ಬೇಡರು ಮತ್ತು ಬೆಸ್ತರು ದಾಯಾದಿಗಳಲ್ಲ: ಆದರೂ ಪಂಗಡಗಳ ಜಾತಿ ಪತ್ರ ನೀಡಿಕೆಯಲ್ಲಿ ಯಾಕೆ ಗೊಂದಲ?
ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲಗಳಲ್ಲಿ ವಿಚಿತ್ರಕಾರಕ ಬೆಳವಣಿಗೆ ಕಂಡವರು ಆಶ್ಚರ್ಯಪಡುತ್ತಿದ್ದಾರೆ. ಅದೇನೆಂದರೆ, ಬೇಡರ ಉಪ ಪಂಗಡಗಳಾದ ತಳವಾರ, ಪರಿವಾರ, ಜೋಲಿವಾಲ, ಕೋಲಕಾರ ಪದಗಳು ಅವುಗಳ ಉಪ-ಸಮುದಾಯದ ಪರ್ಯಾಯ ಪದಗಳೆನ್ನುವುದು ಸರ್ವವಿಧಿತ. ಆದರೆ, ಕೋಲಿ ಸಮಾಜ ಸಂಘ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಮತ್ತು ಬಿಜಾಪುರ ಜಿಲ್ಲೆೆಗಳಲ್ಲಿ ನಾಯಕ ಸಮುದಾಯದ ಜಾತಿ ಪತ್ರ ಸಾಂವಿಧಾನಿಕ ಹಕ್ಕು ತಿದ್ದುಪಡಿ ಸಂಸತ್ತು ಕಾಯ್ದೆ (ಸಂಖ್ಯೆ IV 2019 ಮಾರ್ಚ್ 19, 2020) ಅಡಿ ರಾಷ್ಟ್ರಪತಿಗಳ ಆದೇಶದನ್ವಯ ಬೇಡ ಪಂಗಡಕ್ಕೆ ಪರಿವಾರ ಮತ್ತು ತಳವಾರ ಸಮುದಾಯದ ಪರ್ಯಾಯಗಳೆಂದು ಕೇಂದ್ರ ಸರಕಾರ ಘೋಷಿಸಿದೆ. 1950 ಸಂವಿಧಾನದ 342 ಪರಿಚ್ಛೇದಲ್ಲಿ ಪರಿಶಿಷ್ಟ ಪಂಗಡ (Scheduled Tribe) ಪದವನ್ನು ವ್ಯಾಖ್ಯಾನ ಮಾಡಲಾಗಿದೆ.
ಮೈಸೂರು ರಾಜ್ಯದಿಂದ (1950) ಮೂಲತಃ ಹಸಾಳರು, ಇರುಳಿಗ, ಜೇನು ಕುರುಬ, ಕಾಡು ಕುರುಬ, ಮಲೇರು ಮತ್ತು ಸೋಲಿಗರು ಪಂಗಡಗಳಾಗಿದ್ದವು. 1956ರಲ್ಲಿ ಭಾಷವಾರು ರಾಜ್ಯಗಳ ರಚನೆಗೆ ಅನುಗುಣವಾಗಿ ಮೈಸೂರು ರಾಜ್ಯ ವಿಶಾಲವಾಯಿತು. ಆಗ ಜಾತಿ ಪಂಗಡಗಳನ್ನು ಗುರುತಿಸುವ ಅನನುಕೂಲತೆ ನಿವಾರಿಸಲು ಕೇಂದ್ರ ಸರಕಾರ (1956) ಮಾರ್ಪಡಿಸಿದ ಆದೇಶ ಮಾಡುವಾಗ ನೆರೆಹೊರೆ ಜಿಲ್ಲೆಗಳಲ್ಲಿದ್ದ ಮೂಲ ನಿಮ್ನ ವರ್ಗ ಮತ್ತು ಆದಿಮ ಪಂಗಡಗಳ ಸಾಮಾಜಿಕ ಚಲನೆಗಳಿಗೆ (Social Mobility) ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಗುರುತಿಸಿದೆ. ಆಗ, ಪಂಗಡಗಳಾಗಿ ಮೈಸೂರಿನಿಂದ 9, ಬಾಂಬೆ ಜಿಲ್ಲೆಗಳಿಂದ 19, ಹೈದರಾಬಾದ್ ಜಿಲ್ಲೆಗಳಿಂದ 5, ಮದ್ರಾಸು ಜಿಲ್ಲೆಗಳಿಂದ 22, ಕೊಡಗಿನಿಂದ 6, ದಕ್ಷಿಣ ಕನ್ನಡ 1, ಕೊಳ್ಳೇಗಾಲ ತಾಲೂಕಿನಿಂದ 2 ಪಂಗಡಗಳು ಕ್ರೋಡೀಕರಣಗೊಂಡು 50 ಪಂಗಡಗಳಾದವು. ಅದರ ಆದೇಶದಲ್ಲಿ ಈ ನಮೂನೆಯಲ್ಲೇ ಪ್ರಾದೇಶಿಕ ನಿಬಂಧನೆ ಹಾಕಲಾಗಿತ್ತು. ಅದು 1976-77ರಲ್ಲಿ ಸಡಿಲವಾಯಿತು. ಆಗ ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದ ನಾಯಿಕಡ ಅಥವಾ ನಾಯಕ (Naikada or Nayaka including Cholival Nayaka, Kapadia, Nayaka, Mota Nayaka, and Nana Nayaka) ರಾಜ್ಯ ವ್ಯಾಪ್ತಿಯಾದವು. ಆದರೆ ಇತರ ಭಾಗಗಳಲ್ಲಿ ವಿಶೇಷವಾಗಿ ಮೈಸೂರು ಭಾಗದ ಬೇಡರಿಗೆ ಪರ್ಯಾಯವಾಗಿ ತಳವಾರ ಮತ್ತು ಪರಿವಾರ ಎಂದು ಕರೆಯಲ್ಪಡುತ್ತಿದ್ದ ಹೆಸರುಗಳು ಸೇರಿರಲಿಲ್ಲ.
ಶ್ರೀಮತಿ ಶಾಂತ ಮತ್ತು ಕರ್ನಾಟಕ (1994) ನಡುವಿನ ದಾವೆಯ ತೀರ್ಪಿನಲ್ಲಿ ಈ ಅಂಶಗಳು ಸಾಬೀತಾಗಿದೆ. ಜನಗಣತಿ ಬಹುತೇಕ ಜಾತಿ/ಪಂಗಡಗಳ ವೃತ್ತಿ ಹಿನ್ನೆಲೆಯ 6 ಪ್ರಧಾನ ವಿಂಗಡನೆಯಲ್ಲಿದ್ದ 60 ಉಪಕಸುಬಿನ ಗುಂಪುಗಳನ್ನು ಉಲ್ಲೇಖಿಸಿದೆ. ಅಂದು ದೇಶಾದ್ಯಂತ 82.63 ಲಕ್ಷ ಮೀನುಗಾರರಿದ್ದರು(ಬೆಸ್ತ). ಅವರ ಹಾಗೂ 9.45 ಲಕ್ಷವಿದ್ದ ಬೇಟೆಗಾರ ಮತ್ತು ಕಾಡಕ್ಕಿ ಹಿಡಿಯುವವರ (Hunter & Fowler) ನಡುವಿನ ಸಾಮಾಜಿಕ ವೈರುಧ್ಯಗಳನ್ನು ಬಿಡಿಸಿದೆ. ಇವೆರಡೂ ಸಮುದಾಯಗಳು ನಡೆ-ನುಡಿಗಳಲ್ಲಿ ಅಜಗಜಾಂತರ ಸಾಮಾಜಿಕ ಅಂತರಗಳನ್ನು ಹೊಂದಿವೆ.
ಮೈಸೂರು ಜನಗಣತಿ (1931) ಸಹ ಬೇಡ ಮತ್ತು ಬೆಸ್ತರ ಜನಸಂಖ್ಯೆೆಯನ್ನು ನಿಖರವಾಗಿ ದಾಖಲಿಸಿದೆ. ಮೈಸೂರು ರಾಜ್ಯದ ಜಿಲ್ಲೆಗಳಲ್ಲಿ ಅಂದು 3.10 ಲಕ್ಷ ಬೇಡರಿದ್ದರು. ತುಮಕೂರು, ಕೋಲಾರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಲಕ್ಷ ಮೀರಿದ್ದರು. ಮೈಸೂರು, ಹಾಸನ ಕೊಡಗುಗಳಲ್ಲಿ ಐದಾರು ಸಾವಿರದೊಳಗಿದ್ದರು; ಬೆಂಗಳೂರು, ಶಿವಮೊಗ್ಗಗಳಲ್ಲಿ 20 ಸಾವಿರದ ಆಸಿಪಾಸಿದ್ದರು. ಬೆಸ್ತರು ಅರ್ಥಾತ್ ಗಂಗಾಕುಲಸ್ಥರು 1931ರಲ್ಲಿ 1.74 ಲಕ್ಷ ಜನರಿದ್ದರು; ಇವರ ಪೈಕಿ ಮೈಸೂರು ಜಿಲ್ಲೆಯಲ್ಲಿಯೇ 1.12 ಲಕ್ಷವಿದ್ದರು. ಕಾವೇರಿ ಕೊಳ್ಳದ ಇತರ ಭಾಗಗಳಲ್ಲಿ 62 ಸಾವಿರ ಬೆಸ್ತರಿದ್ದರು. ಬೇಡ-ಬೆಸ್ತರ ಸಾಮಾಜಿಕ ವ್ಯಾತ್ಯಾಸಗಳನ್ನು ನಿಖರವಾಗಿ ಎಚ್. ವಿ. ನಂಜುಂಡಯ್ಯನವರ ಮೈಸೂರು ರಾಜ್ಯದ ಮೊದಲ ಕುಲಶಾಸ್ತ್ರೀಯ ಸಾರಾಂಶಗಳನ್ನು ವಿಶ್ಲೇಷಿಸಿದಾಗ ಬೆಸ್ತರು ಸಹ ಪರಿವಾರ ನಾಯಕ, ತಳವಾರ, ರಾಜಪರಿವಾರ ಮತ್ತು ನಾಯಕ ಎಂಬ ಗೌರವ ಸೂಚಕ ಪದಗಳಿಂದ ಕರೆದುಕೊಳ್ಳುತ್ತಾರೆಂಬ ಮಾಹಿತಿಗಳಿವೆ. 1950 ಮತ್ತು 1956ರಲ್ಲಿ ಗುರುತಿಸಿರುವ ನಾಯಕ ಮತ್ತು ನಾಯಕಡ ಪಂಗಡಗಳು ಮೂಲತಃ ಬೇಟೆಗಾರ ಸಂಸ್ಕೃತಿಯ ಆದಿಮ ಬುಡಕಟ್ಟಿನ ಸಾಮಾಜಿಕ ಒರತೆಯನ್ನು ಹೊಂದಿವೆ. ಮೈಸೂರು ಪ್ರಾಂತದ ಸರಕಾರಿ ಪತ್ರಗಳಲ್ಲಿ ಬೆಸ್ತರನ್ನು ಪರಿವಾರ ನಾಯಕ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಕರ್ನಾಟಕ ರಾಜ್ಯ ಗೆಜೆಟ್ ಆದೇಶದಲ್ಲಿ (1984) ನಿಖರವಾಗಿ ಬೇಡರನ್ನು ವಾಲ್ಮೀಕಿ, ತಳವಾರ, ಬೆರಡ್, ನಾಯಕಮಕ್ಕಳು, ನಾಯಕವಾಡಿ ಒಂದೇ ಬಳ್ಳಿಯ ಕುಲಗಳೆಂದು ಹೇಳಿದೆ. ಕರ್ನಾಟಕ ಕೋಲಿ ಸಮಾಜ ಸಂಭ್ರಮಿಸುತ್ತಿರುವಂತೆ ಬೆಸ್ತ, ಗಂಗಾಕುಲ, ಬೋಯಿ, ಬೋಯಾ, ಸಮೂಹದಲ್ಲಿರುವ ತಳವಾರ ಮತ್ತು ಪರಿವಾರ ಪಂಗಡ ಹೆಸರುಗಳನ್ನು ಸಂಸತ್ತು ಅಂಗೀಕರಿಸಿಲ್ಲ. ಅದರ ಕಾಯ್ದೆ ಸಂಖ್ಯೆ IV, 2019ರ ಉಲ್ಲೇಖ ಹೀಗಿದೆ: (a) in entry 38, for the words “Naikda, Nayaka”, the words and brackets “Naikda, Nayaka (including Parivara and Talavara)’ shall be subsitituted; ಎಂದು ಮೂಲ ವಿಧೇಯಕದಲ್ಲಿದೆ.
ಸಾಂವಿಧಾನಿಕವಾಗಿ ನಿರ್ಧರಿಸುವುದಾದರೆ ಮೂಲ ಬೇಡರಿಗೆ ಸಲ್ಲುವ ಸವಲತ್ತಿದು. ಹಿಂದುಳಿದ ಬಂಟರಲ್ಲಿಯೂ ಸಹ ಪರಿವಾರ ಎಂದು ಸಂಬೋಧಿಸಿಕೊಳ್ಳುವ ಗುಂಪಿದೆ. ಬೇಡ ನಾಯಕರ ಮೀಸಲಾತಿಯನ್ನು ಪರಿವಾರ ಮತ್ತು ತಳವಾರ ಪದದಡಿ ಬಂಟರಿಗೆ ಮೀಸಲಾತಿ ನೀಡಲು ಕಾಯ್ದೆ ಹೇಗೆ ಸಮರ್ಥಿಸುವುದಿಲ್ಲವೋ ಹಾಗೆಯೇ ಕೇಂದ್ರ ಸರಕಾರದ ಆದೇಶ ಬೆಸ್ತರ ಪರ್ಯಾಯ ಪದಗಳಾದ ನಾಯಕ, ಪರಿವಾರ ಅಥವಾ ತಳವಾರ ಕುಲಗಳಿಗೆ ಹೇಗೆ ಅನ್ವಯಿಸುತ್ತದೆ?. ಕರ್ನಾಟಕ ಸರಕಾರ ಸಂ. ಸ ಕ ಇ/23.ಎಸ್ಡಿಎ/2009, ದಿನಾಂಕ: 06-06-2020ರಂದು ಪರಿವಾರ ಮತ್ತು ತಳವಾರ ಬೇಡರ ಸಮನಾಂತರ ಉಪ ಪಂಗಡವೆಂದು ತಿದ್ದುಪಡಿ ಆದೇಶದಲ್ಲಿ ಘೋಷಿಸಿದೆ.
ರಾಜ್ಯ ಸರಕಾರ ಬೇಡರ ಹಕ್ಕಿಗಾಗಿ ಹೋರಾಡಿದೆಯೋ ಅಥವಾ ಬೆಸ್ತರ ತಳವಾರ-ಪರಿವಾರ ಪದ ಸೇರಿಸಲು ಮುತುವರ್ಜಿ ಹಾಕಿತ್ತೋ ಎಂಬ ಸಾಮಾಜಿಕ ಸಂಗತಿಗಳು ಸಾರ್ವಜನಿಕರಿಗೆ ತಿಳಿಯ ಬೇಕಿದೆ. ಕೇಂದ್ರ ಸರಕಾರ ರಾಜ್ಯ ಪತ್ರದಲ್ಲಿ ತಳವಾರ ಮತ್ತು ಪರಿವಾರ ಪದಗಳು 1956ರಲ್ಲಿದ್ದ ನಾಯಕ ಪಂಗಡಗಳಿಗೆ ಸಲ್ಲುವ ಪರ್ಯಾಯ ಪಂಗಡಗಳೆಂದು ಉಲ್ಲೇಖಿಸಲಾಗಿದೆ. ಈ ಪದಗಳು ನೈಜವಾಗಿ ಬೇಡರವೋ ಅಥವಾ ಬೆಸ್ತರವೋ ಎಂಬ ಜಿಜ್ಞಾಸೆ ಇಂದಿನ ಕಥೆಯಲ್ಲ. ರಾಜ್ಯಾದ್ಯಂತ ತಿದ್ದುಪಡಿ ಆದೇಶದಡಿ ಬೆಸ್ತರಿಗೆ ತಳವಾರ ಮತ್ತು ಪರಿವಾರ ಪದದಡಿ ಮನ್ನಣೆ ನೀಡಬೇಕೋ ಅಥವಾ ಬೇಡರಿಗಷ್ಟೇ ನೀಡಬೇಕು ಎನ್ನುವ ಗೊಂದಲವನ್ನು ರಾಜ್ಯ ಸರಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನ ಮಾಡದಿರುವ ಕಾರಣ ಸಾಂವಿಧಾನಿಕ ವಿದ್ರೋಹಗಳಿಗೆ ಇನ್ನಷ್ಟು ಸಾಕ್ಷಿಯಾಗುತ್ತವೆ. ಬೆಸ್ತರು ಸಾಮಾಜಿಕ ನಡೆಯೊಳಗೆ ಬೇಡರಾಗುವುದಿಲ್ಲ; ಆದರೆ ಮೀಸಲಾತಿಗಾಗಿ ಮಾತ್ರ ಬೇಡರಾಗುವುದು ಸಾಮಾಜಿಕ ಅಪರಾಧವೇ ಸರಿ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರ್ಯಾಯ ಪದ ದುರುಪಯೋಗ ಇಂದಿನ ಸಂಗತಿಗಳಲ್ಲ. ಮೀಸಲಾತಿ ಜಾರಿಗೆ ಬಂದ 5 ವರ್ಷಗಳಲ್ಲೇ ದುರುಪಯೋಗದ ಕಟುವಾಸನೆ ಸಂಸತ್ತಿಗೆ ಬೀಸಿದೆ. ಕರ್ನಾಟಕದಲ್ಲಿ ನಡೆದಿರುವಷ್ಟು ಅನ್ಯಾಯ ಬೇರಾವುದೇ ರಾಜ್ಯಗಳಲ್ಲಿಲ್ಲ. ಮೀಸಲಾತಿ ವಿಚಾರದಲ್ಲಿ ಕರ್ನಾಟಕ ಪ್ರಗತಿ ಪರವಾಗಿದ್ದರೂ ದುರುಪಯೋಗದಲ್ಲಿ ರಾಷ್ಟ್ರೀಯ ದಾಖಲೆ ಮೀರಿಸುತ್ತಾ ಬಂದಿದೆ. ಖೊಟ್ಟಿ ಜಾತಿ ಪತ್ರಗಳನ್ನು ಪಡೆದಿರುವವರಿಗೆ ಯಾವ ಸರಕಾರಗಳೂ ಕಾನೂನಿನಡಿ ಶಿಕ್ಷೆ ವಿಧಿಸಿಲ್ಲ. ಬೇಡ ಉಪ ಪಂಗಡಗಳಾದ ತಳವಾರ ಮತ್ತು ಪರಿವಾರ ಪದಗಳ ಕುರಿತು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪ್ರಸ್ತಾವನೆ ಕಳುಹಿಸಿರುವ ಹಿನ್ನೆಲೆಯಲ್ಲಿ ಮುಂದೆ ದುರುಪಯೋಗಕ್ಕೆ ಅವಕಾಶವಾಗದಿರಲೆಂದು ಮರು ತಿದ್ದುಪಡಿ ಆದೇಶ ನೀಡಿದರೆ ಮೂಲ ಪಂಗಡಗಳು ಬದುಕುಳಿಯುತ್ತವೆ. ಇಲ್ಲದೆ ಹೋದರೆ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳೆರಡೂ ದಿನಾಲೂ ತವಡು ಕುಟ್ಟುತ್ತಿರಬೇಕಾದಿತು.