ಹಿಂದುತ್ವವಾದಿ ಪ್ರಭುತ್ವ ಮತ್ತು ಮೇರೆ ಮೀರಿದ ಮೇಲ್ಜಾತಿಗಳ ಅಟ್ಟಹಾಸ
ಮಾನ್ಯರೇ,
ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಬೂಲ್‌ಗರ್ಹಿ ಗ್ರಾಮದಲ್ಲಿ ಮೇಲ್ಜಾತಿಯ ಠಾಕೂರ್ ಸಮುದಾಯದ ಕೆಲವು ಯುವಕರು ಕೆಳಜಾತಿಯ ವಾಲ್ಮೀಕಿ ಸಮುದಾಯದ ಹೆಣ್ಣುಮಗಳೊಬ್ಬಳ ಮೇಲೆ ಘನಘೋರ ದೌರ್ಜನ್ಯ ಹಾಗೂ ಹಲ್ಲೆ ನಡೆಸಿ ಕೊಲೆ ಮಾಡಿದರೆನ್ನಲಾದ ಪ್ರಕರಣ ಮತ್ತು ತದನಂತರ ಅದು ಪಡೆದುಕೊಂಡ ಚಿತ್ರವಿಚಿತ್ರ ತಿರುವುಗಳನ್ನು ಕಂಡು ಸಮಾಧಿಯೊಳಗಿರುವ ಆ ವಾಲ್ಮೀಕಿ ಮಹರ್ಷಿಯೂ ಅತೀವ ಸಂಕಟದಿಂದ ಅಯ್ಯೋ ಎಂದು ನರಳುತ್ತಿರಬಹುದು. ಬಹುಶಃ ಶ್ರೀರಾಮ ಕೂಡಾ ತನ್ನದೇ ಕ್ಷತ್ರಿಯ ಕುಲದ ಲಜ್ಜೆಗೇಡಿ ಠಾಕೂರ್ ಯುವಕರ ಅಮಾನುಷ ಕೃತ್ಯಕ್ಕೆ ಅಸಹ್ಯಪಟ್ಟು ತಲೆತಗ್ಗಿಸುತ್ತಿರಬಹುದು. ಹಾಗೆ ನೋಡಿದರೆ ಲಿಂಗ, ಜಾತಿ ಮತ್ತು ಧರ್ಮಾಧರಿತ ತಾರತಮ್ಯ ನೀತಿಯನ್ನೇ ನಿತ್ಯ ಉಸಿರಾಡುವ ಭಾರತದ ಮೇಲ್ಜಾತಿಗಳು ಶತಶತಮಾನಗಳಿಂದಲೂ ದಲಿತ, ದಮನಿತ, ಮಹಿಳಾ ವರ್ಗಗಳ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ಅನಾಚಾರ, ದುರಾಚಾರ, ಅತ್ಯಾಚಾರಗಳ ಅಗಣಿತ ಸರಣಿಯಲ್ಲಿ ಹಾಥರಸ್ ಪ್ರಕರಣ ಇತ್ತೀಚಿನದು. ಕೇಂದ್ರದಲ್ಲಿ ಹಿಂದುತ್ವವಾದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಮೇಲ್ಜಾತಿಗಳ ಅಟ್ಟಹಾಸ ಮೇರೆ ಮೀರಿದೆ.
ಪ್ರಜಾಪ್ರಭುತ್ವದ ನೀತಿ, ನಿಯಮಗಳನ್ನೆಲ್ಲಾ ಗಾಳಿಗೆ ತೂರುವ ವಿಚಾರದಲ್ಲಿ ಕೇಂದ್ರವನ್ನೇ ಅನುಸರಿಸುತ್ತಿರುವ ಉತ್ತರ ಪ್ರದೇಶ ಸದ್ಯ ಇತರ ಭಾಜಪ ಸರಕಾರಗಳನ್ನೆಲ್ಲ ಹಿಂದಿಕ್ಕಿ ಮುಂಚೂಣಿ ಸ್ಥಾನದಲ್ಲಿದೆ. ಕೇಂದ್ರದ ನಿರಂಕುಶ ಕೇಸರಿ ಪ್ರಭುತ್ವವು ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ವ್ಯವಸ್ಥಿತ ಯೋಜನೆಯೊಂದನ್ನು 2014ರಿಂದಲೇ ಪ್ರಾರಂಭಿಸಿದ್ದು ಅದಕ್ಕೆ ಉದಾಹರಣೆಯಾಗಿ ಭೀಮಾ ಕೋರೆಗಾಂವ್, ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು, ದಿಲ್ಲಿ, ಬೆಂಗಳೂರು ಗಲಭೆಗಳು ಮತ್ತು ಇತ್ತೀಚಿನ ಹಾಥರಸ್ ಪ್ರಕರಣಗಳನ್ನು ಉಲ್ಲೇಖಿಸಬಹುದು. ಪ್ರಭುತ್ವದ ಜನವಿರೋಧಿ ನಡೆಗಳನ್ನು ಟೀಕಿಸುವವರ ವಿರುದ್ಧ ಯುಎಪಿಎ, ದೇಶದ್ರೋಹ ಮುಂತಾದ ಕಠಿಣ ಕಾಯ್ದೆಗಳನ್ನು ಹೊರಿಸಿ ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಅಲೆದಾಡಿಸುತ್ತಾ ವರ್ಷಾನುಗಟ್ಟಲೆ ಜೈಲುಗಳಲ್ಲೇ ಕೊಳೆಯುವ ಹಾಗೆ ಮಾಡಲಾಗುತ್ತಿದೆ. ಇನ್ನೊಂದೆಡೆ ದಲಿತ, ದಮನಿತ, ಮಹಿಳಾ ವರ್ಗಗಳನ್ನು ಹಂತಹಂತವಾಗಿ ದ್ವಿತೀಯ, ತೃತೀಯ ದರ್ಜೆಯ ಸ್ಥಾನಕ್ಕೆ ತಳ್ಳಲಾಗುತ್ತಿದೆ.
ಜನಪರ ಕೆಲಸ ಮಾಡುತ್ತಿರುವ ಸಾವಿರಾರು ಎನ್‌ಜಿಒಗಳ ಕೊರಳೊತ್ತಿ ಸಾಯಿಸಲಾಗಿದೆ. ಶೇ. 99ರಷ್ಟು ಮಾಧ್ಯಮಗಳು ಒಂದೋ ಸರಕಾರಕ್ಕೆ ಆಪ್ತರಾದ ಬಂಡವಾಳಿಗರ ಕಪಿಮುಷ್ಟಿಯಲ್ಲಿವೆ, ಇಲ್ಲಾ ಪ್ರಭುತ್ವದೆದುರು ತೆವಳುತ್ತಲಿವೆ. ದೇಶದ ಪ್ರಜಾತಾಂತ್ರಿಕ ಸಂಸ್ಥೆಗಳನ್ನೆಲ್ಲಾ ಕೈಗೊಂಬೆಗಳನ್ನಾಗಿ ಪರಿವರ್ತಿಸಲಾಗಿದೆ. ನ್ಯಾಯಾಂಗವೂ ಪ್ರಭುತ್ವದ ಕಡೆಗೇ ವಾಲಿದೆ. ನಿಜ ಹೇಳಬೇಕೆಂದರೆ ಭಾರತೀಯರನ್ನು ಇಂದು ಎರಡು ಬಗೆಯ ಹೆಮ್ಮಾರಿಗಳು ಕಾಡುತ್ತಿವೆ. ಒಂದು, ಕೊರೋನ ವೈರಸ್, ಇನ್ನೊಂದು ಹಿಂದುತ್ವ ವೈರಸ್. ಇದುವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿರುವ ಕೊರೋನ ವೈರಸ್‌ಗೆ ಮದ್ದು ಹೆಚ್ಚೆಂದರೆ ಇನ್ನೊಂದೆರಡು ವರ್ಷಗಳೊಳಗಾಗಿ ಲಭ್ಯವಾಗಲಿದೆ. ಆದರೆ ಜರ್ಮನಿ, ಇಟಲಿಗಳಲ್ಲಿ ಮಿಲಿಯಗಟ್ಟಲೆ ಹೆಣಗಳನ್ನುರುಳಿಸಿದ ಫ್ಯಾಶಿಸಂ ಹೆಮ್ಮಾರಿಯನ್ನು ಭಾರತಕ್ಕೆ ಆಮದು ಮಾಡಿಕೊಂಡು ಅದಕ್ಕೆ ಹಿಂದುತ್ವ ಎಂಬ ಹೆಸರಿಟ್ಟು ಅದನ್ನು ತಮ್ಮ ರಾಜಕೀಯ ಸಿದ್ಧಾಂತವಾಗಿಸಿರುವ ಭಾರತೀಯ ಮೇಲ್ಜಾತಿಗಳ ಈ ಹಿಂದುತ್ವ ಹೆಮ್ಮಾರಿಯನ್ನು ಮಟ್ಟಹಾಕಲು ಅದೆಷ್ಟು ಕಾಲ ಬೇಕೋ, ಅದೆಷ್ಟು ಭಾರತೀಯರ ಬಲಿದಾನ ಬೇಕೋ ಗೊತ್ತಿಲ್ಲ.