varthabharthi


ಭಿನ್ನರುಚಿ

ಹಾಲು ಅನ್ನ

ವಾರ್ತಾ ಭಾರತಿ : 22 Sep, 2020
ರಾಜೇಂದ್ರ ಪ್ರಸಾದ್

ಕೃಷಿ ಮತ್ತು ಪಶು ಸಂಗೋಪನೆ - ಎರಡೂ ಮನುಷ್ಯನನ್ನು ಅವನ ವಿಕಾಸ ಕಾಲದಿಂದ ಇವತ್ತಿನ ದುರಿತಕಾಲದವರೆಗೂ ಪೋಷಿಸಿಕೊಂಡು ಬಂದಿವೆ. ಇವೆರಡು ಒಂದಕ್ಕೊಂದು ಪೂರಕವಾಗಿ ಉಳಿದು ಬೆಳೆದು ಬಂದುವು. ಅಧುನಿಕ ಕಾಲದಲ್ಲಿ ಕೃಷಿ ಯಂತ್ರೋಪಕರಣ ಬರುವವರೆಗೂ ಪಶು ಸಂಪತ್ತು ಎಂದು ಪರಿಗಣಿಸಲಾಗುತ್ತಿತ್ತು. ಇವು ಪೊರೆಯದೆ ಹೋಗಿದ್ದರೆ ಮನುಷ್ಯನ ಆಹಾರ ಇಂದು ವೈವಿಧ್ಯಮಯವಾಗುತ್ತಿರಲಿಲ್ಲ ಅಥವಾ ಮುಂದುವರಿಯುವುದು ಕಷ್ಟಸಾಧ್ಯವಾಗುತ್ತಿತ್ತು ಅನಿಸುತ್ತದೆ. ಕೃಷಿಗೆ ಪಶುಗಳ ಮೇಲಿನ ಅವಲಂಬನೆ ಕಡಿಮೆಯಾಯಿತು ನಿಜ, ಆದರೆ ಆಹಾರಕ್ಕೆ ಅಲ್ಲ. ಆಹಾರದ ವಿಷಯದಲ್ಲಿ ಅದು ಇನ್ನು ಹೆಚ್ಚಾಯಿತು ಮತ್ತು ವೈವಿಧ್ಯಮಯವಾಗಿ ಬೆಳೆಯಿತು. ಇವತ್ತು ಅದು ಪರಿಸರ ಕಂಟಕವಾಗುವ ಮಟ್ಟಿಗೆ ಹೋಗಿರುವುದು ಕೂಡ ನಿಜ.

ಹಾಲು ಮತ್ತು ಮಾಂಸಕ್ಕಾಗಿ ಇಡಿ ಪ್ರಪಂಚದಾ ದ್ಯಂತ ನಡೆಯುತ್ತಿರುವ ‘ಪಶು ಸಂಗೋಪನೆ’ಯು ಸುಸ್ಥಿರ ಬದುಕಿನ ಮೇರೆಯನ್ನು ಮೀರಿ ಮುಂದಕ್ಕೆ ನಾಗಾಲೋಟದಲ್ಲಿ ಸಾಗುತ್ತಿದೆ. ನಿಯಂತ್ರಣ ಮಾಡಬೇಕಾದ ಸರಕಾರಗಳು ಕಾರ್ಪೊರೇಟ್ ಹಂಗಿಗೆ ಸಿಲುಕಿ ಅಸಹಾಯಕವಾಗಿವೆ. ಡೈರಿ - ಅನ್ನುವುದು ಈಗ ಸ್ಥಳೀಯ ಮಾರುಕಟ್ಟೆಗಳನ್ನು ದಾಟಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಹಲವಾರು ದೇಶಗಳಿಗೆ ಡೈರಿ ಉತ್ಪನ್ನಗಳು ಸರಬರಾಜು ಆಗುತ್ತಿವೆ. ಬೇಡಿಕೆ, ಮಾರುಕಟ್ಟೆ, ಸರಬರಾಜು, ಲಾಭ ಇತ್ಯಾದಿಗಳ ಸುಳಿಯಲ್ಲಿ ಡೈರಿ ಉದ್ಯಮ ಕೂಡ ನಲುಗುತ್ತಿದೆ. ಯಾಕೆಂದರೆ ಜಗತ್ತಿನಾದ್ಯಂತ ಮನುಷ್ಯ ಇಂದು ಡೈರಿಯ ಉತ್ಪನ್ನಗಳ ಮೇಲೆ ವಿಪರೀತ ಅವಲಂಬಿತನಾಗಿದ್ದಾನೆ ಹಾಗಾಗಿ ಬಹುದೊಡ್ಡ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಇಂತಹ ಹೊತ್ತಿನಲ್ಲಿ ಬರಬಹುದಾದ ಸಾಮಾನ್ಯ ಆಲೋಚನೆ ನಾವು ಡೈರಿ ಉತ್ಪನ್ನಗಳನ್ನೂ ಬಿಟ್ಟು ಇರಬಲ್ಲವೇ? ನಮ್ಮ ಆಹಾರ ಕ್ರಮಗಳಲ್ಲಿ ಹಾಲಿನ ಅಥವಾ ಡೈರಿ ಉತ್ಪನ್ನಗಳ ಪಾಲು ಎಷ್ಟು ಎಂದು ನೋಡಲು ಇಣುಕಿದರೆ ನಮಗೆ ಬ್ರಹ್ಮಾಂಡವೇ ಕಾಣುತ್ತದೆ. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ, ಗಿಣ್ಣು ಇವುಗಳ ಜೊತೆಗೆ ಮಾಂಸ ಮತ್ತು ಚರ್ಮದ ಉದ್ಯಮಗಳು ಕೂಡ ಬಹುವಾಗಿ ‘ಪಶು ಸಂಗೋಪನೆ’ಯನ್ನು ನೆಚ್ಚಿವೆ. ಇವನ್ನು ಹೊರತು ಪಡಿಸುವ ಯೋಚನೆಯೇ ಮಾಡಲಾಗದಷ್ಟು ಪರಿಸ್ಥಿತಿಯು ಬಿಗಡಾಯಿಸಿದೆ.

ಅವಲಂಬನೆಯು ಹೇಗೆ ಹಂತ ಹಂತವಾಗಿ ಮೇಲೇರಿತೋ ಹಾಗೆಯೇ ಅದರಿಂದ ಕಳಚಿಕೊಳ್ಳುವ ವಿಧಾನವೂ ಹಂತವಾಗಿ ಹಂತವಾಗಿ ಆಗಬೇಕು. ಆದರೆ ಅದು ಸಾಧ್ಯವೇ? ಎಂಬುದನ್ನು ಕಾದು ನೋಡಬೇಕು. ಪಶು ಸಂಗೋಪನೆಯು ಸಹಕಾರಿ ಚಳವಳಿಯ ಮೂಲಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ಸಮಯದಲ್ಲಿ ಹುಟ್ಟಿದ ನನ್ನಂತವರಿಗೆ ಇದರ ವೈಪರೀತ್ಯಗಳು ಸ್ವಲ್ಪಬೇರೆಯದೇ ರೀತಿಯಲ್ಲಿ ಅರ್ಥವಾಗುತ್ತವೆ. ನಮ್ಮ ರಾಸುಗಳನ್ನು ಹೊಲ ಉಳುವುದಕ್ಕೆ ಮತ್ತು ಮನೆಯ ಹಾಲು, ಮೊಸರು, ತುಪ್ಪದ ಅಗತ್ಯಗಳಿಗಾಗಿ ಸಾಕುತ್ತಿದ್ದೆವು. ಹೊರಗಿನ ಮಾರುಕಟ್ಟೆಯ ಹಂಗು ನಮಗಿರಲಿಲ್ಲ. ಬಹುತೇಕರ ಪರಿಸ್ಥಿತಿ ಹೀಗೇ ಇತ್ತು. ಅದರಲ್ಲಿ ಕೆಲವರು ಮಾತ್ರ ಪಶು ಸಂಗೋಪನೆಯನ್ನೇ ಮುಖ್ಯವಾಗಿಸಿರಿಸಿಕೊಂಡು ಹಾಲು, ತುಪ್ಪದ ಮಾರಾಟ ಮಾಡುತ್ತಿದ್ದರು. ಹೀಗಿರುವಾಗ ಹಲವು ಅಡುಗೆಗಳು ಡೈರಿಯ ದೆಸೆಯಿಂದ ಹುಟ್ಟಿದವು. ಅವುಗಳಲ್ಲಿ ಮುಖ್ಯವಾದುದು ‘ಹಾಲು ಅನ್ನ’. ಹಾಲು ಅನ್ನ ಅದರ ಬಣ್ಣ, ಗುಣ ಮತ್ತು ಸರಳತೆಯಿಂದ ಬಹಳ ಸಾತ್ವಿಕ ಆಹಾರ ಎಂತಲೂ, ಅದನ್ನು ತಿನ್ನುವುದು ಋಣ ಎಂತಲೂ ತನ್ನ ಮೇಲೆ ಹಲವು ಕಥೆಗಳನ್ನು, ಮಹತ್ತುಗಳನ್ನು ಕಟ್ಟಿಕೊಂಡಿತು. ಮಗುವಿನ ಮೊದಲ ಆಹಾರದಿಂದ ಸತ್ತ ನಂತರದ ಕಾರ್ಯದವರೆಗೂ ಹಾಲು ಬಹುಮುಖ್ಯವಾದ ಆಹಾರವಾಗಿ ಪ್ರಾಮುಕ್ಯತೆ ಪಡೆಯಿತು. ಬುಡಕಟ್ಟು ಸಂಸ್ಕೃತಿಗಳಿಂದ ನಾಗರಿಕತೆಗಳವರೆಗೆ, ಆಧುನಿಕತೆವರೆಗೆ ಹಲವು ಮಜಲುಗಳಲ್ಲಿ ವ್ಯಾಪಿಸಿಕೊಂಡು ನಮ್ಮನ್ನು ಇಂದು ಬಂಧಿಸಿದೆ.

ನಾವು ಅಷ್ಟು ಸುಲಭಕ್ಕೆ ಹಾಲಿನ ಉತ್ಪನ್ನಗಳಿಂದ ನಮ್ಮ ಬದುಕನ್ನು ಬಿಡುಗಡೆಗೊಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮ ದಿನನಿತ್ಯದ ಆಹಾರದಲ್ಲಿ ಬಹುಭಾಗವನ್ನು ಇದು ಆವರಿಸಿಕೊಂಡಿದೆ. ಕಾಫಿ ಟೀಗಳಿಂದ ಶುರುವಾಗಿ ಅನ್ನ, ಗೊಜ್ಜು, ಹಸಿ ಸಾರು, ಮಸಾಲೆ, ಕಡೆಗೆ ನೀರು ಮಜ್ಜಿಗೆವರೆಗೆ ಇದು ಆಹಾರ, ಔಷಧ ಎಲ್ಲವೂ ಆಗಿ ಮೂಲಭೂತ ಅಗತ್ಯ ಎನಿಸಿಬಿಟ್ಟಿದೆ. ಎದೆ ಹಾಲು ಬಿಡಿಸಿದ ಮೇಲೆ ಅಥವಾ ಎದೆ ಹಾಲು ಕೊರತೆ ಉಂಟಾದರೆ ಮಗುವಿಗೆ ಸಿಗುವುದು ಪಶುವಿನ ಹಾಲೇ. ಇದೇ ಮನುಷ್ಯನ ಮೊದಲ ಆಹಾರ ಕೂಡ. ಚಿಕ್ಕಮಕ್ಕಳಿಗೂ ಉಪ್ಪುಖಾರ ಅಥವಾ ಸಿಹಿಯಿರದ ಆಹಾರವಾಗಿ ಹಾಲು ಅನ್ನವೇ ಪ್ರಿಯ. ನಮ್ಮ ಹಳ್ಳಿಯ ಬೀದಿಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹೀಗೇ ಚಿಕ್ಕ ಮಕ್ಕಳಿಗೆ ಹಾಲು ಅನ್ನ ತಿನ್ನಿಸಲು ಹೆಣಗುತ್ತಿದ್ದ ಹೆಂಗಳೆಯರು, ಅವನ್ನು ಗದರಿಸಲು ಯತ್ನಿಸುತ್ತಿದ್ದ ದಾರಿಹೋಕ ಗಂಡಸರು.. ಲೋಚಗುಡುತ್ತಿದ್ದ ಕುಟ್ಟಣಿಯ ಅಜ್ಜಿ- ತಾತಂದಿರ ಚಿತ್ರ ಸ್ಮತಿಯಲ್ಲಿ ಹಾಗೇ ಉಳಿದುಹೋಗಿದೆ. ಎಷ್ಟೋ ಮನೆಗಳಲ್ಲಿ ಅನ್ನ ಮಾಡುವುದೇ ಅಪರೂಪವಾಗಿದ್ದರಿಂದ ಮಾಡಿದ್ದವರ ಮನೆಯಲ್ಲಿ ಬಿಸಿಯಾದ ಒಂದು ಹಿಡಿಯಷ್ಟು ಅನ್ನ ತಂದು ಅದನ್ನು ಗಟ್ಟಿಹಾಲಿನಲ್ಲಿ ಸ್ವಲ್ಪವೇ ಕಲಸಿ ಚೂರು ಚೂರೇ ಮಕ್ಕಳಿಗೆ ತಿನ್ನಿಸುವುದು ವಾಡಿಕೆ. ಇದೇ ಮುಂದುವರಿದು ಮಕ್ಕಳು 3-4 ವರ್ಷ ತುಂಬುವವರೆಗೂ ಹಾಲು ಅನ್ನವೆ ಬೇಕು ಅಂತ ಗಲಾಟೆ ಮಾಡುವುದೂ ಇತ್ತು. ಆಮೇಲಾಮೇಲೆ ಮೊಸರು ಮಜ್ಜಿಗೆಯ ಪ್ರಭಾವ ಶುರುವಾಗುತ್ತಿತ್ತು.

ಖಾರದ ರುಚಿ ಹತ್ತಿದ ಮೇಲೆ ಇದಕ್ಕೆ ಕೈ ಕೊಡುವುದಂತೂ ಗ್ಯಾರಂಟಿ. ಅದಕ್ಕೆ ನಾನೇ ಸಾಕ್ಷಿ. ಬಾಲ್ಯದ ಹಾಲು ಅನ್ನದ ಜೊತೆಗೆ ದೇವಸ್ಥಾನದಲ್ಲಿ ಕೊಡುತ್ತಿದ್ದ ಬೆಲ್ಲ, ತುಪ್ಪ, ದ್ರಾಕ್ಷಿ-ಗೋಡಂಬಿಗಳ ಕ್ಷೀರಾನ್ನ ಪ್ರಸಾದ ಮರೆಯಲಾಗದು. ಒಂದು ದೊನ್ನೆಯಲ್ಲಿ ಮುಗಿಸಿ ಮತ್ತೊಂದು ದೊನ್ನೆಯ ಪ್ರಸಾದಕ್ಕೆ ಸರದಿಯಲ್ಲಿ ನಿಲ್ಲುವ ಮಜಾವೇ ಬೇರೆಯದು. ಇದು ಬಾಳೆಹಣ್ಣಿನ ರಸಾಯನಕ್ಕೆ ಕೂಡ ಅನ್ವಯಿಸುತ್ತೆ. ಇದಲ್ಲದೆ ಮನೆಯಲ್ಲಿ ಆಕಳು ಅಥವಾ ಎಮ್ಮೆ ಈದು ಕರುಹಾಕಿದ್ರೆ ಮುಗಿಯಿತು, ಒಂದಷ್ಟು ದಿನ ಬೀದಿಯ ಎಲ್ಲರ ಮನೆಯಲ್ಲಿ ವಿಶೇಷವಾದ ಗಿಣ್ಣಿನ ಅಡುಗೆಗಳು. ಅದರಲ್ಲೂ ಗಿಣ್ಣಿನ ಪಾಯಸ ಮತ್ತು ಗಿಣ್ಣಿನ ಅನ್ನ. ಇದು ಒಂಥರಾ ಹುಳಿ- ಸಿಹಿಗಳ ಮಿಶ್ರಣದಂತೆ ರುಚಿಸಿದರೂ ಬೆಲ್ಲದ ಪಾಕ, ತೆಂಗಿನ ಅಥವಾ ಕೊಬ್ಬರಿ ತುರಿ, ಹದವಾಗಿ ಬಿದ್ದ ಏಲಕ್ಕಿ ಪುಡಿ ಎಲ್ಲಿಗೋ ಕರೆದೊಯ್ದು ಬಿಡುತ್ತಿತ್ತು. ಕರು ಹಾಕಿದ ಸುದ್ದಿ ತಿಳಿದ ಮೇಲೆ ಸಂಬಂಧಿಗಳ ಮನೆಯಿಂದ ಕೂಡ ಗಿಣ್ಣು ಹಾಲಿಗೆ ಬೇಡಿಕೆ ಬರುತ್ತಿತ್ತು. ಕಾಯಿಸಿದ ಹಾಲನ್ನು ಮುತುವರ್ಜಿ ವಹಿಸಿ ಪರ ಊರಿಗೆ ಮನೆಗೆ ತಲುಪಿಸುವುದು. ಅಲ್ಲಿಂದ ಬದಲಿ ತಿಂಡಿ ತರುವುದು. ಏನೆಲ್ಲಾ ಸಂಭ್ರಮವಿತ್ತು ಮಕ್ಕಳಿಗೆ. ಇದರ ಜೊತೆಗೆ ತವರು ಮನೆಯಲ್ಲಿ ಕರು ಹಾಕಿದರೆ ಮಗಳ ಮನೆಗೆ ಗಿಣ್ಣು ಹೋಗಲೇ ಬೇಕಿತ್ತು. ಹಾಲುಂಡ ತವರಿನ ಸಂಬಂಧದ ನೆನೆಪಿಗೆ, ಮಾತಿಗೆ ಸಂಪರ್ಕಕ್ಕೆ ನೂರೆಂಟು ನೆಪ.

ಇನ್ನು ಮನೆಯಲ್ಲೇ ಕಾಯಿಸಿ ಹೆಪ್ಪಿಟ್ಟು ಕಡೆದು ತೆಗೆದ ಬೆಣ್ಣೆಯಂತೂ ನೆನೆಸುವಾಗಲೇ ಬಾಯಲ್ಲಿ ನೀರು ಜಿನುಗುತ್ತದೆ. ಒಲೆಯಲ್ಲಿ ಒಳ್ಳೆಯ ರಾಗಿ ರೊಟ್ಟಿ ತಯಾರಿಸಿ ಅದಕ್ಕೆ ಹೆಬ್ಬೆರಳು ಗಾತ್ರದ ಬೆಣ್ಣೆ ಸವರಿ ಉಪ್ಸಾರಿನ ಖಾರದ ಜೊತೆಗೆ ತಿನ್ನುವುದಕ್ಕಿಂತ ಮತ್ತೊಂದು ವಿಲಾಸವಿಲ್ಲ. ಇದು ತಾಜ್, ಲೀಲಾ ಪ್ಯಾಲೇಸ್ ಗಳಲ್ಲಿ ತಿನುವುದಕ್ಕಿಂತ ಹೆಚ್ಚಿನ ವಿಲಾಸ ಎಂದೇ ಅನಿಸುತ್ತದೆ. ಅಂತಹ ಸ್ವಾದ ಮತ್ತು ತೃಪ್ತಿ. ಇನ್ನು ಇದೇ ಬೆಣ್ಣೆಯನ್ನು ಚೆನ್ನಾಗಿ ಕುದಿಸಿ ಜೀರಿಗೆ, ಮೆಂತೆ, ಬೆಳ್ಳುಳ್ಳಿ, ಕರಿಬೇವುಗಳ ಜೊತೆಗೆ ಕಾಯಿಸಿ ಮಾಡಿದ ತುಪ್ಪ ಅದರ ಘಮ, ಇಪ್ಪತ್ತೈದು ವರ್ಷಗಳ ನಂತರವೂ ಈಗಷ್ಟೇ ಮೂಗಿಗೆ ಬಿದ್ದ ಹಾಗಿದೆ. ತುಪ್ಪಬಸಿದ ಮೇಲೆ ಉಳಿವ ತುಪ್ಪದ ಗಷ್ಟವನ್ನು ತಿನ್ನಲು ಮಕ್ಕಳ ನಡುವೆ ಜಗಳವೇ ಆಗುತ್ತಿತ್ತು. ಅದಕ್ಕೆ ಅನ್ನವನ್ನೂ ಅಥವಾ ಮುದ್ದೆಯನ್ನೊ ಕಲಿಸಿ ಕೊಟ್ಟರೆ ಎರಡು ಹೊಟ್ಟೆಯಷ್ಟು ತಿಂದು ಮೂಗು ಮೂತಿಯಲ್ಲಾ ತುಪ್ಪದ ಬಯಲು ಆಗಿರುತ್ತಿತ್ತು.

ಇದೇ ತುಪ್ಪ ಅಥವಾ ಬೆಣ್ಣೆಗೆ ಪುಡಿ ಮಾಡಿದ ಕಾಳು ಮೆಣಸು, ಉಪ್ಪು ಸೇರಿಸಿ ಬಿಸಿ ಅನ್ನದ ಜೊತೆಗೆ ಕಲಸಿದರೆ ಬಲು ರುಚಿ. ಬೇಕೆಂದರೆ ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಜೊತೆಗೆ ಸೇರಿಸಬಹುದು. ಹಾಲು ಅನ್ನದಿಂದ ಪಲಾನ್ನದ (ಬಿರಿಯಾನಿ)ವರೆಗೆ ಅದೆಷ್ಟು ತರಹದ ಅನ್ನಗಳನ್ನು ನಾವು ತಿಂದಿದ್ದೇವೆಯೋ ಲೆಕ್ಕವಿಲ್ಲ. ಅನ್ನ ಅನ್ನುವುದು ಮೂಲಭೂತ ಅಗತ್ಯದಿಂದ ಶುರುವಾಗಿ ದೈವಿಕ ಪರಿಕಲ್ಪನೆಯವರೆಗೆ ಬೇಕಾದಷ್ಟು ಅವತಾರಗಳನ್ನು ತಾಳಿದೆ. ಇವತ್ತು ಹಾಲು ಇಲ್ಲದೆ ನೂರಾರು ತರಹದ ಸಿಹಿ ತಿಂಡಿಗಳನ್ನು ಮಾಡಲು ಸಾಧ್ಯವೇ ಇಲ್ಲ. ಮೊಸರು, ಬೆಣ್ಣೆ ತುಪ್ಪಗಳಿಲ್ಲದೆ ಒಳ್ಳೆಯ ರುಚಿಗಟ್ಟಾದ ಅಡುಗೆ ಸಾಧ್ಯವೇ ಎಂಬುವ ಮಟ್ಟಿಗೆ ಹಾಲಿನ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದೇವೆ. ಎಗ್ಗಿಲ್ಲದ ಹೆಸರುಗಳ ಮಸಾಲೆಯ ಹೊಳೆಯೇ ಹರಿಸಿದ ಬಿರಿಯಾನಿ, ಭಾತು, ಫ್ರೈಡ್‌ರೈಸ್‌ಗಳ ಕಾಲದಲ್ಲಿ ಸರಳ ಮತ್ತು ಸುಸ್ಥಿರವಾದ ಹಾಲು ಅನ್ನವನ್ನು ನೆನೆಸಿಕೊಳ್ಳುವುದು ಕೂಡ ದುರ್ಲಭವಾಗಬಹುದು. ಯಾಕಂದರೆ ಇವತ್ತಿನ ಹಾಲು ಬರಿಯ ಹಾಲಾಗಿ ಉಳಿದಿಲ್ಲವಲ್ಲ!!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)