಮಗಳಿಗಿಂತ ಮನುಷ್ಯರಾಗಿ, ಸ್ನೇಹಿತರಾಗಿ ಮತ್ತು ದಂಪತಿಯಾಗಿ ನಾವು ಚೆನ್ನಾಗಿ ಬೆರೆತಿದ್ದೇವೆ. ಧರ್ಮದ ವಿಷಯದಲ್ಲಿ ಹೇಳುವುದಾದರೆ ನಾನು ಮದುವೆಯ ಸಮಯದಲ್ಲೇ ಈ ಬಗ್ಗೆ ಗಂಡನಿಗೆ ತುಂಬ ಸ್ಪಷ್ಟವಾಗಿ ಹೇಳಿಕೊಂಡಿದ್ದೆ. ಧರ್ಮ ಬದಲಾಯಿಸುವುದು ಎನ್ನುವುದು ವೈಯಕ್ತಿಕ ಆಯ್ಕೆಯ ವಿಚಾರ. ಅವರ ಧರ್ಮವನ್ನು ನಾನು ಗೌರವಿಸುತ್ತೇನೆ. ಅವರು ಕೂಡ ನನ್ನ ಧರ್ಮವನ್ನು ಗೌರವಿಸುತ್ತಾರೆ.