ಸೂರಿಲ್ಲದೆ ಬೀದಿಯಲ್ಲಿ ದಿನ ಕಳೆಯುತ್ತಿರುವ ಮಾಜಿ ಸೈನಿಕ
ದಾಖಲಾತಿ ನೀಡಿದರೂ ಬರದ ನಿವೃತ್ತಿ ವೇತನ: ಆರೋಪ
ಕಾರವಾರ, ಸೆ.28: ದೇಶ ಸೇವೆಗಾಗಿ ಸೇನೆಗೆ ಸೇರಿ 12 ವರ್ಷಗಳ ಸೇವೆ ಸಲ್ಲಿಸಿದ ಮಾಜಿ ಸೈನಿಕರೊಬ್ಬರು ಈಗ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ವಾಸಿಸಲು ಸೂರಿಲ್ಲದೆ ಬೀದಿ ಬೀದಿಯಲ್ಲಿ ಅಲೆಯುವಂತಾಗಿದೆ.
ಕಾರವಾರ ತಾಲೂಕಿನ ಚೆಂಡಿಯಾದ ಮಾಜಿ ಸೈನಿಕ ಪ್ರಭಾಕರ ಮಾರುತಿ ಚೆಂಡೇಕರ್ 1965ರಲ್ಲಿ ಬೆಳಗಾವಿಯ ಮರಾಠಾ ರೆಜಿಮೆಂಟ್ ಮೂಲಕ ಸೇನೆಗೆ ಸೇರಿ, ಭಾರತದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ 1978ರ ಅ.3ರಂದು ಸೇವಾ ನಿವೃತ್ತಿ ಪಡೆದುಕೊಂಡಿದ್ದರು. ಆದರೆ, ನ್ಯಾಯಯುತವಾಗಿ ಅವರಿಗೆ ಸೈನಿಕ ಬೋರ್ಡ್‌ನಿಂದ ಬರಬೇಕಾದ ನಿವೃತ್ತಿ ವೇತನ ಬಂದಿಲ್ಲ. ‘ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಲ ಸೈನಿಕ ಬೋರ್ಡ್‌ಗೆ ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸೈನಿಕ ಬೋರ್ಡ್‌ನಲ್ಲಿ ವಿಚಾರಿಸಿದರೆ ದಾಖಲೆಗಳು ಸರಿ ಇಲ್ಲ, ಕ್ರಮಕೈಗೊಳ್ಳುತ್ತೇವೆ ಎಂಬ ಉತ್ತರ ಬಂದಿದೆಯೇ ಹೊರತು ಈವರೆಗೂ ನನಗೆ ಬರಬೇಕಾದ ನಿವೃತ್ತಿ ವೇತನ ಬಂದಿಲ್ಲ’ ಎಂದು ಪ್ರಭಾಕರ ದೂರಿದ್ದಾರೆ.
ಪ್ರಭಾಕರ ಅವರ ಕುಟುಂಬದಲ್ಲಿ ಯಾರೂ ಇಲ್ಲ. ಸೇವಾ ನಿವೃತ್ತಿಯ ಬಳಿಕ ಚೆಂಡಿಯಾದಲ್ಲಿ ಕೆಲ ಸಮಯ ನೆಲೆಸಿ, ಆ ಬಳಿಕ ಗೋವಾ ರಾಜ್ಯದಲ್ಲಿ ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ತೆರಳಿದ್ದರು. ಅನೇಕ ವರ್ಷಗಳು ಗೋವಾದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸಿಕೊಳ್ಳುತ್ತಿದ್ದರು. ಕೆಲ ವರ್ಷಗಳ ಹಿಂದೆ ಕಾರವಾರಕ್ಕೆ ಮರಳಿದ ಪ್ರಭಾಕರ ಇಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಉಳಿದುಕೊಳ್ಳಲು ಯಾವುದೇ ಸೂರಿಲ್ಲದ ಕಾರಣ ಎಲ್ಲೆಂದರಲ್ಲಿ ಮಲಗಿ ದಿನ ಕಳೆಯುತ್ತಿದ್ದಾರೆ. ಸದ್ಯ ಅವರಿಗೆ 73 ವರ್ಷಗಳಾಗಿದ್ದು, ದುಡಿದು ತಿನ್ನಲು ಶಕ್ತಿ ಇಲ್ಲದಂತಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಳಿ ಮದರ್ ತೆರೇಸಾ ಸಂಸ್ಥೆಯವರು ಬಡ ಜನರಿಗಾಗಿ ಮಾಡುತ್ತಿರುವ ಅನ್ನದಾನವೇ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಈಗ ಆಸರೆಯಾಗಿದೆ. ಆರೋಗ್ಯವೂ ಸರಿ ಇಲ್ಲದ ಕಾರಣ ಸರಕಾರ ಬಡ ಜನರಿಗೆ ನೀಡುವ ವೃದ್ಧಾಪ್ಯ ವೇತನವನ್ನಾದರೂ ಇಲಾಖೆಯ ಅಧಿಕಾರಿಗಳು ನೀಡಿದರೆ, ಅದರಿಂದ ಜೀವನ ನಿರ್ವಹಿಸುತ್ತೇನೆ ಎನ್ನುವುದು ಪ್ರಭಾಕರ ಅವರ ಮಾತಾಗಿದೆ.