ಮಿರ್ಝಾ ಇಸ್ಮಾಯೀಲ್ ಎಂಬ ಅವಿಸ್ಮರಣೀಯ ಆಡಳಿತಗಾರ
ಚರಿತ್ರೆಯಲ್ಲಿ ಅನೇಕ ಬಾರಿ ಬೆಳಕಿಗೆ ಬರಬೇಕಾದ ಸಂಗತಿಗಳು ಮುಚ್ಚಿ ಹೋಗುತ್ತವೆ. ನಾಯಕರನ್ನು ಖಳನಾಯಕರನ್ನಾಗಿ ಬಿಂಬಿಸಲಾಗುತ್ತದೆ. ಅದರಲ್ಲೂ ಇತಿಹಾಸಕ್ಕೆ ಕೋಮುವಾದದ ವೈರಸ್ ಅಂಟಿದಾಗ ಅನೇಕ ಅನಾಹುತಗಳಾಗುತ್ತವೆ. ಊಳಿಗಮಾನ್ಯ ವ್ಯವಸ್ಥೆಯ ಸೊಂಟ ಮುರಿದು ಲಕ್ಷಾಂತರ ಬಡವರಿಗೆ ಭೂಮಿ ಹಂಚಿದ ಟಿಪ್ಪು ಸುಲ್ತಾನ್ ಅಂತಹವರನ್ನು ಇತ್ತೀಚೆಗೆ ವಿಲನ್ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗೆ ಚರಿತ್ರೆಯಲ್ಲಿ ನಿರ್ಲಕ್ಷಕ್ಕೊಳಗಾದ ಇನ್ನೊಬ್ಬ ವ್ಯಕ್ತಿ ಮಿರ್ಝಾ ಇಸ್ಮಾಯೀಲ್.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ದಿವಾನರಾದ ಮಿರ್ಝಾ ಇಸ್ಮಾಯೀಲ್-ಇವರಿಬ್ಬರಿಂದಾಗಿ ಮೈಸೂರು ಪ್ರಾಂತ ಅಭಿವೃದ್ಧಿ ಸಾಧಿಸಿದೆ. ಬೇರೆ ಬೇರೆ ಧರ್ಮಕ್ಕೆ ಸೇರಿದ್ದರೂ ಇಬ್ಬರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದ ಸಂಬಂಧ ಗಮನಾರ್ಹವಾಗಿದೆ ಎಂದು ಶ್ಲಾಘಿಸಿದ್ದ ಗಾಂಧೀಜಿ, ‘‘ಇವರಿಂದ ಮೈಸೂರು ರಾಮರಾಜ್ಯವಾಗಿದೆ’’ ಎಂದು ಹೇಳಿದ್ದರು.
ಚರಿತ್ರೆಯಲ್ಲಿ ಅನೇಕ ಬಾರಿ ಬೆಳಕಿಗೆ ಬರಬೇಕಾದ ಸಂಗತಿಗಳು ಮುಚ್ಚಿ ಹೋಗುತ್ತವೆ. ನಾಯಕರನ್ನು ಖಳನಾಯಕರನ್ನಾಗಿ ಬಿಂಬಿಸಲಾಗುತ್ತದೆ. ಅದರಲ್ಲೂ ಇತಿಹಾಸಕ್ಕೆ ಕೋಮುವಾದದ ವೈರಸ್ ಅಂಟಿದಾಗ ಅನೇಕ ಅನಾಹುತಗಳಾಗುತ್ತವೆ. ಊಳಿಗಮಾನ್ಯ ವ್ಯವಸ್ಥೆಯ ಸೊಂಟ ಮುರಿದು ಲಕ್ಷಾಂತರ ಬಡವರಿಗೆ ಭೂಮಿ ಹಂಚಿದ ಟಿಪ್ಪು ಸುಲ್ತಾನ್ ಅಂತಹವರನ್ನು ಇತ್ತೀಚೆಗೆ ವಿಲನ್ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗೆ ಚರಿತ್ರೆಯಲ್ಲಿ ನಿರ್ಲಕ್ಷಕ್ಕೊಳಗಾದ ಇನ್ನೊಬ್ಬ ವ್ಯಕ್ತಿ ಮಿರ್ಝಾ ಇಸ್ಮಾಯೀಲ್.
ಕಳೆದ ಅಕ್ಟೋಬರ್ 24ರಂದು ಮಿರ್ಝಾ ಇಸ್ಮಾಯೀಲ್ ಅವರ ಜನ್ಮದಿನ. ನಾಲ್ವಡಿ ಕಾಲದ ಮೈಸೂರನ್ನು ಕಟ್ಟಿ ಬೆಳೆಸಿದ ಮಿರ್ಝಾ ಅವರನ್ನು ಅವರ ಜನ್ಮದಿನದಂದು ಸ್ಮರಿಸಿದವರು ಕಡಿಮೆ. ಅದೇ ಸರ್ ವಿಶ್ವೇಶ್ವರಯ್ಯ ನವರ ಜನ್ಮದಿನವಾಗಿದ್ದರೆ ಹೀಗಾಗುತ್ತಿರಲಿಲ್ಲ. ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆಯೇನೂ ಸಣ್ಣದಲ್ಲ. ನಿಜಕ್ಕೂ ಅವರು ಪ್ರಾತಃಸ್ಮರಣೀಯರು. ಆದರೆ, ಅವರಷ್ಟೇ ಕೊಡುಗೆ ನೀಡಿದ ಮಿರ್ಝಾರಂತಹವರನ್ನು ನಾವು ಮರೆಯಬಾರದು.
ಮೈಸೂರಿನ ಜನಪರ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಹೆಸರು ಎಲ್ಲರಿಗೂ ಗೊತ್ತು. ಅದರೆ, ಅವರ ನಂತರ ದಿವಾನರಾಗಿ ಅಷ್ಟೇ ದಕ್ಷವಾಗಿ ಕಾರ್ಯನಿರ್ವಹಿಸಿದ ಮಿರ್ಝಾ ಇಸ್ಮಾಯೀಲ್ ಅವರ ಹೆಸರು ಬಹಳ ಜನರಿಗೆ ಗೊತ್ತಿಲ್ಲ. ನಾಲ್ವಡಿ ಅವರ ಅನೇಕ ಕನಸುಗಳನ್ನು ಸಾಕಾರಗೊಳಿಸಿದ ಮಿರ್ಝಾ ಅವರ ವ್ಯಕ್ತಿತ್ವ ವಿಶ್ವೇಶ್ವರಯ್ಯನವರಷ್ಟೇ ಕ್ರಿಯಾಶೀಲವಾಗಿತ್ತು.
ಮಿರ್ಝಾ ಇಸ್ಮಾಯೀಲ್ ಅವರಿಗೆ ಮಹಾತ್ಮಾ ಗಾಂಧೀಜಿಯವರ ಜೊತೆಗೆ ಅನೋನ್ಯ ಸಂಬಂಧವಿತ್ತು. ಇವರಿಬ್ಬರ ನಡುವೆ ಪತ್ರ ವ್ಯವಹಾರವಿತ್ತು. ಪರಸ್ಪರ ಕ್ಷೇಮ ಸಮಾಚಾರಗಳನ್ನು ಮಾತ್ರವಲ್ಲ, ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಮಹಾತ್ಮಾಜಿ ಅವರು ಮೈಸೂರಿಗೆ ಬಂದಾಗ, ಮಿರ್ಝಾ ಅವರೊಂದಿಗೆ ಭೇಟಿ ಮಾಡಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು.
ನಾನು ಇತ್ತೀಚೆಗೆ ಸ್ವತಃ ಮಿರ್ಝಾ ಇಸ್ಮಾಯೀಲ್ ಅವರು ಇಂಗ್ಲಿಷ್‌ನಲ್ಲಿ ಬರೆದ ಮತ್ತು ಗಜಾನನ ಶರ್ಮಾ ಅವರು ಕನ್ನಡಕ್ಕೆ ಅನುವಾದಿಸಿದ ‘ನನ್ನ ಸಾರ್ವಜನಿಕ ಬದುಕು’ ಎಂಬ ಪುಸ್ತಕ ಓದಿದಾಗ ಅನೇಕ ಅಪರೂಪದ ಸಂಗತಿಗಳು ಗೊತ್ತಾದವು.
ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಳೆಯ ಮೈಸೂರು ಪ್ರಾಂತದ ಅಭಿವೃದ್ಧಿಯಲ್ಲಿ ವಿಶ್ವೇಶ್ವರಯ್ಯ ಮತ್ತು ಮಿರ್ಝಾ ಇಸ್ಮಾಯೀಲ್ ಅವರು ನೀಡಿದ ಕೊಡುಗೆಗಳ ಬಗ್ಗೆ ಹಳೆಯ ತಲೆಮಾರಿನ ಎಲ್ಲರಿಗೂ ಗೊತ್ತಿದೆ. ಈ ಪುಸ್ತಕದ ಮತ್ತೊಂದು ವಿಶೇಷವೇನೆಂದರೆ, ನಾಡಿನ ಹಿರಿಯ ಸಾಹಿತಿ ಮತ್ತು ಮಿರ್ಝಾ ಸಮಕಾಲೀನರಾದ ಡಿ.ವಿ.ಜಿ. ಮತ್ತು ಸಿ.ಕೆ.ವೆಂಕಟರಾಮಯ್ಯ ಅವರು ಮಿರ್ಝಾ ಅವರ ಬಗ್ಗೆ ಬರೆದ ಬರಹಗಳನ್ನು ಸೇರಿಸಲಾಗಿದೆ. ಆಡಳಿತಗಾರನಾಗಿ ಹೆಸರಾಗಿದ್ದ ಮಿರ್ಝಾ ಅವರು ವೈಯಕ್ತಿಕವಾಗಿ ಎಷ್ಟು ಹೃದಯವಂತರಾಗಿದ್ದರು ಎಂಬುದನ್ನು ಇವರಿಬ್ಬರೂ ವರ್ಣಿಸಿದ್ದಾರೆ.
ಮಿರ್ಝಾ ಅವರು ನಿಧನರಾದಾಗಿನ ಒಂದು ಘಟನೆಯನ್ನು ಡಿ.ವಿ.ಜಿ. ಉಲ್ಲೇಖಿಸಿದ್ದಾರೆ. ಮಿರ್ಝಾ ಅಂತ್ಯಕ್ರಿಯೆ ಮುಗಿದಾಗ ರಾತ್ರಿ 10 ಗಂಟೆಯಾಗಿರುತ್ತದೆ. ಅಂತ್ಯಕ್ರಿಯೆಗೆ ಹೋಗಿದ್ದ ಡಿ.ವಿ.ಜಿ ಅಂತ್ಯಕ್ರಿಯೆ ಮುಗಿಸಿ ಸ್ಮಶಾನದ ಗೇಟಿನ ಬಳಿ ಬಂದಾಗ, ಒಬ್ಬ ವ್ಯಕ್ತಿ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತಿರುತ್ತಾನೆ. ಆತ ಯಾರೆಂದು ಡಿ.ವಿ.ಜಿ. ವಿಚಾರಿಸುತ್ತಾರೆ. ಆಗ ಆತ, ‘‘ನಾನು ಕಬ್ಬನ್ ಪೇಟೆಯವನು. ಅಕ್ಕಸಾಲಿಗರ ಜಾತಿಯವನು’’ ಎಂದು ಹೇಳಿ ಮತ್ತೆ ಅಳುತ್ತಾನೆ.
ಮಿರ್ಝಾ ಸಾವಿನಿಂದ ದುಃಖಿತನಾಗಿದ್ದ ಆತ ತನ್ನ ಪತ್ನಿ ಬಸುರಿಯಾಗಿದ್ದಾಗ, ಬನಪ್ಪ ಪಾರ್ಕ್ ಬಳಿ ಸಾರ್ವಜನಿಕ ನಲ್ಲಿಯಿಂದ ನೀರು ತರಲು ಹೋದಾಗ ನಡೆದ ಘಟನೆ ವಿವರಿಸುತ್ತಾನೆ. ಆ ಬಸುರಿ ನೀರು ತರಲು ಹೋದಾಗ ಅಲ್ಲಿ ವಿಪರೀತ ಜನಜಂಗುಳಿ ಇರುತ್ತದೆ. ಹೀಗಾಗಿ ಒಂದೇ ಕೊಡ ನೀರು ಸಿಗುತ್ತದೆ. ಈ ನೀರಿಗಾಗಿ ಜಗಳವಾಡಿ ಒಂದು ತಾಸಿನ ನಂತರ ಮನೆಗೆ ಬರುತ್ತಾಳೆ.
ಅವಳ ಹಿಂದೆಯೇ ಒಬ್ಬ ವ್ಯಕ್ತಿ ಬಂದು ಅಕ್ಕಸಾಲಿಗನನ್ನು ದಿವಾನರು ಕರೆಯುತ್ತಾರೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾನೆ. ದಿವಾನರಾಗಿದ್ದ ಮಿರ್ಝಾ ಇಸ್ಮಾಯೀಲ್ ಎದುರಿಗೆ ಆತ ಕೈಮುಗಿದು ನಿಲ್ಲುತ್ತಾನೆ. ಈತನ ಪತ್ನಿ ಸಾರ್ವಜನಿಕ ನಲ್ಲಿಯಿಂದ ಜಗಳಾಡಿ ಕಣ್ಣೀರು ಹಾಕುತ್ತಾ ನೀರು ಒಯ್ಯುವುದನ್ನು ಮಾರ್ಥಾಸ್ ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದ ಮಿರ್ಝಾ ನೋಡಿರುತ್ತಾರೆ. ‘‘ನಿನ್ನ ಹೆಂಡತಿ ಯಾಕೆ ಅಳುತ್ತಾ ನೀರು ಒಯ್ದಳು’’ ಎಂದು ಮಿರ್ಝಾ ಕೇಳುತ್ತಾರೆ. ಆಗ ಆ ಅಕ್ಕಸಾಲಿಗ, ‘‘ನನ್ನ ಹೆಂಡತಿ ದೂರದಿಂದ ಒಂದು ಕೊಡ ನೀರಿಗಾಗಿ ಬರುತ್ತಾಳೆ. ಅದಕ್ಕಾಗಿ ಜಗಳಾಡಿ ಕಣ್ಣೀರು ಹಾಕುತ್ತಾಳೆ’’ ಎಂದು ಹೇಳುತ್ತಾನೆ. ಆ ತಕ್ಷಣ ಮಿರ್ಝಾ ಇಸ್ಮಾಯೀಲ್ ಅವರು ತಮ್ಮ ಜೊತೆಯಲ್ಲಿ ಇದ್ದ ಇಂಜಿನಿಯರ್‌ಗೆ ‘‘ಎರಡು ದಿನಗಳಲ್ಲಿ ಅಕ್ಕಸಾಲಿಗನ ಮನೆಯ ಮುಂದೆ ಒಂದು ನಲ್ಲಿ ಹಾಕಬೇಕು. ಸಾರ್ವಜನಿಕ ನಲ್ಲಿಗಳ ಸಂಖ್ಯೆ ಹೆಚ್ಚಿಸಬೇಕು’’ ಎಂದು ಆದೇಶಿಸುತ್ತಾರೆ. ಎರಡೇ ದಿನಕ್ಕೆ ಹೊಸ ನಲ್ಲಿ ಮತ್ತು ನೀರು ಬರುತ್ತದೆ. ಬಸುರಿ ಹೆಂಡತಿಯ ತಾಪತ್ರಯ ತಪ್ಪುತ್ತದೆ. ಅಕ್ಕಸಾಲಿಗ ಇದನ್ನೆಲ್ಲ ನೆನಪು ತೆಗೆದು, ‘‘ಅಂಥವರು ಹೋಗಿಬಿಟ್ಟರು’’ ಎಂದು ಅಳುತ್ತಾನೆ.
ಇಂತಹದ್ದೇ ಇನ್ನೊಂದು ಘಟನೆ ಪುಸ್ತಕದಲ್ಲಿ ದಾಖಲಾಗಿದೆ. ಒಮ್ಮೆ ಮಿರ್ಝಾ ಇಸ್ಮಾಯೀಲರು ದೊಡ್ಡಬಳ್ಳಾಪುರಕ್ಕೆ ಹೊರಟಿರುತ್ತಾರೆ. ಆಗ ದಾರಿಯಲ್ಲಿ ದಲಿತರ ಗುಂಪೊಂದು ಎದುರಾಗುತ್ತಾದೆ. ‘‘ನಮ್ಮ ಗುಡಿಸಲುಗಳಿಗೆ ಬೆಂಕಿ ಬಿದ್ದಿದೆ. ದಿನಸಿ ಮತ್ತು ಬಟ್ಟೆ ಬರೆಗಳು ಸುಟ್ಟು ಹೋಗಿವೆ. ಹೊಟ್ಟೆಗೆ ಊಟವಿಲ್ಲ’ ಎಂದು ಗೋಳಾಡತೊಡಗುತ್ತಾರೆ. ಆಗ ಕೂಡಲೇ ಮಿರ್ಝಾ ಅವರು ಸಿಬ್ಬಂದಿಯನ್ನು ಕರೆದು ಎಲ್ಲವನ್ನೂ ಕಳೆದುಕೊಂಡ ದಲಿತರಿಗೆ ಸಕಲ ಸೌಕರ್ಯಗಳನ್ನು ಒದಗಿಸಲು ಆದೇಶಿಸುತ್ತಾರೆ. ‘‘ಸಮಾಜದ ದೀನ ದಲಿತರಿಗೆ ನೆರವಾಗುವ ಪ್ರಶ್ನೆಯಲ್ಲಿ ಹಿಂದೆ ಮುಂದೆ ನೋಡಬಾರದು’’ ಎಂದು ಹೇಳುತ್ತಾರೆ. ನಂತರ ದಲಿತರಿಗೆ ಎಲ್ಲ ಸೌಕರ್ಯಗಳು ಸಿಗುತ್ತವೆ.
ಮಿರ್ಝಾ ಅವರು ದಿವಾನರಾಗಿದ್ದಾಗ ಬೆಂಗಳೂರಿನ ಸುಲ್ತಾನಪೇಟೆಯಲ್ಲಿ ಗಣಪತಿ ಕೂರಿಸುವ ನೆಪದಲ್ಲಿ ಗಲಭೆ ನಡೆಯುತ್ತದೆ. ಆಗ ಅದನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಮಿರ್ಝಾ ಮೇಲೆ ಆರೋಪ ಬರುತ್ತದೆ. ಇದರ ಬಗ್ಗೆ ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿ ನೇಮಿಸಲಾಗುತ್ತದೆ. ದಿವಾನರಾಗಿ ನಿವೃತ್ತರಾಗಿದ್ದ ವಿಶ್ವೇಶ್ವರಯ್ಯನವರು ನೀಡಿದ ವರದಿಯಲ್ಲಿ ಮಿರ್ಝಾ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯ ಬಗ್ಗೆ ನಕಾರಾತ್ಮಕ ಅಂಶಗಳಿರುತ್ತವೆ. ಅದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಮಿರ್ಝಾ ಅವರ ಮನೆಗೆ ಹೋಗುತ್ತಾರೆ. ಮಿರ್ಝಾ ಅವರ ಕೊಠಡಿಯಲ್ಲಿ ನಾಲ್ಕು ಚಿತ್ರಗಳು ಇರುತ್ತವೆ. ಅದರಲ್ಲಿ ಒಂದು ಮಿರ್ಝಾ ಅವರ ತಂದೆ ಆಗಾಖಾನ್‌ರದ್ದು, ಎರಡನೆಯದು ಪರ್ಷಿಯನ್ ಕವಿ ಪಿರ್ದೌಸಿಯವರದ್ದು. ಮೂರನೆಯದು ನಾಲ್ವಡಿ ಕೃಷ್ಣರಾಜ ಒಡೆಯರು ಅವರದ್ದು ಮತ್ತು ನಾಲ್ಕನೆಯದ್ದು ವಿಶ್ವೇಶ್ವರಯ್ಯನವರದ್ದು ಇರುತ್ತದೆ. ಆಗ ಆ ಚಿತ್ರಗಳನ್ನು ನೋಡಿದ ವಿಶ್ವೇಶ್ವರಯ್ಯ ನವರು ‘‘ನನ್ನ ಚಿತ್ರ ಇಲ್ಲಿ ಬೇಡ. ತೆಗೆದುಬಿಡಿ. ನನ್ನ ವರದಿಯಿಂದ ನಿಮಗೆ ಬೇಸರವಾಗಿದೆ’’ ಎನ್ನುತ್ತಾರೆ. ಆಗ ಮಿರ್ಝಾ ಅವರು, ‘‘ನೀವು ನನ್ನ ತಂದೆಯ ಸಮಾನ. ಅದಕ್ಕೆ ಅವರ ಚಿತ್ರದ ಜೊತೆ ನಿಮ್ಮದು ಇಟ್ಟಿದ್ದೇನೆ’’ ಎನ್ನುತ್ತಾರೆ.
ಸುಲ್ತಾನ್ ಪೇಟೆ ಗಲಭೆಯ ಬಗ್ಗೆ ಡಿ.ವಿ.ಜಿ.ಯವರು ಬರೆಯುತ್ತಾ, ‘‘ಮಿರ್ಝಾ ಮುಸ್ಲಿಂ ಪಕ್ಷಪಾತಿ ಅಲ್ಲ’’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಮಿರ್ಝಾ ಇಸ್ಮಾಯೀಲ್ ದೇಶದ ಐಕ್ಯತೆ ಬಗ್ಗೆ ಖಚಿತ ನಿಲುವು ಹೊಂದಿದ್ದರು. ಭಾರತದ ವಿಭಜನೆ ಖಂಡ ತುಂಡವಾಗಿ ವಿರೋಧಿಸಿದರು. ಭಾರತ ಮತ್ತು ಪಾಕಿಸ್ತಾನಗಳು ತಮ್ಮ ನಡುವಿನ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕೆಂದು ಪ್ರತಿಪಾದಿಸುತ್ತಿದ್ದರು.
ಇಡೀ ಪುಸ್ತಕ ಓದಿದಾಗ ಮಿರ್ಝಾ ಇಸ್ಮಾಯೀಲ್ ಮುಸ್ಲಿಂ ಪಕ್ಷಪಾತಿಯಾಗಿ ಎಲ್ಲೂ ಕಾಣುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಅವರು ಸಮಾನವಾಗಿ ಕಾಣುತ್ತಿದ್ದರು ಎಂಬ ಅಂಶ ಅರಿವಿಗೆ ಬರುತ್ತದೆ. ಅಂಕಿತ ಪ್ರಕಾಶನದ ಈ ಪುಸ್ತಕದಲ್ಲಿ ಮಿರ್ಝಾ ಅವರ ವ್ಯಕ್ತಿತ್ವದ ಹಲವಾರು ಮುಖಗಳು ಅನಾವರಣಗೊಂಡಿವೆ.