ಗತವೈಭವದ ಕನಸೆಂಬ ಬೆನ್ನೇರಿ...
ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವೆನ್ನುವ ಭಾವನೆ ನೀಡುವ ‘ಆದರ್ಶಪ್ರಾಯ’ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.
ಇಂದು ವಿಜ್ಞಾನಿಗಳು ನಮ್ಮ ನೆನಪುಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸವಿನೆನಪುಗಳಿರುತ್ತವೆ. ಇಂಗ್ಲಿಷಿನ ‘ನಾಸ್ಟಾಲ್ಜಿಯಾ’ಕ್ಕೆ ಸವಿನೆನಪು ಎನ್ನುವುದು ಸೂಕ್ತ ಪದವಲ್ಲದಿದ್ದರೂ ಅದು ಅದೇ ಅರ್ಥವನ್ನು ಸೂಚಿಸುತ್ತದೆ. ಪ್ರತಿಯೊಂದು ತಲೆಮಾರಿನವರು ಮುಂದಿನ ತಲೆಮಾರಿನವರಿಗೆ ಹೇಳುವಾಗ ತಮ್ಮ ಬಾಲ್ಯದ ಅಥವಾ ಹಿಂದಿನ ದಿನಗಳು ಎಷ್ಟು ವೈಭವವಾಗಿದ್ದಿತು, ಸಮೃದ್ಧವಾಗಿದ್ದಿತು, ಜನ ಸಂತೋಷದಿಂದ ಬದುಕುತ್ತಿದ್ದರು ಎಂದು ಹೇಳುತ್ತಿರುತ್ತಾರೆ. ನಮ್ಮದೇ ಬಾಲ್ಯದ ಶಾಲಾ ದಿನಗಳು, ಗೆಳೆಯರೊಂದಿಗೆ ಕಳೆದ ದಿನಗಳು ಅತ್ಯಂತ ಸಂತೋಷದ ದಿನಗಳೆಂದೂ, ಆ ದಿನಗಳು ನಮಗೆ ಮರಳಿ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆಂದು ನಮಗನ್ನಿಸುತ್ತಿರುತ್ತದೆ. ಆ ದಿನಗಳು ನಮಗೆ ನಿಜವಾಗಿಯೂ ಅಷ್ಟು ಸಂತೋಷದ ದಿನಗಳಾಗಿದ್ದುವೇ? ಅಥವಾ ಅದು ನಮ್ಮ ನೆನಪುಗಳು ನಮಗೆ ಕಟ್ಟಿಕೊಡುತ್ತಿರುವ ಭ್ರಮೆಯೇ?
ಜೊಹಾನ್ಸ್ ಹೋಫರ್ ಎಂಬ ಸ್ವಿಸ್ ವೈದ್ಯ 1688ರಲ್ಲಿ ‘ನಾಸ್ಟಾಲ್ಜಿಯಾ’ ಎಂಬ ಪದವನ್ನು ರೂಪಿಸಿದ. ಅದೊಂದು ವೈದ್ಯಕೀಯ ಸ್ಥಿತಿ- ಮನೆಗೆ ಮರಳಬೇಕೆನ್ನುವ ತಡೆಯಲಾರದ ಆದಮ್ಯ ಹಂಬಲ, ಚಪಲ. ಸೈನಿಕರಲ್ಲಿ ಕಂಡುಬರುವ ಸ್ವದೇಶದ ಹಂಬಲ. ಅದೊಂದು ಮಾನಸಿಕ ಕಾಯಿಲೆಯೆಂದ ವೈದ್ಯ ಹೋಫರ್. ಆ ಕಾಯಿಲೆಯ ಚಿಹ್ನೆಗಳೆಂದರೆ ಚಡಪಡಿಕೆ, ನಿದ್ರೆ ಬರದಿರುವುದು, ಆತಂಕ, ಹಸಿವಿಲ್ಲದಿರುವುದು, ಖಿನ್ನತೆಗಳು. ಜನನದ ಸಮಯದಲ್ಲಿ ತಾಯಿಯಿಂದ ಬೇರ್ಪಡುವ ‘ಆಘಾತಕಾರಿ’ ಅನುಭವದಿಂದಲೇ ಇದು ಉಂಟಾಗುತ್ತದೆಂದರು ಫ್ರಾಯ್ಡಿಯನ್ ಮನೋವಿಶ್ಲೇಷಕರು. ಮನೆಗೆ ಹಿಂದಿರುಗಬೇಕೆನ್ನುವ ಈ ಚಪಲದಲ್ಲಿನ ‘ಮನೆ’ಯ ಅರ್ಥ ಕ್ರಮೇಣ ವಿಸ್ತರಿಸುತ್ತಾ ಹೋಗಿ ಅದು ಮನೆ ಅಥವಾ ಬಾಲ್ಯ ಕಳೆದ ಊರೆಂಬ ಸ್ಥಿರವಸ್ತು ಮಾತ್ರವಲ್ಲ ಅದು ಹಿಂದೆ ನಾವು ಕಳೆದಿರಬಹುದಾದ ಅಮೂರ್ತ ಅನುಭವಗಳೂ ಆಗಿರಬಹುದೆಂದರು. ಇಪ್ಪತ್ತನೆಯ ಶತಮಾನದ ಕೊನೆಗೆ ಇದನ್ನು ಮತ್ತಷ್ಟು ವಿಸ್ತರಿಸಿ ಈ ರೀತಿಯ ಮನೆಗೆ ಅಥವಾ ಗತಕ್ಕೆ ಹಿಂದಿರುಗಬೇಕೆನ್ನುವ ಚಪಲ ಮೂರು ಅಂಶಗಳನ್ನು ಒಳಗೊಂಡಿರುತ್ತದೆಂದರು. ಮೊದಲನೆಯದು ಪ್ರಜ್ಞೆಗೆ ಸಂಬಂಧಿಸಿದುದು-ನಮ್ಮ ಸ್ವಯಂಅನುಭವದ ನೆನಪುಗಳನ್ನು ಮರಳಿ ಮರಳಿ ನಮ್ಮ ಪ್ರಜ್ಞೆಗೆ ತಂದುಕೊಳ್ಳುವುದು. ಎರಡನೆಯದು ಪರಿಣಾಮಕ್ಕೆ ಸಂಬಂಧಿಸಿದುದು- ಈ ಚಪಲದ ಹಿಂದೆ ನೋವು, ಆಘಾತಗಳಿರುತ್ತವೆ, ಮನಸ್ಸಿಗೆ ಖಿನ್ನತೆ ಉಂಟುಮಾಡುವಂತಹದ್ದಾಗಿರುತ್ತವೆ. ಮೂರನೆಯದು ಆಸೆ ಅಥವಾ ಬಯಕೆಗೆ ಸಂಬಂಧಿಸಿದುದು- ಅಂದರೆ ನಮ್ಮ ‘ತಾಯ್ನಾಡಿಗೆ’, ನೆನಪುಗಳಲ್ಲಿರುವ ಮನೆಗೆ ಹಿಂದಿರುಗಬೇಕೆನ್ನುವುದು.
ಈ ಕುರಿತಂತೆ ಮನೋವೈದ್ಯರು, ಮನೋವಿಶ್ಲೇಷಕರು ಹಲವರು ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಪ್ರಜ್ಞೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಧ್ಯಯನಗಳಲ್ಲಿ ನಮ್ಮ ನಾಸ್ಟಾಲ್ಜಿಯಾ ಅಥವಾ ಸಿಹಿನೆನಪುಗಳು ನಮ್ಮ ಸ್ವಯಂಅನುಭವದ ಸ್ಮರಣೆಗಳನ್ನೇ ಹೊಂದಿರಬೇಕಿಲ್ಲ ಎನ್ನುವುದನ್ನು ಕಂಡುಕೊಂಡಿದ್ದಾರೆ. ಅಂದರೆ ಅವು ನಮ್ಮ ಬಾಲ್ಯದ ಮನೆ, ಬಾಲ್ಯದ ಗೆಳೆಯರು, ಆಹಾರ, ವಸ್ತ್ರ ಇಂತಹ ಸ್ಥಳ-ವಸ್ತು ನಿರ್ದಿಷ್ಟ ಅನುಭವಗಳನ್ನೇ ಒಳಗೊಂಡಿರಬೇಕಿಲ್ಲ, ಅವು ಸ್ಥಳ-ವಸ್ತು ನಿರ್ದಿಷ್ಟವಲ್ಲದ ಪ್ರೀತಿಯ, ಗೆಳೆತನದ, ಸುಖಾನುಭವದ ಭಾವನೆಗಳ ಅನುಭವಗಳನ್ನೂ ಒಳಗೊಂಡಿರಬಹುದು. ಇದು ಬಹುಪಾಲು ಎಲ್ಲ ಸಂಸ್ಕೃತಿಗಳಿಗೂ ಅನ್ವಯಿಸುತ್ತದೆ.
ಇಲ್ಲಿ ಸಂಶೋಧಕರು ಕಂಡುಕೊಂಡ ಮತ್ತೊಂದು ವಿಷಯವೆಂದರೆ ನಮ್ಮ ಗತಕಾಲದ ನೆನಪಿನಲ್ಲಿ ನಾವು ನೇರವಾಗಿ ಅನುಭವಿಸದೆ ಇರುವ ‘ಅನುಭವ’ಗಳೂ ಇರುತ್ತವೆ. ಅಂದರೆ ನಾವು ಜೀವಿಸಿಲ್ಲದ, ಶತಶತಮಾನಗಳ ಹಿಂದಿನ ಅವಧಿಯ ಸ್ಥಳ-ಕಾಲ ನಿರ್ದಿಷ್ಟವಲ್ಲದ ಅವಧಿಯ ‘ನೆನಪು’ಗಳನ್ನೂ ಒಳಗೊಂಡಿರಬಹುದು. ಅಂದರೆ, ನಮ್ಮ ಪ್ರಜ್ಞೆ ಸ್ವಯಂ ಅನುಭವಗಳಿಂದ ರಚಿತವಾಗಿರುವುದು ಮಾತ್ರವಲ್ಲ ಅದೊಂದು ಮಾನಸಿಕ ಅನುಕರಣೆ, ಬೇಕಾದರೆ ಅದೊಂದು ಕಲ್ಪನಾಲೋಕ ಎನ್ನಲೂಬಹುದು ಹಾಗೂ ಅದರಲ್ಲಿ ಘಟನಾತ್ಮಕ ಸ್ಮರಣೆ (ಎಪಿಸೋಡಿಕ್ ಮೆಮೊರಿ) ಅದರ ಭಾಗವಾಗಿರುತ್ತದೆ. ಘಟನಾತ್ಮಕ ಸ್ಮರಣೆ ಅಂದರೆ ಇಲ್ಲಿ ನಾವು ಆ ಕಾಲ-ಸ್ಥಳದಲ್ಲಿ ಬದುಕಿಲ್ಲದಿದ್ದರೂ ಆ ಅವಧಿಯಲ್ಲಿನ ಕೆಲವು ಘಟನೆಗಳಲ್ಲಿ ಸ್ವತಃ ನಾವೇ ಪಾಲ್ಗೊಂಡಂತಹ ಅನುಭವ. ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವೆನ್ನುವ ಭಾವನೆ ನೀಡುವ ‘ಆದರ್ಶಪ್ರಾಯ’ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.
ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು ‘ರಾಮರಾಜ್ಯದ’ ಮಾತನಾಡುತ್ತಿದ್ದಾರೆ, ಭಾರತವನ್ನು ರಾಮರಾಜ್ಯವನ್ನಾಗಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ ‘ಲೆಟ್ ಅಸ್ ಮೇಕ್ ಅಮೆರಿಕ ಗ್ರೇಟ್ ಎಗೇನ್’ (ಮತ್ತೊಮ್ಮೆ ಅಮೆರಿಕವನ್ನು ಮಹಾನ್ ರಾಷ್ಟ್ರವನ್ನಾಗಿ ಮಾಡೋಣ) ಎನ್ನುತ್ತಿದ್ದಾರೆ. ಈಗ ಜನರಲ್ಲಿ ರಾಮರಾಜ್ಯದ ಕನಸೊಡೆಯುತ್ತಿದೆ. ರಾಮರಾಜ್ಯದ ಧರ್ಮದ, ಸಂಪತ್ತು ಸಮೃದ್ಧತೆಯ, ಸಂತೃಪ್ತ ಬದುಕನ್ನು ತಾವೇ ಹಿಂದೆಂದೋ ಅನುಭವಿಸಿದಂತೆ ಈಗ ಅದರ ಸವಿನೆನಪುಗಳು, ನಾಸ್ಟಾಲ್ಜಿಯಾ ಅವರನ್ನು ಕಾಡುತ್ತಿದ್ದು ಆ ದಿನಗಳಿಗೆ ಹಿಂದಿರುಗಬೇಕೆನ್ನುವ ತೀವ್ರ ಹಂಬಲ ಅವರನ್ನು ಕಾಡುತ್ತಿದೆ. 2016ರಲ್ಲಿ ಪೋಲೆಂಡಿನ ಮನೋವಿಜ್ಞಾನಿಗಳಾದ ಮೋನಿಕಾ ಪ್ರುಸಿಕ್ ಮತ್ತು ಮರಿಯಾ ಲೆವಿಕಾರವರು ನಾಸ್ಟಾಲ್ಜಿಯಾ ಕುರಿತಂತೆ ಸಮೀಕ್ಷೆಯೊಂದನ್ನು ನಡೆಸಿ 25 ವರ್ಷಗಳ ಹಿಂದಿನ ಕಮ್ಯುನಿಸ್ಟ್ ಆಡಳಿತದ ಅವಧಿಗೂ ಈಗಿನ ಸರಕಾರದ ಆಡಳಿತಕ್ಕೂ ವ್ಯತ್ಯಾಸ ಕೇಳಿದಾಗ ಬಹಳಷ್ಟು ಜನ ಹಿಂದಿನ ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿನ ಬದುಕು ಹೆಚ್ಚು ಸಂತೋಷಕರವಾಗಿ, ಸಮೃದ್ಧಿ, ಸಂತೃಪ್ತಿಯಿಂದ ಇತ್ತೆಂದು ಹೇಳಿದರು. ಇಲ್ಲಿ ಕುತೂಹಲಕರ ವಿಷಯವೆಂದರೆ ಆ ಅವಧಿಯನಂತರ ಹುಟ್ಟಿದ ಯುವಜನಾಂಗ, ತಾವು ಕಮ್ಯುನಿಸ್ಟ್ ಅವಧಿಯ ಬದುಕನ್ನು ಅನುಭವಿಸಿರದಿದ್ದರೂ ಆ ಅವಧಿಯ ಬದುಕು ಚೆನ್ನಾಗಿತ್ತು ಎಂದಿರುವುದು ಹಾಗೂ ತಮ್ಮ ದೇಶವನ್ನು ಆ ಅವಧಿಯ ದಿನಗಳೆಡೆಗೆ ಕೊಂಡೊಯ್ಯಬೇಕು ಎಂದಿರುವುದು.
ಇಲ್ಲಿ ಮನೋವಿಜ್ಞಾನಿಗಳು ಹೇಳುವುದೇನೆಂದರೆ, ಜನರ ಸವಿನೆನಪು ಅಥವಾ ನಾಸ್ಟಾಲ್ಜಿಯಾ ಜನರು ಈ ಹಿಂದೆ ತಾವೇ ಭಾಗವಹಿಸಿದ ಘಟನೆಗಳ ಅಥವಾ ಅನುಭವಗಳ ನೆನಪುಗಳನ್ನು ಆದರಿಸಿರಬೇಕಾಗಿಲ್ಲ. ಆದರೆ ಈ ಹಿಂದೆ ಇದ್ದಿರಬಹುದಾದ ದಿನಗಳ, ಘಟನೆಗಳ ಕುರಿತ ಒಂದು ನಿರಂತರ ವ್ಯವಸ್ಥಿತ ಪ್ರಚಾರ ಜನರಲ್ಲಿ ಸೂಕ್ತ ಘಟನಾತ್ಮಕ ಸ್ಮರಣೆಗಳನ್ನು (ಎಪಿಸೋಡಿಕ್ ಮೆಮೊರಿ) ಕಲ್ಪನೆಗಳ ಮೂಲಕ ಉಂಟುಮಾಡುತ್ತದೆ. ಈ ವ್ಯವಸ್ಥಿತ ಪ್ರಚಾರದ ಕಾರ್ಯತಂತ್ರವೇನೆಂದರೆ ಜನರನ್ನು ಈಗ ಅವರು ಬದುಕುತ್ತಿರುವ ಬದುಕು ಅವರ ಕಲ್ಪನೆಯಲ್ಲಿನ ಬದುಕಿಗಿಂತ ಹೀನಾಯವಾಗಿದೆ ಎಂಬಂತೆ ಮನದಟ್ಟುಮಾಡುವುದು. ಈ ನಾಸ್ಟಾಲ್ಜಿಯಾದ ಹಿಂದಿನ ರಾಜಕೀಯದ ಉದ್ದೇಶ ಸುಖಸಂತೋಷದ ಹಿಂದಿನ ಕಲ್ಪಿತ ದಿನಗಳ ನೆನಪುಗಳನ್ನು ಹೆಚ್ಚು ವ್ಯವಸ್ಥಿತ ಪ್ರಚಾರ ಮತ್ತು ತಪ್ಪುಮಾಹಿತಿ ಒದಗಿಸುವುದರ ಮೂಲಕ ಜನರನ್ನು ನಂಬಿಸುವುದಾಗಿದೆ. ಈ ಬಲೆಗೆ ಬೀಳದಂತೆ ಪ್ರತಿರೋಧಿಸುವುದನ್ನೂ ಸಹ ಮನೋವಿಜ್ಞಾನವೇ ತಿಳಿಸಿಕೊಡುತ್ತದೆ. ನಾಸ್ಟಾಲ್ಜಿಯಾ ಎಂಬುದು ಎರಡು ಕತ್ತಿಯ ಅಲಗಿದ್ದಂತೆ ಒಂದು ಶಕ್ತಿಶಾಲಿ ರಾಜಕೀಯ ಪ್ರೇರಕ ಶಕ್ತಿಯಾಗಿದೆ- ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಅಥವಾ ವಾಸ್ತವತೆಯಿಂದ ದೂರವಿರುವ ಭ್ರಮೆಯ ಜಂಜಾಟದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮ ಗತಕಾಲದ ನೆನಪುಗಳ ನಿಖರತೆಯನ್ನು ಉತ್ತಮ ಮಾಹಿತಿಯೊಂದಿಗೆ ಸುಧಾರಿಸಿಕೊಳ್ಳುವುದು ಮುಖ್ಯವಾದುದು.