varthabharthi


ಈ ಹೊತ್ತಿನ ಹೊತ್ತಿಗೆ

ಹರೆಯದ ಕಾವಿನಿಂದ ಒಡೆದ ಮೊಟ್ಟೆಗಳು ‘ನೀನಾ...’

ವಾರ್ತಾ ಭಾರತಿ : 20 Oct, 2020

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕನ್ನಡದ ಪ್ರಮುಖ ಕವಿ, ಕಥೆಗಾರ, ವಿಮರ್ಶಕ, ಅಂಕಣಗಾರ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿದ್ದ ಇವರು ಕನ್ನಡ ಮತ್ತು ಹಿಂದಿಯಲ್ಲಿ 100ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ನೀನಾ’ 1964ರಲ್ಲಿ ಪ್ರಕಟವಾಗಿರುವ ಪಟ್ಟಣ ಶೆಟ್ಟಿಯವರ ಚೊಚ್ಚಲ ಕವನ ಸಂಗ್ರಹ. 1988ರಲ್ಲಿ ಇದು ಮರು ಮುದ್ರಣಗೊಂಡಿತ್ತು. ಇದೀಗ ವೈದ್ಯ ವಾರ್ತಾ ಪ್ರಕಾಶನ ಈ ಕೃತಿಯನ್ನು ಮರು ಮುದ್ರಿಸಿದೆ. ಎರಡನೆಯ ಮುದ್ರಣದಲ್ಲಿ ಈ ಕೃತಿಯ ಕುರಿತಂತೆ ಪಟ್ಟಣ ಶೆಟ್ಟಿಯವರು ಹೀಗೆ ಹೇಳುತ್ತಾರೆ ‘‘ ‘ನೀನಾ’ ಪ್ರಕಟವಾದಾಗಿನ ಮನಸ್ಥಿತಿ ಹಾಗೂ ವಯಸ್ಸು ನನಗೆ ಈಗ ಇಲ್ಲ. ‘ನೀನಾ’ ಕವನಗಳು ಈಗಲೂ ಅಚ್ಚ ಹೊಸತಾಗಿಯೇ ಕಾಣುತ್ತಿವೆ. ಅವನ್ನು ಮತ್ತೆ ಮತ್ತೆ ಓದುತ್ತಾ, ಯಾವಾಗಲೂ ಹದಿವಯಸ್ಸಿನ ಯುವಕ ಯುವತಿಯರೊಂದಿಗೆ ಅಲೆಯುತ್ತಾ ಮನಸ್ಸನ್ನು ಹೊಸದಾಗಿಸಿಕೊಳ್ಳುವ ಪ್ರಯತ್ನ ಮಾಡಿದ ಹಾಗೆ ಸುಖವೆನಿಸುತ್ತದೆ. ಹಿತವೆನಿಸುತ್ತದೆ. ನನ್ನ ಮನಸ್ಸನ್ನು ಪೂರ್ಣವಾಗಿ ಆವರಿಸಿದ ತೃಪ್ತಿ, ಸಮಾಧಾನ ನೀಡಿದ ಅಂಥ ಕವನಗಳು ಆನಂತರದ ದಿನಗಳಲ್ಲಿ ಮೂಡಿದ್ದು ಕಡಿಮೆ...’’

ಮೊತ್ತ ಮೊದಲ ಮುದ್ರಣದ ಸಂದರ್ಭದಲ್ಲಿ ಅಂದರೆ 1964ರಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರು ಬರೆದ ಮುನ್ನುಡಿಯನ್ನು ಈ ಕೃತಿಯಲ್ಲಿ ಮರು ಮುದ್ರಣಗೊಳಿಸಲಾಗಿದೆ. ಭವಿಷ್ಯದ ಅತ್ಯುತ್ತಮ ಕವಿಯೊಬ್ಬನನ್ನು ಈ ಸಂಕಲನದ ಮೂಲಕ ನರಸಿಂಹ ಸ್ವಾಮಿಯವರು ಗುರುತಿಸಿದ್ದರು. ‘‘...ಕಾಲದ ಕೃಪೆಯಿಂದ ಮಾತ್ರ ಬರುವ ಜೀವನಾನುಭವಗಳನ್ನೂ ಅನುಭವ ಪರಂಪರೆಗಳನ್ನ್ನೂ ಹೊಕ್ಕು ನೋಡಿ ಅಲ್ಲಿ ಕಾಳಾಗಿ ನಿಲ್ಲುವುದಕ್ಕೆ ಬಾಳುವ ಮಾತಿನ ಸ್ವರೂಪ, ಧ್ವನಿ ವಿಲಾಸಗಳನ್ನು ನೀಡುವ ರಸವ್ಯಾಪಾರ ಸುಲಭವಲ್ಲ. ಕವಿ ಹೋರಾಡದೆ ಗೆಲ್ಲುವ ಮಾತೇ ಇಲ್ಲ. ಆದರೆ ಈ ದೇವರಿಗೆ ನೇಮ ಹೊತ್ತ ಮೇಲೆ ಈ ಕಷ್ಟದ ದಾರಿಗೆ ಒಲಿದು ಕಾಲಿಟ್ಟ ಈ ಹೊಸ ಕವಿಗೆ ಶುಭಾಶಯಗಳು...’’ ಎಂದು ಹೇಳುತ್ತಲೇ, ಸಂಕಲನದ ಮಿತಿ, ಅತಿರೇಕಗಳನ್ನು ಎತ್ತಿ ತೋರಿಸಲು ನರಸಿಂಹ ಸ್ವಾಮಿಯವರು ಹಿಂಜರಿಯುವುದಿಲ್ಲ. ‘‘...ಈ ಕವನಗಳಲ್ಲಿ ಸ್ವಲ್ಪ ಮಿತಿ ಮೀರಿ ಇಂಗ್ಲಿಷ್ ಪದಗಳು ತಲೆಹಾಕಿವೆ ಎನ್ನಬೇಕಾಗುತ್ತದೆ. ಅದರಿಂದ ಒಂದಿಷ್ಟು ಹೊಸತನ ಬರಬಹುದಾದರೂ ಶೈಲಿಯ ಹದ ಕೆಡುವ ಸಾಧ್ಯತೆಯಿದೆ. ಇದು ಕೇವಲ ತಂತ್ರಕ್ಕೆ ಸಂಬಂಧಿಸಿದ ಟೀಕೆ ಎನ್ನಬಹುದು. ಆದರೆ ಹೊಸತನ ತಿರುಳಿನಿಂದ ಬರುವುದೇ ಹೊರತು ತಂತ್ರದಿಂದಲ್ಲ. ಕವಿಯ ಗಮನ ಇತ್ತ ಹರಿಯುವುದರಿಂದ ಒಳಿತಾದೀತು...’’ ಎನ್ನುತ್ತಾರೆ ನರಸಿಂಹ ಸ್ವಾಮಿಯವರು.

ಕೃತಿಯಲ್ಲಿ ಒಟ್ಟು 62 ಕವಿತೆಗಳಿವೆ. ಸಿದ್ದಲಿಂಗ ಪಟ್ಟಣೆಶೆಟ್ಟಿಯವರ ಹರೆಯದ ಕಾವಿನಿಂದ ಒಡೆದ ಮೊಟ್ಟೆಗಳಿವು. ಪ್ರೀತಿ, ಪ್ರೇಮಗಳು ಇಲ್ಲಿ ಕೇವಲ ನವಿರಾದ ಕಾರಣಕ್ಕಾಗಿಯಷ್ಟೇ ಅಲ್ಲ, ಅದರ ತೀವ್ರತೆಯ ಕಾರಣಕ್ಕಾಗಿಯೂ ನಮ್ಮನ್ನು ಕಾಡುತ್ತವೆ. ಒಳಗಿನ ಅರಾಜಕತೆ, ಅಶಾಂತಿ, ಸಮತೆಯ ತುಡಿತಗಳು ಕವಿತೆಯ ರೂಪಕಗಳಲ್ಲಿ ಬೆಂಕಿಯಂತೆ ಕೆನೆಗಟ್ಟಿವೆ. 116 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ. ಆಸಕ್ತರು 94484 02092 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)