varthabharthi


ಈ ಹೊತ್ತಿನ ಹೊತ್ತಿಗೆ

ಹೇಮೆಯ ಮಡಿಲ ಮಾತುಗಳು

ವಾರ್ತಾ ಭಾರತಿ : 27 Sep, 2020
ಎಸ್. ಲಲಿತ, ಸಕಲೇಶಪುರ

‘ಹೇಮೆಯ ಮಡಿಲಲ್ಲಿ’ ಗೊರೂರು ಅನಂತರಾಜು ಅವರ ಲೇಖನಿಯಿಂದ ಹೊರಹೊಮ್ಮಿದ ಲೇಖನಗಳ ಒಂದು ಗುಚ್ಛವಾಗಿದೆ. ಇವುಗಳಲ್ಲಿ ಕೆಲವು ಆಯಾ ಸಂದರ್ಭಕ್ಕೆ ಅನುಗುಣವಾಗಿ ಬರೆದು ಪ್ರಸ್ತುತಪಡಿಸಿದವುಗಳಾದರೆ ಮತ್ತೆ ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳಾಗಿವೆ. ಹೇಮೆಯ ತೀರದ ಒಂದು ಪುಟ್ಟ ಊರಾದ ಗೊರೂರಿನಲ್ಲಿ ಹುಟ್ಟಿದ ಲೇಖಕ ಗೊರೂರು ಅನಂತರಾಜುರವರಿಗೆ ತಾವು ಪ್ರಸಿದ್ಧ ಸಾಹಿತಿ ಡಾ.ರಾಮಸ್ವಾಮಿ ಅಯ್ಯಂಗಾರರ ಊರಿನವರು ಎಂಬ ಹೆಮ್ಮೆ ಇದೆ. ಈ ಹೆಮ್ಮೆಯ ಜೊತೆಗೆ ಹೇಮಾವತಿಯೂ ಇವರ ಮನದ ಮೇಲೆ ಪ್ರಭಾವ ಬೀರಿದ್ದಾಳೆ. ಇದು ಸಹಜವೂ ಆಗಿದೆ. ಎಲ್ಲರ ಮನವನ್ನೂ ಪ್ರಭಾವಗೊಳಿಸುವ ಶಕ್ತಿ ನೆಲ, ಜಲ ಮತ್ತು ಭಾಷೆಗಳಿಗಿದೆ. ಅದರೊಂದಿಗೆ ಮಾನವಸಹಜ ಸ್ವಭಾವವಾದ ನಮ್ಮ ನೆಲ, ನಮ್ಮ ನುಡಿ, ನಮ್ಮ ನೆಲದ ಕವಿಗಳು, ನಮ್ಮ ನೆಲದ ಸಾಹಿತಿಗಳು, ನಮ್ಮೂರಿನ ದೇವಾಲಯಗಳು, ನಮ್ಮ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು...ಹೀಗೆ ಪಟ್ಟಿ ಮನದಲ್ಲಿ ಸಾಗುತ್ತಲೇ ಇರುವಾಗ ಬರಹದ ಮೂಲಕ ಮನದ ತುಡಿತವನ್ನು ಹೊರಹಾಕುವ ಭಾವುಕ ಮನಸ್ಸುಗಳಿಗೆ ಲೇಖನಿ ಹಿಡಿಯದಿರಲಾದೀತೇ? ರಸಋಷಿ ಕುವೆಂಪು ಅವರಿಗೆ ಕುಪ್ಪಳ್ಳಿಯ ನಿಸರ್ಗ ಕಾಡಿದಂತೆ, ಗೊರೂರು ಅನಂತರಾಜು ಅವರನ್ನು ಹಾಸನದ ನೆಲ ಜಲಗಳು ಆವರಿಸಿವೆ. ಅದರ ಪರಿಣಾಮವಾಗಿ ಮೂಲತಃ ಅವರು ನಾಟಕಗಳ ವಿಮರ್ಶಕರಾದರೂ ಲೇಖನಗಳನ್ನು ಬರೆಯುವತ್ತ ಮನಸ್ಸು ಮಾಡಿರುವುದು ಸಹಜವೇ ಆಗಿದೆ. ಹಾಸನ, ಹಾಸನಾಂಬ, ಹೇಮಾವತಿ, ಹೊಯ್ಸಳ..ಹೀಗೆ ಹಾಸನ ಜಿಲ್ಲೆಯ ಸಾಮಾನ್ಯ ಜನರ ಮಾತಿನಲ್ಲಿ ನಿತ್ಯ ನುಸುಳುವ ಪದಗಳು, ಜಿಲ್ಲೆಯ ಲೇಖಕ-ಲೇಖಕಿಯರ ಮನಗಳನ್ನು ತಟ್ಟಿ ಬಡಿದೆಬ್ಬಿಸಿ..ಆಹಾ! ನಮ್ಮ ಹಾಸನ ಜಿಲ್ಲೆ..! ಎನ್ನುವಂತೆ ಮಾಡಿವೆ. ಇದು ಅಚ್ಚರಿಯ ವಿಷಯವೇನಲ್ಲ.

ಈ ‘ಹೇಮೆಯ ಮಡಿಲಲ್ಲಿ’ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ. ಮೊದಲ ಲೇಖನವೇ ‘ಹೇಮೆಯ ಮಡಿಲಲ್ಲಿ’ ಎನ್ನುವುದಾಗಿದೆ. ಈ ಲೇಖನದಲ್ಲಿ ಲೇಖಕರು ಓದುಗರಿಗೆ ಗೊರೂರಿನ ಪರಿಚಯ ಮಾಡಿಸುವ ಜೊತೆ ಜೊತೆಗೆ ಅಲ್ಲಿನ ಹೇಮಾವತಿ ಅಣೆಕಟ್ಟಿನ ವಿಸ್ತೃತ ವಿವರಣೆಯನ್ನೂ ನೀಡಿದ್ದಾರೆ. ಮುಂದಿನ ಲೇಖನದಲ್ಲಿ ಹಾಸನ ಜಿಲ್ಲೆಯ ವಿಶೇಷತೆಗಳನ್ನು ಇತರ ವಿದ್ವಾಂಸರು ಕಂಡಂತೆ ಮತ್ತು ಹಾಸನದ ಜಾನಪದ ಕಲೆಗಳನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಿ ಅದಕ್ಕಾಗಿ ಡಾ.ಹಂಪನಹಳ್ಳಿ ತಿಮ್ಮೇಗೌಡರ ಪ್ರೌಢಪ್ರಬಂಧದ ನೆರವನ್ನು ಪಡೆದುದು ಮಾತ್ರವಲ್ಲದೆ ಇತರ ಅನೇಕ ಜಾನಪದ ಲೇಖಕರ ಕೃತಿಗಳನ್ನೂ ಓದಿ ಅದರಲ್ಲಿನ ಸಾರವನ್ನು ಓದುಗರ ಎದುರು ತೆರೆದಿಟ್ಟಿದ್ದಾರೆ. ‘ಹೊಯ್ಸಳ ಕಾಲದ ಸಾಹಿತ್ಯ’ ಎನ್ನುವ ಲೇಖನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹಾಸನ ಜಿಲ್ಲೆಯ ಕೊಡುಗೆಯನ್ನು ತಿಳಿಸುತ್ತ, ಅಂದಿನ ಕಾಲದ ಶಾಸನಗಳಲ್ಲಿನ ವಿಷಯಗಳು, ಆ ಸಮಯದಲ್ಲಿದ್ದ ಕವಿಗಳು, ಕೃತಿಕಾರರು, ಅವರ ಕೃತಿಗಳು, ಕೃತಿಗಳಲ್ಲಿನ ಕೆಲವು ಸಾಲುಗಳನ್ನೂ ಬರೆಯುವುದರ ಮೂಲಕ ಅಂದಿನ ಕಾಲಘಟ್ಟಕ್ಕೆ ಓದುಗರ ಮನಸ್ಸನ್ನು ಸರಿಸಿದ್ದಾರೆ.

‘ಶಿಲ್ಪಕಲೆಯ ನಾಡಿನಲ್ಲಿ’-ಶೀರ್ಷಿಕೆಯ ಲೇಖನದಲ್ಲಿ ಲೇಖಕರು ಕಾವೇರಿ ಮತ್ತು ಹೇಮಾವತಿ ನದಿಗಳ ಉಗಮ, ಹರಿವು ಮುಂತಾದ ವಿಷಯಗಳನ್ನು ತಿಳಿಸುತ್ತಲೇ ನದಿ ದಡದಲ್ಲಿರುವ ಊರುಗಳ ಮತ್ತು ಅಲ್ಲಿರುವ ಪ್ರಸಿದ್ಧ ದೇವಾಲಯಗಳ ಬಗೆಗೆ ತಿಳಿಸುತ್ತ, ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹ್ಯ, ವಿಶೇಷತೆ, ಧಾರ್ಮಿಕ ಮಹತ್ವ, ಉತ್ಸವ ಇನ್ನಿತರ ಆಚರಣೆಗಳ ಬಗೆಗೆ ಬೆಳಕು ಚೆಲ್ಲಿದ್ದಾರೆ. ದೇಜಗೌ ಅವರ ‘ನೆನಪಿನಾಳದಲ್ಲಿ ನಿಂದವರು’ ಎನ್ನುವ ಕೃತಿಯಲ್ಲಿ ಬರುವ ವ್ಯಕ್ತಿಗಳನ್ನು ಕುರಿತಾದ ವ್ಯಕ್ತಿಚಿತ್ರಗಳ ಜೊತೆಗೆ ಕನ್ನಡ ಚಿತ್ರರಂಗದ ಅನುಪಮ ಗಾಯಕಿ ಶ್ರೀಮತಿ ಎಸ್.ಜಾನಕಿ ಅವರನ್ನು ಕುರಿತಾದ ಲೇಖನವನ್ನೂ ಬರೆದಿದ್ದಾರೆ. ಕನಕದಾಸರು, ಬೇಲೂರು ವೈಕುಂಠದಾಸರು ಮತ್ತು ಕೆಲ್ಲಂಗೆರೆ ತಿಮ್ಮಪ್ಪದಾಸರನ್ನು ಕುರಿತು ಬರೆಯುತ್ತ, ದಾಸಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಕೃತಿಗಳ ಕೆಲವು ಸಾಲುಗಳನ್ನು ಉಲ್ಲೇಖಿಸುವುದರ ಮೂಲಕ ಓದುಗರಲ್ಲಿ ಕುತೂಹಲವನ್ನುಂಟು ಮಾಡುತ್ತಾರೆ.

ಪರಿಸರವನ್ನು ಕುರಿತು ಯೋಚಿಸುತ್ತಿದ್ದಂತೆ ಅದಕ್ಕೆ ಪೂರಕವಾಗಿ ಅತಿವೃಷ್ಟಿಯಿಂದಾದ ಅನಾಹುತಗಳ ದೃಶ್ಯಗಳನ್ನು ದೂರದರ್ಶನದಲ್ಲಿ ವೀಕ್ಷಿಸುವ ಸಮಯದಲ್ಲಿ ನೋಡಿದ ಶಿವನ ಪ್ರತಿಮೆಯಿಂದ ಪ್ರಭಾವಿತರಾಗಿ ಬರೆದ ಭಗೀರಥನ ಕಥೆಯಲ್ಲಿ ಗಂಗಾನದಿಯ ಐತಿಹ್ಯ ಮತ್ತು ಮಹತ್ವಗಳನ್ನು ವಿವರಿಸುವ ಜೊತೆಗೆ ಯಮುನೆ, ಸರಯೂ, ಹಿಮಾಲಯ, ಬದರಿ, ಅಮರನಾಥಗಳ ಬಗೆಗೂ ತಿಳಿಸಿರುವುದು ಲೇಖನಕ್ಕೆ ಹೆಚ್ಚಿನ ಮೆರುಗನ್ನು ನೀಡಿದೆ. ‘ಹೊಯ್ಸಳ ಚಿತ್ರಕ್ಕೆ ರಿಯಲ್ ಹುಲಿ’ ಲೇಖನದಲ್ಲಿ ಲೇಖಕ ಗೊರೂರು ಅನಂತರಾಜು ಹೊಯ್ಸಳ ಚಿತ್ರದ ಚಿತ್ರೀಕರಣದ ಪ್ರಸಂಗವನ್ನು ವರ್ಣಿಸುತ್ತ, ಬೆಳ್ಳಿತೆರೆಯ ಹಿಂದಿರುವ ಸಂಕಷ್ಟಗಳು ಮತ್ತು ಕಲಾವಿದರು ಹಾಗೂ ತಂತ್ರಜ್ಞರು ಎದುರಿಸಬೇಕಾದ ಪಡಿಪಾಟಲುಗಳನ್ನು ಕುರಿತು ಬರೆದಿದ್ದಾರೆ.

ಇನ್ನುಳಿದಂತೆ ಜನಪದ ಹಾಡು, ಜನಪದ ಸಾಹಿತ್ಯ, ಸಮಾಜವನ್ನು ಕಾಡುವ ವರ್ಗಭೇದ ಹಾಗೂ ಜಾತಿವ್ಯವಸ್ಥೆ, ದಮನಿತರ ಸ್ಥಿತಿಗತಿ ಮುಂತಾದ ವಿಷಯಗಳನ್ನು ಕುರಿತಾದ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚುವಂತಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)