ಬಾಪೂಜಿ ಮತ್ತು ಪ್ರಣಾಮಿ ಪಂಥ ಎಂಬ ಹಣತೆ
ಏನನ್ನೇ ಬರೆದರೂ ಅಪಾರ ಶ್ರದ್ಧೆಯಿಂದ, ತನ್ಮಯತೆಯಿಂದ ಮತ್ತು ಪರಿಶ್ರಮದಿಂದ ಬರೆಯುವ ಅನುಪಮಾ ಅವರು ಈ ಪುಸ್ತಕ ಬರೆಯಲು ಬರೀ ಇಂಟರ್‌ನೆಟ್ ಆಶ್ರಯಿಸಿಲ್ಲ. ಇದಕ್ಕಾಗಿ ವರ್ಧಾದ ಗಾಂಧಿ ಆಶ್ರಮಕ್ಕೆ ಹೋಗಿ ಬಂದಿದ್ದಾರೆ. ಕಸ್ತೂರಬಾ ಗಾಂಧಿ ಜನಿಸಿದ ಪೋರ್‌ಬಂದರ್‌ಗೆ ಹೋಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಬರೆದಿದ್ದಾರೆ. ಕಸ್ತೂರಬಾ ಮನೆಯನ್ನು ಹುಡುಕಲು ಹೈರಾಣಾಗಿದ್ದಾರೆ. ಎಲ್ಲ ಮುಗಿಸಿ ಕಸ್ತೂರಬಾ ಮಾತಿನಲ್ಲೇ ಅವರ ಬದುಕಿನ ನಿರೂಪಣೆ ಮಾಡಿದ್ದಾರೆ. ಕಸ್ತೂರಬಾ ಎಂಬ ಹೆಣ್ಣು ಮಗಳು ಗಾಂಧಿ ಎಂಬ ಅಸಾಧಾರಣ ಪುರುಷನ ಮಡದಿಯಾಗಿ ಅನುಭವಿಸಿದ ಪಡಿಪಾಟಲನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಬಹುತ್ವ ಎಂಬುದು ಭಾರತದ ಅಂತರಾಳದ ಸತ್ವ. ಈ ನೆಲದಲ್ಲಿ ಸಾವಿರಾರು ಪರಂಪರೆಗಳು, ಭಾಷೆಗಳು, ಸಂಸ್ಕೃತಿಗಳು, ರಾಷ್ಟ್ರೀಯತೆಗಳು ಹೂವಾಗಿ ಅರಳಿವೆ.ಇವೆಲ್ಲ ಸಂಘರ್ಷದೊಂದಿಗೆ ಸಾಮರಸ್ಯದ ಬದುಕನ್ನು ಕಟ್ಟಿಕೊಂಡಿವೆ. ಇಂತಹ ಬಹುಮುಖಿ ಬದುಕನ್ನು ಏಕ ಮುಖಿಯನ್ನಾಗಿಸುವ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ಹೇರುವ ಕರಾಮತ್ತುಗಳು ನಡೆದ ಈ ಕಾಲದಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಬರೆದ ಅಪರೂಪದ ಪುಸ್ತಕ ‘ನಾನು ಕಸ್ತೂರ್’ ಓದಲು ಕೈ ಗೆತ್ತಿಕೊಂಡೆ. ಇದು ಕಸ್ತೂರಬಾ ಗಾಂಧಿ ಅವರ ಜೀವನ ಕಥನ.
‘ಮಹಾತ್ಮಾ’ ಎಂದು ಹೆಸರಾದ ಮೋಹನದಾಸ ಕರಮಚಂದ ಗಾಂಧಿ ಮತ್ತು ಅವರ ಜೀವನ ಸಂಗಾತಿ ಕಸ್ತೂರಬಾ ಗಾಂಧಿ ಹೆಚ್ಚೂ ಕಡಿಮೆ ಒಂದೇ ವಯಸ್ಸಿನವರು. ‘ಗಾಂಧೀಜಿಯ-150’ ಬಂದು ಹೋದ ನಂತರ ಕಸ್ತೂರಬಾ ಗಾಂಧಿಯದು ಬಂತು.ಇತ್ತೀಚೆಗೆ ಗಾಂಧಿ ಜೊತೆಗೆ ಕಸ್ತೂರಬಾ ತುಂಬಾ ಗಮನ ಸೆಳೆಯುತ್ತಿದ್ದಾರೆ. ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ, ವೆಂಕೋಬರಾವ್ ಅವರ ‘ಗಾಂಧಿ ಚರಿತ ಮಾನಸ’ ಇವುಗಳಲ್ಲಿ ಕಸ್ತೂರಬಾ ಗಮನ ಸೆಳೆಯುತ್ತಾರೆ. ಡಾ.ಅನುಪಮಾ ಅವರು ‘ನಾನು ಕಸ್ತೂರ್’ ಎಂಬ ಪುಸ್ತಕ ಬರೆದು ಒಂದು ವರ್ಷವಾಯಿತು. ಇವಲ್ಲದೆ ಹಲವಾರು ಇಂಗ್ಲಿಷ್ ಪುಸ್ತಕಗಳನ್ನು ಓದಿ ‘‘ನನ್ನೊಳಗನ್ನೂ ಕಸ್ತೂರಬಾ ಕಲಕಿದರು’’ ಎಂದು ಹೇಳಿರುವ ಬರಗೂರು ರಾಮಚಂದ್ರಪ್ಪನವರು ಸುಧಾ ಸಾಪ್ತಾಹಿಕದಲ್ಲಿ ‘ಕಸ್ತೂರಬಾ ವರ್ಸಸ್ ಗಾಂಧಿ’ ಎಂಬ ಧಾರಾವಾಹಿ ಬರೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕವಲಕ್ಕಿಯ ಡಾ. ಅನುಪಮಾ ಅವರು ಬರೆದ ‘ನಾನು ಕಸ್ತೂರ್’ ಓದಲು ಆಯ್ದುಕೊಂಡೆ. ಏನನ್ನೇ ಬರೆದರೂ ಅಪಾರ ಶ್ರದ್ಧೆಯಿಂದ, ತನ್ಮಯತೆಯಿಂದ ಮತ್ತು ಪರಿಶ್ರಮದಿಂದ ಬರೆಯುವ ಅನುಪಮಾ ಅವರು ಈ ಪುಸ್ತಕ ಬರೆಯಲು ಬರೀ ಇಂಟರ್‌ನೆಟ್ ಆಶ್ರಯಿಸಿಲ್ಲ. ಇದಕ್ಕಾಗಿ ವರ್ಧಾದ ಗಾಂಧಿ ಆಶ್ರಮಕ್ಕೆ ಹೋಗಿ ಬಂದಿದ್ದಾರೆ. ಕಸ್ತೂರಬಾ ಗಾಂಧಿ ಜನಿಸಿದ ಪೋರ್‌ಬಂದರ್‌ಗೆ ಹೋಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಬರೆದಿದ್ದಾರೆ. ಕಸ್ತೂರಬಾ ಮನೆಯನ್ನು ಹುಡುಕಲು ಹೈರಾಣಾಗಿದ್ದಾರೆ. ಎಲ್ಲ ಮುಗಿಸಿ ಕಸ್ತೂರಬಾ ಮಾತಿನಲ್ಲೇ ಅವರ ಬದುಕಿನ ನಿರೂಪಣೆ ಮಾಡಿದ್ದಾರೆ. ಕಸ್ತೂರಬಾ ಎಂಬ ಹೆಣ್ಣು ಮಗಳು ಗಾಂಧಿ ಎಂಬ ಅಸಾಧಾರಣ ಪುರುಷನ ಮಡದಿಯಾಗಿ ಅನುಭವಿಸಿದ ಪಡಿಪಾಟಲನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರಣಾಮಿ ಪಂಥ ಬಹಳ ವಿಭಿನ್ನವಾದ ಪಂಥ.ಇದರಲ್ಲಿ ಮೂರ್ತಿ ಪೂಜೆಯಿಲ್ಲ. ಮೂರ್ತಿಗಿಂಥ ಜ್ಞಾನವೇ ಶ್ರೇಷ್ಠವೆಂದು ಪ್ರತಿಪಾದಿಸುವ ಈ ಸಂಪ್ರದಾಯದಲ್ಲಿ ಪವಿತ್ರ ಗ್ರಂಥಗಳನ್ನು ಪೂಜಿಸಲಾಗುತ್ತದೆ. ಹಾಡುವಾಗ ಪ್ರಣಾಮಿ ಗಾಯಕ, ಗಾಯಕಿಯರು ಪ್ರವಾದಿ ಮುಹಮ್ಮದರನ್ನು ಮತ್ತು ಕೃಷ್ಣನನ್ನು ಒಟ್ಟೊಟ್ಟಿಗೆ ನೆನೆಯುತ್ತಾರೆ. ಮೋಹನದಾಸ ಕರಮಚಂದ ಗಾಂಧಿ ಮಹಾತ್ಮ್ಮಾ ಗಾಂಧಿ ಆಗುವಲ್ಲಿ ಈ ಪ್ರಣಾಮಿ ಪಂಥ ಮತ್ತು ಜೈನ ಧರ್ಮದ ತತ್ವಗಳ ಪ್ರಭಾವ ಗಾಢವಾಗಿದೆ. ಅಂತಲೇ ಕಸ್ತೂರಬಾ ಪುಸ್ತಕಕ್ಕೆ ಮಾಹಿತಿ ಸಂಗ್ರಹಿಸಲು ಪೋರ ಬಂದರ್‌ಗೆ ಹೋದ ಲೇಖಕಿ ಪ್ರಣಾಮಿ ಮಂದಿರ ಹುಡುಕಿಕೊಂಡು ಅಲೆದಾಡಿದ್ದಾರೆ.ಕೊನೆಗೆ ಅದು ಕಸ್ತೂರಬಾ ಮನೆಯ ಹಿಂದಿನ ಸಣ್ಣ ಗಲ್ಲಿಯಲ್ಲಿ ಸಿಕ್ಕಿದೆ.
ಈ ಪುಸ್ತಕ ಓದುವಾಗ ನನ್ನಲ್ಲಿ ಹೆಚ್ಚು ಕುತೂಹಲ ಮತ್ತು ಅಚ್ಚರಿ ಮೂಡಿಸಿದ್ದು ಅನುಪಮಾ ಅವರು ದಾಖಲಿಸಿದ ಪ್ರಣಾಮಿ ಪಂಥದ ಇತಿಹಾಸ. ಬಾಪೂಜಿ ತಾಯಿ ಪುತಲಿಬಾಯಿ ಮತ್ತು ಕಸ್ತೂರಬಾ ಮನೆಯವರು ಪ್ರಣಾಮಿ ಪಂಥದ ಅನುಯಾಯಿಗಳು. ಏನಿದು ಪ್ರಣಾಮಿ ಪಂಥ ಎಂದು ಹುಡುಕುತ್ತಾ ಹೋದ ಅನುಪಮಾ ಅವರು ಇದರ ಮಂದಿರವನ್ನು ಪತ್ತೆ ಹಚ್ಚಲು ಇಡೀ ಪೋರ ಬಂದರನ್ನೇ ಜಾಲಾಡಿದ್ದಾರೆ. ಕೊನೆಗೂ ಇದನ್ನು ಹುಡುಕಿ ಬೆರಗಾಗಿದ್ದಾರೆ.
ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಶುರುವಾದ ಈ ಪ್ರಣಾಮಿ ಸಂಪ್ರದಾಯದ ಸ್ಥಾಪಕ ದೇವಚಂದಜಿ ಮಹಾರಾಜ. ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತದಿಂದ ಬಂದು ಗುಜರಾತಿನ ಜಾಮನಗರದಲ್ಲಿ ನೆಲೆಸಿದ ದೇವಚಂದಜಿ ವೇದ, ವೇದಾಂತ, ಭಾಗವತಗಳನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳುತ್ತಿದ್ದರು. ಅವರಿಗೆ ಜಾಮನಗರದ ದಿವಾನರ ಮಗ ಮೆಹ್ರಾಜ್ ಠಾಕೂರ್ ಪರಮ ಶಿಷ್ಯನಾದ. ಆತನೇ ಮುಂದೆ ಮಹಾಮತಿ ಪ್ರಾಣನಾಥ ಮಹಾರಾಜ ಎಂದು ಹೆಸರಾದ. ಹೀಗಾಗಿ ಮೊದಲು ನಿಜಾನಂದ ಸಂಪ್ರದಾಯ ಎಂದು ಕರೆಯಲಾಗುತ್ತಿದ್ದ ಇದು ಪ್ರಣಾಮಿ ಪಂಥ ಎಂದು ಹೊಸ ಹೆಸರು ಪಡೆಯಿತು.
ಬಾಪೂಜಿ ಮತ್ತು ಕಸ್ತೂರಬಾ ಮನೆಯವರು ಪ್ರಣಾಮಿ ಪಂಥದ ಅನುಯಾಯಿಗಳು. ಗುಜರಾತಿನಲ್ಲಿ ಪ್ರಣಾಮಿ ಪಂಥವನ್ನು ಕಟ್ಟಿ ಬೆಳೆಸಿದ ಪ್ರಾಣನಾಥಜಿ ಮಹಾರಾಜ ಭಾರತ ಮತ್ತು ಅರಬ್ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಸುತ್ತಾಡಿದವರು. ಹರಿದ್ವಾರದಲ್ಲಿ ನಡೆಯುತ್ತಿದ್ದ ಕುಂಭ ಮೇಳಕ್ಕೆ ತಪ್ಪದೆ ಹೋಗಿ ಬರುತ್ತಿದ್ದರು. ಅದೇ ರೀತಿ ಮಕ್ಕಾ, ಮಥುರಾ ಎರಡೂ ಕಡೆ ಹೋಗಿ ಬರುತ್ತಿದ್ದರು. ಇರಾಕ್, ಇರಾನ್‌ಗಳನ್ನು ಸುತ್ತಾಡಿ ಬಂದಿದ್ದರು. ಪ್ರಾಣನಾಥರಿಗೆ ಸಿಖ್ ಅನುಯಾಯಿಗಳೂ ಇದ್ದರು.
ಪ್ರಣಾಮಿಗಳು ಹೆಂಡ, ಹೊಗೆಸೊಪ್ಪು, ಮಾಂಸಹಾರವನ್ನು ಸೇವಿಸುವುದಿಲ್ಲ. ಮೂರ್ತಿಪೂಜೆ ಮಾಡುವುದಿಲ್ಲ. ತಾರತಮ ಸಾಗರದ ಶ್ಲೋಕಗಳನ್ನು ಹೇಳುವುದು ಮತ್ತು ಅದನ್ನು ಓದುವುದೇ ವ್ರತ. ಅಲ್ಲಿ ತೀರ್ಥ, ಪ್ರಸಾದಗಳಿಗೆ ಹೆಚ್ಚಿನ ಮಹತ್ವವಿಲ್ಲ. ದೇವರನ್ನು ಮೂರ್ತಿ ರೂಪದಲ್ಲಿ ಪೂಜಿಸದೆ ಪುಸ್ತಕ ರೂಪದಲ್ಲಿ ಜೋಕಾಲಿ ಮೇಲಿಟ್ಟು ತೂಗುವ ವಿಭಿನ್ನ ಪಂಥ ಅದು.
ಪ್ರಣಾಮಿ ಪಂಥದ ಈ ಪ್ರಾಣನಾಥ ಮಹಾರಾಜ ಧರ್ಮಗಳ ನಡುವಿನ ಸಂಬಂಧಗಳನ್ನು ಬೆಸೆಯಲು ಸಾಕಷ್ಟು ಶ್ರಮಿಸಿದರು. ಗುಜರಾತಿ, ಸಿಂಧಿ, ಉರ್ದು, ಅರೆಬಿಕ್, ಪರ್ಷಿಯನ್ ಮತ್ತು ಹಿಂದಿ ಭಾಷೆಗಳಲ್ಲಿ ಕುಲ್ಜಾಜ ಸ್ವರೂಪ ಅನ್ನು ಪ್ರಸ್ತುತಪಡಿಸಿದರು. ಅದು ತಾರತಮ ಸಾಗರ ಎಂದೂ ಹೆಸರಾಗಿದೆ. ತಾರತಮ ಸಾಗರ ಅಥವಾ ಕುಲ್ಜಾಮ ವಾಣಿ ಒಟ್ಟು ಹದಿನಾಲ್ಕು ಗ್ರಂಥಗಳ ಗುಚ್ಚ. ಅದರಲ್ಲಿ ವೇದ, ಕತೇಬ್‌ಗಳ ಸಾರವಿದೆ. ಕತೇಬ್ ಅಂದರೆ ಕುರ್‌ಆನ್, ತೋರಾ ಡೇವಿಡ್‌ನ ಕೀರ್ತನೆ, ಬೈಬಲ್‌ನಂತಹ ಧರ್ಮ ಗ್ರಂಥಗಳು.
ವೇದ ಏನು ಹೇಳಿದೆಯೋ ಕುರ್‌ಆನ್ ಅದನ್ನೇ ಹೇಳಿದೆ. ಇಬ್ಬರೂ ದೇವರ ಮಕ್ಕಳೇ, ಕಿತ್ತಾಡುತ್ತಿರುವರು ಸತ್ಯ ಅರಿಯರೇ ಎಂಬುದು ತಾರತಮ ಸಾಗರದ ಶ್ಲೋಕವೊಂದರ ಅರ್ಥ.
ಗಾಂಧೀಜಿ ಆಶ್ರಮಗಳ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ‘‘ಈಶ್ವರ ಅಲ್ಲಾ ತೇರಾ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್’’ಎಂಬ ಪ್ರಾರ್ಥನೆಗೆ ಬಹುಶಃ ಪ್ರಣಾಮಿ ಪಂಥವೇ ಪ್ರೇರಣೆಯಾಗಿರಬಹುದು.
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂಗಳಲ್ಲಿ ಪ್ರಣಾಮಿಗಳಿದ್ದಾರೆ. ಮೊದಲು ಎಲ್ಲ ಧರ್ಮದ ಅನುಯಾಯಿಗಳನ್ನು ಹೊಂದಿದ್ದ ಪ್ರಣಾಮಿ ಪಂಥ ಈಗ ಹಿಂದೂ ಧರ್ಮದವರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.
ಗಾಂಧಿ ಚರಿತ್ರೆ ಬರೆಯಲು ಬೇಕಾದಷ್ಟು ವಿವರಗಳು, ಮಾಹಿತಿಗಳು ಸಿಗುತ್ತವೆ. ಆದರೆ ಕಸ್ತೂರಬಾ ಬಗ್ಗೆ ಬರೆಯುವುದು ಅಷ್ಟು ಸುಲಭವಲ್ಲ. ಅವರ ವಿವಾಹಪೂರ್ವ ಬದುಕಿನ ಮಾಹಿತಿ ಸಿಗುವುದು ಕಷ್ಟ. ಅದಕ್ಕಾಗಿ ಡಾ. ಅನುಪಮಾ ಅವರು ಗುಜರಾತಿನ ಪೋರ್ ಬಂದರ್, ಸಬರಮತಿಗಳಿಗೆ ಹೋಗಿ ಮೂರು ದಿನ ಊರೆಲ್ಲ ಜಾಲಾಡಿ ಮಾಹಿತಿ ಸಂಗ್ರಹಿಸಿ ಕಸ್ತೂರಬಾ ಚರಿತ್ರೆಯನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ.
ಇದನ್ನು ಬಿಟ್ಟರೆ ಅನುಪಮಾ ಅವರು ಬರೆದ ‘ನಾನು ಕಸ್ತೂರ್’ ಒಂದು ಅಪರೂಪದ ದಾಂಪತ್ಯ ಕಥನ. ಕಸ್ತೂರಬಾ ಬಗ್ಗೆ ಬರೆಯಲು ಹೊರಟರೆ ಬಾಪೂಜಿಯನ್ನು ಪ್ರತ್ಯೇಕವಾಗಿಟ್ಟು ಬರೆಯಲು ಸಾಧ್ಯವಿಲ್ಲ. ಬಾಪು ಬಗ್ಗೆ ಬರೆಯಲು ಹೊರಟರೆ ಅಲ್ಲಿ ಕಸ್ತೂರಬಾ ಉಲ್ಲೇಖವಿರಲೇಬೇಕು. ಇಂತಹ ಒಟ್ಟೊಟ್ಟಿಗೆ ಬೆಳೆದ ಜೀವಗಳು ಚರಿತ್ರೆಯಲ್ಲಿವೆ. ಜ್ಯೋತಿಬಾ ಫುಲೆ-ಸಾವಿತ್ರಿಬಾಯಿ ಫುಲೆ ಅವರೂ ಹೀಗೇ ಬದುಕಿದವರು. ಇಂತಹ ದಂಪತಿಗೆ ಖಾಸಗಿ ಬದುಕೆಂಬುದೇ ಇರುವುದಿಲ್ಲ. ಸಾರ್ವಜನಿಕ ಬದುಕೇ ಸರ್ವಸ್ವವಾಗಿರುತ್ತದೆ.