ಅಪರಾಧ ಮತ್ತು ಅಧಿಕಾರ ಶಾಮೀಲಾದಾಗ
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಭಯಾನಕ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಆದರೆ ಇನ್ನೊಂದೆಡೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಈ ಪ್ರಕರಣವನ್ನು ಮುಚ್ಚಿ ಹಾಕಿ ಅಪರಾಧಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ. ಅಲ್ಲೇನೂ ನಡೆದಿಲ್ಲ ಇದೆಲ್ಲ ವಿದೇಶಿ ಶಕ್ತಿಗಳ ಕೈವಾಡ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಇದನ್ನು ಮುಚ್ಚಿ ಹಾಕಿ ತಿಪ್ಪೆಸಾರಿಸಲು ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ.
ಸ್ವತಂತ್ರ ಭಾರತದಲ್ಲಿ ಈ ರೀತಿ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿರುವುದು ಇದೇ ಮೊದಲ ಬಾರಿ ಆಗಿರಲಿಕ್ಕಿಲ್ಲ. ಆದರೆ ಸ್ವತಃ ಮುಖ್ಯಮಂತ್ರಿ ಅಪರಾಧಿಗಳ ರಕ್ಷಣೆಗೆ ನಿಂತಿರುವುದು ಇದೇ ಮೊದಲ ಬಾರಿ ಅಂದರೆ ತಪ್ಪಲ್ಲ. ಅಷ್ಟೇ ಅಲ್ಲ, ಉತ್ತರ ಪ್ರದೇಶದ ಬಿಜೆಪಿ ಶಾಸಕರು ಆರೋಪಿಗಳ ಬೆನ್ನಿಗೆ ನಿಂತಿದ್ದಾರೆ. ಅತ್ಯಾಚಾರ ಮಾಡಿದವರ ಜಾತಿಯ ದುಷ್ಟರು ಮಾತ್ರವಲ್ಲ ಮೇಲ್ಜಾತಿ, ಮೇಲ್ವರ್ಗಗಳ ಕೆಲವು ಕಿಡಿಗೇಡಿಗಳು ಅತ್ಯಾಚಾರ ಮಾಡಿದವರ ಪರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮನಮೋಹನ್‌ಸಿಂಗ್ ಸರಕಾರ ಕೇಂದ್ರದಲ್ಲಿ ಇದ್ದಾಗ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಪ್ರಭುತ್ವ ಸ್ಪಂದಿಸಿದ ರೀತಿ ಈಗ ಸ್ಪಂದಿಸುತ್ತಿಲ್ಲ. ಪ್ರಧಾನರಿಗೆ ಮಾತಾಡಲು ಪುರಸೊತ್ತಿಲ್ಲ. ಯೋಗಿ ಸರಕಾರ ತನ್ನ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಅತ್ಯಾಚಾರ ಮಾಡಿದವರಿಗೆ ರಕ್ಷಣೆ ನೀಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಕಾನೂನು ಪಾಲನೆ ಮಾಡಬೇಕಾದ ಪೊಲೀಸರು ಕಾನೂನು ಭಕ್ಷಕರಾಗಿದ್ದಾರೆ. ಈ ಪ್ರಕರಣದ ಬಗ್ಗೆ ಭಾರತೀಯ ಸಮಾಜದ ಪ್ರತಿಕ್ರಿಯೆ ಕೂಡ ಕಾಟಾಚಾರದ ಪ್ರತಿಕ್ರಿಯೆಯಾಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಸ್ಪಂದನೆಯ ಸ್ವರೂಪದ ಮೇಲೂ ಪರಿಣಾಮ ಬೀರಿದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಮ್ಯುನಿಸ್ಟ್ ಪಕ್ಷಗಳ ನಾಯಕರನ್ನು ಹೊರತುಪಡಿಸಿ ಉಳಿದ ಪಕ್ಷಗಳು ಹೇಳಿಕೆಗಳನ್ನು ನೀಡಿ ಸುಮ್ಮನಾಗಿವೆ.
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ದಿನ ದಿನಕ್ಕೂ ಪಡೆಯುತ್ತಿರುವ ತಿರುವನ್ನು ನೋಡಿದರೆ ಪಾತಕಿಗಳೆಲ್ಲ ದೋಷಮುಕ್ತರಾಗಿ ಹೊರಗೆ ಬರುವ ಸಂಭವ ತಳ್ಳಿ ಹಾಕುವಂತಿಲ್ಲ. ಆ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ನಾಲಿಗೆ ಕತ್ತರಿಸಿದ್ದು, ಕೈ ಕಾಲುಗಳ ಮೂಳೆಗಳು ಮುರಿದಿದ್ದು, ನಂತರ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ತಂದು ಆಕೆ ಅಲ್ಲಿ ಕೊನೆಯುಸಿರೆಳೆದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ನಂತರ ಆಕೆಯ ಶವವನ್ನು ಕದ್ದು ಮುಚ್ಚಿ ಉತ್ತರ ಪ್ರದೇಶದ ಕಾಡಿಗೆ ತಂದು ನಸುಕಿನ ಜಾವ ಮನೆಯವರಿಗೂ ತಿಳಿಸದೆ ಸುಟ್ಟು ಹಾಕಿದ್ದು ಇವೆಲ್ಲ ಘಟನೆಗಳು ಅಲ್ಲಿನ ‘ರೋಗಿ ಸರಕಾರ’ವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ.
ಈ ಅತ್ಯಾಚಾರ, ಕೊಲೆ ಮತ್ತು ಶವ ಸಂಸ್ಕಾರ ಮುಗಿದ ನಂತರ ಈ ಪ್ರಕರಣವನ್ನು ಮುಚ್ಚಿ ಹಾಕಿ ಅತ್ಯಾಚಾರ ಎಸಗಿದ ಮೇಲ್ಜಾತಿಯ, ಮೇಲ್ವರ್ಗದ ಯುವಕರನ್ನು ರಕ್ಷಿಸಲು ಯೋಗಿ ಆದಿತ್ಯನಾಥ್ ಸರಕಾರ ಹರಸಾಹಸ ಪಡುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ.
ಈ ಪ್ರಕರಣವನ್ನು ಯುವತಿಯ ಶವದೊಂದಿಗೆ ಹೂತು ಹಾಕಲು, ಅಪರಾಧಿಗಳನ್ನು ದೋಷಮುಕ್ತರನ್ನಾಗಿಸಲು ಉತ್ತರ ಪ್ರದೇಶ ಸರಕಾರ ನಾನಾ ಮಸಲತ್ತುಗಳನ್ನು ನಡೆಸಿತು. ಜಿಲ್ಲಾಧಿಕಾರಿ ಮೂಲಕ ಸಂತ್ರಸ್ತ ಕುಟುಂಬದ ಮೇಲೆ ಒತ್ತಡ ತಂದಿತು. ಆದರೂ ಮಗಳನ್ನು ಕಳೆದುಕೊಂಡ ನೊಂದ ಕುಟುಂಬ ಮಣಿಯಲಿಲ್ಲ.
ಕೊನೆಗೆ ಸಿಎಂ ಯೋಗಿ ಆದಿತ್ಯನಾಥ್ ರಂಗಕ್ಕಿಳಿದರು. ‘‘ಉತ್ತರ ಪ್ರದೇಶದ ಬಿಜೆಪಿ ಸರಕಾರದ ಹೆಸರು ಕೆಡಿಸಲು ಅಂತರ್‌ರಾಷ್ಟ್ರೀಯ ಪಿತೂರಿ ನಡೆದಿದೆ’’ ಎಂದು ಬುರುಡೆ ಬಿಟ್ಟರು. ಅದರ ಬೆನ್ನಲ್ಲೇ ಅತ್ಯಾಚಾರಕ್ಕೊಳಗಾದ ಯುವತಿಯ ಪ್ರಕರಣದಲ್ಲಿ ಸರಕಾರದ ಹೆಸರು ಕೆಡಿಸಲು ಕೋಟ್ಯಂತರ ರೂ. ವಿದೇಶದಿಂದ ಹರಿದು ಬಂದಿದೆ ಎಂದು ಸುಳ್ಳು ಪ್ರಚಾರ ಶುರುವಾಯಿತು. ಇದರ ಬೆನ್ನಲ್ಲೇ ಸಂತ್ರಸ್ತ ಯುವತಿಗೂ ಅತ್ಯಾಚಾರ ಮಾಡಿದ ಆರೋಪಿಗೂ ಸಂಬಂಧವಿತ್ತು, ದಿನವೂ ಇಬ್ಬರೂ ಫೋನ್‌ನಲ್ಲಿ ಮಾತಾಡುತ್ತಿದ್ದರು, ಇವರಿಬ್ಬರ ಸಂಬಂಧಕ್ಕೆ ಸಂತ್ರಸ್ತೆಯ ಕುಟುಂಬದವರ ವಿರೋಧವಿತ್ತು ಎಂದು ಗ್ರಾಮದ ಮುಖ್ಯಸ್ಥರ ಮೂಲಕ ಹೇಳಿಸಲಾಯಿತು. ‘‘ಸದರಿ ಆರೋಪಿ ಅತ್ಯಾಚಾರಕ್ಕೆ ಒಳಗಾದ ಯುವತಿಗೆ ಫೋನ್ ನೀಡಲು ಹೋದಾಗ ಸಂತ್ರಸ್ತೆಯ ಕುಟುಂಬದವರು ಆಕ್ರೋಶಗೊಂಡು ಆಕೆಯನ್ನು ಥಳಿಸಿದ್ದರು, ಹೀಗಾಗಿ ಆಕೆಗೆ ಗಂಭೀರವಾದ ಗಾಯವಾಗಿತ್ತು. ಆದ್ದರಿಂದ ನಿರಪರಾಧಿ ಯುವಕನನ್ನು ಶಿಕ್ಷಿಸಬಾರದು’’ ಎಂದು ಹೊಸ ಕತೆಯನ್ನು ಹೆಣೆಯಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಪಾತಕಿಗಳು ಪಾರಾಗಿ ಬರುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.
ತನ್ನ ವಿರುದ್ಧ ಅಪಪ್ರಚಾರ ನಡೆದಿದೆ, ಕೆಲ ಸ್ವಯಂ ಸೇವಾ ಸಂಘಟನೆಗಳು ಮತ್ತು ವ್ಯಕ್ತಿಗಳು ರಾಜ್ಯದಲ್ಲಿ ಜಾತಿ ಮತ್ತು ಕೋಮು ಕಲಹಕ್ಕೆ ಸಂಚು ರೂಪಿಸಿದ್ದಾರೆ ಎಂದು ಪ್ರಲಾಪಿಸುವ ಯೋಗಿ ಸರಕಾರ ಕೆಲ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕಾಗಿದೆ. ಇಲ್ಲವಾದರೆ ಅದು ಅತ್ಯಾಚಾರಿಗಳ ಜೊತೆ ಶಾಮೀಲಾಗಿರುವುದು ಸಾಬೀತಾದಂತಾಗುತ್ತದೆ.
ಮೇಲ್ಜಾತಿಯ ಅತ್ಯಾಚಾರಿಗಳನ್ನು ರಕ್ಷಿಸಲು ಉತ್ತರ ಪ್ರದೇಶದ ಬಿಜೆಪಿ ಸರಕಾರ ಆರಂಭದಿಂದಲೂ ಯತ್ನಿಸುತ್ತಾ ಬಂದಿದೆ. ಈ ಪ್ರಕರಣ ನಡೆದ ಮೂರು ದಿನಗಳ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಕೊಲೆಯ ಯತ್ನ ಎಂದಷ್ಟೆ ನಮೂದಿಸಲಾಗಿದೆ. ಮ್ಯಾಜಿಸ್ಟ್ರೇಟ್‌ರ ಮುಂದೆ ಯುವತಿಯ ಹೇಳಿಕೆ ದಾಖಲಾದ ನಂತರವಷ್ಟೇ ಪೊಲೀಸರು ಆಕೆಯ ಗುಪ್ತಾಂಗದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದಾರೆ. ಅತ್ಯಾಚಾರ ನಡೆದ ಹನ್ನೊಂದು ದಿನಗಳ ನಂತರ ಇದನ್ನು ಸಂಗ್ರಹಿಸಲಾಗಿದೆ. ಆದ್ದರಿಂದ ಇದು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಅತ್ಯಾಚಾರ ಎಂದು ಸಾಬೀತಾಗಲು ಸಾಧ್ಯವಿಲ್ಲ.
ಇನ್ನೂ ಅಸಹ್ಯಕರವೆಂದರೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಹೇಳಿಕೆಯೊಂದನ್ನು ನೀಡಿ, ರಾಜ್ಯ ಸರಕಾರದ ಹೆಸರು ಕೆಡಿಸಲು ವಿವಿಧ ಸಂಘಟನೆಗಳ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದ 50 ಕೋಟಿ ರೂ. ಬಂದಿದೆ ಎಂದು ತಿಳಿಸಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಬಿಜೆಪಿ ನಾಯಕರು ಎಂತಹ ನೀಚತನಕ್ಕಿಳಿದಿದ್ದಾರೆಂದರೆ ಅಲ್ಲಿನ ಹಿರಿಯ ಬಿಜೆಪಿ ನಾಯಕ ರಂಜಿತ್ ಬಹಾದ್ದೂರ್ ಶ್ರೀ ವಾಸ್ತವ, ‘‘ಗದ್ದೆಯಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋದಾಗ ಆ ದಲಿತ ಯುವತಿಯ ಸಂಬಂಧಿಕರು ನೋಡಿ ಮರ್ಯಾದೆ ಮುಚ್ಚಿಕೊಳ್ಳಲು ಆಕೆಯನ್ನು ಕೊಂದು ಹಾಕಿದ್ದಾರೆ’’ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪಡೆಯ (Provincial Armed Constabulary) ಇತಿಹಾಸ ಅತ್ಯಂತ ಕರಾಳವಾಗಿದೆ. ಸಂಪೂರ್ಣ ಕೋಮುವಾದೀಕರಣಗೊಂಡಿರುವ ಈ ಪೊಲೀಸರು ಕ್ರೌರ್ಯಕ್ಕೆ ಹೆಸರಾದವರು. ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಶತ್ರುಗಳು. ಹಾಥರಸ್ ಪ್ರಕರಣದಲ್ಲೂ ಅತ್ಯಾಚಾರಿಗಳಿಂದ ಕ್ರೂರ ಹಲ್ಲೆಗೊಳಗಾಗಿದ್ದ ದಲಿತ ಯುವತಿಯನ್ನು ಸುಮಾರು ಏಳು ತಾಸುಗಳ ಕಾಲ ಠಾಣೆಯ ಹೊರಗೆ ಕೂರಿಸಿದ್ದಾರೆ. ಕಾನೂನಿನ ಪ್ರಕಾರ ಘಟನೆ ನಡೆದು ಗಂಟೆಗಳ ಒಳಗಾಗಿ ವಿರ್ಯಾಣು ಪತ್ತೆ ಪರೀಕ್ಷೆ ಮಾಡಬೇಕಿದ್ದರೂ ಅದನ್ನು ಮಾಡಲಿಲ್ಲ. ಆಕೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಡತಾಕುವಂತೆ ಮಾಡಿದ್ದಾರೆ. ಆ ಯುವತಿ ಬದುಕಿ ಉಳಿದರೆ ಘಟನೆಯ ಸಾಕ್ಷಿಯಾಗುತ್ತಾಳೆ ಎಂಬ ಕಾರಣಕ್ಕಾಗಿ ಸತ್ತು ಹೋಗಲಿ ಎಂದು ಇಂತಹ ಕುತಂತ್ರ ಮಾಡಿದ್ದಾರೆ.
ಅತ್ಯಾಚಾರ ಮಾಡಿ ಕೊಂದವರ ರಕ್ಷಣೆಗೆ ನಿಂತಿರುವ ನಿರ್ಲಜ್ಜ ಯೋಗಿ ಆದಿತ್ಯನಾಥ್ ಸರಕಾರದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಉತ್ತರ ಪ್ರದೇಶದ ಮಹಿಳಾ ಆಯೋಗಗಳು ಮೌನ ತಾಳಿವೆ. ಮುಖ್ಯಮಂತ್ರಿ ಪ್ರತಿಪಕ್ಷಗಳ ಮೇಲೆ ವಿಷ ಕಾರುತ್ತಿದ್ದಾರೆ.
ಹಾಥರಸ್‌ನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಯುವತಿ ಪರಿಶಿಷ್ಟ ವಾಲ್ಮೀಕಿ ಸಮಾಜಕ್ಕೆ ಸೇರಿದವಳು. ಕರ್ನಾಟಕದಂತಹ ರಾಜ್ಯದಲ್ಲಿ ಈ ಸಮಾಜದವರು ರಾಜಕೀಯವಾಗಿ ಪ್ರಬಲವಾಗಿದ್ದರೂ, ಇನ್ನೂ ಸಾಮಂತಶಾಹಿ ಪ್ರಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಉಳಿದ ಅಸ್ಪಶ್ಯ ದಲಿತ ಸಮುದಾಯದಂತೆ ಈ ಸಮುದಾಯವೂ ನಿತ್ಯವೂ ಭೂಮಾಲಕ ಠಾಕೂರ್ ಮುಂತಾದ ವರ್ಗಗಳ ದೌರ್ಜನ್ಯಕ್ಕೆ ಬಲಿಯಾಗುತ್ತಿದೆ.
ಕೊನೆಯದಾಗಿ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದ ಸಮಸ್ಯೆ ಅಂದರೆ ಭಾರತೀಯ ಸಮಾಜ ನಿಜವಾಗಿಯೂ ಜಾತ್ಯತೀತವಾಗಿದೆಯೇ? ಜಾತಿ ಎಲ್ಲಿದೆ? ಹೋಗಿದೆ ಎನ್ನುವ ಆಷಾಢಭೂತಿ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಹಾಥರಸ್ ದಲಿತ ಯುವತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಭಾರತೀಯರೆಲ್ಲರ ಪ್ರತಿಕ್ರಿಯೆ ಏಕ ರೂಪದ್ದಾಗಿರಲಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆ ಇದರ ಮೇಲೂ ತನ್ನ ಕರಾಳ ಛಾಯೆ ಬೀರಿದೆ.
ಸಂಸದ ಎಲ್.ಹನುಮಂತಯ್ಯನವರು ಹೇಳಿದಂತೆ ಸಾಮಾನ್ಯ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೂ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದರ ಅರ್ಥ ಅದು ಸಮರ್ಥನೀಯವೆಂದಲ್ಲ. ಯಾರ ಮೇಲೆ ಅತ್ಯಾಚಾರ ನಡೆದರೂ ಅದು ಖಂಡನೀಯವೇ ಆಗಿದೆ. ಆದರೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿ ದಕ್ಕಿಸಿಕೊಳ್ಳಬಹುದೆಂಬ ಸೊಕ್ಕು ಮೇಲ್ಜಾತಿ, ಮೇಲ್ವರ್ಗಗಳಲ್ಲಿದೆ. ಇದಕ್ಕೆ ಉತ್ತರ ಪ್ರದೇಶದ ಈ ಘಟನೆ ಪ್ರತ್ಯಕ್ಷ ಉದಾಹರಣೆಯಾಗಿದೆ. ಹಾಥರಸ್‌ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ದಲಿತ ಯುವತಿಯಾಗಿರದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಸಕಾಲದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದರು. ದೇಶವ್ಯಾಪಿ ಭಾರೀ ಪ್ರತಿಭಟನಾ ಸಭೆಗಳು, ಕ್ಯಾಂಡಲ್ ಲೈಟ್ ಪ್ರೊಟೆಸ್ಟ್‌ಗಳು ನಡೆಯುತ್ತಿದ್ದವು. ಈಗ ನಡೆದಿಲ್ಲವೆಂದಲ್ಲ. ಆದರೆ ನಿರ್ಭಯಾ ಪ್ರಕರಣದಲ್ಲಿ ನಡೆದಷ್ಟು ತೀವ್ರವಾಗಿ ನಡೆದಿಲ್ಲ ಎಂಬುದು ಕಹಿ ಮತ್ತು ಕಟು ಸತ್ಯ.