ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕೇ? ಹಾಗಿದ್ದರೆ ಅರಿಷಿಣ ಹಾಲನ್ನು ಸೇವಿಸಿ
ಅತ್ಯಂತ ಜನಪ್ರಿಯವಾಗಿರುವ ಅರಿಷಿಣ ಹಾಲು ಇಂದಿನ ದಿನಗಳಲ್ಲಿ ಪರೋಕ್ಷ ವರದಾನವಾಗಿದೆ ಎನ್ನಬಹುದು. ಹಾಲಿಗೆ ಅರಿಷಿಣ ಪುಡಿಯನ್ನು ಸೇರಿಸಿ ಸೇವಿಸುವುದರಿಂದ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ. ಕೋವಿಡ್ ಸಾಂಕ್ರಾಮಿಕದ ಅಬ್ಬರವಿರುವ ಇಂದು ಅರಿಷಿಣ ಹಾಲು ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಅದು ನಮ್ಮ ಆರೋಗ್ಯಕ್ಕೆ ರಕ್ಷಣೆಯನ್ನು ನೀಡುತ್ತದೆ. ಇದು ನೀಡುವ ಕೆಲವು ಆರೋಗ್ಯಲಾಭಗಳು ಇಲ್ಲಿವೆ.....
►ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಷಿಣದಲ್ಲಿ ಬ್ಯಾಕ್ಟೀರಿಯಾ ನಿರೋಧಕ,ವೈರಸ್ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳಿವೆ. ಹೀಗಾಗಿ ಫ್ಲೂ,ಶೀತ ಮತ್ತು ಕೆಮ್ಮಿನ ಸಂದರ್ಭಗಳಲ್ಲಿ ಸೇವಿಸಿದರೆ ಅತ್ಯುತ್ತಮ ಪರಿಣಾಮಗಳನ್ನು ನೀಡುತ್ತದೆ.
►ಉರಿಯೂತ ನಿರೋಧಕ
ತನ್ನ ಉರಿಯೂತ ನಿರೋಧಕ ಪರಿಣಾಮಗಳಿಗೆ ಅರಿಷಿಣ ಹಾಲು ಹೆಸರಾಗಿದೆ. ತನ್ನ ಈ ಗುಣದಿಂದಾಗಿ ಅದು ಹೃದಯ ಕಾಯಿಲೆ,ಸಂಧಿವಾತ ಇತ್ಯಾದಿಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.
►ಗಾಯಗಳನ್ನು ಮಾಯಿಸುತ್ತದೆ
ಈಗಲೂ ಮಕ್ಕಳು ಬಿದ್ದು ಗಾಯ ಮಾಡಿಕೊಂಡರೆ ಹಿರಿಯರು ಹಾಲಿಗೆ ಅರಿಷಿನ ಪುಡಿಯನ್ನು ಸೇರಿಸಿ ಸೇವಿಸುವಂತೆ ಹೇಳುತ್ತಾರೆ. ಅರಿಷಿಣ ಹಾಲು ಗಾಯಗಳನ್ನು ಮಾಯಿಸುವ ಗುಣವನ್ನು ಹೊಂದಿದೆ ಮತ್ತು ಕೋಶಗಳಿಗೆ ಹಾನಿಯನ್ನು ತಡೆಯುತ್ತದೆ.
►ಮಿದುಳಿನ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ
ಅರಿಷಿಣ ಹಾಲು ಮಿದುಳನ್ನು ಚುರುಕಾಗಿಸುತ್ತದೆ,ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒಳ್ಳೆಯ ನಿದ್ರೆಯನ್ನು ನೀಡುತ್ತದೆ. ಅರಿಷಿಣವು ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಅರಿಷಿಣ ಹಾಲನ್ನು ಸೇವಿಸುವುದು ನಿದ್ರಾಹೀನತೆಯ ಸಮಸ್ಯೆಯಿರುವವರಿಗೆ ಹೆಚ್ಚು ಲಾಭದಾಯಕವಾಗಿದೆ.
►ಹಾರ್ಮೋನ್ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ
ಮಹಿಳೆಯರು ಅರಿಷಿಣ ಹಾಲನ್ನು ಸೇವಿಸುತ್ತಿದ್ದರೆ ನಿಯಮಿತ ಋತುಚಕ್ರಕ್ಕೆ ನೆರವಾಗುತ್ತದೆ. ಅರಿಷಿಣವು ಮೊಡವೆಗಳಿಗೂ ಉತ್ತಮ ಚಿಕಿತ್ಸೆಯಾಗಿದೆ. ಅರಿಷಿಣವನ್ನು ಚರ್ಮಕ್ಕೆ ನೇರವಾಗಿ ಲೇಪಿಸುವುದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
►ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅರಿಷಿಣ ಹಾಲು ಟೈಪ್-1 ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ ಎನ್ನುವುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಅದು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನೂ ಕಡಿಮೆ ಮಾಡುತ್ತದೆ.
►ಪಚನಕ್ಕೆ ನೆರವಾಗುತ್ತದೆ
ಅರಿಷಿಣದ ಹಾಲು ಶರೀರದಲ್ಲಿ ಆಮ್ಲಗಳ ಮಟ್ಟವನ್ನು ನಿಯಂತ್ರಿಸುತ್ತದೆ,ಹೀಗಾಗಿ ಆ್ಯಸಿಡಿಟಿ ಇತ್ಯಾದಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಆದರೆ ಅತಿಯಾದ ಅರಿಷಿಣ ಸೇವನೆಯು ಕೆರಳುವಿಕೆಯನ್ನು ಉಂಟು ಮಾಡಬಹುದು,ಹೀಗಾಗಿ ಹಾಲಿಗೆ ಚಿಟಿಕೆಯಷ್ಟು ಅರಿಷಿಣ ಪುಡಿಯನ್ನು ಸೇರಿಸಿದರೆ ಸಾಕು.
►ಉತ್ಕರ್ಷಣ ನಿರೋಧಕ
ಅರಿಷಿಣ ಹಾಲು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ
ಉತ್ತಮ ಪರಿಣಾಮಗಳಿಗಾಗಿ ಅರಿಷಿಣ ಹಾಲಿಗೆ ದಾಲ್ಚಿನ್ನಿ,ಜಾಯಿಕಾಯಿ,ಕರಿಮೆಣಸು,ಶುಂಠಿ ಇವುಗಳನ್ನು ಸೇರಿಸಿಕೊಂಡು ಸೇವಿಸಬಹುದು.