varthabharthi


ಕಾಲಂ 9

ಹಸಿವನ್ನು ಹೆಚ್ಚಿಸಲಿರುವ ಹೊಸ ಕೃಷಿ ಕಾಯ್ದೆಗಳು

ವಾರ್ತಾ ಭಾರತಿ : 21 Oct, 2020
ಶಿವಸುಂದರ್

IFPRI ಪರಿಣಿತರ ವರದಿಯ ಪ್ರಕಾರ: ‘‘ಗ್ರಾಮೀಣ ಭಾರತದಲ್ಲಿನ ಪ್ರತಿ ನಾಲ್ವರಲ್ಲಿ ಮೂವರಿಗೆ (ಶೇ. 65) ಆರೋಗ್ಯವಂತರಾಗಿ ಬಾಳಲು ಅತ್ಯಗತ್ಯವಾಗಿರುವಷ್ಟು ಕ್ಯಾಲೋರಿಗಳನ್ನು ನೀಡುವಷ್ಟು ಆಹಾರವನ್ನು ಮಾರುಕಟ್ಟೆಯಿಂದ ಕೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಅಪೌಷ್ಟಿಕತೆ ಹಾಗೂ ಆಹಾರ ಕೊರತೆಯಿಂದಾಗಿ ಭಾರತದ ಶೇ. 40ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹಾಗೂ ಇತರ ತೀವ್ರ ತೆರನಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.’’ಈ  ಬಾರಿ ಜಾಗತಿಕ ಹಸಿವಿನ ಸೂಚ್ಯಂಕದ ಅಧ್ಯಯನಕ್ಕಾಗಿ ಪರಿಶೀಲಿಸಲಾದ 107 ದೇಶಗಳಲ್ಲಿ ಭಾರತವು 94ನೇ ಸ್ಥಾನವನ್ನು ಪಡೆದಿದೆ. ಅಂದರೆ ಕೆಳಗಿನಿಂದ 13ನೇ ಸ್ಥಾನ!

ಒಂದು ದೇಶದ ಹಸಿವಿನ ಸೂಚ್ಯಂಕವನ್ನು ನಿಗದಿ ಮಾಡಲು ಈ ಅಧ್ಯಯನವು ನಾಲ್ಕು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ:

1.ಒಟ್ಟಾರೆ ಅಪೌಷ್ಟಿಕತೆ: ದೇಶದ ಜನಸಂಖ್ಯೆಯಲ್ಲಿ ಸೂಕ್ತವಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲದವರ ಪ್ರಮಾಣ.

2. ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವಿಕೆ(ಚೈಲ್ದ್ ವೇಸ್ಟಿಂಗ್) -ದೇಶದೊಳಗಿನ ಐದು ವರ್ಷದ ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವ ವರ ಪ್ರಮಾಣ. ಏಕೆಂದರೆ ಇದು ತೀವ್ರವಾದ ಅಪೌಷ್ಟಿಕತೆಯಿಂದ ಸಂಭವಿಸುತ್ತದೆ.

3. ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವಿಕೆ(ಚೈಲ್ಡ್ ಸ್ಟಂಟಿಂಗ್) -ದೇಶದೊಳಗಿನ ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕನಾದ ಎತ್ತರಕ್ಕೆ ಬೆಳೆದಿಲ್ಲದಿರುವವರ ಪ್ರಮಾಣ. ಏಕೆಂದರೆ ಇದು ದೀರ್ಘಕಾಲದ ಅಪೌಷ್ಟಿಕತೆಯ ಪರಿಣಾಮವಾಗಿದೆ.

4. ಶಿಶು ಮರಣದ ಪ್ರಮಾಣ: ಒಂದು ದೇಶದೊಳಗೆ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ. ಏಕೆಂದರೆ ಇದು ಅಪೌಷ್ಟಿಕತೆ ಹಾಗೂ ಅಸಮರ್ಪಕ ಪರಿಸರ ಎರಡರಿಂದಲೂ ಸಂಭವಿಸುತ್ತದೆ.

ಈ ಅಧ್ಯಯನವು ಈ ನಾಲ್ಕೂ ಅಂಶಗಳಿಗೆ ಬೇಕಾದ ಅಂಕಿ-ಅಂಶಗಳನ್ನು ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಂದಲೇ ಪಡೆದುಕೊಳ್ಳುತ್ತದೆ ಹಾಗೂ ವಿಶ್ವಸಂಸ್ಥೆಯು ತನ್ನದೇ ಅಂಗಸಂಸ್ಥೆಗಳ ಅಧ್ಯಯನಗಳಿಂದಲೂ ಹಾಗೂ ತನ್ನ ಸದಸ್ಯ ರಾಷ್ಟ್ರಗಳ ಸರಕಾರಗಳು ಕೊಡುವ ಅಂಕಿ ಅಂಶಗಳಿಂದಲೂ ಈ ಮಾಹಿತಿಗಳನ್ನು ಸಂಗ್ರಹಿಸುತ್ತದೆ.

ಹೀಗೆ ಸಂಗ್ರಹಿಸಲ್ಪಟ್ಟ ನಾಲ್ಕೂ ವರ್ಗಗಳ ದತ್ತಾಂಶಗಳನ್ನು ಆಧರಿಸಿ ಪ್ರತಿದೇಶದ ಪರಿಸ್ಥಿತಿಯನ್ನು ವರ್ಗೀಕರಿಸಲಾಗುತ್ತದೆ. ಯಾವುದೇ ದೇಶವು ಈ ವರ್ಗೀಕರಣದಲ್ಲಿ ಪಡೆದುಕೊಳ್ಳುವ ಅಂಕಗಳು 50ಕ್ಕಿಂತ ಹೆಚಾಗಿದ್ದರೆ ಅಂತಹ ದೇಶಗಳ ಪರಿಸ್ಥಿತಿ ‘ಅತ್ಯಂತ ಕಳವಳಕಾರಿ’ಯೆಂದು ಪರಿಗಣಿಸಲಾಗುತ್ತದೆ. 35-50ರ ನಡುವಿನ ಅಂಕಗಳನ್ನು ಪಡೆದುಕೊಳ್ಳುವ ದೇಶಗಳು ‘ಕಳವಳಕಾರಿ’ಯೆಂದು ವರ್ಗೀಕರಣಗೊಂಡರೆ 20-35 ಅಂಕಗಳನ್ನು ಪಡೆಯುವ ದೇಶಗಳ ಪರಿಸ್ಥಿತಿ ‘ಗಂಭೀರ’ವೆಂದು ವರ್ಗೀಕರಣವಾಗುತ್ತದೆ. 10-20ರ ನಡುವಿನ ಅಂಕಗಳನ್ನು ಪಡೆಯುವ ದೇಶಗಳ ಪರಿಸ್ಥಿತಿ ‘ಸಾಧಾರಣ’ ಎಂದು ಪರಿಗಣಿಸಲ್ಪಡುತ್ತವೆ.

ಸಾರಾಂಶದಲ್ಲಿ ಈ ಅಂಕಿಅಂಶಗಳು ಒಂದು ದೇಶದ ಭವಿಷ್ಯ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ.

2020ರ ಸಾಲಿನ ಜಾಗತಿಕ ಹಸಿವಿನ ಸೂಚ್ಯಂಕದ ಲೆಕ್ಕಾಚಾರಗಳಲ್ಲಿ ಒಟ್ಟಾರೆ ಅಪೌಷ್ಟಿಕತೆ ಹಾಗೂ ಶಿಶುಮರಣದ ಲೆಕ್ಕಾಚಾರಕ್ಕೆ 2019ರ ಅಂಕಿಅಂಶಗಳನ್ನೂ, ಚೈಲ್ಡ್ ವೇಸ್ಟಿಂಗ್ ಲೆಕ್ಕಾಚಾರಕ್ಕೆ 2015-17ರ ಅಂಕಿಅಂಶಗಳನ್ನೂ ಹಾಗೂ ಚೈಲ್ಡ್ ಸ್ಟಂಟಿಂಗ್ ಲೆಕ್ಕಾಚಾರಕ್ಕೆ 2015-19ರ ಅವಧಿಯ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಈ ರೀತಿ 107 ದೇಶಗಳಲ್ಲಿ ನಡೆಸಲಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index)-2020ರ ಅಧ್ಯಯನದ ಪ್ರಕಾರ ಭಾರತ 94ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 27.2 ಅಂಕಗಳನ್ನು ಪಡೆದುಕೊಂಡಿರುವ ಭಾರತದ ಪರಿಸ್ಥಿತಿಯನ್ನು ‘ಗಂಭೀರ’ ಎಂದು ವರದಿಯು ಘೋಷಿಸಿದೆ. ಆ ವರದಿಯು ಸೂಚಿಸುವಂತೆ ಕಳೆದ ಕೆಲವು ವರ್ಷಗಳಲ್ಲಿ ಒಟ್ಟಾರೆ ಅಪೌಷ್ಟಿಕತೆಯ ಪ್ರಮಾಣ ಇಳಿಯುತ್ತಾ ಬಂದಿದೆ. ಅಪೌಷ್ಟಿಕತೆಯ ಪ್ರಮಾಣ ಸ್ವಲ್ಪವಾದರೂ ಇಳಿದಿರುವುದಕ್ಕೆ ದೇಶದ ಆಹಾರ ಭದ್ರತೆಯ ಕಾಯ್ದೆಯ ಮೂಲಕ 2013ರ ನಂತರ ದೇಶದ ಶೇ.67ರಷ್ಟು ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವುದು ಒಂದು ಪ್ರಮುಖ ಕಾರಣ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದೂ ಇಲ್ಲದಿದ್ದರೆ ಭಾರತದ ಪರಿಸ್ಥಿತಿ ‘ಗಂಭೀರ’ದಿಂದ ‘ಕಳವಳಕಾರಿ’ಯಾಗಿರುತ್ತಿತ್ತು.

ಆದರೆ ಇದೇ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ, ಐಸಿಡಿಎಸ್ ಇತ್ಯಾದಿ ಯೋಜನೆಗಳಿಗೆ ಸರಕಾರದ ಅನುದಾನ ತೀವ್ರವಾಗಿ ಕಡಿತವಾಗಿರುವುದು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಕೃಷಿ ಬಿಕ್ಕಟ್ಟು ಹೆಚ್ಚಾಗಿರುವುದರಿಂದಲೂ ಭಾರತದ ಬಹುಪಾಲು ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿರುವುದನ್ನು ಈ ವರದಿಯು ಸೂಚಿಸುತ್ತದೆ. ಅದರ ಪರಿಣಾಮವಾಗಿಯೇ ಭಾರತದ ಮಕ್ಕಳ ಬೆಳವಣಿಗೆಯು ಕಳೆದ ಐದು ವರ್ಷಗಳಲ್ಲಿ ಹೆಚ್ಚೆಚ್ಚು ಕುಂಠಿತವಾಗುತ್ತಿರುವುದನ್ನು ಈ ವರದಿ ಸ್ಪಷ್ಟವಾಗಿ ಸೂಚಿಸುತ್ತದೆ. ಆದ್ದರಿಂದಲೇ ಈ ವರ್ಷ ಭಾರತ ತನ್ನ ಸ್ಥಾನವನ್ನು ಆಫ್ರಿಕಾದ ಅತಿ ಕಡುಬಡರಾಷ್ಟ್ರವಾದ ಸೂಡಾನ್‌ನೊಂದಿಗೆ ಹಂಚಿಕೊಂಡಿದೆ. ಅಷ್ಟು ಮಾತ್ರವಲ್ಲ ಭಾರತದ ನೆರೆಹೊರೆ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶಗಳ ಹಸಿವಿನ ಸೂಚ್ಯಂಕಗಳು ಭಾರತಕ್ಕಿಂತ ಉತ್ತಮವಾಗಿವೆ. (ಸಂಪೂರ್ಣ ವರದಿಯನ್ನುಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು-https://www.globalhungerindex.org/results.html)

ಭಾರತದ ಪರಿಸ್ಥಿತಿ ಈ ರೀತಿ ಹದಗೆಡುತ್ತಿರುವುದಕ್ಕೆ ಕಾರಣಗಳೇನು?
ಇದನ್ನು ಆರ್ಥಮಾಡಿಕೊಳ್ಳಲು ಅಂತಹ ದೊಡ್ಡ ವಿಜ್ಞಾನವೇನೂ ಅಗತ್ಯವಿಲ್ಲ. ಅಂಗೈ ಹುಣ್ಣು ನೋಡಿಕೊಂಡರೆ ಕಾಣುತ್ತದೆ.
International Food Policy Research Institute (IFPRI) ಎಂಬ ಅಂತರ್‌ರಾಷ್ಟ್ರೀಯ ಆಹಾರ ನೀತಿಗಳ ಪರಿಣಿತರ ಸಂಸ್ಥೆಯು ಇತ್ತೀಚೆಗೆ ಭಾರತದ ಗ್ರಾಮೀಣ ಭಾಗಗಳಲ್ಲಿ ಪೌಷ್ಟಿಕ ಆಹಾರದ ಲಭ್ಯತೆ ಹಾಗೂ ಬಳಕೆಯ ಪ್ರಮಾಣದ ಬಗ್ಗೆ ಅಧ್ಯಯನ ಮಾಡಿ ತಮ್ಮ ವರದಿಯನ್ನು ಕೋವಿಡ್‌ಗೆ ಸ್ವಲ್ಪಮುಂಚೆ 2020ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದೆ.
ವರದಿಯ ಪ್ರಕಾರ: ‘‘ಗ್ರಾಮೀಣ ಭಾರತದಲ್ಲಿನ ಪ್ರತಿ ನಾಲ್ವರಲ್ಲಿ ಮೂವರಿಗೆ (ಶೇ. 65) ಆರೋಗ್ಯವಂತರಾಗಿ ಬಾಳಲು ಅತ್ಯಗತ್ಯವಾಗಿರುವಷ್ಟು ಕ್ಯಾಲೋರಿಗಳನ್ನು ನೀಡುವಷ್ಟು ಆಹಾರವನ್ನು ಮಾರುಕಟ್ಟೆಯಿಂದ ಕೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಅಪೌಷ್ಟಿಕತೆ ಹಾಗೂ ಆಹಾರ ಕೊರತೆಯಿಂದಾಗಿ ಭಾರತದ ಶೇ. 40ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹಾಗೂ ಇತರ ತೀವ್ರ ತೆರನಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.’’
(ಆಸಕ್ತರು ಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: http://ebrary.ifpri.org/utils/getfile/collection/p15738coll2/id/133638/filename/133851.pdf)

ಗ್ರಾಮೀಣ ಜನರಿಗೆ ಕೊಳ್ಳುವ ಶಕ್ತಿ ಏಕಿಲ್ಲ?

ಏಕೆಂದರೆ ಭಾರತದ ಗ್ರಾಮೀಣ ಪ್ರದೇಶದ ಶೇ.80ರಷ್ಟು ಜನ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಅವರ ಮಾಸಿಕ ಆದಾಯ ಇತ್ತೀಚಿನ ಸರ್ವೇ ಪ್ರಕಾರ 6,000-7,000 ರೂ. ಮಾತ್ರ. ಗ್ರಾಮೀಣ ರೈತಾಪಿಯಲ್ಲಿ ಶೇ. 86ರಷ್ಟು ಸಣ್ಣ ಹಾಗೂ ಅತಿ ಸಣ್ಣರೈತರು. ಕೃಷಿ ಉತ್ಪಾದನೆಯ ವೆಚ್ಚ ಪ್ರತಿವರ್ಷವೂ ಹೆಚ್ಚಾಗುತ್ತಿದ್ದರೆ ಬೆಳೆದ ಬೆಳೆಗೆ ಲಾಭದಾಯಕ ದರ ಮಾತ್ರ ದಕ್ಕುವುದೇ ಇಲ್ಲ. ಮಾರುಕಟ್ಟೆಯಲ್ಲಿ ಸಿಕ್ಕಷ್ಟು ಬೆಲೆಗೆ ಮಾರುವ ರೈತ ಪ್ರತಿವರ್ಷವೂ ಮಾಡಿದ ಸಾಲವನ್ನು ತೀರಿಸುವುದಿರಲಿ ಇನ್ನೂ ಹೆಚ್ಚೆಚ್ಚು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾನೆ.

ಇಂತಹ ಸಂದರ್ಭದಲ್ಲಿ ಸರಕಾರ ಮಧ್ಯಪ್ರವೇಶ ಮಾಡಿ ಮಾರುಕಟ್ಟೆ ಶೋಷಣೆಯಿಂದ ರೈತಾಪಿಯನ್ನು ರಕ್ಷಿಸಬೇಕಿತ್ತು. ರೈತಾಪಿಯ ವೆಚ್ಚವನ್ನು ಕಡಿಮೆಮಾಡುವ ದಿಕ್ಕಿನಲ್ಲಿ ರಿಯಾಯಿತಿ ದರದಲ್ಲಿ ಗೊಬ್ಬರ, ಬೀಜಗಳನ್ನು ಪೂರೈಸಬೇಕಿತ್ತು. ರೈತ ಬೆಳೆದ ಬೆಳೆೆಗೆ ಸ್ವಾಮಿನಾಥನ್ ಆಯೋಗ ಸಲಹೆ ಮಾಡಿದ ದರದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು (MSP) ಒದಗಿಸಬೇಕಿತ್ತು. ಸರಕಾರವೇ ನಿಯಂತ್ರಿಸುವ ಕೃಷಿ ಮಾರುಕಟ್ಟೆಯಲ್ಲಿ (APMC) ರೈತರ ಮೇಲಾಗುತ್ತಿದ್ದ ಶೋಷಣೆಯನ್ನು ತಪ್ಪಿಸಲು ಅವುಗಳಲ್ಲಿ ರೈತಧ್ವನಿ ಹೆಚ್ಚಾಗುವಂತೆ ಮಾಡಬೇಕಿತ್ತು. ವಿದೇಶಿ ಹಾಗೂ ಅಗ್ಗದ ಸರಕುಗಳ ಹರಿವಿನಿಂದ ದೇಶೀಯ ರೈತರ ಬೆಳೆಯನ್ನು ಮತ್ತು ಬೆಲೆಯನ್ನು ರಕ್ಷಿಸಬೇಕಿತ್ತು. ಗ್ರಾಮೀಣ ಹಾಗೂ ನಗರದ ಬಡಜನರು ಆಹಾರದ ಕೊರತೆ ಹಾಗೂ ಅಪೌಷ್ಟಿಕತೆಗಳಿಗೆ ತುತ್ತಾಗದಂತೆ ಸರಕಾರ ಆಹಾರ ಸರಬರಾಜು ವ್ಯವಸ್ಥೆಯನ್ನು ಖಾತರಿಮಾಡಬೇಕಿತ್ತು.

ಇದೇ ಉದ್ದೇಶಗಳಿಗಾಗಿ APMC, MSP, ರೈತರ ಬೆಳೆಗಳನ್ನು ಸರಕಾರವೇ ಖರೀದಿ ಮಾಡಿ ಬಡಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಹಂಚಲು ಆಹಾರ ನಿಗಮ (FCI) ಹಾಗೂ ಪಡಿತರ ವ್ಯವಸ್ಥೆಗಳಿದ್ದವು. ಆದರೆ ಕಾಲಾನುಕ್ರಮದಲ್ಲಿ ಈ ವ್ಯವಸ್ಥೆಯಲ್ಲಿ ಹಲವಾರು ಗಂಭೀರ ಲೋಪದೋಷಗಳು ಹಾಗೂ ಅಧಿಕಾರಿ-ವ್ಯಾಪಾರಿ ಅಪವಿತ್ರ ಸಂಬಂಧಗಳು ಬೆಳೆದು ರೈತರಶೋಷಣೆ ಮುಂದುವರಿದಿತ್ತು. ಹೀಗಾಗಿ ಇಂದು ಆ ಎಲ್ಲಾ ವ್ಯವಸ್ಥೆಗಳು ಇನ್ನಷ್ಟು ರೈತಪರವಾಗಿ ಹಾಗೂ ಬಡಜನರ ಪರವಾಗಿ ಸುಧಾರಣೆಯಾಗುವ ಅಗತ್ಯವಿತ್ತು.

ಆದರೆ ಮೋದಿ ಸರಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳು ಹಳೆಯ ವ್ಯವಸ್ಥೆಯಲ್ಲಿದ್ದ ಈ ಲೋಪದೋಷಗಳನ್ನು ಎತ್ತಿತೋರಿಸುತ್ತಾ ಅವುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಕಾರ್ಪೊರೇಟ್ ದೈತ್ಯರ ಮರ್ಜಿಗೆ ರೈತರನ್ನು ತಳ್ಳುವ ಹುನ್ನಾರ ನಡೆಸಿದೆ. ರೈತರಿಗೆ ಈವರೆಗೆ ದಕ್ಕುತ್ತಿದ್ದ ಅಲ್ಪಸ್ವಲ್ಪ ಪರಿಹಾರಗಳನ್ನು ಕಿತ್ತುಕೊಳ್ಳುತ್ತಿದೆ.

ಉದಾಹರಣೆಗೆ IFPRI ಪರಿಣಿತರ ವರದಿಯು ಗ್ರಾಮೀಣ ಭಾರತದ ಶೇ. 65ರಷ್ಟು ಜನರಿಗೆ ಪೌಷ್ಟಿಕ ಆಹಾರವನ್ನು ಕೊಳ್ಳುವ ಶಕ್ತಿಯಿಲ್ಲವೆಂದು ಹೇಳುತ್ತದೆಯಷ್ಟೇ. ಆದರೆ ಅದರ ನಿವಾರಣೆಗೆ ಮೋದಿ ಸರಕಾರ ಮಾಡಿದ್ದೇನು?
ಮೋದಿ ಸರಕಾರವು 2015ರಲ್ಲಿ ಆಹಾರ ನಿಗಮದ ಪುನಾರಚನೆ ಹಾಗೂ ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆಯ ಸುಧಾರಣೆಯ ಕುರಿತು ಅರ್ಥಾತ್‌ಸಾರ್ವಜನಿಕ ಪಡಿತರದ ಖಾಸಗೀಕರಣದ ಕುರಿತು ರಚಿಸಿದ್ದ ಶಾಂತಕುಮಾರ್ ಸಮಿತಿಯು ಹೀಗೆ ವರದಿ ಕೊಟ್ಟಿದೆ:

‘‘ಆಹಾರ ಭದ್ರತಾ ಕಾಯ್ದೆ-2013ರ ಮೂಲಕ ಭಾರತ ಸರಕಾರವು ದೇಶದ ಶೇ. 67ರಷ್ಟು ಫಲಾನುಭವಿಗಳಿಗೆ ಕನಿಷ್ಠ ಆಹಾರವನ್ನು ಒದಗಿಸುತ್ತಿದೆ. ಆದರೆ ಇದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚು ಹೊರೆ ಬೀಳುತ್ತಿದೆ. ಆದ್ದರಿಂದ ಇನ್ನು ಮುಂದೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವವರ ಸಂಖ್ಯೆಯನ್ನು ಶೇ. 67ರಿಂದ ಶೇ. 40ಕ್ಕೆ ಇಳಿಸಬೇಕು ಹಾಗೂ ನಿಧಾನಕ್ಕೆ ಅದರ ಫಲಾನುಭವಿಗಳ ಸಂಖ್ಯೆಯನ್ನು 80 ಕೋಟಿಯಿಂದ 20 ಕೋಟಿಗೆ ಇಳಿಸಬೇಕು.’’

‘‘ರೈತರಿಗೆ ಕೊಡುತ್ತಿರುವ MSP ವ್ಯವಸ್ಥೆಯನ್ನು ಬದಲಿಸಬೇಕು. ರೈತರಿಂದ ಆಹಾರ ಖರೀದಿಯನ್ನು ಸರಕಾರ ಮಾಡಬಾರದು. ಅದನ್ನು ಖಾಸಗಿಯವರಿಗೆ ವಹಿಸಬೇಕು. ಗೊಬ್ಬರದ ಬೆಳೆಯನ್ನು ಸರಕಾರ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಗಿಟ್ಟು ಖಾಸಗಿ ಕ್ಷೇತ್ರಕ್ಕೆ ವಹಿಸಬೇಕು. ಆಹಾರ ನಿಗಮದ ಗೋದಾಮುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಬೇಕು. ಇವೆಲ್ಲದರಿಂದ ರೈತರ ಹಾಗೂ ಕೃಷಿ ಕ್ಷೇತ್ರದ ಸಂಪೂರ್ಣ ಬಲವರ್ಧನೆಯಾಗುತ್ತದೆ.’’

(ಆಸಕ್ತರು ಸಂಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://fci.gov.in/app2/webroot/upload/News/Report%20of%20the%20High%20Level%20Committee%20on%20Reorienting%20the%20Role%20and%20Restructuring%20of%20FCI_English.pdf)

ಹಾಗೆಯೇ ಮೋದಿ ಸರಕಾರ ಇತ್ತೀಚೆಗೆ Farmers Produce Trade And Commerce (Facilitation and Promotion) Act ಅರ್ಥಾತ್ APMC-by Pass ಕಾಯ್ದೆಯನ್ನು ಜಾರಿ ಮಾಡಿದೆ. ಈ ಕಾಯ್ದೆಯ ಮೂಲಕ ಖಾಸಗಿ ಮಂಡಿಗಳಿಗೆ ಅವಕಾಶ ಮಾಡಿಕೊಟ್ಟು ರೈತರನ್ನು APMCಯ ದಾಸ್ಯದಿಂದ ಮುಕ್ತಗೊಳಿಸಿದೆಯೆಂದೂ, ರೈತರು ಇನ್ನು ಮುಂದೆ ಹೆಚ್ಚಿನ ದರವನ್ನು ಕೊಡಬಹುದಾದ ಯಾವುದೇ ಖಾಸಗಿ ಮಂಡಿಗಳಿಗೆ ತಮ್ಮ ಸರಕನ್ನು ಮಾರಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆ ಮೂಲಕ ರೈತರ ಆದಾಯವೂ ದುಪ್ಪಟ್ಟಾಗಲಿದೆಯಂತೆ...!!

ಆದರೆ ವಾಸ್ತವವೇನು? 
ಉದಾಹರಣೆಗೆ 2006ರಲ್ಲೇ ಬಿಹಾರದಲ್ಲಿ APMC ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಖಾಸಗಿ ಮಂಡಿಗಳಿಗೆ ಅವಕಾಶ ಮಾಡಿಕೊಡಲಾಯಿತು.

ಹಾಗಿದ್ದಲ್ಲಿ ಬಿಹಾರದ ರೈತರಿಗೆ ಕಳೆದ 14 ವರ್ಷಗಳಿಂದ APMC ಇರುವ ರಾಜ್ಯಗಳಿಗಿಂತ ಹೆಚ್ಚಿನ ದರಗಳು ದೊರೆಯುತ್ತಿದೆಯೇ? ಖಂಡಿತ ಇಲ್ಲ ಎಂಬುದನ್ನು NCAER- National Council For Applied Economic Research ಎಂಬ ಸ್ವಾಯತ್ತ ಚಿಂತಕರ ಚಾವಡಿ ತನ್ನ 2019ರ ವರದಿಯಲ್ಲಿ ಸ್ಪಷ್ಟವಾಗಿ ಹೇಳುತ್ತದೆ.

ಅದು 2019ರಲ್ಲಿ ಬಿಡುಗಡೆ ಮಾಡಿರುವ Study on Agricultural Diagnostics for the State of Bihar in India ಎಂಬ ವರದಿಯಲ್ಲಿ APMC ರದ್ದು ಮಾಡಿದ್ದರಿಂದ ಬಿಹಾರದ ರೈತರು ಅನುಭವಿಸಬೇಕಾಗಿ ಬಂದಿರುವ ಭಾವನೆಗಳನ್ನು ಹೀಗೆ ವಿಶದೀಕರಿಸುತ್ತದೆ:

‘‘...ಬಿಹಾರದಲ್ಲಿ 2006ರಲ್ಲೇ APMC ಕಾಯ್ದೆಯನ್ನು ರದ್ದುಗೊಳಿಸಿದರೂ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಲು ಅಥವಾ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಸುಧಾರಿಸಲು ಹೊಸ ಖಾಸಗಿ ಬಂಡವಾಳವೇನು ಹರಿದು ಬರಲಿಲ್ಲ. ಇದರಿಂದಾಗಿ ಬಿಹಾರದಲ್ಲಿ ಕೃಷಿ ಮಾರುಕಟ್ಟೆಯ ಸಾಂದ್ರತೆ ಕ್ಷೀಣಿಸಿದೆ. ಮೇಲಾಗಿ, ರೈತ ಬೆಳೆದ ಧಾನ್ಯಗಳನ್ನು ಕೊಳ್ಳುವಲ್ಲಿ ಸರಕಾರಿ ಏಜೆನ್ಸಿಗಳ ಭಾಗವಹಿಸುವಿಕೆ ಮತ್ತು ಕೊಳ್ಳುವ ಪ್ರಮಾಣ ಎರಡೂ ಕಡಿಮೆಯಾಗುತ್ತಲೇ ಸಾಗಿದೆ. ಹೀಗಾಗಿ ರೈತರನ್ನು ಅವರ ಸರಕುಗಳಿಗೆ ಅತ್ಯಂತ ಕಡಿಮೆದರವನ್ನು ನಿಗದಿ ಮಾಡುವ ವ್ಯಾಪಾರಿಗಳ ಮರ್ಜಿಗಳಿಗೆ ದೂಡಲಾಗಿದೆ. ಕೃಷಿ ಸರಕುಗಳ ಬೆಳೆಗಳಲ್ಲಿನ ಅಸ್ಥಿರತೆಗಳಿಗೆ ಹಾಗೂ ಅತ್ಯಂತ ಕಡಿಮೆ ದರಗಳಿಗೆ ಅಸಮರ್ಪಕ ಮಾರುಕಟ್ಟೆ ಸೌಲಭ್ಯಗಳು ಹಾಗೂ ಅಸಮರ್ಪಕ ಸಾಂಸ್ಥಿಕ ವ್ಯವಸ್ಥೆಗಳೇ ಕಾರಣವಾಗಿವೆ.’’

(ಆಸಕ್ತರು ಸಂಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು http://www.ncaer.org/publication_details.php?pID=311#:~:text=Study%20on%20Agricultural%20Diagnostics%20for%20the%20State%20of%20Bihar%20in%20India&text=Fully%2070%20percent%20of%20its,development%20remains%20important%20for%20Bihar.)
ಹೀಗೆ ಮೋದಿ ಸರಕಾರವು ಜಾರಿ ಮಾಡಿರುವ ಈ ಮೂರೂ ಕೃಷಿ ಕಾಯ್ದೆಗಳು ರೈತರ ಆಹಾರವನ್ನು ಕೊಳ್ಳುವ ಶಕ್ತಿಯನ್ನು ಇನ್ನಷ್ಟು ಕಡಿಮೆ ಗೊಳಿಸಲಿದೆ. ಪರಿಣಾಮವಾಗಿ ಭಾರತದ ಅಭಿವೃದ್ಧಿಯೂ ವೇಸ್ಟೆಡ್ ಹಾಗೂ ಸ್ಟೆಂಟೆಡ್ ಆಗಲಿದೆ.

ಮೋದಿ ಸರಕಾರ ಭಾರತದಲ್ಲಿ ಸಬ್ ಚಂಗಾಸಿ ಎಂದು ಜನರನ್ನು ನಂಬಿಸುತ್ತಿರುವಾಗಲೇ ಭಾರತದ ಪರಿಸ್ಥಿತಿ ‘‘ಗಂಭೀರ’’ದಿಂದ ‘‘ಕಳವಳಕಾರಿ’’ ಯಾಗುವ ಕಡೆದಾಪುಗಾಲಿಡುತ್ತಿದೆ. ಹೊಟ್ಟೆಯ ಸಂಕಟವನ್ನು ಮೆದುಳು ಅರಿಯುವಂತೆ ಮಾಡದೇ ಇದಕ್ಕೆ ಬೇರೆ ಮದ್ದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)