ದೇವದತ್ತ ಪಟ್ಟನಾಯಕರ ಸೀತಾ-ಸಚಿತ್ರ ಮರುಕಥನ
ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದು. ಮಹಾಭಾರತದಷ್ಟು ಸಮೃದ್ಧವಾಗಿ ಹರಡಿಕೊಳ್ಳದೆ ಇದ್ದರೂ, ಕಾವ್ಯದ ಪ್ರಮುಖ ಪಾತ್ರಗಳಾಗಿರುವ ರಾವಣ, ರಾಮ ಮತ್ತು ಸೀತೆ ದೇಶಾದ್ಯಂತ ಬೇರೆ ಬೇರೆ ರೂಪಗಳಲ್ಲಿ, ರೂಪಕಗಳಲ್ಲಿ ಹರಡಿಕೊಂಡಿದ್ದಾರೆ. ರಾಮಾಯಣ ನಿಜಕ್ಕೂ ಎಲ್ಲಿ ನಡೆಯಿತು? ಎನ್ನುವುದರ ಬಗ್ಗೆ ಗೊಂದಲಗಳಿವೆ. ಹಾಗೆಯೇ ರಾಮಾಯಣದ ಪಾತ್ರ ನಿರೂಪಣೆಗಳೂ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ರಾವಣ-ಸೀತೆಯ ಸಂಬಂಧ, ರಾಮ-ಸೀತೆಯ ಸಂಬಂಧಗಳನ್ನು ವಾಲ್ಮೀಕಿ ರಾಮಾಯಣ ಯಾವ ರೀತಿಯಲ್ಲಿ ಕಟ್ಟಿಕೊಡುತ್ತದೆಯೋ ಅದಕ್ಕಿಂತ ಭಿನ್ನವಾಗಿ ಜನಪದ ರಾಮಾಯಣ ಕಟ್ಟಿಕೊಡುತ್ತದೆ. ಜಾನಪದವಾಗಿ ಹರಡಿಕೊಂಡಿದ್ದ ಸುದೀರ್ಘ ಕಥೆಯನ್ನು ಮರು ಜೋಡಿಸಿ ಅದಕ್ಕೆ ಸಿದ್ಧ ರೂಪವನ್ನು ವಾಲ್ಮೀಕಿ ಕೊಟ್ಟ ಕಾರಣಕ್ಕೆ ಈ ವ್ಯತ್ಯಾಸಗಳು ಕಂಡಿರಬಹುದು. ಆದುದರಿಂದ ವಾಲ್ಮೀಕಿ ರಾಮಾಯಣವೇ ಅಂತಿಮವಲ್ಲ ಎನ್ನುವುದನ್ನು ಹಿರಿಯ ವಿದ್ವಾಂಸ ಎ. ಕೆ. ರಾಮಾನುಜನ್ ಅವರು ಕಟ್ಟಿಕೊಡುತ್ತಾರೆ. ಹಾಗೆಯೇ, ಇಲ್ಲಿರುವ ಪಾತ್ರಗಳನ್ನು ಹಲವು ವಿದ್ವಾಂಸರು ಮರು ವಿಮರ್ಶೆಗೆ ಒಡ್ಡಿದ್ದಾರೆ.
ರಾಮ, ರಾವಣ, ಸೀತೆ, ಲಕ್ಷ್ಮಣ, ಊರ್ಮಿಳೆ, ಶೂರ್ಪನಖಿ....ಹೀಗೆ ವಿವಿಧ ಪಾತ್ರಗಳನ್ನು ಕೇಂದ್ರವಾಗಿರಿಸಿಕೊಂಡು ಹಲವರು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಪೋಲಂಕಿ ಅವರ ‘ಸೀತಾಯಣ’ ಕನ್ನಡದಲ್ಲಿ ಭಾರೀ ಕ್ರಾಂತಿಯನ್ನೇ ಎಬ್ಬಿಸಿತು. ಇತ್ತೀಚೆಗೆ ಎಸ್. ಎಲ್. ಭೈರಪ್ಪ ಅವರು ಸೀತೆಯನ್ನು ಮುಖ್ಯವಾಗಿರಿಸಿಕೊಂಡು ಬರೆದ ‘ಉತ್ತರ ಕಾಂಡ’ ಕೂಡ ಸಾಕಷ್ಟು ಸುದ್ದಿಯಾಯಿತು. ಹೀಗೆ, ರಾವಣ ಮತ್ತು ಸೀತೆಯನ್ನೇ ಮುಖ್ಯವಾಗಿಸಿಕೊಂಡು ರಾಮಾಯಣವನ್ನು ಮುರಿದು ಕಟ್ಟುವ ಪ್ರಯತ್ನವನ್ನು ಹಲವು ಕವಿಗಳು, ಸಂಶೋಧಕರು, ವಿಮರ್ಶಕರು ಮಾಡಿದ್ದಾರೆ. ಅಂತಹ ಹಲವು ಪ್ರಯತ್ನಗಳಲ್ಲಿ ದೇವದತ್ತ ಪಟ್ಟನಾಯಕ ಅವರ ‘ಸೀತಾ’ ಕೂಡ ಪ್ರಮುಖವಾದುದು. ಇದು ಸೀತೆಯನ್ನು ಕೇಂದ್ರೀಕರಿಸಿದ ರಾಮಾಯಣದ ಸಚಿತ್ರ ಮರುಕಥನವಾಗಿದೆ. ಹಿರಿಯ ಪತ್ರಕರ್ತ, ಲೇಖಕರಾದ ಪದ್ಮರಾಜ ದಂಡಾವತಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ರಾಮಾಯಣದ ಕುರಿತಂತೆ ಸುಮಾರು 5 ಕೃತಿಗಳನ್ನು ರಚಿಸಿರುವ ಪಟ್ಟನಾಯಕ, ಈ ಕೃತಿಯಲ್ಲಿ ಸೀತೆಯ ಮೂಲಕವೇ ರಾಮಾಯಣವನ್ನು ಸಚಿತ್ರವಾಗಿ ಮರು ನಿರೂಪಿಸುವ ಕೆಲಸ ಮಾಡುತ್ತಾರೆ. ಈ ಕೃತಿಯ ಮೂಲಕ ಲೇಖಕರು ರಾಮಾಯಣವೂ ಮಹಾಭಾರತದಷ್ಟೇ ಸಂಕೀರ್ಣ ವಾದುದು ಎನ್ನುವುದನ್ನು ಹೇಳಲು ಬಯಸುತ್ತಾರೆ. ಇಲ್ಲಿಯೂ ಸೀತೆಯ ಜೊತೆಗೆ ರಾಮ ನಡೆದುಕೊಂಡ ರೀತಿ ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ. ಲವ ಮತ್ತು ಕುಶರು ತಮ್ಮ ತಂದೆ ರಾಮನನ್ನು ಸೋಲಿಸಿದಾಗ ದೇವದತ್ತರು ‘‘ರಾಮ ಮತ್ತು ಅವನ ಇಡೀ ಸೈನ್ಯವು ಸೀತೆಯ ಮಕ್ಕಳನ್ನು ಸೋಲಿಸಲು ಆಗದೇ ಇರುವುದು, ಅನ್ಯಾಯದ ಒಂದು ಸಾಮಾಜಿಕ ವ್ಯವಸ್ಥೆಯನ್ನು ತಿರಸ್ಕರಿಸುವ ಒಂದು ಪ್ರತಿಭಟನೆಯಂತೆ ಭಾಸವಾಗುತ್ತದೆ’’ ಎನ್ನುತ್ತಾರೆ.
ರಾಮನೊಳಗಿನ ವೈರುಧಗಳನ್ನು ಪ್ರಶ್ನಿಸುವ ಲೇಖಕರು, ರಾಮಾಯಣ ಓದುತ್ತಾ ಹೋಗುವಾಗ ನಮಗೆದುರಾಗುವ ಸವಾಲುಗಳನ್ನು ಬಿಡಿಸುವುದಕ್ಕೆ ಪ್ರಯತ್ನಿಸುತ್ತಾರೆ. ತನ್ನ ವೈರುಧ್ಯಗಳ ಕಾರಣದಿಂದಲೇ ಅಂತಿಮವಾಗಿ ಒಂಟಿಯಾಗುವ ರಾಮನ ಒಳ ಸಂಕಟಗಳ ಕಡೆಗೂ ಲೇಖಕರು ಬೆಳಕು ಚೆಲ್ಲುತ್ತಾರೆ. ರಾಜನೊಬ್ಬನ ಕರ್ತವ್ಯ ಬೇರೆ, ಸೀತೆಯೊಂದಿಗಿನ ರಾಮನ ಸಂಬಂಧವೇ ಬೇರೆ ಎನ್ನುವುದನ್ನು ಕೃತಿ ಸ್ಪಷ್ಟವಾಗಿ ವಿಂಗಡಿಸಿ ರಾಮನ ವೈರುಧ್ಯಗಳನ್ನು ಸಮರ್ಥಿಸುತ್ತದೆ. ಅಯೋಧ್ಯೆಗಾಗಿ ಸೀತೆಯ ಪಾತಿವ್ರತ್ಯವನ್ನು ಪರೀಕ್ಷಿಸುವುದು ನನ್ನ ಕರ್ತವ್ಯ ಎಂದು ರಾಮ ಹೇಳಿದರೆ, ಸೀತೆ ಅದನ್ನು ಒಪ್ಪದೆ ಭೂಮಿಯ ಒಡಲು ಸೇರುತ್ತಾಳೆ. ರಾಮ ಒಂಟಿಯಾಗುತ್ತಾನೆ. ಅಂತಿಮವಾಗಿ ರಾಮನೂ ಅದೇ ದಾರಿ ಹಿಡಿಯಬೇಕಾಗುತ್ತದೆ.
ರಾಮಾಯಣವನ್ನು ವಾಸ್ತವಕ್ಕೆ ಇಳಿಸುವ ಯಾವುದೇ ಪ್ರಯತ್ನವನ್ನೂ ಪಟ್ಟನಾಯಕರು ಮಾಡುವುದಿಲ್ಲ. ಅದರ ಫ್ಯಾಂಟಸಿಯನ್ನು ಕೆಡಿ ಸದೆಯೇ, ಅಲ್ಲಿರುವ ಪಾತ್ರಗಳ ಒಳ ಸಂಘರ್ಷಗಳನ್ನು ಕಟ್ಟಿ ಕೊಡಲು ಪ್ರಯತ್ನಿಸುತ್ತಾರೆ. ಇದೇ ಸಂದರ್ಭದಲ್ಲಿ ಈ ದೇಶದಲ್ಲಿ ಹರಡಿಕೊಂಡಿರುವ ಬೇರೆ ಬೇರೆ ರಾಮಾಯಣಗಳ ವಿವರಗಳನ್ನು ಟಿಪ್ಪಣಿಗಳಾಗಿ ಕೊಡುತ್ತಾರೆ. ರಾಮಾಯಣದ ಕುರಿತಂತೆ ನಮಗರಿಯದ ಅಪಾರ ಮಾಹಿತಿಗಳನ್ನು ಈ ಟಿಪ್ಪಣಿಗಳು ವಿವರಿಸುತ್ತವೆ. ಹಾಗೆಯೇ ಇಲ್ಲಿರುವ ರೇಖೆಗಳು ಇದನ್ನು ‘ಸಚಿತ್ರ ರಾಮಾಯಣ’ವಾಗಿ ಆಕರ್ಷಣೀಯವಾಗಿಸಿವೆ. ಮನೋಹರ ಗ್ರಂಥಮಾಲಾ ಧಾರವಾಡ ಹೊರತಂದಿರುವ ಕೃತಿಯ ಒಟ್ಟು ಪುಟಗಳು 374. ಮುಖಬೆಲೆ 700 ರೂಪಾಯಿ. ಆಸಕ್ತರು 0836-2441822 ಅಥವಾ 2441823 ದೂರವಾಣಿಯನ್ನು ಸಂಪರ್ಕಿಸಬಹುದು.