ಪ್ರತಿಭಟನೆ ಎಂಬುದು ಜನತಂತ್ರದ ಜೀವಸತ್ವ
ಜನರು ಸುಮ್ಮನೆ ಪ್ರತಿಭಟನೆ ನಡೆಸುವುದಿಲ್ಲ. ಅವರ ಬದುಕು ಅಸಹನೀಯಗೊಂಡಾಗ, ಸಮಸ್ಯೆಗಳು ಉಲ್ಬಣಿಸಿದಾಗ, ಮನವಿ ಪತ್ರ, ಅಹವಾಲುಗಳಿಗೆ ಆಡಳಿತ ಸ್ಪಂದಿಸದೆ ಜಾಣ ಕುರುಡು ನೀತಿಯನ್ನು ಅನುಸರಿಸಿದಾಗ ಅನಿವಾರ್ಯವಾಗಿ ಜನ ಬೀದಿಗೆ ಬರುತ್ತಾರೆ. ಹಾಗೆ ಬೀದಿಗೆ ಬಂದ ಜನರನ್ನು ಸರಕಾರ ಸಹಾನುಭೂತಿಯಿಂದ ಕಂಡು ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸಿದರೆ ಪ್ರತಿಭಟನೆ ಅಲ್ಲಿಗೆ ನಿಲ್ಲುತ್ತದೆ. ಉದಾಹರಣೆಗೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅನಾವಶ್ಯಕವಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗದಿದ್ದರೆ ಅದರ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಜನಸಾಮಾನ್ಯರು ತಿಂಗಳುಗಳ ಕಾಲ ಶಾಂತಿಯುತ ಧರಣಿ, ಸತ್ಯಾಗ್ರಹ ನಡೆಸುವ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಪ್ರಜೆಗಳನ್ನು ರಕ್ಷಿಸಬೇಕಾದ ಪ್ರಭುತ್ವವೇ ಮೇಲೆರಗಿ ಬಂದಾಗ ಬದುಕುವ ಹಕ್ಕಿಗಾಗಿ ಬೀದಿಗೆ ಬಂದು ಪ್ರತಿಭಟಿಸುವುದು ಜನರಿಗೆ ಅನಿವಾರ್ಯವಾಗುತ್ತದೆ.
ಪ್ರ ಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಯಾವುದೇ ದೇಶದಲ್ಲಿ ಜನತೆಯ ಪ್ರತಿರೋಧ, ಪ್ರತಿಭಟನೆಗಳು ಸಹಜ. ಇಂತಹ ಜೀವಂತಿಕೆಯಿಂದಲೇ ಅಲ್ಲಿನ ಜನತಂತ್ರ ಸುರಕ್ಷಿತವಾಗಿರುತ್ತದೆ. ಅದೇ ರೀತಿ ಭಿನ್ನಮತ, ಭಿನ್ನಾಭಿಪ್ರಾಯಗಳೂ ಸಾಮಾನ್ಯ. ಅವುಗಳಿಗೆ ಅವಕಾಶ ನೀಡದ ಯಾವುದೇ ದೇಶ ತನ್ನನ್ನು ತಾನು ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಳ್ಳುವ ಅರ್ಹತೆಯನ್ನು ಕಳೆದುಕೊಳ್ಳುತ್ತದೆ.
ಭಾರತದಲ್ಲೂ ಸ್ವಾತಂತ್ರ್ಯ ಬರುವ ಮುಂಚಿನಿಂದಲೂ ಜನಹೋರಾಟಗಳು ನಡೆಯುತ್ತ ಬಂದಿವೆ.ಸ್ವರಾಜ್ಯಕ್ಕಾಗಿ ಮಹಾತ್ಮಾ ಗಾಂಧೀಜಿ ನಡೆಸಿದ ದೇಶ ವ್ಯಾಪಿ ಸತ್ಯಾಗ್ರಹಗಳು, ಚೌದಾರ ಕೆರೆಯ ನೀರಿಗಾಗಿ ಬಾಬಾಸಾಹೇಬರು ನಡೆಸಿದ ಸಂಘರ್ಷ, ಸ್ವಾತಂತ್ರ್ಯ ಮಾತ್ರವಲ್ಲ ಸಮಾನತೆಗಾಗಿ ಎಡಪಂಥೀಯರು ನಡೆಸಿದ ಹೋರಾಟಗಳು ಚರಿತ್ರೆಯಲ್ಲಿ ದಾಖಲಾಗಿವೆ. ಸ್ವಾತಂತ್ರಾ ನಂತರವೂ ಚಳವಳಿಗಳೇ ಈ ಭಾರತದ ಜನತಂತ್ರದ ಆರೋಗ್ಯವನ್ನು ಕಾಪಾಡಿವೆ.
ಆದರೆ ದೇಶದ ಇಂದಿನ ಪ್ರಭುತ್ವಕ್ಕೆ ಪ್ರತಿಭಟನೆ ಎಂಬುದು ಅಪಥ್ಯವಾಗಿದೆ. ಜನರ ಬಾಯಿ ಮುಚ್ಚಿಸಲು ಮಾಡಬಾರದ್ದನ್ನೆಲ್ಲ ಮಾಡುತ್ತಿದೆ. ಜನಪರ ಹೋರಾಟಗಾರರನ್ನು ಒಬ್ಬೊಬ್ಬರನ್ನಾಗಿ ಜೈಲಿಗೆ ತಳ್ಳುತ್ತಿದೆ. ಅದರಲ್ಲೂ ತನ್ನ ಹಿಡಿತಕ್ಕೆ ಸಂಪೂರ್ಣವಾಗಿ ಸಿಗದ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳ ಲೂಟಿಗೆ ಅವಕಾಶ ನೀಡದ ಛತ್ತೀಸ್‌ಗಡ, ಜಾರ್ಖಂಡ್ ಮುಂತಾದ ಆದಿವಾಸಿ ಪ್ರದೇಶಗಳಲ್ಲಿ ಜನಪರ ಧ್ವನಿಗಳನ್ನು ಹತ್ತಿಕ್ಕಲು ಅವ್ಯಾಹತ ಯತ್ನ ನಡೆದಿದೆ.
ಇತ್ತೀಚೆಗೆ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಮಾನವ ಹಕ್ಕುಗಳ ಪರ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಲಾಗಿದೆ. ಕೋರೆಗಾಂವ್‌ಗೆ ಎಂದೂ ಹೋಗದ ಈ ಸ್ವಾಮಿಯನ್ನು ಯಾಕೆ ಬಂಧಿಸಲಾಗಿದೆಯೋ ಗೊತ್ತಿಲ್ಲ.
ಅದು ಹೋಗಲಿ, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದು ಈ ಕೊರೋನ ಗದ್ದಲದಲ್ಲಿ ಯಾರ ಗಮನವನ್ನೂ ಅಷ್ಟಾಗಿ ಸೆಳೆಯಲಿಲ್ಲ. ‘‘ದೇಶದ ಯಾವುದೇ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರಿ ಪ್ರತಿಭಟನೆ ನಡೆಸಬಾರದು’’ ಎಂದು ಕೋರ್ಟ್ ಆದೇಶ ನೀಡಿತು. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ದೀರ್ಘಕಾಲದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಆದೇಶ ಹೊರ ಬಿದ್ದಿದೆ. (ಕೊರೋನ ಬರದಿದ್ದರೆ ಬಹುಶಃ ಈ ಶಾಹೀನ್‌ಬಾಗ್ ಹೋರಾಟ ಇಂದಿನ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸುತ್ತಿತ್ತು.) ಈ ಆದೇಶದ ಪ್ರಕಾರ ಇನ್ನು ಮುಂದೆ ಯಾವುದೇ ನಗರದ ರಸ್ತೆಗಳು, ಪಾರ್ಕುಗಳಲ್ಲಿ ಪ್ರತಿಭಟನೆ, ಸತ್ಯಾಗ್ರಹ, ಧರಣಿ ನಡೆಸುವಂತಿಲ್ಲ.
ಸುಪ್ರೀಂಕೋರ್ಟ್‌ನ ಈ ಆದೇಶ ಬರುವ ಮುಂಚೆಯೂ ಸ್ವತಂತ್ರ ಭಾರತದ ನಮ್ಮ ಸರಕಾರಗಳು ಜನರು ತಮ್ಮ ಸಮಸ್ಯೆಗಳ ನಿವೇದನೆಗಾಗಿ ನಡೆಸುವ ಶಾಂತಿಯುತ ಸತ್ಯಾಗ್ರಹ, ಮೆರವಣಿಗೆಗಳನ್ನು ನಿರ್ಬಂಧಿಸುತ್ತಲೇ ಬಂದಿವೆ. ಮೊದಲು ದಿಲ್ಲಿಯಲ್ಲಿ ಸಂಸತ್ ಭವನದ ಬಳಿ ನಡೆಯುತ್ತಿದ್ದ ಪ್ರತಿಭಟನೆ ಈಗ ಜಂತರ್ ಮಂತರ್‌ಗೆ ಸ್ಥಳಾಂತರಗೊಂಡಿದೆ. ಬೆಂಗಳೂರಿನಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ನಾನು ಹಲವಾರು ಹೋರಾಟಗಳಲ್ಲಿ ಆ್ಯಕ್ಟಿವಿಸ್ಟ್ ಆಗಿ, ಜರ್ನಲಿಸ್ಟ್ ಆಗಿ ಪಾಲ್ಗೊಂಡಿದ್ದೇನೆ. ಹತ್ತಿರದಿಂದ ನೋಡಿದ್ದೇನೆ. ನಾವು ಎಂಭತ್ತರ ದಶಕದಲ್ಲಿ ನರಗುಂದದಿಂದ ರೈತ ಜಾಥಾದೊಂದಿಗೆ ಬಂದಾಗ ವಿಧಾನಸೌಧದ ಎದುರಿನ ಕಬ್ಬನ್ ಪಾರ್ಕ್‌ನಲ್ಲಿ ಲಕ್ಷಾಂತರ ಜನ ಸೇರಲು ಅಂದಿನ ಗುಂಡೂರಾವ್‌ನೇತೃತ್ವದ ಕಾಂಗ್ರೆಸ್ ಸರಕಾರ ಅವಕಾಶ ನೀಡಿತ್ತು. ಆಗ ರೊಚ್ಚಿಗೆದ್ದ ರೈತರು ವಿಧಾನ ಸೌಧದ ಒಳಗೆ ನುಗ್ಗಲು ಯತ್ನಿಸಿದ್ದರು. ಪ್ರೊ. ನಂಜಂಡಸ್ವಾಮಿ ಅವರ ರೈತ ಸಂಘದ ಅನೇಕ ಪ್ರತಿಭಟನಾ ಸಭೆಗಳು ವಿಧಾನಸೌಧದ ಎದುರು ನಡೆದಿವೆ. ಆದರೆ ಕ್ರಮೇಣ ಪ್ರಭುತ್ವಕ್ಕೆ ಇದು ಕಿರಿಕಿರಿಯೆನಿಸತೊಡಗಿತು. ರಾಜ್ಯದ ನಾನಾ ಭಾಗಗಳಿಂದ ಸಮಸ್ಯೆಗಳನ್ನು ಹೊತ್ತು ರಾಜಧಾನಿ ಬೆಂಗಳೂರಿಗೆ ಬರುವ ಜನರು ಪ್ರತಿಭಟನೆ ನಡೆಸುವ ಜಾಗವನ್ನು ಬದಲಿಸಲಾಯಿತು. ಕಬ್ಬನ್ ಪಾರ್ಕ್‌ನಿಂದ ಕೆ.ಆರ್.ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಯಿತು. ಕ್ರಮೇಣ ಅದೂ ಸರಕಾರಕ್ಕೆ ಕಿರಿಕಿರಿಯೆನಿಸಿ ವಿಧಾನಸೌಧದಿಂದ ಒಂದು ಕಿ.ಮೀ. ದೂರದ ಬನಪ್ಪಪಾರ್ಕ್‌ನಲ್ಲಿ ಸತ್ಯಾಗ್ರಹಕ್ಕೆ ಅವಕಾಶ ನೀಡಲಾಯಿತು. ಜನರು ಅಲ್ಲಿ ಅಷ್ಟೇ ಅಲ್ಲದೆ ಮೈಸೂರು ಬ್ಯಾಂಕ್ ವರ್ತುಲದಲ್ಲಿ ಮತ್ತು ಟೌನ್‌ಹಾಲ್ ಎದುರು ಪ್ರತಿಭಟನೆ ನಡೆಸುತ್ತ ಬಂದರು. ಈಗ ಬಹುತೇಕ ಪ್ರತಿಭಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತವೆ.
ಜನರು ಸುಮ್ಮನೆ ಪ್ರತಿಭಟನೆ ನಡೆಸುವುದಿಲ್ಲ. ಅವರ ಬದುಕು ಅಸಹನೀಯಗೊಂಡಾಗ, ಸಮಸ್ಯೆಗಳು ಉಲ್ಬಣಿಸಿದಾಗ, ಮನವಿ ಪತ್ರ, ಅಹವಾಲುಗಳಿಗೆ ಆಡಳಿತ ಸ್ಪಂದಿಸದೆ ಜಾಣ ಕುರುಡು ನೀತಿಯನ್ನು ಅನುಸರಿಸಿದಾಗ ಅನಿವಾರ್ಯವಾಗಿ ಜನ ಬೀದಿಗೆ ಬರುತ್ತಾರೆ. ಹಾಗೆ ಬೀದಿಗೆ ಬಂದ ಜನರನ್ನು ಸರಕಾರ ಸಹಾನುಭೂತಿಯಿಂದ ಕಂಡು ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸಿದರೆ ಪ್ರತಿಭಟನೆ ಅಲ್ಲಿಗೆ ನಿಲ್ಲುತ್ತದೆ. ಉದಾಹರಣೆಗೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅನವಶ್ಯವಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗದಿದ್ದರೆ ಅದರ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಜನಸಾಮಾನ್ಯರು ತಿಂಗಳುಗಳ ಕಾಲ ಶಾಂತಿಯುತ ಧರಣಿ, ಸತ್ಯಾಗ್ರಹ ನಡೆಸುವ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಪ್ರಜೆಗಳನ್ನು ರಕ್ಷಿಸಬೇಕಾದ ಪ್ರಭುತ್ವವೇ ಮೇಲೆರಗಿ ಬಂದಾಗ ಬದುಕುವ ಹಕ್ಕಿಗಾಗಿ ಬೀದಿಗೆ ಬಂದು ಪ್ರತಿಭಟಿಸುವುದು ಜನರಿಗೆ ಅನಿವಾರ್ಯವಾಗುತ್ತದೆ.
ಪ್ರತಿಭಟನೆಗಳಿಗೆ ಪ್ರಜಾಪ್ರಭುತ್ವದಷ್ಟೇ ಚಾರಿತ್ರಿಕ ಹಿನ್ನೆಲೆಯಿದೆ. ಪಾಶ್ಚಾತ್ಯ ದೇಶಗಳಲ್ಲೂ ಜನರು ಬೀದಿಗಿಳಿದು ಹೋರಾಟ ಮಾಡಿದ ಸಾವಿರಾರು ಉದಾಹರಣೆಗಳಿವೆ. ಅಮೆರಿಕವು ವಿಯೆಟ್ನಾಂ ಮೇಲೆ ಯುದ್ಧ ಸಾರಿದಾಗ ಆ ದೇಶದ ಪ್ರಜೆಗಳೇ ಯುದ್ಧದ ವಿರುದ್ಧ ವಾಶಿಂಗ್ಟನ್, ನ್ಯೂಯಾರ್ಕ್ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. 1866ರಲ್ಲಿ ಜನತಾಂತ್ರಿಕ ಹಕ್ಕುಗಳಿಗಾಗಿ ಬ್ರಿಟನ್ ಜನರು ಬೀದಿಗಿಳಿದರು. ಆಗ ಅಲ್ಲಿನ ಸರಕಾರ ಚಳವಳಿಯ ಜಾಗವಾದ ಹೈಡ್ ಪಾರ್ಕ್‌ಗೆ ಜನ ಬಂದು ಸೇರದಂತೆ ನಿರ್ಬಂಧಿಸಿತು. ಈ ನಿರ್ಬಂಧವನ್ನು ಜನರು ಧಿಕ್ಕರಿಸಿ ತಮ್ಮ ಹಕ್ಕುಗಳನ್ನು ಉಳಿಸಿಕೊಂಡರು.
ವರ್ಣಭೇದ ನೀತಿಯ ವಿರುದ್ಧ ಮಾರ್ಟಿನ್ ಲೂಥರ್‌ಕಿಂಗ್ ನಡೆಸಿದ ಬೀದಿ ಹೋರಾಟಗಳು, ಅಣ್ವಸ್ತ್ರಗಳ ವಿರುದ್ಧ ಹೆಸರಾಂತ ವಿಚಾರವಾದಿ ಬರ್ಟಂಡ್ ರಸೆಲ್ ತಮ್ಮ ಬಾಳ ಸಂಗಾತಿ ಮತ್ತು ಸಾವಿರಾರು ಜನರೊಂದಿಗೆ ನಡೆಸಿದ ಜಾಥಾ, ಮೆರವಣಿಗೆಗಳು ಅವಿಸ್ಮರಣೀಯವಾಗಿವೆ. ಇಂತಹ ಜನ ಚಳವಳಿ, ಸತ್ಯಾಗ್ರಹ, ಹೋರಾಟಗಳಿಂದಲೇ ಈ ಜಗತ್ತು ಇನ್ನೂ ಕೊಂಚ ಸಹನೀಯವಾಗಿ ಉಳಿದಿದೆ.
ಯಾವುದೇ ವ್ಯಕ್ತಿಯ ಇಲ್ಲವೇ ಜನಸಮೂಹದ ಅಭಿವ್ಯಕ್ತಿ ಸ್ವಾತಂತ್ರ್ಯ ಅಬಾಧಿತವಾಗಿರಬೇಕು. ‘‘ನಿನ್ನ ಮಾತುಗಳನ್ನು ನಾನು ಒಪ್ಪುವುದಿಲ್ಲ. ಆದರೆ ಮಾತಾಡುವ ನಿನ್ನ ಸ್ವಾತಂತ್ರ್ಯಕ್ಕೆ ಯಾರಾದರೂ ಅಡ್ಡಿಯುಂಟು ಮಾಡಿದರೆ ನಿನ್ನ ವಾಕ್ ಸ್ವಾತಂತ್ರ್ಯಕ್ಕಾಗಿ ನಾನು ಪ್ರಾಣವನ್ನಾದರೂ ಕೊಡಲು ಸಿದ್ಧ’’ ಎಂದು ವಾಲ್ಟೆರ್ ತನ್ನ ಮಿತ್ರ ರೋಸೊನಿಗೆ ಬರೆದ ಪತ್ರದಲ್ಲಿ ಹೇಳುತ್ತಾನೆ.
ಮಾತು ಪ್ರಜಾಪ್ರಭುತ್ವದ ಸೌಂದರ್ಯ. ಪ್ರಭುತ್ವಕ್ಕೆ ಬಾಯಿ ಬೇಕಾದರೆ ಇರಲಿ ಅದರೊಂದಿಗೆ ಕೇಳಿಸಿಕೊಳ್ಳುವ ಕಿವಿಯೂ ಇರಬೇಕು. ಲಾಠಿ, ಬಂದೂಕುಗಳ ಭಾಷೆಯ ಬದಲಾಗಿ ಪ್ರೀತಿ, ಅಂತಃಕರಣದ ಭಾಷೆಯಲ್ಲಿ ಮಾತಾಡಬೇಕು. ಆಗ ಅದು ನಿಜವಾದ ಪ್ರಜಾಪ್ರಭುತ್ವ ಎಂದೆನಿಸಿಕೊಳ್ಳುತ್ತದೆ.
ಚಿಂತಕರು, ಬುದ್ಧಿಜೀವಿಗಳು, ಸಾಹಿತಿಗಳು, ಕಲಾವಿದರು ಮತ್ತು ಸಾಮಾಜಿಕ ಹೋರಾಟಗಾರರು ಒಂದು ದೇಶದ ಸಂಪತ್ತಿದ್ದಂತೆ. ಪ್ರಭುತ್ವ ಅವರನ್ನು ವೈರಿಗಳಂತೆ ಕಾಣುವುದು ಸರಿಯಲ್ಲ. ಜಗತ್ತು ಮಾನ್ಯ ಮಾಡಿದ ಖ್ಯಾತ ಲೇಖಕ ಆನಂದ್ ತೇಲ್ತುಂಬ್ಡೆ, ಕವಿ ವರವರರಾವ್, ನ್ಯಾಯವಾದಿ ಸುಧಾ ಭಾರದ್ವಾಜ್‌ರಂತಹವರನ್ನು ವರ್ಷಾನುಗಟ್ಟಲೆ ಸುಳ್ಳು ಆರೋಪಗಳನ್ನು ಹೊರಿಸಿ ಸರೆಮನೆಯಲ್ಲಿಡುವುದು ಸರಿಯಲ್ಲ. ಸರಕಾರವನ್ನು ಟೀಕಿಸಿದ ಏಕೈಕ ಕಾರಣಕ್ಕಾಗಿ ಅಂಕಣಕಾರ ಆಕಾರ್ ಪಟೇಲರನ್ನು ಬಂಧಿಸುವುದು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ಇವರಾರು ಬಾಂಬು, ಬಂದೂಕುಗಳನ್ನು ಹಿಡಿದು ಸ್ಫೋಟ ಮಾಡಲು ಹೊರಟವರಲ್ಲ. ಇವರು ಏನು ಮಾಡಿದರೂ ತಮ್ಮ ಲೇಖನಿಯ ಮೂಲಕ ಜನರ ನೋವು, ಸಂಕಟಗಳಿಗೆ ಧ್ವನಿ ನೀಡಿದವರು.ವೈಯಕ್ತಿಕವಾಗಿ ಪ್ರತಿಭಟನೆಯ ಅಗತ್ಯ ಇವರಿಗಿಲ್ಲ. ರಾಜಿ ಮಾಡಿಕೊಳ್ಳುವುದು ಬೇಡ, ಕೊಂಚ ಬಾಯಿ ಮುಚ್ಚಿಕೊಂಡಿದ್ದರೂ ನೆಮ್ಮದಿಯಿಂದ ಇರಬಹುದಾದಷ್ಟು ಅನುಕೂಲಗಳು ಇವರಿಗಿವೆ. ಲಕ್ಷಾಂತರ ಸಂಬಳ ಪಡೆಯುವ ಗೋವಾ ಐಐಟಿ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ, ಹುಟ್ಟು ಶ್ರೀಮಂತ ಗೌತಮ್ ನವ್ಲಾಖ, ಪ್ರಸಿದ್ಧ ವಕೀಲರಾದ ಸುಧಾ ಭಾರದ್ವಾಜ್ ಇವರಿಗೆಲ್ಲ ಈ ವಯಸ್ಸಿನಲ್ಲಿ ಹೋರಾಡಿ ಜೈಲಿಗೆ ಹೋಗುವ ಅಗತ್ಯವಿಲ್ಲ. ಆದರೆ ಅವರ ಮನಸ್ಸಾಕ್ಷಿ ಅವರನ್ನು ಪ್ರತಿರೋಧದ ಮುನ್ನೆಲೆಗೆ ತಂದು ನಿಲ್ಲಿಸಿದೆ.
ಈಗ ಜೈಲಿಗೆ ಹಾಕಲ್ಪಟ್ಟಿರುವ ಚಿಂತಕರ ಮೇಲೆ ಯಾವ ಆರೋಪಗಳೂ ಇಲ್ಲದಿದ್ದರೂ ಅವರನ್ನು ‘ಅರ್ಬನ್ ನಕ್ಸಲೈಟ್’ ಎಂದು ಕರೆದು ಕತ್ತಲ ಕೋಣೆಗೆ ದೂಡಲಾಗಿದೆ. ಚರಿತ್ರೆಯಲ್ಲಿ ಇಂತಹ ಅನೇಕ ಸಂಗತಿಗಳು ದಾಖಲಾಗಿವೆ. ಅಮಾನವೀಯವಾದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ ಮಹಾನ್ ಹೋರಾಟಗಾರರನ್ನೆಲ್ಲ ಸಮಾಜ ಮತ್ತು ಪ್ರಭುತ್ವ ಇದೇ ರೀತಿ ಹತ್ತಿಕ್ಕಲು ಯತ್ನಿಸಿದೆ.ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಹದಿನಾರನೇ ಶತಮಾನದಲ್ಲಿ ಸಂತ ತುಕಾರಾಮ, ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಶಹೀದ್ ಭಗತ್ ಸಿಂಗ್, ಚಂದ್ರಶೇಖರ ಆಝಾದ್, ಅದಕ್ಕೂ ಹಿಂದೆ ಚಾರ್ವಾಕರು ಇವರೆಲ್ಲ ನಾನಾ ವಿಧದ ಹಿಂಸೆ ಅನುಭವಿಸಿ ತಮ್ಮ ನೆತ್ತರೆಣ್ಣೆಯಿಂದ ಮಾನವತೆಯ ಜ್ಯೋತಿಯನ್ನು ಬೆಳಗಿಸುತ್ತ ಬಂದರು.
ಇಂತಹ ಸವಾಲುಗಳ ಅಗ್ನಿಜ್ವಾಲೆಯಲ್ಲಿ ಪುಟಿದೆದ್ದು ನಿಂತ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಅಂತಹವರು ಜ್ಞಾನ ಜ್ಯೋತಿ ಹಿಡಿದು ನಿಂತರು. ಬಾಬಾಸಾಹೇಬರಂತಹವರು ಈ ಚಕ್ರವ್ಯೆಹವನ್ನು ಭೇದಿಸಿ ಸಂವಿಧಾನ ಎಂಬ ಸ್ವಾಭಿಮಾನದ ಜ್ಯೋತಿಯನ್ನು ನಮಗೆ ನೀಡಿದರು. ಆ ಸಂವಿಧಾನ ನಮಗೆ ಮಾತಾಡುವ, ಹೋರಾಡುವ, ಚಳವಳಿ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ.ಸಂವಿಧಾನದತ್ತವಾದ ಈ ಸ್ವಾತಂತ್ರ್ಯ ಸಹಸ್ರ ಸಹಸ್ರ ಜನತೆಯ ಅಪಾರ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯ. ಇಂದಿನ ಪ್ರಭುತ್ವ ಸಂವಿಧಾನ ನೀಡಿದ ಧ್ವನಿಯೆತ್ತುವ, ಪ್ರತಿಭಟಿಸುವ ಸ್ವಾತಂತ್ರ್ಯವನ್ನೇ ಕಿತ್ತು ಕೊಳ್ಳಲು ಹೊರಟಿದೆ. ನ್ಯಾಯಾಲಯ ಕೂಡ ಪ್ರಭುತ್ವದ ಭಾಗ ಎಂಬುದನ್ನು ಮರೆಯಬಾರದು. ಮಾತಾಡುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡದಿದ್ದರೆ ಉಸಿರಾಡುವ ಸ್ವಾತಂತ್ರ್ಯವನ್ನೂ ನಾವು ಕಳೆದುಕೊಳ್ಳುತ್ತೇವೆ.