ನಿಮಗೆ ಗೊತ್ತಿರಲಿ, ಈ ಲಕ್ಷಣಗಳು ಹೃದಯ ಅಪಾಯದಲ್ಲಿದೆ ಎನ್ನುವುದರ ಎಚ್ಚರಿಕೆಯ ಸಂಕೇತಗಳಾಗಿರಬಹುದು
ಕಾರ್ಡಿಯೊವಸ್ಕುಲರ್ ಡಿಸೀಸಸ್(ಸಿವಿಡಿ) ಅಥವಾ ಹೃದಯ ರಕ್ತನಾಳಗಳ ರೋಗಗಳು ಭಾರತದಲ್ಲಿ ಜನರ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳು,ಅಧಿಕ ರಕ್ತದೊತ್ತಡ,ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಬೊಜ್ಜು,ಡಿಸ್ಲಿಪಿಡಿಮಿಯಾ ಅಥವಾ ಅಧಿಕ ಕೊಲೆಸ್ಟ್ರಾಲ್ ಮಟ್ಟ,ಧೂಮ್ರಪಾನ ಇತ್ಯಾದಿಗಳು ಸಿವಿಡಿಯನ್ನುಂಟು ಮಾಡುವ ಅಪಾಯದ ಅಂಶಗಳಲ್ಲಿ ಸೇರಿವೆ. ಭಾರತದಲ್ಲಿ ಹೆಚ್ಚಿನ ಸಿವಿಡಿ ಪ್ರಕರಣಗಳಲ್ಲಿ ರೋಗಿಯು ಗಂಭೀರ ಸ್ಥಿತಿಗೆ ತಲುಪುವವರೆಗೆ ಆತ ಸಿವಿಡಿಯಿಂದ ನರಳುತ್ತಿದ್ದಾನೆ ಎನ್ನುವುದು ಗೊತ್ತೇ ಇರುವುದಿಲ್ಲ. ಜನರು ಸಿವಿಡಿಯ ಸಣ್ಣಪುಟ್ಟ ಲಕ್ಷಣಗಳನ್ನು ಕಡೆಗಣಿಸಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ಗೋಜಿಗೆ ಹೋಗದಿರುವುದು ಇದಕ್ಕೆ ಮುಖ್ಯಕಾರಣವಾಗಿದೆ. ಎದೆಯಲ್ಲಿ ಅಥವಾ ಎಡತೋಳಿನಲ್ಲಿ ತೀವ್ರ ನೋವು ದಶಕಗಳಿಂದಲೂ ವೈದ್ಯರು ಸೂಚಿಸುತ್ತಿರುವ ಸಿವಿಡಿಯ ಲಕ್ಷಣಗಳಾಗಿದ್ದು,ನಿಗಾ ಇರಿಸಬೇಕಾದ ಇತರ ಹಲವು ಲಕ್ಷಣಗಳೂ ಇವೆ.
* ಪಾದಗಳಲ್ಲಿ ಊತ
ನಿಮ್ಮ ಪಾದಗಳು ಎದ್ದು ಕಾಣುವಂತೆ ಬಾತುಕೊಂಡಿದ್ದರೆ ಅದು ಹೃದಯ ಸಮಸ್ಯೆಗಳ ಗಂಭೀರ ಸೂಚನೆಯಾಗಿರಬಹುದು. ಊತವು ರಕ್ತಸಂಚಾರ ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಹೃದಯವು ಪಂಪ್ ಮಾಡುವ ರಕ್ತವು ಪಾದದವರೆಗೆ ತಲುಪುತ್ತದೆಯಾದರೂ ಮಲಿನ ರಕ್ತವನ್ನು ಮರಳಿ ಪಡೆಯುವಲ್ಲಿ ಅದರ ಅಸಾಮರ್ಥ್ಯದಿಂದಾಗಿ ರಕ್ತವು ಕಾಲುಗಳು,ಕಣಕಾಲುಗಳು ಮತ್ತು ಪಾದಗಳ ಸುತ್ತಲಿನ ಅಂಗಾಂಶಗಳಲ್ಲಿ ಸಂಗ್ರಹಗೊಂಡು ಅಲ್ಲಿಯೇ ಹೆಪ್ಪುಗಟ್ಟುತ್ತದೆ. ಇದು ಊತಕ್ಕೆ ಕಾರಣವಾಗುತ್ತದೆ.
* ಪ್ರತಿಫಲಿತ ನೋವು
ನೋವು ನಿರೀಕ್ಷಿತ ಜಾಗದ ಬದಲಿಗೆ ಶರೀರದ ಬೇರೆ ಕಡೆಗಳಲ್ಲಿ ಕಾಣಿಸಿಕೊಂಡರೆ ಅದನ್ನು ರೆಫರ್ಡ್ ಪೇಯ್ನ್ ಅಥವಾ ಪ್ರತಿಫಲಿತ ನೋವು ಎಂದು ಕರೆಯಲಾಗುತ್ತದೆ. ಹೃದಯ ಸಮಸ್ಯೆಗಳಿಂದ ಉಂಟಾಗುವ ನೋವು ಎದೆ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ಅನುಭವವಾಗಬ ಹುದು. ನರಗಳ ಮೂಲಕ ಸಾಗುವ ನೋವಿನ ಸಂಕೇತಗಳು ಸಮೀಪದ ಎಲ್ಲ ನರಗಳನ್ನು ವ್ಯಾಪಿಸಿಕೊಂಡಾಗ ಇಂತಹ ನೋವುಂಟಾಗುತ್ತದೆ. ಹೆಚ್ಚಿನ ರೋಗಿಗಳಲ್ಲಿ ಸ್ಥಿತಿಯು ಗಂಭೀರವಾಗುವ ಮುನ್ನ ಒಂದೇ ಜಾಗದಲ್ಲಿ ಪ್ರತಿಫಲಿತ ನೋವು ಕಾಣಿಸಿಕೊಳ್ಳುತ್ತದೆ. ಹೃದಯ ಸಮಸ್ಯೆಗಳಿಂದ ಉಂಟಾಗುವ ಪ್ರತಿಫಲಿತ ನೋವು ಸಾಮಾನ್ಯವಾಗಿ ತೋಳುಗಳು,ಭುಜಗಳು,ಕುತ್ತಿಗೆ ಮತ್ತು ದವಡೆಗಳಲ್ಲಿ ಅನುಭವವಾಗುತ್ತದೆ.
* ದೈಹಿಕ ಹೋರಾಟ
ಕಠಿಣವಲ್ಲದ ದೈಹಿಕ ಚಟುವಟಿಕೆಯನ್ನು ಪೂರೈಸಲು ನೀವು ಹೆಣಗಾಡುತ್ತಿದ್ದರೆ ಅದು ರಕ್ತ ಪರಿಚಲನೆ ಸಮಸ್ಯೆಯನ್ನು ಸೂಚಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವಾಗ ನಿಮಗೆ ಉಸಿರು ಕಟ್ಟಿದಂತಾಗಬಹುದು ಅಥವಾ ವ್ಯಾಯಾಮ ಮಾಡುತ್ತಿದ್ದರೆ ಪದೇ ಪದೇ ವಿಶ್ರಾಂತಿ ಪಡೆಯುವಂತಾಗಬಹುದು. ಇವು ನಿಮ್ಮ ಹೃದಯಕ್ಕೆ ಸ್ನಾಯುಗಳಿಗೆ ಆಮ್ಲಜನಕ ಸಮೃದ್ಧ ರಕ್ತವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುವುದರ ಸಂಕೇತಗಳಾಗಿವೆ.
* ಜ್ಞಾಪಕ ಶಕ್ತಿ ನಷ್ಟ
ನಿಮ್ಮ ಆಲೋಚನೆಗಳು ಗೋಜಲು ಗೋಜಲುಗಳಾಗಿದ್ದರೆ ಮತ್ತು ಗೊಂದಲಗಳಿಂದ ಕೂಡಿದ್ದರೆ ಅದು ನಿಮ್ಮ ಮಿದುಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ ಎನ್ನುವುದರ ಸಂಕೇತವಾಗಿರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಅದು ಮಿದುಳಿನ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅಲ್ಪಾವಧಿಯ ಜ್ಞಾಪಕ ಶಕ್ತಿ ನಷ್ಟದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂತಹ ಅನುಭವ ಪದೇ ಪದೇ ಆಗುತ್ತಿದ್ದರೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವ ಗಂಭೀರ ಆರೋಗ್ಯ ಸಮಸ್ಯೆಯನ್ನು ಅದು ಬೆಟ್ಟು ಮಾಡುತ್ತದೆ.
* ಲೈಂಗಿಕ ನಿಶ್ಶಕ್ತಿ
ಪುರುಷರಲ್ಲಿ ಲೈಂಗಿಕ ನಿಶ್ಶಕ್ತಿಯು ಹೃದಯ ಸಮಸ್ಯೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಶಿಶ್ನಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳಿಗೆ ಸಾಕಷ್ಟು ರಕ್ತ ಪಡೆಯಲು ಸಾಧ್ಯವಾಗದಿದ್ದಾಗ ಅದು ನಿಮಿರು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಇತರ ಯಾವುದೇ ಲಕ್ಷಣಗಳಿಗಿಂತ ಈ ಲಕ್ಷಣ ಮೊದಲು ಪ್ರಕಟಗೊಂಡಿರುತ್ತದೆ.
ಸಿವಿಡಿ ಅಪಾಯವನ್ನು ತಗ್ಗಿಸಲು ಟಿಪ್ಸ್
ಅದೃಷ್ಟವಶಾತ್ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಅಧಿಕ ಎಲ್‌ಡಿಎಲ್ ಕೊಲೆಸ್ಟ್ರಾಲ್,ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಸಿವಿಡಿಗೆ ಕಾರಣವಾಗುವ ಅಪಾಯದ ಅಂಶಗಳನ್ನು ಕಡಿಮೆ ಮಾಡಬಹುದು.
* ವ್ಯಾಯಾಮ: ಹೃದ್ರೋಗಗಳ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಲು ವ್ಯಾಯಾಮವು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲೊಂದಾಗಿದೆ. ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ,ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಹೃದಯ ರಕ್ತನಾಳಗಳನ್ನು ಬಲಗೊಳಿಸುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷ ಎರೋಬಿಕ್ ವ್ಯಾಯಾಮ ಮಾಡಲು ಪ್ರಯತ್ನಿಸಿ. ಕಾರ್ಡಿಯೊ ಮಾಡಲು ಸಾಧ್ಯವಾಗದಿದ್ದರೆ ಯೋಗವನ್ನು ಪ್ರಯತ್ನಿಸಿ. ಯೋಗವು ರಕ್ತದೊತ್ತಡ ಮತ್ತು ಹೃದಯ ಬಡಿತ ದರಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
*ಸಮತೋಲಿತ ಆಹಾರ: ಆರೋಗ್ಯಕರ ಮತ್ತು ಸಮತೋಲಿತ ಆಹಾರ ಹೃದಯದ ಆರೋಗ್ಯಕ್ಕೆ ಅಗತ್ಯವಾಗಿದೆ. ಸಕ್ಕರೆ ಮತ್ತು ಸ್ಯಾಚ್ಯುರೇಟೆಡ್ ಫ್ಯಾಟ್ ಹೆಚ್ಚಿರುವ ಆಹಾರ ಸೇವನೆಗೆ ಕಡಿವಾಣ ಹಾಕುವುದು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಟೈಪ್-2 ಮಧುಮೇಹ ಉಂಟಾಗುವ ಅಪಾಯವನ್ನು ತಡೆಯುತ್ತದೆ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಸಿವಿಡಿಗೆ ಕಾರಣವಾಗುವ ಮುಖ್ಯ ಅಪಾಯದ ಅಂಶಗಳಲ್ಲೊಂದಾಗಿರುವ ಅಧಿಕ ರಕ್ತದೊತ್ತಡದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
* ತೂಕ ಇಳಿಕೆ: ಶರೀರವು ವ್ಯಯಿಸುವದಕ್ಕಿಂತ ಹೆಚ್ಚಿನ ಕ್ಯಾಲರಿಗಳ ಸೇವನೆಯು ಅನಾರೋಗ್ಯಕರ ತೂಕ ಏರಿಕೆಗೆ ಕಾರಣವಾಗುತ್ತದೆ ಮತ್ತು ಇದು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ಶೇಖರಗೊಳ್ಳುವುದು ಅಪಾಯಕಾರಿಯಾಗಿದೆ,ಏಕೆಂದರೆ ಅದು ಹೃದಯ ಸಮಸ್ಯೆಗಳುಂಟಾಗುವ ಅವಕಾಶಗಳನ್ನು ಹೆಚ್ಚಿಸುತ್ತದೆ.
ಚಿಕಿತ್ಸೆಗಿಂತ ಮುಂಜಾಗ್ರತೆ ಉತ್ತಮ
ಹೃದ್ರೋಗಗಳು ಬರದಂತೆ ತಡೆಯುವುದೇ ಅವುಗಳಿಗೆ ಅತ್ಯುತ್ತಮ ಚಿಕಿತ್ಸೆಯಾಗಿದೆ. ಆರೋಗ್ಯಕರ ಜೀವನಶೈಲಿ,ನಿಯಮಿತ ವ್ಯಾಯಾಮ,ಉತ್ತಮ ಆಹಾರ ಸೇವನೆ,ಧೂಮ್ರಪಾನ ಮತ್ತು ಮದ್ಯಪಾನದಂತಹ ಚಟಗಳ ವರ್ಜನೆಯ ಮೂಲಕ ಸಿವಿಡಿಗಳಿಗೆ ಗುರಿಯಾಗುವ ಅಪಾಯವನ್ನು ಗಣನೀಯವಾಗಿ ತಗ್ಗಿಸಬಹುದು.