ಅಂಚೆ ಅಣ್ಣ ಸೋಂಪಣ್ಣ
ಮಂಗಳೂರು, ಅ.8: ಡಿಜಿಟಲ್ ಕ್ರಾಂತಿಯ ಪರಿಣಾಮ ಇಂದು ಕಾಗದಗಳಿಗೆ ಕಾಯುವ ಪರಿಸ್ಥಿತಿ ಇಲ್ಲ. ಆ ಕೈ ಬರಹದ ಪುಳಕ, ಕಾಯುವಿಕೆಯಲ್ಲಿನ ಸುಖದಿಂದ ನಾವೆಲ್ಲ ವಂಚಿತರಾಗುತ್ತಿದ್ದೇವೆ. ಯಾವುದೇ ಆಧುನಿಕ ಸೌಲಭ್ಯಗಳೂ ಇಲ್ಲದ ಸುಮಾರು 40 ವರ್ಷಗಳ ಹಿಂದಣ ಕಾಲಘಟ್ಟದ ಜನಜೀವನದಲ್ಲಿ ಅಂಚೆ ಸೇವೆ ಬಹುಮುಖ್ಯ ಪಾತ್ರವಹಿಸಿತ್ತು. ಒಂದಿಡೀ ಹಳ್ಳಿ, ಪಟ್ಟಣ, ದೇಶದ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸಿತ್ತು. ಆದರೆ, ಸಂಪರ್ಕ ಕ್ಷೇತ್ರದಲ್ಲಾದ ಕ್ಷೀಪ್ರ ಬದಲಾವಣೆಯಿಂದ ಸಾಂಪ್ರದಾಯಿಕ ಅಂಚೆ ಸೇವೆ ಮಂಕಾಗಿರುವುದು ನಮ್ಮ ಕಣ್ಣ ಮುಂದಿನ ವಾಸ್ತವ. ಮನೆ ಮನೆಯ ಕ್ಷೇಮ, ಕುಶಲ, ಪ್ರೀತಿ, ಪ್ರೇಮದ ಕಾಗದಗಳನ್ನು ಹೊತ್ತು ಸೈಕಲ್ ಏರಿ ಬರುತ್ತಿದ್ದ ಪೋಸ್ಟ್ ಮ್ಯಾನ್ ಅಥವಾ ಅಂಚೆ ಅಣ್ಣನೆಂಬ ಮಾಂತ್ರಿಕ ಆಗಿನ ಕಾಲಕ್ಕೆ ಹಲವರ ಪಾಲಿಗೆ ಹೀರೊ ಆಗಿದ್ದ. ಇಂತಹದೇ ಕಾಲಘಟ್ಟದಲ್ಲಿ ಪೋಸ್ಟ್‌ಮ್ಯಾನ್ ಆಗಿ ಜನಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ, ಸೋಂಪಣ್ಣನೆಂದೇ ಚಿರಪರಿಚಿತರಾದ ಪೊಳಲಿಯ ಕೆ.ಸೋಮಪ್ಪ ಪೂಜಾರಿ ಅವರು ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಬಾಲ್ಯದಲ್ಲಿ ತೀರಾ ಸಂಕಷ್ಟದ ದಿನಗಳನ್ನು ಎದುರಿಸಿದ ನಾನು, ಆಗಿನ ಕಾಲಕ್ಕೆ ಎಸೆಸೆಲ್ಸಿ ಪಾಸ್ ಮಾಡಿ ನೌಕರಿ ಹಿಡಿದೆ. ನೌಕರಿಗೆ ಸೇರಿದ ಶುರುವಿನ ದಿನಗಳಲ್ಲಿ ಅಂದರೆ ಸುಮಾರು 40 ವರ್ಷಗಳ ಹಿಂದೆ ಅಡ್ಡೂರು ಮತ್ತು ಇತರ ಯಾವುದೇ ಹಳ್ಳಿಗಳಲ್ಲಿ ಅಷ್ಟೊಂದು ಮನೆಗಳು ಇರಲಿಲ್ಲ. ಅಲ್ಲೊಂದು ಇಲ್ಲೊಂದು ಚದುರಿ ಹೋದ ಹಾಗೆ ಮನೆಗಳಿದ್ದವು. ವೃತ್ತಿ ಆರಂಭಿಸಿದ ಕೆಲವು ವರ್ಷಗಳ ಬಳಿಕ ನಾನು ಸೈಕಲ್ ಕೊಂಡುಕೊಂಡಿದ್ದೇನಾದರೂ ಎಲ್ಲ ಕಡೆ ಸೈಕಲ್‌ನಲ್ಲಿ ಸಂಚರಿಸಲು ಸಾಧ್ಯವಿರಲಿಲ್ಲ. ಮನೆಗಳು ಎಷ್ಟೇ ದೂರವಿರಲಿ, ಯಾವ ಸಂದರ್ಭವೇ ಆಗಿರಲಿ ನಡೆದುಕೊಂಡೇ ಹೋಗುವುದು ಅನಿವಾರ್ಯವಾಗಿಬಿಟ್ಟಿತ್ತು. ಬೇಸಿಗೆಯಲ್ಲಿ ಅತಿ ಎನ್ನುವಷ್ಟು ಸೆಕೆ, ಮಳೆಗಾಲದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ, ಸಣ್ಣ, ಸಣ್ಣ ಹಳ್ಳ, ಹೊಳೆ ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದೇ ಇತ್ತು. ಒಂಟಿ ಮನೆಗಳಿಗೆ ಕಾಡಿನ ನಡುವಿನ ಹಾದಿ ತುಳಿದು ಕಾಗದಗಳನ್ನು ತಲುಪಿಸುವುದು ನಿಜಕ್ಕೂ ಸವಾಲಿನ ವಿಷಯವಾಗಿತ್ತು. ಆದರೆ, ಸರಿಯಾದ ಸಮಯಕ್ಕೆ ಕಾಗದಗಳನ್ನು ತಲುಪಿಸಿದ್ದಕ್ಕೆ ಜನ ತೋರಿಸುತ್ತಿದ್ದ ಪ್ರೀತಿ, ಗೌರವ ನನ್ನೆಲ್ಲ ದಣಿವನ್ನು ಮರೆಸಿ ಧನ್ಯತೆಯ ಭಾವ ಮೂಡಿಸುತ್ತಿತ್ತು. ಆಗೆಲ್ಲ ವೃತ್ತಿ ಬದುಕಿನ ಬಗ್ಗೆ ತೃಪ್ತಿಯ ಸೆಲೆ ಜಿನುಗುತ್ತಿತ್ತು.
ಆಗಿನ್ನೂ ಹಳ್ಳಿಗಳಲ್ಲಿ ಸುಶಿಕ್ಷಿತರ ಸಂಖ್ಯೆ ಬಹಳ ಕಡಿಮೆ ಇತ್ತು. ಹಾಗಾಗಿ ನನ್ನ ಕೆಲಸ ಬರೀ ಕಾಗದಗಳನ್ನು ಕೊಡುವುದು ಮಾತ್ರವಾಗಿರಲಿಲ್ಲ. ಬಹುತೇಕರು ನನ್ನ ಕೈಯಲ್ಲಿಯೇ ಕಾಗದಗಳನ್ನು ಬರೆಸಿ, ಬಂದ ಕಾಗದಗಳನ್ನು ಓದಿಸುತ್ತಿದ್ದರು. ಇಡೀ ಊರಿನ ಮನೆಮನೆಯ ವಾರ್ತೆಗಳನ್ನು ಹೊತ್ತು ತಿರುಗುತ್ತಿದ್ದೆ. ಒಂದೊಮ್ಮೆ ಏನಾಗುತ್ತಿತ್ತೆಂದರೆ, ಅನಾರೋಗ್ಯ, ನಿಧನದ ಸುದ್ದಿಯನ್ನೋ ಹೊತ್ತು ತಂದ ಪತ್ರಗಳು ಸಂಬಧಪಟ್ಟವರಿಗೆ ತಲುಪುವಾಗ ವಾರ ಕಳೆದಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಜನರ ಅಳು, ದುಃಖ ನನ್ನನ್ನೂ ಆವರಿಸುತ್ತಿತ್ತು. ಈ ಎಲ್ಲ ಕಾರಣಗಳಿಂದ ಬೆಳಗ್ಗೆ ಶುರುವಾದ ಕೆಲಸ ಮುಗಿಸುವಾಗ ಸಂಜೆ 5,6 ಕೆಲವೊಮ್ಮೆ 8 ಗಂಟೆಯನ್ನೂ ದಾಟಿದ್ದಿದೆ. ಎಷ್ಟೋ ಸಲ ನನ್ನ ಹೆಂಡತಿ ಪ್ರೀತಿಯಿಂದ ಕೊಟ್ಟುಕಳುಹಿಸಿದ ಬುತ್ತಿಯ ಗಂಟು ಬಿಚ್ಚಿ ಊಟ ಮಾಡಲು ವೇಳೆ ಸಿಗದೇ ಮನೆಗೆ ವಾಪಸ್ ಕೊಂಡೊಯ್ದದ್ದೂ ಇದೆ.
ವೃತ್ತಿ-ನಿವೃತ್ತಿ: ಗುರುಪುರದ ಸಮೀಪ ಇರುವ ಕೋಡಿಬೆಟ್ಟು ಹಳ್ಳಿಯಲ್ಲಿ ಜನಿಸಿದ ಪೊಳಲಿಯ ಕೆ.ಸೋಮಪ್ಪ ಪೂಜಾರಿ ಅವರು ಅಂಚೆ ಇಲಾಖೆಯಲ್ಲಿ 1979ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಜ್ಪೆ ಪೋಸ್ಟ್ ಆಫೀಸ್‌ನಲ್ಲಿ ವೃತ್ತಿ ಆರಂಭಿಸಿ, ಕೊಂಚಾಡಿ ಪೋಸ್ಟ್‌ಆಫೀಸ್, ಗುರುಪುರ, ಅಡ್ಡೂರು, ಮೂಳೂರು ಗ್ರಾಮ, ಮರೋಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ ಬಳಿಕ ಭಡ್ತಿಹೊಂದಿ ಹೆಡ್‌ಪೋಸ್ಟ್ ಮ್ಯಾನ್ ಆಗಿ ಕಂಕನಾಡಿ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸಿ 2020ರ ಮೇ 5ರಂದು ನಿವೃತ್ತಿ ಹೊಂದಿದ್ದಾರೆ. ಸೋಂಪಣ್ಣ ಅವರನ್ನುಮಂಗಳೂರು ಬೈಸಿಕಲ್ ಕ್ಲಬ್,ಮಂಗಳೂರಿನ ರೋಟರಿ ಕ್ಲಬ್ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಅಭಿನಂದಿಸಿವೆ.
ಮಳೆಗಾಲದ ದಿನಗಳಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟಿಕೊಂಡು ಹೋಗಿ ಕಾಗದಗಳನ್ನು ತಲುಪಿಸಬೇಕಾಗುತ್ತಿತ್ತು. ಹೀಗೆ ಒಂದು ಬಾರಿ ಮಳೆಗಾಲದ ದಿನ ಉಳಿಯ ಎನ್ನುವಲ್ಲಿಗೆ ತೆರಳುತ್ತಿದ್ದಾಗ ಹೊಳೆಯಲ್ಲಿ ತೇಲಿಕೊಂಡು ಹೋಗುವ ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದೆ. ಅಲ್ಲಿನ ಓರ್ವ ಯುವತಿಗೆ ಕಾಗದ ಬಂದ ದಿನವೇ ನೌಕರಿಗೆ ಸಂದರ್ಶನವಿತ್ತು. ರಪ್ಪಂತ ಹೋಗಿ ಕೊಟ್ಟು ಬಂದೆ. ಚೂರು ತಡವಾಗಿದ್ದರೂ ನೌಕರಿ ಕೈ ತಪ್ಪಿಹೋಗುತ್ತಿತ್ತು ಎಂದು ಆ ಹೆಣ್ಣುಮಗಳು ಎದುರುಗೊಂಡಾಗಲೆಲ್ಲ ನೆನೆಯುತ್ತಾರೆ.
ಕೆ.ಸೋಮಪ್ಪ ಪೂಜಾರಿ,
ನಿವೃತ್ತ ಪೋಸ್ಟ್‌ಮ್ಯಾನ್
ಬೆರಳ ತುದಿಯಲ್ಲೇ
ಅಂಚೆ ಇಲಾಖೆಯ ಐಪಿಪಿಬಿ ತಂತ್ರಜ್ಞಾನದ ಮೂಲಕ ಜನರು ಇದೀಗ ವಿದ್ಯುತ್, ನೀರು, ಡಿಟಿಎಚ್ ಬಿಲ್ ಪಾವತಿ ಜತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೆ, ಆಯ್ದ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸಹಿತ ಹಲವು ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರಕಿಸಿಕೊಡುತ್ತಿರುವುದು ಅಂಚೆ ಇಲಾಖೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ಅಂಗವಿಕಲ, ಹಿರಿಯ ನಾಗಕರಿಕರು ಸೇರಿದಂತೆ 1.50 ಕೋಟಿ ಫಲಾನುಭವಿಗಳಿಗೆ ಇಲಾಖೆ ಸೇವೆಯನ್ನು ಒದಗಿಸುತ್ತಿದೆ.
ಕೆ.ಕೆ.ರಾಧಾಕೃಷ್ಣ ಮುಖ್ಯ ಅಂಚೆ ಪಾಲಕರು, ಅಂಚೆ ಮಹಾ ಕಾರ್ಯಾಲಯ(ಜಿಪಿಓ), ರಾಜಭನವನ ರಸ್ತೆ, ಬೆಂಗಳೂರು
ಶೇ.90ರಷ್ಟು ಅಂಚೆ ಕಚೇರಿಗಳು ಗ್ರಾಮೀಣದಲ್ಲಿವೆ
ರಾಜ್ಯದಲ್ಲಿ ಒಟ್ಟು 9,649 ಅಂಚೆ ಕಚೇರಿಗಳಿದ್ದು, ಶೇ.90ರಷ್ಟು ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ. 28,889 ಲೆಟರ್ ಬಾಕ್ಸ್ ಗಳಿದ್ದು, ಅತಿ ಹೆಚ್ಚು ಅಂಚೆ ಕಚೇರಿಗಳು ಉತ್ತರ ಪ್ರದೇಶದಲ್ಲಿವೆ. ಖಾಸಗಿಯವರಿಗೆ ಬಾಡಿಗೆ ಆಧಾರದ ಮೇಲೆ 5,213 ಪೋಸ್ಟ್ ಬಾಕ್ಸ್ ಗಳನ್ನು ನೀಡಲಾಗಿದೆ. ದೇಶದ 36 ಕಟ್ಟಡಗಳು ಇಲಾಖೆಯ ಪಾರಂಪರಿಕ ಮೌಲ್ಯಯುತ ಕಟ್ಟಡ ಎಂದು ಗುರುತಿಸಿಕೊಂಡಿವೆ. ರಾಜ್ಯದಲ್ಲಿನ ಅಂಚೆ ತರಬೇತಿ ಕೇಂದ್ರ ಮೈಸೂರು, ವಿಭಾಗೀಯ ಕಚೇರಿ ಬಳ್ಳಾರಿ ಮತ್ತು ವೃತ್ತ ಕಚೇರಿ ಬೆಂಗಳೂರಿನ ಜಿಪಿಓ ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ಪರಿಗಣಿಸಲಾಗಿದೆ.
ಸಪ್ತಾಹ
ವಿಶ್ವ ಅಂಚೆ ದಿನದ ಅಂಗವಾಗಿ ಅಂಚೆ ಇಲಾಖೆ ಅ.9ರಿಂದ 15ರ ವರೆಗೆ ಅಂಚೆ ಸಪ್ತಾಹವನ್ನು ಹಮ್ಮಿಕೊಂಡಿದೆ. ಅಂಚೆ ಸೇವೆಗಳನ್ನು ಹೆಚ್ಚು ಬಳಕೆ ಮಾಡುವ ಗ್ರಾಹಕರು ಮತ್ತು ಉತ್ತಮ ಸೇವೆ ಸಲ್ಲಿಸುವ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತಿದೆ. ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸವುಳ್ಳವರನ್ನು ಸನ್ಮಾನಿಸಲಾಗುತ್ತದೆ. ತಮ್ಮ ಉತ್ಪನ್ನಗಳನ್ನು ಇಲಾಖೆ ಮೂಲಕ ಮಾರಾಟ ಮಾಡುವ ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತದೆ’
ಕೆ.ಕೆ.ರಾಧಾಕೃಷ್ಣ ಮುಖ್ಯ ಅಂಚೆ ಪಾಲಕರು, ಅಂಚೆ ಮಹಾ ಕಾರ್ಯಾಲಯ(ಜಿಪಿಓ), ರಾಜಭನವನ ರಸ್ತೆ, ಬೆಂಗಳೂರು
ಅಕ್ಬರನ ಕಾಲದ ಅಂಚೆ
‘ದಾಖಲೆಗಳ ಪ್ರಕಾರ ಕ್ರಿ.ಶ. 14ನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಅರಬ್ ಪ್ರವಾಸಿ ಇಬ್ನುತೂತ ಉಲ್ಲೇಖಿಸುವಂತೆ ಅಂದು ಅಶ್ವರೋಹಿ ಮತ್ತು ರನ್ನರುಗಳ ಮೂಲಕ ಅಂಚೆ ಸೇವೆ ರವಾನೆಯಾಗುತ್ತಿತ್ತು. ಮೊಘಲ್ ದೊರೆ ಅಕ್ಬರನ ಕಾಲದಲ್ಲಿ ಅಂಚೆ ಸೇವೆ ಉನ್ನತೀಕರಿಸಲ್ಪಟ್ಟು 2 ಸಾವಿರ ಮೈಲುಗಳವರೆಗೆ ಅಂಚೆ ರವಾನೆಯಾಗುತ್ತಿತ್ತು. ನಂತರ ದೇಶದಲ್ಲಾದ ರಾಜಕೀಯ ಸ್ಥಿತ್ಯಂತರಗಳ ಕಾರಣ ಈ ವ್ಯವಸ್ಥೆ ಕುಸಿದು ಬಿತ್ತು. ಬ್ರಿಟಿಷರು ಭಾರತಕ್ಕೆ ಬಂದಾಗ ಸುದ್ದಿಗಳನ್ನು ರವಾನಿಸಲು ಈಸ್ಟ್ ಇಂಡಿಯಾ ಕಂಪೆನಿ 1727ರಲ್ಲಿ ಕೋಲ್ಕತಾದಲ್ಲಿ ಮೊದಲ ಅಂಚೆ ಕಚೇರಿಯನ್ನು ಆರಂಭಿಸಿತು. ಆಗ ಆ ಸೇವೆ ಯುರೋಪಿಯನ್ನರಿಗೆ ಮಾತ್ರ ಮೀಸಲಾಗಿತ್ತು. 1786ರಲ್ಲಿ ಮದ್ರಾಸ್ ಜನರಲ್ ಪೋಸ್ಟ್ ಆಫೀಸ್ ತೆರೆಯಲ್ಪಟಿತು. 1854ರ ಅಕ್ಟೋಬರ್ 1ರಂದು ಅಂಚೆ ಕಾಯ್ದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಅ.1ಕ್ಕೆ ಭಾರತೀಯ ಅಂಚೆ ಜನ್ಮದಿನ. ಇದಕ್ಕೆ ಕಾಕತಾಳೀಯವಾಗಿ ಅಕ್ಟೋಬರ್ 9 ಅನ್ನು ವಿಶ್ವಸಂಸ್ಥೆ ಅಂತರ್‌ರಾಷ್ಟ್ರೀಯ ಅಂಚೆ ದಿನ ಎಂದು ಘೋಷಿಸಿದೆ. ‘ಸ್ವಂತಕ್ಕಿಂತ ಸೇವೆಯೆ ಮುಖ್ಯ’ ಎಂಬುದು ಅಂಚೆ ಇಲಾಖೆಯ ಧ್ಯೇಯವಾಗಿದೆ.
ಅಂಚೆ ಇಲಾಖೆಯಲ್ಲಿ ನಾನು ಉಳಿತಾಯ ಖಾತೆಯನ್ನು ಹೊಂದಿದ್ದು, ಅತ್ಯಂತ ಕಡಿಮೆ ಕಲಿತಿರುವ ನನಗೆ ಇಲ್ಲಿನ ಸಿಬ್ಬಂದಿ ಉತ್ತಮ ಸೇವೆಯನ್ನು ಒದಗಿಸುತ್ತಿದ್ದಾರೆ. ಆದರೆ, ಕೆಲ ಸಮಯದಲ್ಲಿ ಇಲ್ಲಿ ನೆಟ್‌ವರ್ಕ್ ಸಮಸ್ಯೆ ಆಗುತ್ತಿದೆ. ಇದರಿಂದ ಸರದಿಯಲ್ಲಿ ನಿಲ್ಲಬೇಕಾಗುತ್ತದೆ, ಇದನ್ನು ತಪ್ಪಿಸಬೇಕು. ನಾನು ಪ್ರತಿತಿಂಗಳು ಇಲ್ಲೇ ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸುತ್ತೇನೆ. ಮನೆ ಸಮೀಪವೇ ಅಂಚೆ ಕಚೇರಿ ಇರುವುದರಿಂದ ನನಗೆ ಅನುಕೂಲಕರವಾಗಿದೆ’
ರಮೇಶ್ ಎಚ್. ಗ್ರಾಹಕ ಜಾಲಹಳ್ಳಿ
ಖಾಸಗೀಕರಣದ ಗುಮ್ಮ, ಕೊರತೆಗಳ ಸುಳಿಯಲ್ಲಿ ಅಂಚೆ ಸೇವೆ!
ಕೇಂದ್ರದಲ್ಲಿ ಅಧಿಕಾರಕ್ಕೇರುವ ಸರಕಾರಗಳು ‘ನಷ್ಟದ ನೆಪ’ದಲ್ಲಿ ಸರಕಾರಿ ಒಡೆತನದ ಪ್ರಮುಖ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿವೆ ಎಂಬ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಇದೀಗ ಉತ್ತಮ, ಜನಸ್ನೇಹಿ ಹಿರಿಮೆಗಳಿಸಿರುವ ಅಂಚೆ ಇಲಾಖೆಗೂ ಖಾಸಗೀಕರಣದ ಗುಮ್ಮ ಅಮರಿಕೊಂಡಿದೆ.
ರಾಜ್ಯದಲ್ಲಿ 1,850 ಪ್ರಧಾನ ಅಂಚೆ ಕಚೇರಿ ಸೇರಿ ಒಟ್ಟು 9,649 ಹೋಬಳಿ ಮತ್ತು ಗ್ರಾಮೀಣ ಅಂಚೆ ಕಚೇರಿಗಳಿದ್ದು ಶೇ.90ರಷ್ಟು ಗ್ರಾಮೀಣ ಪ್ರದೇಶದಲ್ಲಿವೆ. 1ಸಾವಿರಕ್ಕೂ ಅಧಿಕ ಆಡಳಿತಾತ್ಮಕ, 6 ಸಾವಿರಕ್ಕೂ ಅಧಿಕ ‘ಸಿ’ ಗ್ರೂಪ್, 14 ಸಾವಿರದಿಂದ 15 ಸಾವಿರದಷ್ಟು ಅಂಚೆ ಸಿಬ್ಬಂದಿಯನ್ನು ಹೊಂದಿರುವ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ರಾಜ್ಯದಲ್ಲಿದ್ದು, ಪ್ರತಿನಿತ್ಯ ಲಕ್ಷಾಂತರ ಗ್ರಾಹಕರಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆಯಾದರೆ, ಇಲ್ಲಿ ಕೊರತೆಗಳಿಗೆ ಬರವಿಲ್ಲ.
ಡಿಜಿಟಲ್ ಯುಗಕ್ಕೆ ಅಂಚೆ ಕಚೇರಿ ಕಾಲಿಟ್ಟಿದೆ. ಹೊಸ ಹೊಸ ಸೇವೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹತ್ತು-ಹಲವು ಯೋಜನೆಗಳನ್ನು ಅಂಚೆ ಇಲಾಖೆ ಜನರಿಗೆ ಒದಗಿಸುತ್ತಿದೆ. ಆದರೆ, ಇಲ್ಲಿ ಸಿಬ್ಬಂದಿ ಕೊರತೆ, ನೆಟ್‌ವರ್ಕ್ ಸಮಸ್ಯೆ, ಸೂಕ್ತ ಸಮಯಕ್ಕೆ ಸಿಬ್ಬಂದಿಗೆ ಭಡ್ತಿ, ಮುಂಭಡ್ತಿ ದೊರೆಯದ ಕಾರಣ ಇಲಾಖೆ ಕೊರತೆಗಳು ಹೆಚ್ಚಿವೆ. ಹೀಗಾಗಿ ಸಾರ್ವಜನಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿ ಅನಿಸಿಕೆ.
ಇಲಾಖೆಯಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಅಲ್ಲದೆ, ಸಾಫ್ಟ್‌ವೇರ್ ಸಮಸ್ಯೆಯೂ ಇಲಾಖೆಯಲ್ಲಿದೆ. ಹೀಗಾಗಿ ಗ್ರಾಹಕರು ಇಲಾಖೆ ಸಿಬ್ಬಂದಿಯೊಂದಿಗೆ ಪ್ರತಿನಿತ್ಯ ಜಗಳಕ್ಕೆ ನಿಲ್ಲುವ ಪ್ರಸಂಗಗಳು ಸಾಮಾನ್ಯ ಎಂಬುದು ಸಿಬ್ಬಂದಿಯ ಅಳಲು. ಪ್ರಸ್ತುತ ಇರುವ ನೆಟ್‌ವರ್ಕ್ ಸಾಮರ್ಥ್ಯವೂ ಸಮರ್ಪಕವಾಗಿಲ್ಲ. ಹೀಗಾಗಿ ಇಲಾಖೆ ಸೇವೆಗಳಲ್ಲಿ ವಿಳಂಬವೂ ಆಗುತ್ತಿದೆ ಎನ್ನಲಾಗುತ್ತಿದೆ. ಇವೆಲ್ಲಕ್ಕೂ ಅತಿಮುಖ್ಯ ಸಿಬ್ಬಂದಿ ಕೊರತೆ. ಇಲಾಖೆಯಲ್ಲಿ ಶೇ.25ರಷ್ಟು ಅಂಚೆ ಸಹಾಯಕರು, ಶೇ.50ರಷ್ಟು ಗ್ರಾಮೀಣ ಅಂಚೆ ಡಾಕ್ ಸೇವಾ ಸಿಬ್ಬಂದಿ, ಅಂಚೆ ಪೇದೆ ಕೊರತೆ ಕಾಡುತ್ತಿದೆ. ಅಲ್ಲದೆ, ಸೇವೆಯಲ್ಲಿರುವ ಸಿಬ್ಬಂದಿಗೆ ಭಡ್ತಿ, ಮುಂಭಡ್ತಿ ನೀಡುವ ಪರಿಪಾಟವೂ ವಿಳಂಬವಾಗಿದೆ. ಆದುದರಿಂದ ಸಿಬ್ಬಂದಿ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗಬೇಕಾದ ದುಸ್ಥಿತಿ ಎದುರಾಗಿದೆ. ‘ಹೊಸ ಸೇವೆಗಳ ಜೊತೆಗೆ ಹಲವು ನೂತನ ಯೋಜನೆಗಳನ್ನು ಅಂಚೆ ಇಲಾಖೆ ಜನರಿಗೆ ಪರಿಚಯಿಸುತ್ತಿರುವುದು ಒಳ್ಳೆಯದೆ. ಆದರೆ, ಆ ಯೋಜನೆಗಳ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ ನೇಮಕ, ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಲಿಸುವಲ್ಲಿ ಇಲಾಖೆ ವಿಳಂಬ ಧೋರಣೆ ಸರಿಯಲ್ಲ’ ಎಂದು ಅಖಿಲ ಭಾರತ ಅಂಚೆ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಜವರಾಯಿಗೌಡ ಆಕ್ಷೇಪಿಸಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಜವರಾಯಿಗೌಡ, ಕೇಂದ್ರ ಸರಕಾರ ಅಂಚೆ ಇಲಾಖೆ ಸಿಬ್ಬಂದಿ ನೇಮಕ, ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಸೂಕ್ತ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಆಸ್ಥೆ ವಹಿಸಬೇಕು. ಅಲ್ಲದೆ, ಬದ್ಧತೆಯಿಂದ ಸೇವೆ ಮಾಡುವ ಅಂಚೆ ಇಲಾಖೆ ಸಿಬ್ಬಂದಿಗೆ ಕಾಲಕಾಲಕ್ಕೆ ಭಡ್ತಿ, ಮುಂಭಡ್ತಿ ನೀಡುವ ಮೂಲಕ ಅವರ ಸೇವೆ ಗುರುತಿಸಬೇಕು. ಆ ಮೂಲಕ ಅವರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದು ಆಗ್ರಹಿಸಿದರು.
ರೈಲ್ವೆ ಮಾರ್ಗಗಳ ಖಾಸಗೀಕರಣದ ಮಾದರಿಯಲ್ಲೇ ಕೇಂದ್ರ ಸರಕಾರ 1,800 ಕೋಟಿ ರೂ.ಗಳಷ್ಟು ನಷ್ಟದ ನೆಪದಲ್ಲಿ ಅಂಚೆ ಇಲಾಖೆಯ ಖಾಸಗೀಕರಣ ಮಾಡುವ ಪ್ರಸ್ತಾಪವಿಟ್ಟಿದೆ. ಬ್ಯಾಂಕಿಂಗ್, ವಿಮೆ, ಅಂಚೆ ಸೇವೆ(ಮೇಲ್ಸ್) ಸೇರಿ ವಿವಿಧ ವಿಭಾಗಗಳನ್ನು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಲೋಚಿಸುತ್ತಿದೆ. ಇದರಿಂದ ಗ್ರಾಹಕರಿಗೆ ಅನನುಕೂಲವಾಗಲಿದೆ. ಮಾತ್ರವಲ್ಲ ಬಡ-ಮಧ್ಯಮ ವರ್ಗದ ಜನರಿಗೆ ಸರಕಾರಿ ಸೇವೆ ಹೊರೆಯಾಗುವ ಸಾಧ್ಯತೆಗಳಿವೆ. ಅಂಚೆ ಇಲಾಖೆ ಖಾಸಗೀಕರಣವನ್ನು ಸಹಿಸಲು ಸಾಧ್ಯವಿಲ್ಲ. ಅಂಚೆ ಇಲಾಖೆ ಕೇಂದ್ರದ ಅಧೀನದಲ್ಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ.
-ಜವರಾಯಿಗೌಡ, ಅಖಿಲ ಭಾರತ ಅಂಚೆ ನೌಕರರ ಸಂಘದ ರಾಜ್ಯಾಧ್ಯಕ್ಷ