ನ್ಯಾಯವನ್ನು ಹುತಾತ್ಮಗೊಳಿಸಿದ ನ್ಯಾಯಾಲಯ
ನ್ಯಾಯವನ್ನು ಹುತಾತ್ಮಗೊಳಿಸಿದ ನ್ಯಾಯಾಲಯ ಲಕ್ಷಾಂತರ ಮಸೀದಿಗಳಿರುವ ಒಂದು ಬೃಹತ್ ದೇಶಕ್ಕೆ ಒಂದು ಮಸೀದಿಯ ಅನುಪಸ್ಥಿತಿಯಿಂದ ದೊಡ್ಡ ನಷ್ಟವೇನೂ ಆಗದು. ಆದರೆ ಬಾಬರಿ ಮಸೀದಿಯ ವಿಧ್ವಂಸ ಕೇವಲ ಒಂದು ಪ್ರಾರ್ಥನಾಲಯಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಅದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಇತಿಹಾಸದ ಒಂದು ನಿರ್ಣಾಯಕ ಘಟನೆಯಾಗಿತ್ತು. ನಮ್ಮ ಇತಿಹಾಸದಲ್ಲಿ ಮಸೀದಿ ವಿಧ್ವಂಸದ ಘಟನೆಯು ಕಾನೂನಿನ ಆಡಳಿತಕ್ಕೆ ಒಂದು ದೊಡ್ಡ ಸವಾಲು ಮತ್ತು ಒಂದು ಮಹಾ ಪರೀಕ್ಷೆಯಾಗಿತ್ತು. ಆದ್ದರಿಂದಲೇ ಭಾರತದ ಇತ್ತೀಚಿನ ಇತಿಹಾಸ ಬರೆಯುವ ಅನೇಕರು ಇತಿಹಾಸವನ್ನು ‘ವಿಧ್ವಂಸ ಪೂರ್ವ’ ಮತ್ತು ‘ವಿಧ್ವಂಸೋತ್ತರ’ (Pre demolition ಮತ್ತು Post demolition) ಎಂಬ ಅವಧಿಗಳಾಗಿ ವಿಭಾಗಿಸುತ್ತಾರೆ. ಇದೀಗ ಬಂದಿರುವ ತೀರ್ಪು, ಪೋಸ್ಟ್ ಡೆಮಾಲಿಶನ್ ಭಾರತವೆಂದರೆ ಅದು ಪೋಸ್ಟ್ ಡೆಮಾಕ್ರಟಿಕ್ ಭಾರತವೇ ಎಂಬ ಸಂದೇಹಕ್ಕೆ ಜನ್ಮ ನೀಡಿದೆ. ಹಾಗೆಯೇ, ವ್ಯವಸ್ಥೆಯ ಕುರಿತಾದ ಹಲವು ಪರಂಪರಾಗತ ನಂಬಿಕೆಗಳಿಗೆ ತೀವ್ರ ಹಾನಿ ಮಾಡಿದೆ.
ವಹೀ ಖಾತಿಲ್, ವಹೀ ಶಾಹಿದ್, ವಹೀ ಮುನ್ಸಿಫ್ ಟೆಹರೇ,
ಅಖ್ರಬಾ ಮೇರೇ ಕರೇಂ ಖತಲ್ ಕಾ ದಾವಾ ಕಿಸ್ ಪರ್? ಅವನೇ ಹಂತಕ, ಅವನೇ ಸಾಕ್ಷಿ, ನ್ಯಾಯಾಧೀಶನೂ ಅವನೇ ನನ್ನವರು ಕೊಲೆಯ ದೂರನ್ನು ಸಲ್ಲಿಸುವುದಾದರೂ ಯಾರ ವಿರುದ್ಧ?
ನಮ್ಮ ನ್ಯಾಯಾಂಗಕ್ಕೆ ಸಂಬಂಧಿಸಿದ ಇತ್ತೀಚಿನ ಕೆಲವು ಹಗರಣಗಳು ಮತ್ತು ಸತತ ಕಹಿ ಅನುಭವಗಳ ಬಳಿಕ ದೇಶದ ಅದೆಷ್ಟೋ ಮಂದಿ ಪ್ರಧಾನ ಧಾರೆಯ ಪರಿಚಿತ ನ್ಯಾಯಾಲಯಗಳ ಬಗ್ಗೆ ತೀವ್ರ ನಿರಾಶರಾಗಿದ್ದಾರೆ. ಅಲ್ಲಿಂದ ನ್ಯಾಯ ನಿರೀಕ್ಷಿಸುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಅಂಥವರು ಸಿಬಿಐ ಎಂಬ ಸರಕಾರೀ ಏಜೆನ್ಸಿಯ ನ್ಯಾಯದಂಗಡಿಯಿಂದಂತೂ ಅನ್ಯಾಯವನ್ನಲ್ಲದೆ ಬೇರೇನನ್ನೂ ಎಂದೂ ನಿರೀಕ್ಷಿಸಿಲ್ಲ. ಆದ್ದರಿಂದ ಅವರು ಮೊನ್ನೆ (ಬುಧವಾರ) ಸಿಬಿಐ ನ್ಯಾಯಾಲಯವು ಬಾಬರಿ ಮಸೀದಿ ವಿಧ್ವಂಸ ಪ್ರಕರಣದ ಕುರಿತು ನೀಡಿದ ತೀರ್ಪಿನಿಂದ ಕಿಂಚಿತ್ತೂ ಆಘಾತಕ್ಕೊಳಗಾಗಿಲ್ಲ. ನಿರೀಕ್ಷೆಯೇ ಇರಲಿಲ್ಲವೆಂದ ಮೇಲೆ ನಿರಾಶೆಗೆಲ್ಲಿ ಅವಕಾಶವಿರುತ್ತದೆ? ನಿಜವಾಗಿ, ಮೊನ್ನೆಯ ತೀರ್ಪಿನಲ್ಲಿ ನ್ಯಾಯದ ಛಾಯೆಯೇನಾದರೂ ಇದ್ದಿದ್ದರೆ ಆ ಮಂದಿ ಪ್ರಾಯಶಃ ಅದನ್ನು ನಂಬಲಿಕ್ಕಾಗದೆ, ತೀವ್ರ ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಸರಕಾರ ಯಾರದ್ದಾದರೇನು, ಆಡಳಿತದಲ್ಲಿ ಯಾರಿದ್ದರೇನು, ನಮಗೆ ನ್ಯಾಯ ನೀಡಲು ಇಲ್ಲಿ ನ್ಯಾಯಾಲಯಗಳು ಇವೆ ಎಂಬ ಹಳೆಯ ನಂಬಿಕೆಯನ್ನು ನಾಜೂಕಾಗಿ ಉಳಿಸಿಕೊಂಡ ಮುಗ್ಧ ಆಶಾವಾದಿ ನಾಗರಿಕರು ಮಾತ್ರ ಆಘಾತದಲ್ಲಿದ್ದಾರೆ. ಅತ್ತ ಉಮಾಭಾರತಿಯಂತೆ, ನ್ಯಾಯಾಲಯವು ತಮಗೇನಾದರೂ ಶಿಕ್ಷೆ ಘೋಷಿಸಿದರೆ, ಅದನ್ನೇ ಬಂಡವಾಳವಾಗಿಸಿಕೊಂಡು ದೇಶದ ಮುಂದೆ ಹುತಾತ್ಮರಾಗಿ ಮೆರೆಯಬಹುದು ಎಂದು ಕನಸು ಕಾಣುತ್ತಿದ್ದ ಅದೆಷ್ಟೋ ಹತಾಶ ರಾಜಕಾರಣಿಗಳನ್ನು ಪ್ರಸ್ತುತ ತೀರ್ಪು ನಿರಾಶೆಗೊಳಿಸಿದೆ. ಇದೀಗ ಹುತಾತ್ಮನಾಗಿ ಮೆರೆಯುವ ಅವಕಾಶ ಯಾರಿಗಾದರೂ ಉಳಿದಿದ್ದರೆ ಅದು ಸಾಕ್ಷಾತ್ ನ್ಯಾಯಕ್ಕೆ ಮಾತ್ರ!
ಸಾಮಾನ್ಯವಾಗಿ ಮೊಕದ್ದಮೆಗಳಲ್ಲಿ ಎರಡು ಪಕ್ಷಗಳಿರುತ್ತವೆ ಮತ್ತು ಎರಡೂ ಪಕ್ಷಗಳ ಬಳಿ ತಮ್ಮ ಪರವಾಗಿ ವಾದಿಸಲು ತಮ್ಮದೇ ವಕೀಲರು ಇರುತ್ತಾರೆ. ಆದರೆ ಪ್ರಸ್ತುತ ಮೊಕದ್ದಮೆಯಲ್ಲಿ ನ್ಯಾಯಾಲಯವೇ ಒಂದು ಪಕ್ಷದ ವಕೀಲನ ಪಾತ್ರ ನಿರ್ವಹಿಸಿದೆ. ಯಾವುದೇ ಸಮರ್ಥ ವಕೀಲನಿಗಿಂತ ಹೆಚ್ಚು ಸಮರ್ಥವಾಗಿ, ಹೆಚ್ಚು ಉತ್ಸಾಹದೊಂದಿಗೆ ಅನ್ಯಾಯದ ಪರ ವಕಾಲತ್ತು ನಡೆಸಿದೆ.
ಬಾಬರಿ ಮಸೀದಿಯನ್ನು ಬೀಳಿಸಿದವರು ಗುಟ್ಟಾಗಿಯೇನೂ ಬೀಳಿಸಿರಲಿಲ್ಲ. ಹಾಡಹಗಲೇ ಬೀಳಿಸಿದ್ದರು. ಕ್ಯಾಮರಾಗಳ ಮುಂದೆಯೇ ಬೀಳಿಸಿದ್ದರು. ಬೀಳಿಸಿದ ಬಳಿಕವೂ ನಿರ್ಲಜ್ಜವಾಗಿ, ಸಾರ್ವಜನಿಕರ ಮುಂದೆಯೂ ದೇಶವಿದೇಶಗಳ ಮಾಧ್ಯಮಗಳ ಮುಂದೆಯೂ ವಿಧ್ವಂಸವು ತಮ್ಮದೇ ಸಾಧನೆ ಎಂದು ಕೊಚ್ಚಿಕೊಂಡಿದ್ದರು. ಆದ್ದರಿಂದ ಅಪರಾಧಿಗಳ ವಿರುದ್ಧ ಸಾಕ್ಷ ಸಂಗ್ರಹಕ್ಕೆ ಎಲ್ಲಾದರೂ ಉತ್ಖನನ ನಡೆಸುವ ಅಗತ್ಯವೇ ಇರಲಿಲ್ಲ. ಇಷ್ಟಿದ್ದೂ, ಅಪರಾಧ ನಡೆದು 28 ವರ್ಷಗಳ ಬಳಿಕ ನ್ಯಾಯದಂಗಡಿಯು, ಅಪರಾಧಕ್ಕೆ ಪುರಾವೆ ಸಿಕ್ಕಿಲ್ಲ ಎಂದಿದೆ. ಅಪರಾಧಿಗಳ ಪರ ವಕೀಲರು ಕೂಡಾ ದಂಗಾಗುವ ವಿಧದಲ್ಲಿ, ಆ ವಕೀಲರ ವಾದಗಳನ್ನೇ ತೀರ್ಪಾಗಿ ಪರಿವರ್ತಿಸಿದೆ. ಕ್ರೂರ ವಿಡಂಬನೆಯೋ ಎಂಬಂತೆ, ಮಸೀದಿ ಕಳೆದುಕೊಂಡ ದೇವರೂ ನೇರವಾಗಿ ಮಸೀದಿ ಕೆಡವಿದವರನ್ನು ಶಿಕ್ಷಿಸಲಿಲ್ಲ. ಅವನು ತಕ್ಷಣ ಶಿಕ್ಷಿಸಿದ್ದು ಈ ಪ್ರಕ್ರಿಯೆಯಲ್ಲಿ ಗುಪ್ತಪಾತ್ರವಹಿಸಿ, ಪರೋಕ್ಷ ಸಹಕಾರ ನೀಡಿದ್ದ ಪ್ರಾಚೀನ ಪಕ್ಷದವರನ್ನು ಮಾತ್ರ. ಅವರು ಎಲ್ಲರನ್ನು ಮೆಚ್ಚಿಸುವ ಭರದಲ್ಲಿ ನ್ಯಾಯವನ್ನು ಬಲಿಯರ್ಪಿಸಿದ್ದರ ಪರಿಣಾಮವಾಗಿ, ಎಲ್ಲೂ ಸಲ್ಲದವರಾಗಿ, ಎಲ್ಲವನ್ನೂ ಕಳೆದುಕೊಂಡು ಅಪಮಾನಾತ್ಮಕ ಅಜ್ಞಾತ ಸ್ಥಿತಿಗೆ ತಳ್ಳಲ್ಪಟ್ಟರು.
ಅತ್ತ ನ್ಯಾಯಾಂಗ, ಕಾರ್ಯಾಂಗ ಇತ್ಯಾದಿ, ವ್ಯವಸ್ಥೆಯ ಎಲ್ಲ ನಿರ್ಣಾಯಕ ಅಂಗಗಳನ್ನು ತಿರಸ್ಕರಿಸಿ ಅವುಗಳ ವಿರುದ್ಧ ದಂಗೆಯೆದ್ದವರು ವ್ಯವಸ್ಥೆಯ ವ್ಯವಸ್ಥಾಪಕರಾಗಿಸಿಬಿಟ್ಟರು. ಆ ದಿವ್ಯ ಲೀಲೆಯ ಬಗ್ಗೆ ಅಂದು ಹಲವರು ಆಕ್ರೋಶಿತರಾಗಿದ್ದರು. ಆದರೆ ಅಂದು ಅವನು ಹಾಗೇಕೆ ಮಾಡಿದನೆಂಬುದು ಅವರಿಗೆ ಈಗ ಅರ್ಥವಾಗತೊಡಗಿದೆ. ದೇವರು, ಧರ್ಮ ಇತ್ಯಾದಿಗಳ ರಕ್ಷಕರೆಂದು ನಂಬಿ ಅಂಧಭಕ್ತರೆಲ್ಲ ಭಾವುಕರಾಗಿ, ಭಕ್ತಿಪರವಶರಾಗಿ ತಲೆಮೇಲೆ ಹೊತ್ತು ನಡೆದಿದ್ದ ಮತ್ತು ದೇಶದ ಪರಮೋಚ್ಚ ಪದಗಳಲ್ಲಿ ಕೂರಿಸಿದ್ದ ಮಂದಿಯ ನಿಜಬಣ್ಣ ಬಯಲಾಗುತ್ತಿದೆ. ಅವರೆಲ್ಲಾ ನಿಜವಾಗಿ ದೇವರು ಮತ್ತು ಧರ್ಮಗಳ ನೀಚ ವ್ಯಾಪಾರಿಗಳಾಗಿದ್ದರು, ಭಕ್ತರನ್ನು ಕೊಳ್ಳೆಹೊಡೆಯುವವರಾಗಿದ್ದರು, ಸಮೂಹ ಹಿತದ ಪರಮ ಶತ್ರುಗಳಾಗಿದ್ದರು ಮತ್ತು ಜಾತ್ಯತೀತವಾಗಿ ಎಲ್ಲ ಬಡವರ ರಕ್ತಹೀರುವ ಬಂಡವಾಳಿಗರ ದಲ್ಲಾಳಿಗಳಾಗಿದ್ದರು ಎಂಬುದೆಲ್ಲಾ ಇದೀಗ ಆ ಬಡಪಾಯಿ ಅಂಧಭಕ್ತರಿಗೂ ಮನವರಿಕೆಯಾಗುತ್ತಿದೆ. ಕ್ರಮೇಣ, ಅದೇ ಮಂದಿ, ತಮಗೆ ದ್ರೋಹ ಬಗೆದವರನ್ನು ಹುಡುಕಿ, ಹೆಕ್ಕಿ ಬೇಟೆಯಾಡುವ ವಾತಾವರಣ ನಿರ್ಮಾಣವಾಗುತ್ತಿದೆ. ಗದ್ದುಗೆ ಸಿಗದೇ ಇದ್ದಿದ್ದರೆ ಇವರು ಇಷ್ಟು ಬೇಗ ಖಂಡಿತ ನಗ್ನರಾಗುತ್ತಿರಲಿಲ್ಲ.
ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಅದರ ಎಲ್ಲ ಅಂಗಗಳು, ಬಾಬರಿ ಮಸೀದಿಯ ವಿಧ್ವಂಸವನ್ನು ತಡೆಯುವಲ್ಲಿ ವಿಫಲವಾದಾಗ ಮತ್ತು ಹಲವು ವರ್ಷಗಳ ಕಾಲ ಮಸೀದಿ-ಮಂದಿರದ ಹೆಸರಲ್ಲಿ ದೇಶದೆಲ್ಲೆಡೆ ನಡೆದ ವ್ಯಾಪಕ ರಕ್ತಪಾತವನ್ನು ತಡೆಯಲು ವ್ಯವಸ್ಥೆಗೆ ಸಾಧ್ಯವಾಗದಾಗ ಕೆಲವು ಭಾವುಕ ವಲಯಗಳು ವ್ಯವಸ್ಥೆಯ ಮೇಲಿನ ತಮ್ಮ ನಂಬಿಕೆಯನ್ನು ಕಳೆದುಕೊಂಡರು. ಅವರು ಬಂಡಾಯದ ಹಾದಿಯತ್ತ ಜಾರತೊಡಗಿದಾಗ, ದೇಶದ ಹೊಣೆಗಾರ ನಾಗರಿಕರು ಅವರಿಗೆ ಸಮಜಾಯಿಸಿದರು. ಅನ್ಯಾಯಗಳು ನಡೆದಾಗ, ನ್ಯಾಯವನ್ನು ಮತ್ತು ಪರಿಹಾರವನ್ನು ವ್ಯವಸ್ಥೆಯ ಒಳಗೆಯೇ ಹುಡುಕಬೇಕು, ಹೊರಗಲ್ಲ. ಇಲ್ಲಿ ದೊಂಬಿಕೋರರು, ವಿಧ್ವಂಸಕರು ಮತ್ತು ರಕ್ತಪಾತ ನಡೆಸುವ ಅಪರಾಧಿಗಳು ಮಾತ್ರ ಇರುವುದಲ್ಲ, ಇಲ್ಲಿ ಸರಕಾರವಿದೆ, ಕಾನೂನು ಇದೆ, ಆಡಳಿತ ಯಂತ್ರವಿದೆ, ಎಲ್ಲಕ್ಕೂ ಮಿಗಿಲಾಗಿ ಇಲ್ಲಿ ಒಂದು ಬಲಿಷ್ಟ ನ್ಯಾಯಾಂಗವಿದೆ, ಅಪರಾಧಿಗಳನ್ನು ಪತ್ತೆ ಹಚ್ಚಿ, ಹಿಡಿದು, ವಿಚಾರಿಸಿ ದಂಡಿಸುವ ವ್ಯವಸ್ಥೆ ಇದೆ-ಎಂದೆಲ್ಲಾ ಅವರು ಭಾವುಕರಿಗೆ ಬುದ್ಧಿ ಹೇಳುತ್ತಿದ್ದರು. ಈ ರೀತಿ, ಭಾವುಕರಿಗೆ ತಿಳಿಹೇಳುವ ಮತ್ತು ಆ ಮೂಲಕ, ಅವರು ವ್ಯವಸ್ಥೆಯ ಪರಿಧಿಯಿಂದ ಜಾರಿಹೋಗದಂತೆ, ವ್ಯವಸ್ಥೆಯ ಮೇಲಿನ ನಂಬಿಕೆ, ವಿಶ್ವಾಸಗಳನ್ನು ಬಲಪಡಿಸುವ ಪ್ರಕ್ರಿಯೆ ಬಹಳ ವ್ಯಾಪಕವಾಗಿ ಮತ್ತು ತುಂಬಾ ಪರಿಣಾಮಕಾರಿಯಾಗಿ ನಡೆಯಿತು. ಅವರ ಶ್ರಮ ಯಶಸ್ವಿಯೂ ಆಯಿತು.
ತೀವ್ರವಾದದ ಅಲೆಗಳು ಅಲ್ಪಾವಧಿಯಲ್ಲೇ ಅಡಗಿ ಹೋದವು. ಇದೀಗ ದೇಶದ ಪ್ರಸ್ತುತ ಹೊಣೆಗಾರ ನಾಗರಿಕರ ಮುಂದೆ ಒಂದು ಕಠಿಣವಾದ ಸವಾಲಿದೆ. ಇಂದು ಅವರು ಕಾನೂನು, ನ್ಯಾಯ, ನ್ಯಾಯಾಂಗ ಎಂದೆಲ್ಲಾ ಹೇಳಿದರೆ ಅವರನ್ನು ಯಾರೂ ಹೆಚ್ಚು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇಲ್ಲ. ವ್ಯವಸ್ಥೆಯ ವಿವಿಧ ಅಂಗಗಳ ವಿಶ್ವಾಸಾರ್ಹತೆ ತೀವ್ರವಾಗಿ ಕುಸಿದಿದೆ. ಜೊತೆಗೆ ಗೌರವಾನ್ವಿತವೆಂದು ವೈಭವೀಕರಿಸಲಾಗುತ್ತಿದ್ದ ಸಂಸ್ಥೆಗಳ ಗೌರವದ ಮಟ್ಟ ಕುಸಿದಿದೆ. ರಾಜಕೀಯ ಪಕ್ಷಗಳ ವಿಶ್ವಾಸಾರ್ಹತೆಯ ಮಟ್ಟ ಪಾತಾಳ ಮುಟ್ಟಿದೆ. ನಿರೀಕ್ಷೆಯ ಮತ್ತು ಆಶಾವಾದದ ಬಿಂದುಗಳು ಒಂದೊಂದಾಗಿ ಅಳಿದು ಹೋಗುತ್ತಿವೆ. ಈ ಸನ್ನಿವೇಶದಲ್ಲಿ ಹತಾಶೆ, ಭ್ರಮನಿರಸನ, ಹಿಂಸಾತ್ಮಕ ಒಲವುಗಳು ಮತ್ತು ಅರಾಜಕತಾವಾದಿ ಮಾನಸಿಕತೆಯನ್ನು ಹದ್ದುಬಸ್ತಿನಲ್ಲಿಡಲು ಕೇವಲ ಏಕಪಕ್ಷೀಯ ಒಣ ಉಪದೇಶಗಳು ಖಂಡಿತ ಪರಿಣಾಮಕಾರಿಯಾಗಲಾರವು.
ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಬೇಕಿದ್ದರೆ ಸ್ವತಃ ವ್ಯವಸ್ಥೆಯೇ ತೀರಾ ಅಸ್ವಸ್ಥವಾಗಿದೆ ಎಂಬುದನ್ನು ಒಪ್ಪಿಕೊಂಡು ಅದನ್ನು ಸ್ವಸ್ಥಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಲಕ್ಷಾಂತರ ಮಸೀದಿಗಳಿರುವ ಒಂದು ಬೃಹತ್ ದೇಶಕ್ಕೆ ಒಂದು ಮಸೀದಿಯ ಅನುಪಸ್ಥಿತಿಯಿಂದ ದೊಡ್ಡ ನಷ್ಟವೇನೂ ಆಗದು. ಆದರೆ ಬಾಬರಿ ಮಸೀದಿಯ ವಿಧ್ವಂಸ ಕೇವಲ ಒಂದು ಪ್ರಾರ್ಥನಾಲಯಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಅದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಇತಿಹಾಸದ ಒಂದು ನಿರ್ಣಾಯಕ ಘಟನೆಯಾಗಿತ್ತು. ನಮ್ಮ ಇತಿಹಾಸದಲ್ಲಿ ಮಸೀದಿ ವಿಧ್ವಂಸದ ಘಟನೆಯು ಕಾನೂನಿನ ಆಡಳಿತಕ್ಕೆ ಒಂದು ದೊಡ್ಡ ಸವಾಲು ಮತ್ತು ಒಂದು ಮಹಾ ಪರೀಕ್ಷೆಯಾಗಿತ್ತು. ಆದ್ದರಿಂದಲೇ ಭಾರತದ ಇತ್ತೀಚಿನ ಇತಿಹಾಸ ಬರೆಯುವ ಅನೇಕರು ಇತಿಹಾಸವನ್ನು ‘ವಿಧ್ವಂಸ ಪೂರ್ವ’ ಮತ್ತು ‘ವಿಧ್ವಂಸೋತ್ತರ’ (Pre demolition ಮತ್ತು Post demolition) ಎಂಬ ಅವಧಿಗಳಾಗಿ ವಿಭಾಗಿಸುತ್ತಾರೆ. ಇದೀಗ ಬಂದಿರುವ ತೀರ್ಪು, ಪೋಸ್ಟ್ ಡೆಮಾಲಿಶನ್ ಭಾರತವೆಂದರೆ ಅದು ಪೋಸ್ಟ್ ಡೆಮಾಕ್ರಟಿಕ್ ಭಾರತವೇ ಎಂಬ ಸಂದೇಹಕ್ಕೆ ಜನ್ಮ ನೀಡಿದೆ.
ಹಾಗೆಯೇ, ವ್ಯವಸ್ಥೆಯ ಕುರಿತಾದ ಹಲವು ಪರಂಪರಾಗತ ನಂಬಿಕೆಗಳಿಗೆ ತೀವ್ರ ಹಾನಿ ಮಾಡಿದೆ. ಈ ತೀರ್ಪಿನಿಂದಾಗಿ, ನ್ಯಾಯದಂಗಡಿಗಳೆಂದರೆ ಹೆಚ್ಚು ಪಾವತಿಸಬಲ್ಲ ಗ್ರಾಹಕರಿಗೆ ನ್ಯಾಯವನ್ನು ಮಾರುವ ಸಂಸ್ಥೆಗಳು ಎಂಬ ಅಪಾಯಕಾರಿ ನಂಬಿಕೆ ವ್ಯಾಪಕ ಮಾನ್ಯತೆ ಗಳಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ನಮ್ಮ ವ್ಯವಸ್ಥೆಯ ಇಟ್ಟಿಗೆಗಳು ಒಂದೊಂದಾಗಿ ಉರುಳಿ ಬೀಳುತ್ತಲೇ ಇವೆ. ಆದರೆ ನಮ್ಮ ಒಟ್ಟು ವ್ಯವಸ್ಥೆಯೇ ಬಾಬರಿ ಮಸೀದಿಯ ಹಾಗೆ ಕಣ್ಮರೆಯಾಗಿ ಬಿಡದಂತೆ ನೋಡಿಕೊಳ್ಳಬೇಕಾದ ತುರ್ತು ಹೊಣೆಗಾರಿಕೆ ದೇಶದ ಎಲ್ಲ ಹೊಣೆಗಾರ ನಾಗರಿಕರ ಮೇಲಿದೆ. ವಿಶೇಷವಾಗಿ, ಮಸೀದಿ ವಿಧ್ವಂಸದ ವಿವಾದವು ಮುಂದಿನ ದಿನಗಳಲ್ಲಿ ಹೈಕೋರ್ಟ್ ಮತ್ತಿತರ ಮುಂದಿನ ಹಂತಗಳಿಗೆ ಹೋಗಲಿರುವುದರಿಂದ ಆಶಾವಾದಕ್ಕೆ ಇನ್ನೂ ಅವಕಾಶವಿದೆ. ನಾಗರಿಕ ಸಮಾಜದ ಮಟ್ಟಿಗೆ ನ್ಯಾಯವೆಂಬುದು ಮಸೀದಿ -ಮಂದಿರಗಳಿಗಿಂತ ಮುಖ್ಯವಾಗಿದೆ. ಆದ್ದರಿಂದ ನಮ್ಮದು ಕೇವಲ ಆರಾಧನಾಲಯಗಳು ಮತ್ತು ಅಂಗಡಿಗಳು ಮಾತ್ರ ಇರುವ ಸಮಾಜವಲ್ಲ, ಇಲ್ಲಿ ನ್ಯಾಯ ನೀಡುವ ನ್ಯಾಯಾಲಯಗಳು ಕೂಡಾ ಇವೆ ಎಂಬುದು ಪರಿಣಾಮಕಾರಿಯಾಗಿ ಸಾಬೀತಾದರೆ ಮಾತ್ರ ವ್ಯವಸ್ಥೆ ಉಳಿದೀತು.
ಖಾತಿಲ್ ಕಿ ಈ ದಲೀಲ್ ಭೀ ಮುನ್ಸಿಫ್ ನೇ ಮಾನ್ ಲೀ ಮಖ್ತೂಲ್ ಖುದ್ ಗಿರ್ ಗಯಾ ಥಾ ಖಂಜರ್ ಕಿ ನೋಕ್ ಪರ್
ಹತನು ತನ್ನಿಚ್ಛೆಯಿಂದ ತಾನೇ ಬಿದ್ದು ಬಿಟ್ಟಿದ್ದನು ಖಡ್ಗದ ತುದಿ ಮೇಲೆ ಹೀಗೆಂದ ಹಂತಕನ ವಾದವನ್ನೂ ನ್ಯಾಯಾಧೀಶರು ಎತ್ತಿ ಹಿಡಿದರು.