ಮೊಡವೆಗಳು ನಿಮ್ಮ ಆರೋಗ್ಯದ ಬಗ್ಗೆಯೂ ಹೇಳುತ್ತವೆ
ಮೊಡವೆಗಳು ಏಳುವುದು ಅತ್ಯಂತ ಸಾಮಾನ್ಯವಾಗಿದೆ ಮತ್ತು ಹೆಚ್ಚುಕಡಿಮೆ ಪ್ರತಿಯೊಬ್ಬರೂ ಈ ಕಿರಿಕಿರಿಯನ್ನು ಅನುಭವಿಸಿರುತ್ತಾರೆ. ಮೊಡವೆ ನಿಮ್ಮ ಚರ್ಮದಲ್ಲಿ ಕೆರಳುವಿಕೆ ಮತ್ತು ತುರಿಕೆಗೆ ಕಾರಣವಾಗುವ ಮೂಲಕ ಕೆಲವೊಮ್ಮೆ ಹತಾಶರನ್ನಾಗಿಸುತ್ತದೆ. ನಿಮ್ಮ ಮೊಡವೆ ನಿಮಗೇನು ಹೇಳುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ? ಪ್ರತಿಯೊಂದೂ ಕ್ರಿಯೆಗೂ ಒಂದು ಪ್ರತಿಕ್ರಿಯೆಯಿದೆ. ಮೊಡವೆಗಳು ಹೆಚ್ಚಾಗಿ ಚರ್ಮದಲ್ಲಿಯ ತೈಲಗ್ರಂಥಿಗಳು ಕ್ರಿಯಾಶೀಲಗೊಂಡಾಗ ಹುಟ್ಟಿಕೊಳ್ಳುತ್ತವೆ,ಆದರೆ ಅವುಗಳಿಗೆ ಇತರ ಕಾರಣಗಳೂ ಇವೆ. ವಿಜ್ಞಾನವು ಹೇಳುವಂತೆ ನಿಮ್ಮ ಹಣೆ,ಕೆನ್ನೆಗಳು,ಗದ್ದ ಇತ್ಯಾದಿ ಕಡೆಗಳಲ್ಲಿ ಏಳುವ ಮೊಡವೆಗಳಿಗೆ ನಿಮ್ಮ ಶರೀರದಲ್ಲಿಯ,ಚಿಕಿತ್ಸೆ ಅಗತ್ಯವಾಗಿರುವ ಆರೋಗ್ಯ ಸಮಸ್ಯೆ ಕಾರಣವಾಗಿರುತ್ತದೆ. ಮೊಡವೆಯೇಳುವ ಜಾಗವು ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುತ್ತದೆ.
► ಟಿ-ರೆನ್
ನಿಮ್ಮ ಹುಬ್ಬುಗಳಿಂದ ಮೂಗು ಮತ್ತು ಗದ್ದದವರೆಗಿನ ಮುಖದ ಭಾಗವನ್ನು ಟಿ-ರೆನ್ ಎಂದು ಕರೆಯಲಾಗುತ್ತದೆ. ಈ ಜಾಗದಲ್ಲಿ ಮೊಡವೆಯುಂಟಾದರೆ ಅದಕ್ಕೆ ಹೆಚ್ಚಾಗಿ ಜಠರಗರುಳು ಅಸಮತೋಲನ ಅಥವಾ ಆಹಾರ ಅಲರ್ಜಿಗಳು ಕಾರಣವಾಗಿರುತ್ತವೆ. ಮೂಗಿನ ಮೇಲೆ ಕಾಣಿಸಿಕೊಳ್ಳುವ ಮೊಡವೆಗೆ ಹೆಚ್ಚಿನ ಪ್ರಕರಣಗಳಲ್ಲಿ ಯಕೃತ್ತು ಮತ್ತು ಮೂತ್ರಪಿಂಡ ಕಾರಣವಾಗಿರುತ್ತವೆ. ಈ ಮೊಡವೆ ಅಧಿಕ ರಕ್ತದೊತ್ತಡ ಅಥವಾ ಯಕೃತ್ತು ದೋಷವನ್ನು ಸೂಚಿಸುತ್ತದೆ. ಜಠರಗರುಳು ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಜೊತೆಗೆ ಆಹಾರ ಅಲರ್ಜಿಕಾರಕಗಳ ಬಗ್ಗೆ ಗಮನ ವಹಿಸಬೇಕಾಗುತ್ತದೆ. ಮೂತ್ರಪಿಂಡ ಮತ್ತು ಯಕೃತ್ತು ಶುದ್ಧೀಕರಣ ಸಹ ಈ ಜಾಗದಲ್ಲಿ ಮೊಡವೆಗಳು ಏಳುವುದನ್ನು ತಡೆಯಲು ನೆರವಾಗುತ್ತದೆ.
► ಹಣೆ
ಒತ್ತಡ ಮತ್ತು ಜೀರ್ಣಾಂಗ ದೋಷ ಹಣೆಯಲ್ಲಿ ಮೊಡವೆಗಳು ಏಳಲು ಪ್ರಮುಖ ಕಾರಣಗಳಾಗಿವೆ. ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ ಮತ್ತು ಬಹಳಷ್ಟು ಉದ್ವಿಗ್ನತೆಗೆ ಒಳಗಾಗಿದ್ದರೆ ಹಣೆಯಲ್ಲಿ ಮೊಡವೆ ಮೂಡುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ದಿನಕ್ಕೆ ಕನಿಷ್ಠ ಏಳು ಗಂಟೆಗಳ ಕಾಲ ಒಳ್ಳೆಯ ನಿದ್ರೆ ಮಾಡಬೇಕು, ಜೊತೆಗೆ ಸಾಕಷ್ಟು ನೀರು ಕುಡಿಯಬೇಕು ಮತ್ತು ಸಮತೋಲಿತ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ನಿಮ್ಮ ತಲೆಗೂದಲು ಅಥವಾ ಹ್ಯಾಟ್ ಹಣೆಯ ಮೇಲೆ ಬೀಳುವುದನ್ನು ನಿವಾರಿಸಿ.
► ಕೆನ್ನೆಗಳು
ಕೆನ್ನೆಗಳು ಮುಖದಲ್ಲಿಯ ಅತ್ಯಂತ ಸೂಕ್ಷ್ಮ ಭಾಗಗಳಾಗಿವೆ.ಕೆನ್ನೆಗಳು ಮತ್ತು ಗದ್ದದ ಮೇಲೆ ಮೊಡವೆಯೆದ್ದರೆ ಅದಕ್ಕೆ ಅನುಕ್ರಮವಾಗಿ ಉಸಿರಾಟ ವ್ಯವಸ್ಥೆ ಮತ್ತು ಹಲ್ಲುಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳದಿರುವುದು ಕಾರಣವಾಗಿರುತ್ತದೆ. ಈ ಕಿರಿಕಿರಿಯಿಂದ ಪಾರಾಗಲು ನಿಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಶರೀರದ ನೈರ್ಮಲ್ಯವನ್ನು ಕಾಯ್ದುಕೊಳ್ಳಿ.
► ಗದ್ದ
ಸಾಮಾನ್ಯವಾಗಿ ಹಾರ್ಮೋನ್ ಅಸಮತೋಲನವು ಗದ್ದದಲ್ಲಿ ಮೊಡವೆಯೇಳಲು ಕಾರಣವಾಗುತ್ತದೆ. ಹಾರ್ಮೋನ್ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.
► ತೋಳುಗಳು, ತೊಡೆಗಳು ಮತ್ತು ಬೆನ್ನು
ತೋಳುಗಳು,ತೊಡೆಗಳು ಮತ್ತು ಬೆನ್ನಿನ ಮೇಲೆ ಮೊಡವೆಗಳು ಏಳಲು ಕೆಲವು ಹಾರ್ಮೋನ್ ಬದಲಾವಣೆಗಳು ಮತ್ತು ಕೆಲವು ಆನುವಂಶಿಕ ಸಮಸ್ಯೆಗಳೂ ಕಾರಣವಾಗುತ್ತವೆ. ಕೆಲವು ವಿಧಗಳ ಬಟ್ಟೆ ಅಥವಾ ಬಾಡಿ ಲೋಷನ್ ಬಳಕೆಯಿಂದಲೂ ಮೊಡವೆಗಳು ಏಳಬಹುದು.