ಇದನ್ನು ಓದಿದರೆ ನೀವೆಂದೂ ಕಿತ್ತಳೆ ಹಣ್ಣಿನ ಬೀಜಗಳನ್ನು ಎಸೆಯುವುದಿಲ್ಲ
ಕಿತ್ತಳೆ ಹಣ್ಣನ್ನು ಹೆಚ್ಚುಕಡಿಮೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹೆಚ್ಚಿನವರು ಹಣ್ಣನ್ನು ತಿಂದ ಬಳಿಕ ಬೀಜಗಳನ್ನು ಎಸೆಯುತ್ತಾರೆ. ನಿಮಗೆ ಗೊತ್ತಿಲ್ಲದಿರಬಹುದು,ಕಿತ್ತಳೆ ಬೀಜಗಳು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ. ಅವು ಹಣ್ಣಿನಷ್ಟೇ ಪೌಷ್ಟಿಕವಾಗಿವೆ. ಅವು ಜಗಿಯಲು ಗಟ್ಟಿಯಾಗಿರಬಹುದು ಮತ್ತು ಕಹಿರುಚಿಯನ್ನು ಹೊಂದಿರಬಹುದು,ಆದರೆ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿವೆ. ಅವು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ......
* ಉತ್ಕರ್ಷಣ ನಿರೋಧಕಗಳ ಆಗರ
ಕಿತ್ತಳೆ ಹಣ್ಣಿನಂತೆ ಅದರ ಬೀಜಗಳೂ ಪ್ರಬಲ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿವೆ ಮತ್ತು ಇವು ಶರೀರದಲ್ಲಿ ನಿರ್ಜಲೀಕರಣವನ್ನು ತಡೆಯುತ್ತವೆ ಮತ್ತು ನಮ್ಮನ್ನು ತಾಜಾ ಆಗಿರಿಸುತ್ತವೆ. ಇಷ್ಟೇ ಅಲ್ಲ,ಅವು ನಮ್ಮ ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತವೆ. ಬೆಳಗ್ಗಿನ ಹೊತ್ತು ಉತ್ಕರ್ಷಣ ನಿರೋಧಕಗಳ ಸೇವನೆಯು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ ಫ್ರೀರ್ಯಾಡಿಕಲ್‌ಗಳಿಂದ ಜೀವಕೋಶಗಳಿಗೆ ಹಾನಿಯ ವಿರುದ್ಧ ಹೋರಾಡಲು ನೆರವಾಗುವ ಮೂಲಕ ಶರೀರವನ್ನು ಆರೋಗ್ಯಯುತವಾಗಿರಿಸುತ್ತದೆ. ಮುಂದಿನ ಸಲ ನೀವು ಕಿತ್ತಳೆ ಹಣ್ಣಿನ ರಸವನ್ನು ತಯಾರಿಸುವಾಗ ಬೀಜಗಳನ್ನೂ ಸೇರಿಸಲು ಮರೆಯಬೇಡಿ.
* ಸಾರಭೂತ ತೈಲ
ಕಿತ್ತಳೆ ಬೀಜಗಳಿಂದ ತೆಗೆಯಲಾದ ಸಾರಭೂತ ತೈಲವು ಕುಡಿಯವ ನೀರು,ಕೇಕ್ ಮತ್ತು ಇತರ ಆಹಾರಗಳಿಗೆ ವಿಶೇಷ ಸ್ವಾದವನ್ನು ನಿಡುತ್ತದೆ. ಅದನ್ನು ಕೆಲವೊಮ್ಮೆ ಡಿಫ್ಯೂಸರ್‌ಗಳಿಗೆ ಪರಿಮಳವನ್ನು ನೀಡಲು ಬಳಸಲಾಗುತ್ತದೆ. ಈ ತೈಲವನ್ನು ಮಹಿಳೆಯರ ವ್ಯಾನಿಟಿ ಬ್ಯಾಗ್‌ಗೆ ಲೇಪಿಸಿದರೆ ಆಹ್ಲಾದಕರ ಪರಿಮಳವನ್ನು ಬೀರುತ್ತಿರುತ್ತದೆ. ಮನೆಯಲ್ಲಿ ದುರ್ವಾಸನೆ ಬೀರುತ್ತಿದ್ದರೆ ಈ ತೈಲವನ್ನು ಬಳಸಿ ಅದನ್ನು ನಿವಾರಿಸಬಹುದು.
* ಶಕ್ತಿಯನ್ನು ಹೆಚ್ಚಿಸುತ್ತದೆ
ಕೆಲವೊಮ್ಮೆ ನಮಗೆ ಯಾವುದೇ ಕಾರಣವಿಲ್ಲದೆ ಸುಸ್ತು ಅನ್ನಿಸುತ್ತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕಿತ್ತಳೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಿತ್ತಳೆ ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ಶರೀರದಲ್ಲಿ ಶಕ್ತಿಯ ಮಟ್ಟವು ಹೆಚ್ಚುತ್ತದೆ. ಕಿತ್ತಳೆಯ ಸಿಪ್ಪೆಯ ಕಷಾಯವನ್ನೂ ಸೇವಿಸಬಹುದು. ಬೀಜಗಳಲ್ಲಿರುವ ಪಾಮಿಟಿಕ್,ಓಲಿಕ್ ಮತ್ತು ಲಿನೋಲಿಕ್ ಆಮ್ಲಗಳು ದೀರ್ಘಾವಧಿಗೆ ಜೀವಕೋಶಗಳಲ್ಲಿ ಶಕ್ತಿಯನ್ನು ದಾಸ್ತಾನಿರಿಸಲು ನೆರವಾಗುತ್ತವೆ.
* ತಲೆಗೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ
ಕಿತ್ತಳೆ ಹಣ್ಣಿನ ಬೀಜಗಳಿಂದ ತೆಗೆಯಲಾದ ಸಾರಭೂತ ತೈಲವನ್ನು ತಲೆಗೂದಲು ಆರೈಕೆಯ ಉತ್ಪನ್ನಗಳಲ್ಲಿ ಕಂಡಿಷನರ್ ಆಗಿ ಬಳಸಲಾಗುತ್ತದೆ. ಬೀಜಗಳಲ್ಲಿರುವ ವಿಟಾಮಿನ್ ಸಿ ಮತ್ತು ಬಯೊ ಫ್ಲಾವನಾಯ್ಡಾಗಳು ನೆತ್ತಿಗೆ ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತವೆ ಮತ್ತು ಕೂದಲನ್ನು ಆರೋಗ್ಯಯುತ ಮತ್ತು ಗಟ್ಟಿಯಾಗಿಸುತ್ತವೆ. ಬೀಜಗಳಲ್ಲಿರುವ ಫಾಲಿಕ ಆ್ಯಸಿಡ್ ಕೂಡ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಬುಡವನ್ನು ಗಟ್ಟಿಗೊಳಿಸುತ್ತದೆ.
ಶರೀರಕ್ಕೆ ಆರೋಗ್ಯ ಲಾಭಗಳನ್ನು ನೀಡುವ ಜೊತೆಗೆ ಕಿತ್ತಳೆ ಬೀಜಗಳು ಅತ್ಯುತ್ತಮ ಕ್ಲೀನಿಂಗ್ ಏಜಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತವೆ. ಈ ಬೀಜಗಳ ಸಾರಭೂತ ತೈಲವನ್ನು ಯಂತ್ರಗಳು,ಲೋಹಗಳು ಮತ್ತು ಇತರ ವಸ್ತುಗಳನ್ನು ಸ್ವಚ್ಛ ಮಾಡಲು ಬಳಸಲಾಗುತ್ತದೆ. ಇದರಿಂದ ಪರಿಸರದಲ್ಲಿ ಆಹ್ಲಾದಕರ ಪರಿಮಳ ತುಂಬಿಕೊಂಡಿರುತ್ತದೆ.