ಹೃದ್ರೋಗಗಳನ್ನುಂಟು ಮಾಡುವ ವಿಲಕ್ಷಣ ಕಾರಣಗಳು ನಿಮಗೆ ಗೊತ್ತಿರಲಿ
ಹೃದಯರೋಗ ಭಾರತದಲ್ಲಿ ಮಾತ್ರವಲ್ಲ,ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿರುವ ಪಿಡುಗುಗಳಲ್ಲಿ ಒಂದಾಗಿದೆ. ಕೊರೋನ ಸಾಂಕ್ರಾಮಿಕವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಮತ್ತು ಇದು ನಾವು ನಮ್ಮ ಹೃದಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದ ಸಮಯವಾಗಿದೆ. ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುವ ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ,ಧೂಮ್ರಪಾನ,ಅಧಿಕ ರಕ್ತದೊತ್ತಡ ಇತ್ಯಾದಿಗಳಂತಹ ಸಾಮಾನ್ಯ ಅಂಶಗಳ ಬಗ್ಗೆ ನಮಗೆ ಗೊತ್ತಿದೆಯಾದರೂ ಹೃದಯಕ್ಕೆ ಘಾಸಿಯನ್ನುಂಟು ಮಾಡುವ ಕೆಲವು ವಿಲಕ್ಷಣ ಕಾರಣಗಳೂ ಇವೆ. ಈ ಅಸಹಜ ಕಾರಣಗಳ ಕುರಿತು ನಮ್ಮ ಅಜ್ಞಾನದಿಂದಾಗಿ ನಾವು ಅವುಗಳನ್ನು ಕಡೆಗಣಿಸುತ್ತೇವೆ. ಅಂತಹ ಕೆಲವು ವಿಭಿನ್ನ ಅಪಾಯದ ಅಂಶಗಳ ಬಗ್ಗೆ ಮಾಹಿತಿಗಳಿಲ್ಲಿವೆ.
►ಮುಟ್ಟು ಮತ್ತು ಸಂತಾನೋತ್ಪತ್ತಿ ಅಂಗಗಳಲ್ಲಿ ತೊಂದರೆಗಳು
ವಯಸ್ಸಿಗೆ ಮುನ್ನವೇ ಮೈನೆರೆದಿರುವ ಮತ್ತು ಅವಧಿಗೆ ಮುನ್ನವೇ ಋತುಬಂಧಕ್ಕೊಳಗಾಗುವ ಮಹಿಳೆಯರು ಹೃದ್ರೋಗಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದು ಕಂಡು ಬಂದಿದೆ. 12 ವರ್ಷ ವಯಸ್ಸಿಗೆ ಮುನ್ನವೇ ಮೊದಲ ಬಾರಿ ರಜಸ್ವಲೆಯಾದ ಮತ್ತು 47 ವರ್ಷ ಪ್ರಾಯವನ್ನು ತಲುಪುವ ಮುನ್ನವೇ ಋತುಬಂಧಕ್ಕೊಳಗಾದ ಮಹಿಳೆಯರು ಪಾರ್ಶ್ವವಾಯು ಅಥವಾ ಇತರ ಯಾವುದೇ ಹೃದ್ರೋಗಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ. ಅಲ್ಲದೆ ಮಹಿಳೆಗೆ ಹಿಂದೆ ಗರ್ಭಪಾತವಾಗಿದ್ದರೆ ಅಥವಾ ಅಂಡಾಶಯ ಮತ್ತು ಗರ್ಭಕೋಶಗಳನ್ನು ತೆಗೆದಿದ್ದರೆ ಹೃದ್ರೋಗಕ್ಕೆ ಗುರಿಯಾಗುವ ಅಪಾಯವು ಹೆಚ್ಚಾಗಿರುತ್ತದೆ.
►ಒಂಟಿತನ
ಹೆಚ್ಚುತ್ತಿರುವ ಸಾಂಕ್ರಾಮಿಕದ ನಡುವೆ ನಾವು ಸಾಧ್ಯವಿದ್ದಷ್ಟು ಮನೆಯೊಳಗೇ ಇರಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದೇವೆ ಮತ್ತು ಇದು ಜನರ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿದೆ. ಒಂಟಿತನ ನಮ್ಮ ಚಿಂತನೆಗಳನ್ನು ಬದಲಿಸುವುದು ಮಾತ್ರವಲ್ಲ,ಪರೋಕ್ಷ ಧೂಮ್ರಪಾನದಂತೆ ಪಾರ್ಶ್ವವಾಯು ಮತ್ತು ಹೃದಯ ರೋಗಗಳ ಅಪಾಯವನ್ನೂ ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನವೊಂದು ಬೆಳಕಿಗೆ ತಂದಿದೆ. ಸುಖ-ನೆಮ್ಮದಿ ಇಲ್ಲದಿರುವುದು ಮತ್ತು ಒಂಟಿತನದ ಭಾವನೆ ಇವು ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುವ ಇತರ ಕಾರಣಗಳೊಂದಿಗೆ ತಳುಕು ಹಾಕಿಕೊಂಡಿವೆ ಮತ್ತು ತನ್ಮೂಲಕ ಹೃದಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.
►ಮೈಗ್ರೇನ್
ಮೈಗ್ರೇನ್ ಅಥವಾ ತೀವ್ರ ತಲೆಶೂಲೆಯಿಂದ ನರಳುತ್ತಿರುವವರು ಪಾರ್ಶ್ವವಾಯು,ಎದೆನೋವು ಮತ್ತು ಹೃದಯಾಘಾತಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ತಲೆಶೂಲೆಯಿಂದ ಬಳಲುತ್ತಿರುವವರು ಮತ್ತು ಹೃದ್ರೋಗಗಳ ಕುಟುಂಬ ಇತಿಹಾಸವನ್ನು ಹೊಂದಿರುವವರು ಮೈಗ್ರೇನ್ ಶಮನಕ್ಕಾಗಿ ಟ್ರಿಪ್ಟನ್‌ಗಳೆಂಬ ಔಷಧಿಗಳನ್ನು ಸೇವಿಸುವ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ,ಏಕೆಂದರೆ ಈ ಔಷಧಿಗಳು ರಕ್ತನಾಳವನ್ನು ಸಂಕುಚಿತಗೊಳಿಸುತ್ತವೆ ಮತ್ತು ಹೃದಯರೋಗಗಳ ಅಪಾಯಗಳನ್ನು ಹೆಚ್ಚಿಸುತ್ತವೆ.
►ಸುದೀರ್ಘ ಕೆಲಸದ ಅವಧಿ
ಸುದೀರ್ಘ ಅವಧಿಗೆ ಕೆಲಸ ಮಾಡುವವರು ಹೃದಯರೋಗಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು. ವಾರಕ್ಕೆ 55 ಗಂಟೆಗಳ ಕಾಲ ಕೆಲಸ ಮಾಡುವವರು ವಾರಕ್ಕೆ 35-40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ ಹೃದ್ರೋಗಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಹೆಚ್ಚಿನ ಒತ್ತಡ,ಸುದೀರ್ಘ ಅವಧಿಗೆ ಕುಳಿತಲ್ಲಿಂದ ಅಲುಗಾಡದೇ ದೈಹಿಕ ನಿಷ್ಕ್ರಿಯತೆ ಇತ್ಯಾದಿಗಳು ಇದಕ್ಕೆ ಕಾರಣವಾಗಿರಬಹುದು.
►ಗದ್ದಲ
ಫ್ರಿಝ್‌ನ ಶಬ್ದ,ಮಿತ್ರರೊಂದಿಗೆ ಹರಟೆಯ ಗದ್ದಲ ಅಥವಾ ವಾಹನಗಳ ಶಬ್ದ,ಹೀಗೆ ಸುಮಾರು 50 ಡೆಸಿಬಲ್‌ಗಳಿಂದ ಆರಂಭವಾಗುವ ಶಬ್ದಗಳೂ ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯಗಳನ್ನು ಹೆಚ್ಚಿಸುತ್ತವೆ. ಶಬ್ದದಲ್ಲಿ ಪ್ರತಿ 10 ಡೆಸಿಬಲ್‌ಗಳ ಏರಿಕೆಯು ಹೃದಯ ವೈಫಲ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಇದು ಶಬ್ದ,ಗಲಾಟೆಗಳಿಂದ ಉಂಟಾಗುವ ಒತ್ತಡಕ್ಕೆ ನಮ್ಮ ಶರೀರವು ಪ್ರತಿಕ್ರಿಯಿಸುವ ರೀತಿಗೊಂದಿಗೆ ನಂಟು ಹೊಂದಿದೆ.
►ವಸಡು ರೋಗ
ವಸಡು ರೋಗಗಳೂ ಅಂತಿಮವಾಗಿ ಹೃದಯರೋಗಗಳಿಗೆ ಕಾರಣವಾಗಬಹುದು. ಏಕೆಂದರೆ ಪರಿದಂತ ಕಾಯಿಲೆ ಸೇರಿದಂತೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತದಲ್ಲಿ ಸೇರಬಹುದು ಮತು ಅಪಧಮನಿಗಳ ಒಳಭಿತ್ತಿಗಳಲ್ಲಿ ಉರಿಯೂತವನ್ನುಂಟು ಮಾಡಬಹುದು. ಇದು ಅಪಧಮನಿ ಕಾಠಿಣ್ಯಕ್ಕೆ ಕಾರಣವಾಗುತ್ತದೆ ಮತ್ತು ಕ್ರಮೇಣ ಹೃದಯರೋಗ ಉಂಟಾಗುತ್ತದೆ.