ಈ ಪುಟ್ಟ ಕೆಂಪು ಬೀಜಗಳು ಕೂದಲ ಬೆಳವಣಿಗೆ ಮತ್ತು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ
ಗಾರ್ಡನ್ ಕ್ರೆಸ್ ಸೀಡ್ಸ್ ಅಥವಾ ಹಲೀಮ್ ಅಥವಾ ಆಳ್ವಿ ಬೀಜಗಳು ಈಗ ಭಾರತದಲ್ಲಿ ಜನರು ಹೆಚ್ಚುಕಡಿಮೆ ಮರೆತಿರುವ ಆಹಾರಗಳಲ್ಲಿ ಒಂದಾಗಿಬಿಟ್ಟಿದೆ. ಆಳ್ವಿ ಜಲಸಸ್ಯವಾಗಿದ್ದು,ಇದನ್ನು ತರಕಾರಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಕೂದಲ ಬೆಳವಣಿಗೆಯಿಂದ ಹಿಡಿದು ಎದೆಹಾಲುಣಿಸುವ ತಾಯಂದಿರವರೆಗೆ ಹಲವಾರು ಆರೋಗ್ಯ ಲಾಭಗಳನ್ನು ಆಳ್ವಿ ಬೀಜಗಳು ನೀಡುತ್ತವೆ.
ಆಯುರ್ವೇದದಲ್ಲಿ ಆಳ್ವಿ ಬೀಜಗಳ ಉಲ್ಲೇಖವಿದ್ದು,ಇವು ಮಹಿಳೆಯರು ಹೆರಿಗೆಯ ಬಳಿಕ ಚೇತರಿಸಿಕೊಳ್ಳಲು ನೆರವಾಗುತ್ತವೆ. ಹೆರಿಗೆಯ ನಂತರ ಚರ್ಮ ಮತ್ತು ತಲೆಗೂದಲ ಆರೋಗ್ಯಕ್ಕೂ ಇವು ಪೂರಕವಾಗಿವೆ.
ಆಳ್ವಿ ಬೀಜಗಳಲ್ಲಿ ಸಮೃದ್ಧವಾಗಿರುವ ಕಬ್ಬಿಣ,ಫಾಲಿಕ್ ಆ್ಯಸಿಡ್,ವಿಟಾಮಿನ್ ಇ ಮತ್ತು ವಿಟಾಮಿನ್ ಎ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಕೊರೋನ ವೈರಸ್‌ನಿಂದ ಚೇತರಿಸಿಕೊಳ್ಳುವವರಿಗೆ ಈ ಬೀಜಗಳು ಲಾಭದಾಯಕವಾಗಿವೆ.
ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸಲು ಆಳ್ವಿ ಬೀಜಗಳು ಪೂರಕವಾಗಿವೆ. ಸಂತಾನವನ್ನು ಬಯಸುವವರು ಆಳ್ವಿ ಬೀಜಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು.
ಪ್ರೌಢಾವಸ್ಥೆಗೆ ತಲುಪುತ್ತಿರುವ ಮಕ್ಕಳ ಪಾಲಿಗೂ ಈ ಬೀಜಗಳು ಅಚ್ಚರಿದಾಯಕ ಪರಿಣಾಮಗಳನ್ನು ನೀಡುತ್ತವೆ. ಮೊಡವೆಗಳು ಏಳುವುದನ್ನು ಕಡಿಮೆ ಮಾಡಲು ಆಳ್ವಿ ಬೀಜಗಳು ನೆರವಾಗುತ್ತವೆ. ಋತುಬಂಧಕ್ಕೊಳಗಾಗಿರುವ ಮಹಿಳೆಯರು ಆಳ್ವಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.
ಅಕಾಲದಲ್ಲಿ ತಲೆಯ ಕೂದಲುದುರಿ ಬೊಕ್ಕತನಕ್ಕೆ ಗುರಿಯಾಗುವ ಅಪಾಯದಲ್ಲಿರುವ ಯುವಜನರು ಆಳ್ವಿ ಬೀಜಗಳನ್ನು ಸೇವಿಸುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ಇದೇ ರೀತಿ ತಲೆ ಬೋಳಾಗುತ್ತಿರುವ ಮಧ್ಯವಯಸ್ಕರೂ ಈ ಬೀಜದ ಸೇವನೆಯ ಲಾಭಗಳನ್ನು ಪಡೆಯಬಹುದು.
ಆಳ್ವಿ ಬೀಜಗಳು ಕೆಮೊ ಪ್ರೊಟೆಕ್ಟಿವ್ ಗುಣಗಳನ್ನು ಹೊಂದಿರುವುದರಿಂದ ಚಿಕಿತ್ಸೆಯನ್ನು ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತವೆ.
ಆಳ್ವಿ ಬೀಜಗಳನ್ನು ಸೇವಿಸುವುದರಿಂದ ಮೂಡ್‌ನಲ್ಲಿ ಬದಲಾವಣೆಗಳು ಮತ್ತು ಸಿಹಿಯನ್ನು ತಿನ್ನಬೇಕು ಎಂಬ ತುಡಿತವನ್ನು ಕಡಿಮೆ ಮಾಡಬಹುದು.
ಸಾಂಪ್ರದಾಯಿಕವಾಗಿ ಆಳ್ವಿ ಬೀಜಗಳನ್ನು ಆರೋಗ್ಯಕರ ಕೊಬ್ಬಿನ ಮೂಲಗಳೊಂದಿಗೆ ಸೇವಿಸಲಾಗುತ್ತದೆ. ಆದ್ದರಿಂದ ತುಪ್ಪ,ಕೊಬ್ಬರಿ ಮತ್ತು ಬೆಲ್ಲ ಬಳಸಿ ಆಲ್ವಿ ಲಾಡುಗಳನ್ನು ತಯಾರಿಸಬಹುದು. ರಾತ್ರಿ ನಿದ್ರೆಗೆ ಮುನ್ನ ಹಾಲಿನಲ್ಲಿ ನೆನೆಸಿಟ್ಟ ಈ ಬೀಜಗಳನ್ನು ಸೇವಿಸಬಹುದು. ಕೊಬ್ಬಿನ ಮೂಲಗಳು ಆಳ್ವಿ ಬೀಜಗಳಿಂದ ಪೋಷಕಾಂಶಗಳ ಹೀರಿಕೆಯನ್ನು ಸುಗಮಗೊಳಿಸುತ್ತವೆ.
ಆಳ್ವಿ ಬೀಜಗಳನ್ನು ಒಂದು ಮಿತಿಯಲ್ಲಿ ಸೇವಿಸಬೇಕು. ಮೊದಲ ಬಾರಿ ಈ ಬೀಜಗಳನ್ನು ಸೇವಿಸುವವರಿಗೆ ಅದು ಪಚನವಾಗುವುದು ಕಠಿಣವಾಗಬಹುದು.