varthabharthi


ಈ ಹೊತ್ತಿನ ಹೊತ್ತಿಗೆ

ಮುಟ್ಟಿನ ಸಾಮಾಜಿಕ ಆಯಾಮಗಳ ಕಡೆಗೆ ಬೆಳಕು ಚೆಲ್ಲುವ ‘ಮುಟ್ಟು-ಏನಿದರ ಒಳಗುಟ್ಟು?’

ವಾರ್ತಾ ಭಾರತಿ : 22 Sep, 2020
ಕಾರುಣ್ಯಾ

ನಾವು ಇನ್ನೊಬ್ಬರನ್ನು ತಲುಪುವ ಹಂತವನ್ನು ‘ಮುಟ್ಟುವುದು’ ಎಂದು ವ್ಯಾಖ್ಯಾನಿಸಬಹುದು. ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಈ ಸ್ಪರ್ಷ ರಾಜಕೀಯ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗೊಳಗಾಗಿವೆ. ಜಾತಿ-ಜಾತಿಗಳ ನಡುವೆ ಮಾತ್ರವಲ್ಲ, ಗಂಡು ಹೆಣ್ಣಿನ ನಡುವೆಯೂ ಮುಟ್ಟುವ ಕುರಿತಂತೆ ಬಹಳಷ್ಟು ವಾದ ವಿವಾದಗಳು ಎದ್ದಿವೆ. ಮುಟ್ಟಲಾರದವರು ಎನ್ನುವ ಕಾರಣಕ್ಕಾಗಿಯೇ ಪತಿ ತೀರಿದ ಮಹಿಳೆಯರನ್ನು ‘ವಿಧವೆ’ಯರು ಎಂದು ಕರೆದು ಅವರಿಗಾಗಿಯೇ ಪ್ರತ್ಯೇಕ ಕೇರಿಯನ್ನು ನಿರ್ಮಿಸಿದ ಸಮಾಜ ನಮ್ಮದು. ದಲಿತರ ಕೇರಿ, ಅಗ್ರಹಾರ ಮೊದಲಾದ ಪದಗಳ ಹಿಂದೆ ಈ ಮುಟ್ಟುವ ರಾಜಕಾರಣವಿದೆ.

ವಿಪರ್ಯಾಸವೆಂದರೆ, ಸೃಷ್ಟಿ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ‘ಮುಟ್ಟು’ ಈ ದೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಪಾಲಿಗೆ ಅಮಂಗಳವಾಗಿರುವುದು. ಮುಟ್ಟಾದ ಮಹಿಳೆ ಇಲ್ಲಿ ಎಲ್ಲ ಶುಭ ಕಾರ್ಯಗಳಿಗೆ ಅಸ್ಪಶ್ಯಳಾಗುತ್ತಾಳೆ. ಮುಟ್ಟಿನ ಕುರಿತಂತೆ ಇರುವ ಪುರುಷ ಪ್ರಧಾನ ಮನಸ್ಥಿತಿ, ಶಬರಿಮಲೆ ಪ್ರಕರಣದಿಂದಾಗಿ ಇನ್ನಷ್ಟು ಚರ್ಚೆಗೊಳಗಾಯಿತು. ‘ಮುಟ್ಟು’ ಎನ್ನುವುದರ ಕುರಿತಂತೆ ಸಮಾಜ ಹೊಂದಿರುವ ವೌಢ್ಯಗಳಿಗೆ, ಮಹಿಳೆ ಬಲಿಪಶುವಾಗುತ್ತಾ ಬಂದಿದ್ದಾಳೆ. ಮಹಿಳೆ ಒಂದೆಡೆ, ಮುಟ್ಟಿನ ಸಂದರ್ಭದಲ್ಲಿ ದೈಹಿಕ ಹಾಗೂ ಮಾನಸಿಕ ನೋವು ದುಮ್ಮಾನಗಳನ್ನು ಅನುಭವಿಸಬೇಕು. ಮಗದೊಂದೆಡೆ ಯಾವುದೋ ತಪ್ಪು ಮಾಡಿದವಳಂತೆ ಸಮಾಜದ ಮುಂದೆ ಕದ್ದು ಮುಚ್ಚಿ ಬದುಕಬೇಕು. ಈ ಆಧುನಿಕ ದಿನಗಳಲ್ಲೂ ಮುಟ್ಟಿನ ಕುರಿತಂತೆ ಜನರ ಮನಸ್ಥಿತಿ ಬದಲಾಗಿಲ್ಲ. ಇಂತಹ ಸಂದರ್ಭದಲ್ಲಿ ‘ಮುಟ್ಟು- ಏನಿದರ ಒಳಗುಟ್ಟು?’ ಎನ್ನುವ ವಿಭಿನ್ನ ಕೃತಿಯೊಂದನ್ನು ಲೇಖಕಿ ಜ್ಯೋತಿ ಇ. ಹಿಟ್ನಾಳ್ ಅವರು ಸಂಪಾದಿಸಿದ್ದಾರೆ.

‘ಮುಟ್ಟು’ ಎನ್ನುವುದನ್ನು ಗುಟ್ಟಿನ ವಿಷಯವಾಗಿಸಿದ್ದರಿಂದಲೇ ಅದರ ಕುರಿತಂತೆ ಜನರು ತಪ್ಪು ಮಾಹಿತಿಗಳನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಮುಟ್ಟಿನ ಕುರಿತಂತೆ ಮುಕ್ತ ಚರ್ಚೆಯ ಅಗತ್ಯವನ್ನು ಮನಗಂಡು ಹಿಟ್ನಾಳ್ ಅವರು ಈ ಬಗ್ಗೆ ಪುರುಷ ಮತ್ತು ಮಹಿಳಾ ಲೇಖಕಿಯರಿಂದ ಲೇಖನಗಳನ್ನು ಬರೆಸಿ ಒಂದೆಡೆ ಸೇರಿಸಿದ್ದಾರೆ. ಇದು ಮುಟ್ಟಿನ ಕುರಿತಂತೆ ವಿವರಿಸುವ ವೈಜ್ಞಾನಿಕ ಅಥವಾ ವೈದ್ಯಕೀಯ ಪುಸ್ತಕವಲ್ಲ. ಬದಲಿಗೆ ವೈಚಾರಿಕ ಹಿನ್ನೆಲೆಯಲ್ಲಿ ಬೇರೆ ಬೇರೆ ಲೇಖಕರು ತಮ್ಮ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಹಂಚಿ ಕೊಂಡಿದ್ದಾರೆ. ಇಲ್ಲಿರುವ ಎಲ್ಲ ಲೇಖನಗಳು ಅನುಭವ ಕೇಂದ್ರಿತವಾಗಿ ರುವುದರಿಂದ, ಕಥನ ರೂಪದಲ್ಲಿ, ಪ್ರಬಂಧ ರೂಪದಲ್ಲಿ ಹೊರಬಂದಿವೆ. ಒಂದೆಡೆ ಮಹಿಳೆಯರು ಮುಟ್ಟಿನ ಸಂದರ್ಭದ ತಮ್ಮ ಅನುಭವಗಳನ್ನು, ಸಮಾಜದ ಮನಸ್ಥಿತಿಯನ್ನು ವಿವರಿಸಿದ್ದರೆ, ಪುರುಷರು ತಾವು ಬಾಲ್ಯದಲ್ಲಿ ಮುಟ್ಟಿನ ಕುರಿತಂತೆ ಹೊಂದಿದ ಕುತೂಹಲ, ಆ ನಿಗೂಢತೆ ತಮ್ಮ ಮೇಲೆ ಬೀರಿದ ಪರಿಣಾಮಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮುಟ್ಟಿನ ಕುರಿತ ವೌಢ್ಯಗಳನ್ನು ಸಾರಸಗಾಟಾಗಿ ಅಲ್ಲಗಳೆದಿದ್ದಾರೆ.
 
ಡಾ. ಪುರುಷೋತ್ತಮ ಬಿಳಿಮಲೆ, ಲಕ್ಷ್ಮಣ್ ಕೊಡಸೆ, ಶ್ರೀನಿವಾಸ ಕಾರ್ಕಳ, ನವೀನ್ ಸೂರಿಂಜೆ, ಕಾ. ತಾ. ಚಿಕ್ಕಣ್ಣ, ತಿರುಮಲೇಶ್ ರೆಡ್ಡಿ, ಡಾ. ವಸುಂಧರಾ ಭೂಪತಿ, ಡಾ. ಕೆ. ಷರೀಫಾ, ಪ್ರೀತಿ ನಾಗರಾಜ್, ಚೇತನಾ ತೀರ್ಥಹಳ್ಳಿ, ಸಬಿತಾ ಬನ್ನಾಡಿ, ದೀಪಾ ಹಿರೇಗುತ್ತಿ, ಶ್ರೀದೇವಿ ಕೆರೆಮನೆ, ದೀಪಾ ಗಿರೀಶ್...ಹೀಗೆ ನಾಡಿನ ಸುಮಾರು 57 ಪ್ರಮುಖ ಲೇಖಕ, ಲೇಖಕಿಯರು ತಮ್ಮ ಅನುಭವಗಳನ್ನು, ಅನಿಸಿಕೆಗಳನ್ನು ಲೇಖನ ರೂಪದಲ್ಲಿ ದಾಖಲಿಸಿದ್ದಾರೆ. ಲೇಖಕಿ ಹೇಳುವಂತೆ, ‘‘ಮುಟ್ಟು ಎನ್ನುವುದು ಸಹಜ ಕ್ರಿಯೆ, ಇದು ವಿಜ್ಞಾನಕ್ಕೆ ಸಂಬಂಧಿಸಿದ್ದು. ನೀವು ಯಾಕೆ ಇದನ್ನು ಸಾಮಾಜಿಕ ಮಾಡುತ್ತಿದ್ದೀರಿ’’ ಎಂದು ಕೇಳುವ ಹಲವರಿಗೆ ಇಲ್ಲಿರುವ ಲೇಖನಗಳೇ ಉತ್ತರವಾಗಿವೆ. ಏಕೆಂದರೆ ಮುಟ್ಟು ಬರೀ ವಿಜ್ಞಾನವಲ್ಲ, ಅದೊಂದು ಸಂಪ್ರದಾಯ, ಅದೊಂದು ಸಂಸ್ಕೃತಿ, ಅದೊಂದು ಆಚರಣೆ, ಅದೊಂದು ಧರ್ಮ, ಅದೊಂದು ಜಾತಿ, ಅದೊಂದು ಪುರುಷ ಪ್ರಧಾನ ವೌಲ್ಯ, ಅದೊಂದು ಹೆಣ್ಣಿನೊಡನೆ ಬರುವ ಭಾವನಾತ್ಮಕ ಸಂಬಂಧ ಎನ್ನುವುದನ್ನು ಈ ಪುಸ್ತಕದಲ್ಲಿ ನೋಡಬಹುದು. ಕೃತಿಯಲ್ಲಿ ಅಲ್ಲಲ್ಲಿ ಕಂಡು ಬರುವ ಮುದ್ರಣ ದೋಷಗಳು ಓದುಗರಿಗೆ ಸಣ್ಣದೊಂದು ಕಿರಿಕಿರಿ ಉಂಟು ಮಾಡುವುದು ಸುಳ್ಳಲ್ಲ. ಉಳಿದಂತೆ ಇದು ಮುಟ್ಟನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡಿದ ಸಮಗ್ರ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂಗಳ ಪ್ರಕಾಶನ ಕೊಪ್ಪಳ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 250. ಮುಖಬೆಲೆ 250 ರೂಪಾಯಿ. ಆಸಕ್ತರು 96635 06731 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)