varthabharthi


ಈ ಹೊತ್ತಿನ ಹೊತ್ತಿಗೆ

ಗೋಡೆಗಳ ನಡುವಿನಿಂದಲೇ, ಗೋಡೆ ಒಡೆಯುವ ಕನಸು

ವಾರ್ತಾ ಭಾರತಿ : 20 Sep, 2020
-ಕಾರುಣ್ಯಾ

ಕಾವ್ಯದ ಬಹುಮುಖ್ಯ ಉದ್ದೇಶವೇ ಗೋಡೆಗಳನ್ನು ಕೆಡಹುವುದು. ಅದು ಕುಕ್ಕರಿನ ಒಳಗೆ ಆವಿ ಧಗಧಗಿಸುತ್ತಿರುವ ಹೊತ್ತಿನಲ್ಲೇ ಹೊರ ಬರುವ ಸೀಟಿಯಂತೆ. ಆ ಸೀಟಿ ಹೊರಬರುವ ಅವಕಾಶವಿಲ್ಲದೆ ಇದ್ದರೆ ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಸೀಟಿ ಎನ್ನುವುದು ಉಳಿದವರಿಗೆ ನೀಡುವ ಸಂದೇಶ ಮಾತ್ರವಲ್ಲ, ಒಳಗಿನ ಬೇಗುದಿಯನ್ನು ಹೊರ ಹಾಕುವ ಒಂದು ದಾರಿ. ಸೀಟಿಯ ಸದ್ದುಗಳೇ ಒಳಗೆ ಬೆಂದ ಅನ್ನದ ಸೂಚನೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲೇ ಮುಂಬೈಯ ಕವಯಿತ್ರಿ ಗಿರಿಜಾಶಾಸ್ತ್ರಿಯವರು ಹೆಣ್ಣನ್ನು ‘ಕುಕ್ಕರ್’ಗೆ ಹೋಲಿಸಿ ಒಂದು ಕವಿತೆಯನ್ನು ಬರೆದಿದ್ದಾರೆ. ಈ ಹಿನ್ನೆಲೆ ಆಯಿಶಾ ಯು. ಕೆ. ಎನ್ನುವ ಮಹಿಳಾ ಕವಯತ್ರಿಯ ಚೊಚ್ಚಲ ಕೃತಿ ಕುತೂಹಲ ಕೆರಳಿಸುತ್ತದೆ.

ಇಂದು ಗೋಡೆ ನಮ್ಮನ್ನೆಲ್ಲ ಹಲವು ರೀತಿಯಲ್ಲಿ ಆವರಿಸಿಕೊಂಡಿದೆ. ಜಾತಿ, ಮತ, ಧರ್ಮ ಇಷ್ಟೇ ಅಲ್ಲ, ಹೆಣ್ಣುಗಳಿಗಾಗಿಯೇ ಒಂದು ಪ್ರತ್ಯೇಕ ಗೋಡೆಯನ್ನು ನಿರ್ಮಿಸಿ, ಅದರೊಳಗೆ ಇನ್ನೂ ಒಳಗೋಡೆಗಳನ್ನು ಕಟ್ಟಲಾಗಿದೆ. ಅನೇಕ ಸಂದರ್ಭಗಳಲ್ಲಿ ಈ ಗೋಡೆಗಳಿಗೆ ಬಿರುಕು ಕೊರೆಯಲು ಕವಿತೆ ನೆರವಾಗುತ್ತದೆ. ಯುವ ಕವಯಿತ್ರಿ ಆಯಿಶಾ ಯು.ಕೆ. ಅವರು ಗೋಡೆಗಳನ್ನು ಕೆಡಹುವ ಉದ್ದೇಶದಿಂದಲೇ ‘ಗೋಡೆಗಳನ್ನು ಕಟ್ಟುವವರು’ ಕವನ ಸಂಕಲನಗಳ ಕೃತಿಯನ್ನು ಹೊರತಂದಿದ್ದಾರೆ. ಇದು ಲೇಖಕಿಯ ಚೊಚ್ಚಲ ಕವನ ಸಂಕಲನ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ವೇಳೆ ಗುಜರಾತ್‌ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಗೋಡೆ ಇಲ್ಲಿರುವ ಒಂದು ಕವಿತೆಗೆ ಸ್ಫೂರ್ತಿಯಾಗಿದ್ದರೂ, ಎಲ್ಲ ಬಗೆಯ ಗೋಡೆಗಳಿಗೂ ಇದು ರೂಪಕವಾಗಿ ನಿಲ್ಲುತ್ತದೆ. ಇಡೀ ದೇಶದ ಜನರನ್ನೇ ಅಕ್ಷರಶಃ ಬೇರ್ಪಡಿಸಿದ ಲಾಕ್‌ಡೌನ್ ಎನ್ನುವ ಗೋಡೆಯ ಮಧ್ಯದಲ್ಲಿ ಅರಳಿದ ಕೃತಿಯಿದು. ಇಲ್ಲಿ ಒಟ್ಟು 50 ಕವಿತೆಗಳಿವೆ.

‘ಸಾಹಿತ್ಯ ವಿರಳವಾದ/ಸರಳ ಭಾಷೆ ನನ್ನ ಕವಿತೆ’ ಎನ್ನುವ ಮೂಲಕ ಆರಂಭದಲ್ಲೇ ಕವಯಿತ್ರಿ ತನ್ನ ಕವಿತೆಗಳ ಕುರಿತಂತೆ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುತ್ತಾರೆ. ಮನದ ಭಾವನೆಗಳ ಪಲ್ಲವಿಸಿದ ಪದಗಳೇ ನನ್ನ ಕವಿತೆ ಎನ್ನುತ್ತಾ...ನಾನೇಕೆ ಪದ್ಯ ಬರೆಯುತ್ತೇನೆ ಎನ್ನುವುದನ್ನು ‘ನನ್ನ ಕವಿತೆ’ ಪದ್ಯದಲ್ಲಿ ಸರಳವಾಗಿ ನೇರವಾಗಿ ಹೇಳುತ್ತಾರೆ. ಗೋಡೆಗಳನ್ನು ಒಡೆಯುವ ಉದ್ದೇಶದಿಂದಲೇ ಪ್ರತಿ ಪದ್ಯಗಳು ಹುಟ್ಟಿವೆಯಾದರೂ, ತನ್ನ ಧರ್ಮ, ಸಂಪ್ರದಾಯ, ಆಚರಣೆಗಳ ಗೋಡೆಗಳ ಒಳಗಿನಿಂದಲೇ ತಮ್ಮ ಪಿಸು ಮಾತುಗಳನ್ನು ಹೊರಗೆಡಹುತ್ತಾರೆ. ಧರ್ಮದ ಒಳಿತುಗಳು, ನಂಬಿಕೆಗಳು ಹಲವು ಪದ್ಯಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ದೇವರ ಮೇಲಿನ ನಂಬಿಕೆ ಇಲ್ಲಿರುವ ಪದ್ಯಗಳ ಆಧಾರ ಸ್ತಂಭವಾಗಿದೆ. ಇದೇ ಸಂದರ್ಭದಲ್ಲಿ ಧರ್ಮದ ದುರುಪಯೋಗಗಳ ಬಗ್ಗೆ, ಅವುಗಳನ್ನು ರಾಜಕಾರಣಕ್ಕೆ ಬಳಸುವ, ಹೆಣ್ಣನ್ನು ಶೋಷಣೆಗೆ ಬಳಸುವ ಗೋಡೆಗಳ ಕುರಿತಂತೆ ಬರೆಯುವ ಧೈರ್ಯವನ್ನು ಇನ್ನೂ ಮೈಗೂಡಿಸಿಕೊಂಡಿಲ್ಲ. ಇಷ್ಟಾದರೂ, ‘ಅವನು’ ಎನ್ನುವ ಪುಟ್ಟ ಹನಿ ಎದೆಗೆ ಸಣ್ಣಗೆ ಬಂದು ತಾಕುತ್ತದೆ ‘ಅವನೆಂದರೆ...!

ಅವ-
ನೆಂದರೆ

ಬೈರಾಸಿಗಾಗಿ ನನ್ನ ಕರೆಯುವವ!!’  ದಾಂಪತ್ಯದಲ್ಲಿ ಕೆಲವೊಮ್ಮೆ ಪತ್ನಿಯ ಸ್ಥಾನ ಹೇಗೆ ಸಂಕುಚಿತಗೊಳ್ಳಬಹುದು ಎನ್ನುವ ಆಶಯವನ್ನೂ ಈ ಹನಿ ಹೊಂದಿದೆ. ಆಯಿಶಾ ಅವರು ಇನ್ನಷ್ಟು ತೀವ್ರವಾಗಿ ಬದುಕುತ್ತಾ, ಓದುತ್ತಾ ಇನ್ನಷ್ಟು, ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ಬೆಳೆಯಬೇಕು. ಈ ನಿಟ್ಟಿನಲ್ಲಿ ಈ ಚೊಚ್ಚಲ ಸಂಕಲನ ಒಂದು ಸಣ್ಣ ಕವಾಯತು ಎಂದು ತಿಳಿದುಕೊಳ್ಳಬಹುದು.

ಭಾರತ ಪ್ರಕಾಶನ, ಮಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 112. ಮುಖಬೆಲೆ 120 ರೂಪಾಯಿ. ಆಸಕ್ತರು 90601 02626 ದೂರವಾಣಿಯನ್ನು ಸಂಪರ್ಕಿಸಬಹುದು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)