ಹೃದಯ ಜೋಪಾನವಿರಲಿ
ಇಂದು ವಿಶ್ವ ಹೃದಯ ದಿನ
ಜಗತ್ತಿನಾದ್ಯಂತ ಸೆಪ್ಟಂಬರ್ 29ನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತಿದೆ. ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, 2000ನೇ ಇಸವಿಯಲ್ಲಿ ಆರಂಭವಾದ ಈ ಆಚರಣೆಯನ್ನು ಪ್ರತಿ ವರ್ಷ ಸೆಪ್ಟಂಬರ್ 29ರಂದು ಬೇರೆ ಬೇರೆ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 17.5 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಇದೀಗ ಮಾರಣಾಂತಿಕ ಕಾಯಿಲೆಯ ಪಟ್ಟಿಯ ಮೊದಲ ಸ್ಥಾನದಲ್ಲಿ ಹೃದಯ ಸಂಬಂಧಿ ರೋಗ ವಿರಾಜಮಾನವಾಗಿದೆ.
ಈ ಹೃದಯ ಸಂಬಂಧಿ ರೋಗಗಳಲ್ಲಿ ಸುಮಾರು 80 ಶೇಕಡಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಉತ್ತಮ ವ್ಯಾಯಾಮ, ತಂಬಾಕು ಮತ್ತು ಮಧ್ಯಪಾನ ಸೇವನೆಯನ್ನು ತ್ಯಜಿಸುವುದು, ಉತ್ತಮ ಆಹಾರ ಪದ್ಧತಿ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ, ಹೃದಯಾಘಾತದ ಅನುಪಾತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. 2000ನೇ ಇಸವಿಯಲ್ಲಿ ದೈಹಿಕ ಚಟುವಟಿಕೆ ಎಂಬ ವಿಷಯನ್ನು ಇಟ್ಟುಕೊಂಡು ಆರಂಭವಾದ ಈ ಆಚರಣೆ ಪ್ರತಿ ವರ್ಷ ಬೇರೆ ಬೇರೆ ತಿರುಳನ್ನು ಇಟ್ಟುಕೊಂಡು ಜನರಲ್ಲಿ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಹೃದಯ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಆದರೂ ವೈಜ್ಞಾನಿಕತೆ, ವೈಚಾರಿಕತೆ ಮತ್ತು ಆಧುನಿಕತೆ ಬೆಳೆದಂತೆಲ್ಲಾ ಜನರು ಹೆಚ್ಚು ಆಲಸಿಗಳಾಗಿ ದೈಹಿಕ ಕಸರತ್ತು ಕಡಿಮೆಯಾಗಿ ಮಾನಸಿಕ ಒತ್ತಡ ಜಾಸ್ತಿಯಾಗಿ ಹೊಸಹೊಸ ರೋಗಗಳು ಹುಟ್ಟ ತೊಡಗಿದೆ ಮತ್ತು ಬೆಳವಣಿಗೆ ಹೊಂದಿದ ರಾಷ್ಟ್ರಗಳಲ್ಲಿ ಹೃದಯಾಘಾತ ಮುಂತಾದ ಹೃದಯ ಸಂಬಂಧಿರೋಗಗಳು ಬಹುಮುಖ್ಯ ರೋಗವಾಗಿ ಹೊರಹೊಮ್ಮಿದೆ. ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿಯೂ ಹೃದಯಾಘಾತ ಮುಂತಾದ ರೋಗಗಳು ಬದಲಾಗುತ್ತಿರುವ ಜೀವನ ಪದ್ಧತಿ, ನಗರೀಕರಣ ಮತ್ತು ಕಲುಷಿತ ವಾತಾವರಣದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿವೆೆ. ಮೊದಲೇ ಬಡತನ, ಅನಕ್ಷರತೆ, ಮೂಢನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಅಶ್ಚರ್ಯವೇನಿಲ್ಲ.
ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?
ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.
ದೈಹಿಕ ವ್ಯಾಯಾಮ: ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ. ಕನಿಷ್ಠ ಪಕ್ಷ ದಿನಕ್ಕೆ 30ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತ ಶೇಕಡಾ 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಈಗಿನ ಒತ್ತಡದ, ಧಾವಂತದ ಬದುಕಿನಲ್ಲಿ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯಕ್ತಿರಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಾಘಾತಕ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.
ಆಹಾರ ಪದ್ಧತಿ: ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು ‘‘ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’’ ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಇರುವ, ಅತಿಯಾದ ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಹಸಿ ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಿದ್ಧ ಆಹಾರಗಳು ಮತ್ತು ಪರಿಷ್ಕ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಹೆಚ್ಚು ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.
ಜೀವನ ಶೈಲಿಯ ಬದಲಾವಣೆ: ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು. ಅಮೆರಿಕದ ಹೃದಯ ಸಂಘದ ಅಂಕಿಅಂಶಗಳ ಪ್ರಕಾರ ದಿನದಲ್ಲಿ 2ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಟಿವಿ ನೋಡುಗರಲ್ಲಿ ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ. ಅತಿಯಾದ ಮದ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮದ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.
ಬೊಜ್ಜು, ಆನುವಂಶೀಯತೆ ಮತ್ತಿತರ ಕಾರಣಗಳು: ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗಿ ಕೇವಲ ಮೂವತ್ತರ ಆಸುಪಾಸಿನಲ್ಲಿಯೇ ಹೃದಯಾಘಾತವಾಗುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತದೆ. ಮೊದಲೆಲ್ಲಾ 50, 60ರ ಆಸುಪಾಸಿನಲ್ಲಿ ಆಗುತ್ತಿದ್ದ ಹೃದಯಾಘಾತ ಈಗೀಗ ಯುವಕರಲ್ಲಿ ಬರುವುದು ನಿಜಕ್ಕೂ ಬಹಳ ಆಘಾತಕಾರಿ ವಿಚಾರ. ಅದೇ ರೀತಿ ಆನುವಂಶೀಯತೆ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ವಂಶವಾಹಿನಿಗಳ ಮುಖಾಂತರ ಬರುವ ಹೃದಯಾಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
ನಿಯಮಿತವಾಗಿ ಕುಟುಂಬ ವೈದ್ಯರ ಭೆೇಟಿ: ಹೃದಯ ರೋಗಕ್ಕೆ ಪೂರಕವಾದ ವಾತಾವರಣವುಳ್ಳ ವ್ಯಕ್ತಿಗಳು ಅಂದರೆ ಹೆಚ್ಚಿನ ಬೊಜ್ಜು, ಅಧಿಕ ದೇಹದ ಭಾರ, ಅಧಿಕ ರಕ್ತದೊತ್ತಡ, ಮಧುಮೇಹ ರೋಗಿಗಳು ಮತ್ತು ಆನುವಂಶೀಯವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಸಾಧ್ಯತೆ ಇರುವವರು ಜೀವನ ಶೈಲಿ ಮತ್ತು ಆಹಾರದ ಮಾರ್ಪಾಡಿನ ಜೊತೆಗೆ ನಿಯಮಿತವಾಗಿ ವೃದ್ಯರಿಂದ ಪರೀಕ್ಷೆಗೊಳಗಾಗಿರಬೇಕು ಮತ್ತು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ, ಪರಿಹಾರ ಮತ್ತು ಮಾರ್ಗದರ್ಶನ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಹೃದಯಾಘಾತವನ್ನು ತಡೆಗಟ್ಟಬಹುದು. ನೆನಪಿರಲಿ ಶೇಕಡಾ 80ರಷ್ಟು ಹೃದಯಾಘಾತಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಎಂದು ಸಂಶೋಧನೆಗಳು ಸಾರಿ ಹೇಳಿವೆ.
ನಿಮ್ಮ ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?
ಸಾಮಾನ್ಯವಾಗಿ ಮನುಷ್ಯರಲ್ಲಿ ಹೃದಯ ಗಾತ್ರ ಒಂದು ಕೈ ಮುಷ್ಟಿಯಷ್ಟು ಇರುತ್ತದೆ. ಮಹಿಳೆಯರಲ್ಲಿ 250ರಿಂದ 300ಗ್ರಾಂ ತೂಗುವ ಹೃದಯ ಪುರುಷರಲ್ಲಿ 300ರಿಂದ 350 ಗ್ರಾಂ ತೂಗುತ್ತದೆ. ಹೃದಯವು ಯಾವತ್ತೂ ಚಲನೆಯಲ್ಲಿ ಇರುತ್ತದೆ ಮತ್ತು ಪ್ರತಿ ಬಾರಿ ಸಡಿಲ ಮತ್ತು ಸಂಕುಚಿತಗೊಳ್ಳುವುದರ ಮೂಲಕ, ಪ್ರತಿ ಸ್ಪಂದನದಲ್ಲಿಯೂ 60ರಿಂದ 80 ಮೀ.ಲೀ. ರಕ್ತವನ್ನು ಹೃದಯದಿಂದ ಹೊರದೂಡಿ ರಕ್ತನಾಳಗಳಲ್ಲಿ ಮುಂದಕ್ಕೆ ಚಲಿಸುವಂತೆ ಮಾಡುತ್ತದೆ.
ದೇಹದ ರಕ್ತನಾಳಗಳಲ್ಲಿ ಚಲಿಸುವ ರಕ್ತ ಅಂಗಾಂಗಳಿಗೆ ಆಮ್ಲಜನಕ ಪೂರೈಸಿದ ಬಳಿಕ ನೀಲವರ್ಣಕ್ಕೆ ತಿರುಗಿ ಹೃದಯದ ಬಲಭಾಗಕ್ಕೆ ತಲುಪುತ್ತದೆ. ಹೃದಯದ ಬಲಭಾಗದಿಂದ ನೀಲವರ್ಣದ ಆಮ್ಲಜನಕ ರಹಿತ ರಕ್ತವನ್ನು ಹೃದಯವು ಶ್ವಾಸಕೋಶಗಳಿಗೆ ರಕ್ತನಾಳಗಳ ಮೂಲಕ ತಲುಪಿಸುತ್ತದೆ. ಶ್ವಾಸಕೋಶಗಳಲ್ಲಿ ಆಮ್ಲಜನಕ ಹೀರಿಕೊಂಡು ರಕ್ತ ಕೆಂಪುಬಣ್ಣಕ್ಕೆ ಪರಿವರ್ತನೆಗೊಂಡು ಎಡಭಾಗದ ಹೃದಯಕ್ಕೆ ತಲುಪುತ್ತದೆ. ಎಡಭಾಗದ ಹೃದಯದಿಂದ ಆಮ್ಲಜನಕಯುಕ್ತ ರಕ್ತ ಆಯೋರ್ಟ ಎಂಬ ಮುಖ್ಯ ರಕ್ತನಾಳದ ಮೂಲಕ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ. ಒಟ್ಟಿನಲ್ಲಿ ಹೃದಯದ ಕೆಲಸವೆಂದರೆ ರಕ್ತವನ್ನು ನಿರಂತರವಾಗಿ ಚಲನೆಯಲ್ಲಿರುವಂತೆ ಮಾಡುವುದು. ಹೃದಯ ಪ್ರತಿ ನಿಮಿಷಕ್ಕೆ ಸುಮಾರು 72 ಬಾರಿ ಹೃದಯ ಮಿಡಿಯುತ್ತಲೇ ಇರುತ್ತದೆ. ಅಂದರೆ 60 ವಯಸ್ಸಿನ ವ್ಯಕ್ತಿಯ ಹೃದಯ ಹುಟ್ಟಿನಿಂದ ಸರಿ ಸುಮಾರು ಇನ್ನೂರ ಐವತ್ತು ನೂರು ಕೋಟಿ ಬಾರಿ ಅಂದರೆ 2.5 ಮಿಲಿಯನ್ ಬಾರಿ ಮಿಡಿಯುತ್ತದೆ. ಮಕ್ಕಳಲ್ಲಿ ಹೃದಯದ ಮಿಡಿತ ನಿಮಿಷಕ್ಕೆ ಸುಮಾರು 90ರಿಂದ 100 ಬಾರಿ ಇರುತ್ತದೆ. ಗಾಬರಿ, ಭಯ, ನೋವು ನಲಿವು, ಸಂತಸ, ಉದ್ವೇಗದ ಸಮಯದಲ್ಲಿ ಹೃದಯವು ಹೆಚ್ಚು ಬಾರಿ ಮಿಡಿಯುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಮೂರನೇ ವಾರದಿಂದಲೇ ಹೃದಯ ಮಿಡಿಯಲು ಆರಂಭವಾಗುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುವ ಅಂಗವೆಂದರೆ ಹೃದಯ ಮಾತ್ರ.