ಅವಸರದಲ್ಲಿ ಆಹಾರ ಸೇವಿಸಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ
ನೀವು ಅವಸರದಿಂದ ಆಹಾರವನ್ನು ಸೇವಿಸುತ್ತೀರಾ? ಒಂದು ತುತ್ತನ್ನು 32 ಬಾರಿ ಅಗಿಯಬೇಕು ಎಂಬ ಪ್ರಸಿದ್ಧ ಮಾತನ್ನು ನೀವು ಕೇಳಿದ್ದೀರಾ? ಇದು ನಿಜ,ಏಕೆಂದರೆ ಹಾಗೆ ಮಾಡುವುದರಿಂದ ಆಹಾರವು ಶೀಘ್ರ ಪಚನಗೊಳ್ಳುತ್ತದೆ ಮತ್ತು ಜೀರ್ಣಾಂಗವು ಸೂಕ್ತವಾಗಿ ಕೆಲಸ ಮಾಡುತ್ತದೆ. ಇದರರ್ಥ ನೀವು ಅವಸರದಿಂದ ಆಹಾರವನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಇಂದಿನ ಗಡಿಬಿಡಿಯ,ಯಾಂತ್ರಿಕ ಜೀವನದಲ್ಲಿ ಜನರಿಗೆ ಸಕಾಲದಲ್ಲಿ ಆಹಾರವನ್ನು ಸೇವಿಸಲೂ ಸಾಧ್ಯವಾಗುವುದಿಲ್ಲ, ಹೀಗಾಗಿ ತಿನ್ನಬೇಕಿರುವುದನ್ನು ಅವಸರದಲ್ಲಿಯೇ ತಿಂದು ಮುಗಿಸುತ್ತಾರೆ. ಅವಸರದಲ್ಲಿ ಆಹಾರ ಸೇವನೆಯ ಜೊತೆಗೆ ಗುರುತಿಸಿಕೊಂಡಿರುವ ಐದು ಅನಾನುಕೂಲಗಳ ಬಗ್ಗೆ ಮಾಹಿತಿಯಿಲ್ಲಿದೆ.
►ಬೊಜ್ಜು ಹೆಚ್ಚುತ್ತದೆ
ಹೆಚ್ಚಿನವರು ಆಹಾರವು ಬೊಜ್ಜಿಗೆ ಕಾರಣವೆಂದು ಭಾವಿಸಿರುತ್ತಾರೆ ಮತ್ತು ಬೊಜ್ಜು ತಗ್ಗಿಸಲೆಂದು ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಆದರೆ ಆರೋಗ್ಯಯುತ ಶರೀರಕ್ಕಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅಗತ್ಯ ಎನ್ನುವುದನ್ನು ಅವರು ಕಡೆಗಣಿಸಿರುತ್ತಾರೆ. ಉದ್ಯೋಗದಲ್ಲಿರುವವರು ಅಥವಾ ವ್ಯವಹಾರ ನಡೆಸುತ್ತಿರುವವರು ಹೆಚ್ಚಾಗಿ ಅವಸರದಲ್ಲಿಯೇ ಊಟ ಮಾಡುತ್ತಾರೆ. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುತ್ತದೆ ಮತ್ತು ಶರೀರದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಬೊಜ್ಜುದೇಹ ಉಂಟಾಗುತ್ತದೆ. ಹೀಗಾಗಿ ಅವಸರದಲ್ಲಿ ಊಟ ಮಾಡುವ ಅಭ್ಯಾಸವಿದ್ದರೆ ಸಾಧ್ಯವಿದ್ದಷ್ಟು ಮಟ್ಟಿಗೆ ಅದನ್ನು ನಿವಾರಿಸುವುದು ಒಳ್ಳೆಯದು.
►ನಡೆದಾಡುತ್ತ ಅಥವಾ ನಿಂತುಕೊಂಡು ಆಹಾರ ಸೇವಿಸಬೇಡಿ
ಹೆಚ್ಚಿನ ಸಲ ಪಾರ್ಟಿ,ಮದುವೆ ಅಥವಾ ಡಿನ್ನರ್ ಕಾರ್ಯಕ್ರಮಗಳಲ್ಲಿ ಜನರು ನಿಂತುಕೊಂಡು ಅವಸರದಲ್ಲಿ ಊಟ ಮಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಇದು ಕಾಲಕ್ರಮೇಣ ಫ್ಯಾಷನ್ ಆಗಿಬಿಟ್ಟಿದೆ. ಆದರೆ ಮನೆಯಲ್ಲಿಯೂ ನೀವು ಹೀಗೆಯೇ ಮಾಡುತ್ತಿದ್ದರೆ? ಹಾಗಿದ್ದರೆ ಅದು ನಿಮ್ಮ ಜೀರ್ಣಾಂಗವನ್ನು ಹಾಳುಮಾಡುತ್ತದೆ. ಅಲ್ಲದೆ ನಿಂತುಕೊಂಡು ಊಟ ಮಾಡುತ್ತಿರುವಾಗ ಹಸಿವೆಯಾಗುವುದಿಲ್ಲ,ಆದರೂ ನೀವು ಹೆಚ್ಚು ಆಹಾರವನ್ನು ಸೇವಿಸುತ್ತೀರಿ. ಇದು ಶರೀರದ ತೂಕ ಹೆಚ್ಚಲು ಕಾರಣವಾಗುತ್ತದೆ.
►ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಪ್ರತಿ ದಿನ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯು ಎಷ್ಟು ಮುಖ್ಯವೋ ಆಹಾರವನ್ನು ಆರಾಮವಾಗಿ ಕುಳಿತುಕೊಂಡು ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದೂ ಅಷ್ಟೇ ಮುಖ್ಯವಾಗಿದೆ. ಆಹಾರ ಸೇವನೆಯು ಶರೀರ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ. ಅಲ್ಲದೆ ನಿಮಗೆ ಹಸಿವು ಪ್ರಾರಂಭವಾಗುವ ಮೊದಲೇ ಆಹಾರ ಸೇವನೆಯನ್ನು ಆರಂಭಿಸಿ,ಏಕೆಂದರೆ ಹಸಿದಾಗ ನೀವು ಏನಿರುತ್ತದೋ ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನುತ್ತೀರಿ ಮತ್ತು ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
►ವಾಯು ಸಮಸ್ಯೆ
ಜಠರದಲ್ಲಿ ವಾಯು ಉತ್ಪತ್ತಿಯಾಗಲು ಹಲವಾರು ಕಾರಣಗಳಿದ್ದು,ಅವಸರದ ಆಹಾರ ಸೇವನೆಯೂ ಅವುಗಳಲ್ಲಿ ಒಂದಾಗಿದೆ. ಇಂತಹ ಸ್ಥಿತಿಯಲ್ಲಿ ಆಹಾರವು ಜೀರ್ಣವಾಗುವುದು ಕಠಿಣವಾಗುತ್ತದೆ ಮತ್ತು ಹೊಟ್ಟೆಯುಬ್ಬರ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಜಠರದಲ್ಲಿ ವಾಯು ಅಥವಾ ಆ್ಯಸಿಡಿಟಿ ಉಂಟಾಗದಿರಲು ಆಹಾರವನ್ನು ನಿಧಾನವಾಗಿ ಸೇವಿಸಬೇಕಾಗುತ್ತದೆ. ಇದಲ್ಲದೆ ಕೆಲವೊಮ್ಮೆ ಜನರು ಆಹಾರವನ್ನು ತ್ವರಿತವಾಗಿ ನುಂಗಲು ನೀರನ್ನು ಕುಡಿಯುತ್ತಾರೆ,ಇದು ಶರೀರಕ್ಕೆ ಹಾನಿಕರವಾಗಿದೆ ಮತ್ತು ಜೀರ್ಣಾಂಗವು ಹಾಳಾಗಲು ಕಾರಣವಾಗುತ್ತದೆ.
►ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು
ಹೌದು,ಅವಸರದಿಂದ ಆಹಾರ ಸೇವನೆಯು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಲ್ಲದು ಎನ್ನುವುದು ನಿಮಗೆ ಅಚ್ಚರಿಯನ್ನುಂಟು ಮಾಡಬಹುದು. ಅವಸರದಿಂದ ಊಟ ಮಾಡುವುದರಿಂದ ಶರೀರದಲ್ಲಿ ಇನ್ಸುಲಿನ್ ಪ್ರತಿರೋಧವು ಆರಂಭಗೊಳ್ಳುತ್ತದೆ ಮತ್ತು ಇದರಿಂದಾಗಿ ರಕ್ತದಲ್ಲಿಯ ಸಕ್ಕರೆ ಮಟ್ಟವು ಏರಿಕೆಯಾಗುತ್ತದೆ. ದೀರ್ಘಾವಧಿಯಲ್ಲಿ ಅವಸರದಿಂದ ಆಹಾರ ಸೇವನೆಯ ಅಭ್ಯಾಸವು ವ್ಯಕ್ತಿಯನ್ನು ಮಧುಮೇಹಿಯನ್ನಾಗಿಸಬಹುದು. ಈಗಾಗಲೇ ಮಧುಮೇಹ ಪೀಡಿತರು ಅವಸರದಲ್ಲಿ ಆಹಾರ ಸೇವಿಸಿದರೆ ಅದು ಅತ್ಯಂತ ಅಪಾಯಕಾರಿಯಾಗಬಲ್ಲದು. ಹೀಗಾಗಿ ಆಹಾರವನ್ನು ಯಾವಾಗಲೂ ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನಬೇಕು.
ವಿಜ್ಞಾನಿಗಳು ಹೇಳುವಂತೆ ನಾವು ಯಾವಾಗಲೂ ಆಹಾರವನ್ನು ನಿಧಾನವಾಗಿ,ಅಗಿದು,ಅದರ ರುಚಿಯನ್ನು ಅನುಭವಿಸುತ್ತ ಸೇವಿಸಬೇಕು. ಇದು ಆಹಾರ ಜೀರ್ಣಗೊಳ್ಳುವುದನ್ನು ಸುಲಭವಾಗಿಸುತ್ತದೆ.