ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದೀರಾ? ಐಸ್ ಥೆರಪಿ ನಿಮ್ಮನ್ನು ಫ್ಯಾಟ್‌ನಿಂದ ಫಿಟ್ ಆಗಿಸುತ್ತದೆ
ಶರೀರದ ತೂಕವನ್ನು ಇಳಿಸಿಕೊಳ್ಳಲು ಹಲವಾರು ಆಹಾರಕ್ರಮಗಳಿವೆ. ಈ ಪೈಕಿ ಕೆಲವು ನಿಜಕ್ಕೂ ತೂಕವನ್ನು ಇಳಿಸುತ್ತವೆಯಾದರೆ ಇತರ ಹೆಚ್ಚಿನವುಗಳಿಂದ ಚೂರೂ ಲಾಭವಿಲ್ಲ. ನಿಮ್ಮ ಶರೀರದ ವಿವಿಧ ಭಾಗಗಳಲ್ಲಿ ಸಾಕಷ್ಟು ಕೊಬ್ಬು ಸೇರಿಕೊಂಡಿದ್ದರೆ ತೂಕವನ್ನು ಇಳಿಸಿಕೊಳ್ಳುವುದು ಕಠಿಣವಾಗುತ್ತದೆ. ತ್ವರಿತ ಮತ್ತು ಸುಲಭದ ಗಳಿಕೆಯಿದ್ದರೆ ಅದು ದೇಹತೂಕ ಏರಿಕೆ ಮಾತ್ರ. ಅಂದ ಹಾಗೆ ತೂಕವನ್ನು ಇಳಿಸಿಕೊಳ್ಳಲು ಮಂಜುಗಡ್ಡೆಯನ್ನು ಬಳಸಬಹುದು ಎನ್ನುವುದು ನಿಮಗೆ ಗೊತ್ತೇ? ಹೌದು, ಐಸ್ ಥೆರಪಿ ಅಥವಾ ಮಂಜುಗಡ್ಡೆ ಚಿಕಿತ್ಸೆಯು ಶರೀರದಲ್ಲಿಯ ಹೆಚ್ಚುವರಿ ಕೊಬ್ಬನ್ನು ಕರಗಿಸುವ ಮೂಲಕ ತೂಕ ಇಳಿಕೆಯ ಗುರಿಯನ್ನು ಸಾಧಿಸಲು ನೆರವಾಗುತ್ತದೆ.
ಏನಿದು ಐಸ್ ಥೆರಪಿ ಮತ್ತು ಅದು ತೂಕವನ್ನು ಹೇಗೆ ತಗ್ಗಿಸುತ್ತದೆ?
ಯಾವುದೇ ಕಟ್ಟುನಿಟ್ಟಿನ ಆಹಾರ ನಿರ್ಬಂಧಗಳಿಲ್ಲದೆ,ಕಠಿಣ ವ್ಯಾಯಾಮ ಮಾಡದೆ ಮತ್ತು ತೂಕ ಇಳಿಸುವ ಯಾವುದೇ ಔಷಧಿಯನ್ನು ಸೇವಿಸದೆ ನೀವು ಐಸ್ ಥೆರಪಿಯಿಂದ ಶರೀರದಲ್ಲಿಯ ಹೆಚ್ಚುವರಿ ಕೊಬ್ಬಿನಿಂದ ಮುಕ್ತಿ ಪಡೆಯಬಹುದು. ಈ ಚಿಕಿತ್ಸೆಯಲ್ಲಿ ಮಂಜುಗಡ್ಡೆಯಿಂದ ಉಜ್ಜಿಕೊಳ್ಳುವ ಮೂಲಕ ನಿಮ್ಮ ಶರೀರದ ಕೆಲವು ಭಾಗಗಳಲ್ಲಿ ದಾಸ್ತಾನಾಗಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಸುಟ್ಟಗಾಯಗಳು,ರಕ್ತಸ್ರಾವ ಮತ್ತು ಗಾಯಗಳ ಚಿಕಿತ್ಸೆಗಾಗಿ ಮಂಜುಗಡ್ಡೆ ಈಗಾಗಲೇ ಬಳಕೆಯಾಗುತ್ತಿದೆ,ಆದರೆ ಇಂದು ವಿಶ್ವದ ಹಲವಾರು ದೇಶಗಳಲ್ಲಿ ತೂಕ ಇಳಿಕೆಗಾಗಿ ಮಂಜುಗಡ್ಡೆ ಚಿಕಿತ್ಸೆಯು ಜನಪ್ರಿಯಗೊಳ್ಳುತ್ತಿದೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ನೀವು ಕಾತುರರಾಗಿದ್ದರೆ ಐಸ್ ಥೆರಪಿಯನ್ನು ಪ್ರಯತ್ನಿಸಲೇಬೇಕು. ಜೊತೆಗೆ ತೂಕ ಇಳಿಕೆಗಾಗಿ ಕೋಲ್ಡ್ ಹಾಟ್ ವೆಟ್ ಬ್ಯಾಂಡೇಜ್‌ನ್ನೂ ನೀವು ಪ್ರಯತ್ನಿಸಬಹುದು.
ಮಾನವ ಶರೀರದ ವಿವಿಧ ಭಾಗಗಳನ್ನು ಮಂಜುಗಡ್ಡೆಯಿಂದ ಉಜ್ಜುವುದರಿಂದ ಅವುಗಳಲ್ಲಿ ಸಂಗ್ರಹವಾಗಿರುವ ಕೊಬ್ಬು ಕ್ರಮೇಣ ಕಡಿಮೆಯಾಗುತ್ತದೆ ಎನ್ನುವುದನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಮಂಜುಗಡ್ಡೆಯು ಚರ್ಮದ ಅಂಗಾಂಶಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಇದು ಕೊಬ್ಬನ್ನು ನಿಧಾನವಾಗಿ ಕರಗಿಸುತ್ತದೆ ಹಾಗೂ ಫಿಟ್ ಆಗಿರಬೇಕೆಂಬ ಕನಸನ್ನು ನನಸಾಗಿಸಲು ನೆರವಾಗುತ್ತದೆ. ತಮ್ಮ ಸ್ಟ್ರೆಚ್ ಮಾರ್ಕ್‌ಗಳನ್ನು ಹೋಗಲಾಡಿಸಲು ಮಂಜುಗಡ್ಡೆಯಿಂದ ಉಜ್ಜಿಕೊಳ್ಳುವಂತೆ ವೈದ್ಯರು ಮಹಿಳೆಯರಿಗೆ ಸೂಚಿಸುತ್ತಾರೆ. ಐಸ್ ಥೆರಪಿಯು ಚರ್ಮದ ಅಂಗಾಂಶಗಳನ್ನು ಕುಗ್ಗಿಸುವ ಮೂಲಕ ಸ್ಟ್ರೆಚ್ ಮಾರ್ಕ್‌ಗಳ ಗೋಚರತೆಯನ್ನು ಕಡಿಮೆ ಮಾಡುತ್ತವೆ.
ಐಸ್ ಥೆರಪಿ ಹೇಗೆ ಲಾಭದಾಯಕ?
ಅತಿಯಾದ ಕೊಬ್ಬು ಸಂಗ್ರಹದಿಂದ ಚರ್ಮವು ಜೋಲಾಡುತ್ತಿರುವ ಕೈಕಾಲುಗಳು,ತೊಡೆ ಮತ್ತು ಹೊಟ್ಟೆಯಂತಹ ಶರೀರದ ಭಾಗಗಳಲ್ಲಿ ಐಸ್ ಥೆರಪಿಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮಂಜುಗಡ್ಡೆಯ ನಿರಂತರ ಒತ್ತಡವು ಚರ್ಮವು ನಿಧಾನವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ,ಮಂಜುಗಡ್ಡೆಯು ಚರ್ಮದಲ್ಲಿಯ ವಿಷವಸ್ತುಗಳನ್ನು ನಿವಾರಿಸುವ ಮೂಲಕ ಸೆಲ್ಯುಲೈಟ್‌ನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ದಿನಗಳ ಬಳಕೆಯ ಬಳಿಕ ಕೊಬ್ಬು ಕಡಿಮೆಯಾಗುತ್ತದೆ. ತೂಕವನ್ನು ಇಳಿಸಿಕೊಳ್ಳಲು ಕೀಟೊ ಡಯಟ್‌ನಂತಹ ಆಹಾರಕ್ರಮಗಳನ್ನು ಅನುಸರಿಸಬೇಡಿ, ಏಕೆಂದರೆ ಅವು ಅಪಾಯಕಾರಿಯಾಗಿವೆ.
ಐಸ್ ಥೆರಪಿಯ ಜೊತೆಗೆ ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸುವುದರಿಂದ ಮತ್ತು ನಿಯಮಿತ ವ್ಯಾಯಾಮವನ್ನು ಮಾಡುವುದರಿಂದ ಅಧಿಕ ಫಲಗಳನ್ನು ಪಡೆಯಲು ಸಾಧ್ಯವಿದೆ. ತೂಕ ಇಳಿಕೆಗಾಗಿ ಶರೀರದಲ್ಲಿ ಅಧಿಕ ಕೊಬ್ಬು ಸಂಗ್ರಹಗೊಳ್ಳುವುದನ್ನು ತಡೆಯಲು ಆಹಾರ ಕ್ರಮ ಮತ್ತು ವ್ಯಾಯಾಮದ ಕಡೆಗೆ ಕೊಂಚ ಗಮನವನ್ನು ನೀಡಬೇಕಾಗುತ್ತದೆ. ಪ್ರತಿದಿನ 30-40 ನಿಮಿಷಗಳ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆಯಿಂದ ಎರಡು ವಾರಗಳಲ್ಲಿ ಎರಡರಿಂದ ಮೂರು ಕೆ.ಜಿ.ತೂಕವನ್ನು ಇಳಿಸಿಕೊಳ್ಳಬಹುದು.
ಇವು ನೆನಪಿರಲಿ
ಮಂಜುಗಡ್ಡೆಯನ್ನು ಚರ್ಮದ ಮೇಲೆ ನೇರವಾಗಿ ಉಜ್ಜಬಾರದು. ಕೆಲವು ಮಂಜುಗಡ್ಡೆಯ ತುಣುಕುಗಳನ್ನು ಟವೆಲ್ ಅಥವಾ ಬಟ್ಟೆಯಲ್ಲಿ ಸುತ್ತಿ ಅದರಿಂದ ಶರೀರವನ್ನು ಉಜ್ಜಿಕೊಳ್ಳಿ. ಐಸ್ ಪ್ಯಾಕ್‌ಗಳನ್ನೂ ಬಳಸಬಹುದು. ನಿಮ್ಮ ಶರೀರದಲ್ಲಿ ಕೊಬ್ಬು ಇಳಿಬಿದ್ದಿರುವ ಭಾಗಗಳಿಗೆ ಈ ಚಿಕಿತ್ಸೆ ನೀಡಿ.
ಹಲವಾರು ಸಮಸ್ಯೆಗಳಿಂದ ಪಾರಾಗಲು ಐಸ್ ಥೆರಪಿಯನ್ನು ಬಳಸಲಾಗುತ್ತದೆ,ಆದರೆ ತೂಕ ಇಳಿಕೆಗೆ ಅದರ ಬಳಕೆ ಹೊಸದಾಗಿದೆ. ನೀವು ಯಾವುದೇ ಅನಾರೋಗ್ಯವನ್ನು ಹೊಂದಿದ್ದರೆ ಐಸ್ ಥೆರಪಿಗೆ ಮುನ್ನ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಮುಖ್ಯವಾಗಿದೆ.